ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ: ಸ್ಯಾಟಲೈಟ್ ಸರ್ವೆ ಒಪ್ಪುವುದಿಲ್ಲ; ಡಿಸಿಎಂ
x

ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ: ಸ್ಯಾಟಲೈಟ್ ಸರ್ವೆ ಒಪ್ಪುವುದಿಲ್ಲ; ಡಿಸಿಎಂ

ಕಸ್ತೂರಿ ರಂಗನ್ ಅವರು ಸ್ಥಳೀಯರ ಜೊತೆ ಚರ್ಚಿಸಿಲ್ಲ. ಕಾಫಿ ತೋಟಗಳು, ಕೃಷಿ ಭೂಮಿ ಮತ್ತು ಜನವಸತಿ ಪ್ರದೇಶಗಳನ್ನು ಅರಣ್ಯ ಎಂದು ತಪ್ಪಾಗಿ ಗುರುತಿಸಲಾಗಿದೆ ಎಂದು ಡಿಸಿಎಂ ಪರಮೇಶ್ವರ್‌ ಹೇಳಿದ್ದಾರೆ.


Click the Play button to hear this message in audio format

ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರವು ನಿರಂತರವಾಗಿ ತಿರಸ್ಕರಿಸುತ್ತಾ ಬಂದಿದ್ದರೂ, ಕೇಂದ್ರ ಸರ್ಕಾರ ಪದೇ ಪದೇ ಅಧಿಸೂಚನೆಗಳನ್ನು ಹೊರಡಿಸುತ್ತಿರುವ ಹಿನ್ನೆಲೆಯಲ್ಲಿ, ಈ ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಾದ ಅವಶ್ಯಕತೆ ಇದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪ್ರತಿಪಾದಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಕಸ್ತೂರಿ ರಂಗನ್ ವರದಿಯ ಸಾಧಕ-ಬಾಧಕಗಳ ಕುರಿತು ಮಾತನಾಡಿದರು. ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು 2010ರಲ್ಲಿ ಪ್ರೊ. ಮಾಧವ್ ಗಾಡ್ಗೀಳ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಆ ಸಮಿತಿಯು ಪಶ್ಚಿಮ ಘಟ್ಟದ ಇಡೀ ಪ್ರದೇಶವನ್ನು ಅತಿ ಹೆಚ್ಚು ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕಠಿಣ ಶಿಫಾರಸುಗಳನ್ನು ಮಾಡಿತ್ತು. ಆದರೆ, ಈ ವರದಿಗೆ ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಕೇಂದ್ರವು 2012ರಲ್ಲಿ ಡಾ. ಕೆ. ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಿತು ಎಂದು ಹೇಳಿದರು.

ಈ ಸಮಿತಿಯು 1,500 ಕಿ.ಮೀ ಉದ್ದದ ಪಶ್ಚಿಮ ಘಟ್ಟದ ಭೂಪ್ರದೇಶವನ್ನು ಅಧ್ಯಯನ ನಡೆಸಿ, 2013ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ದೇಶದ ಆರು ರಾಜ್ಯಗಳ ಸುಮಾರು 59,940 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿತು. ಕರ್ನಾಟಕದ ಪಾಲಿಗೆ ಈ ವರದಿಯಲ್ಲಿ 20,668 ಚದರ ಕಿ.ಮೀ ವ್ಯಾಪ್ತಿ, 10 ಜಿಲ್ಲೆಗಳ 33 ತಾಲ್ಲೂಕುಗಳ 1,576 ಗ್ರಾಮಗಳು ಒಳಗೊಂಡಿದ್ದವು ಎಂದು ತಿಳಿಸಿದರು.

ರಾಜ್ಯ ಸರ್ಕಾರದ ದೃಢ ನಿಲುವು

ಕಸ್ತೂರಿ ರಂಗನ್ ವರದಿಯು ಅವೈಜ್ಞಾನಿಕವಾಗಿದೆ. ಕಸ್ತೂರಿ ರಂಗನ್ ಅವರು ಸ್ಥಳೀಯರ ಜೊತೆ ಚರ್ಚಿಸದೆ, ಕೇವಲ ಸ್ಯಾಟಲೈಟ್ ಚಿತ್ರಗಳನ್ನಾಧರಿಸಿ ವರದಿ ಸಿದ್ಧಪಡಿಸಿದ್ದಾರೆ. ಕಾಫಿ ತೋಟಗಳು, ಕೃಷಿ ಭೂಮಿ ಮತ್ತು ಜನವಸತಿ ಪ್ರದೇಶಗಳನ್ನು ಅರಣ್ಯ ಎಂದು ತಪ್ಪಾಗಿ ಗುರುತಿಸಲಾಗಿದೆ. ರಾಜ್ಯ ಸರ್ಕಾರವು 2014ರಿಂದಲೂ ಈ ವರದಿಯನ್ನು ತಿರಸ್ಕರಿಸುತ್ತಾ ಬಂದಿದೆ. ಸಂಪುಟ ಉಪ ಸಮಿತಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳ ಭೇಟಿ ಮತ್ತು ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ಮೂಲಕ ವರದಿಯ ಅವೈಜ್ಞಾನಿಕತೆಯನ್ನು ಸಾಬೀತುಪಡಿಸಲಾಗಿದೆ. ಇತ್ತೀಚೆಗೆ ಸೆ.6, 2024ರಂದು ನಡೆದ ಸಚಿವ ಸಂಪುಟ ಸಭೆಯಲ್ಲೂ, ಜುಲೈ 31ರಂದು ಹೊರಡಿಸಿದ 6ನೇ ಕರಡು ಅಧಿಸೂಚನೆಯನ್ನು ತಿರಸ್ಕರಿಸಲು ಸರ್ಕಾರ ನಿರ್ಧರಿಸಿದೆ ಎಂದರು.

ಕೇಂದ್ರ ಸರ್ಕಾರವು 2022ರಲ್ಲಿ ಸಂಜಯ್ ಕುಮಾರ್ ಅವರ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ರಚಿಸಿದೆ. ಈ ಸಮಿತಿಯ ಅವಧಿಯು ಜುಲೈ 2027ರವರೆಗೆ ವಿಸ್ತರಣೆಯಾಗಿದೆ. ಕೇಂದ್ರ ಸರ್ಕಾರವು ಪದೇ ಪದೇ ಕರಡು ಅಧಿಸೂಚನೆಗಳನ್ನು ಹೊರಡಿಸುತ್ತಿರುವುದಕ್ಕೆ ಕಾನೂನಿನ ತೊಡಕುಗಳನ್ನು ಕಾರಣವಾಗಿ ನೀಡುತ್ತದೆ. ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆಗಳು 725 ದಿನಗಳ ನಂತರ ಮರುಜೀವ ಪಡೆಯಬೇಕಾದ ಅನಿವಾರ್ಯತೆ ಇರುವುದರಿಂದ ಇಂತಹ ಅಧಿಸೂಚನೆಗಳು ಹೊರಬರುತ್ತಿವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಇದು ಮಲೆನಾಡಿನ ಜನರ ಆತಂಕವನ್ನು ಇಮ್ಮಡಿಗೊಳಿಸಿದೆ.

ಕಸ್ತೂರಿ ರಂಗನ್ ವರದಿಯ ಶಿಫಾರಸುಗಳು ಜಾರಿಯಾದರೆ, ಗಣಿಗಾರಿಕೆ, ಕಲ್ಲುಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆ ಸಂಪೂರ್ಣ ನಿಷೇಧವಾಗುತ್ತದೆ. ಹೊಸ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಅವಕಾಶವಿರುವುದಿಲ್ಲ. ಕೆಂಪು ವರ್ಗದ ಕೈಗಾರಿಕೆಗಳ ಸ್ಥಾಪನೆಗೆ ನಿರ್ಬಂಧ ಹೇರಲಾಗುತ್ತದೆ. ದೊಡ್ಡ ನಿರ್ಮಾಣ ಯೋಜನೆಗಳಿಗೆ ಅನುಮತಿ ಪಡೆಯುವುದು ದುಸ್ತರವಾಗುತ್ತದೆ. ಪಶ್ಚಿಮ ಘಟ್ಟದ ಜನರು ತಾವು ತಲೆತಲಾಂತರದಿಂದ ಬದುಕುತ್ತಿರುವ ಭೂಮಿಯಲ್ಲಿ ಸಣ್ಣಪುಟ್ಟ ನಿರ್ಮಾಣಗಳನ್ನು ಮಾಡಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಭಯ ಜನರಲ್ಲಿ ಮನೆ ಮಾಡಿದೆ ಎಂದು ನುಡಿದರು.

ಸಂಭವನೀಯ ಪರಿಹಾರಗಳು

ಉಪ ಮುಖ್ಯಮಂತ್ರಿಗಳು ಸದನದ ಮುಂದೆ ಕೆಲವು ಪ್ರಮುಖ ಅಂಕಿಅಂಶಗಳನ್ನು ಮುಂದಿಟ್ಟಿದ್ದಾರೆ. ರಾಜ್ಯದಲ್ಲಿ ಈಗಾಗಲೇ ರಾಷ್ಟ್ರೀಯ ಉದ್ಯಾನವನಗಳು, ಮೀಸಲು ಅರಣ್ಯಗಳ ಹೆಸರಿನಲ್ಲಿ 16,114 ಚ.ಕಿ.ಮೀ ಪ್ರದೇಶವು ಪರಿಸರ ಸೂಕ್ಷ್ಮ ವಲಯವಾಗಿದೆ. ಕಸ್ತೂರಿ ರಂಗನ್ ವರದಿಯಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸಿದರೆ ಉಳಿಯುವುದು ಕೇವಲ 3,108 ಚ.ಕಿ.ಮೀ ಮಾತ್ರ. ಈ ಉಳಿದ ಭಾಗದ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಗ್ರಾಮವಾರು ಭೌತಿಕ ಪರಿಶೀಲನೆ ನಡೆಸಬೇಕು. ಪ್ರತಿ ಗ್ರಾಮದ ಸರ್ವೆ ನಂಬರ್‌ವಾರು ನಕ್ಷೆಗಳನ್ನು ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ಮತ್ತು ಎನ್‌ಜಿಟಿಗೆ ಸಲ್ಲಿಸುವುದು ಏಕೈಕ ದಾರಿ ಎಂದು ಹೇಳಿದರು.

“ಪರಿಸರ ಉಳಿದರೆ ಮಾತ್ರ ಮನುಷ್ಯನ ಉಳಿವಿದೆ ಎಂಬುದು ಸತ್ಯ. ಆದರೆ ಅರಣ್ಯದ ಮಧ್ಯೆ ಬದುಕುವ ಮನುಷ್ಯನನ್ನೂ ರಕ್ಷಿಸಬೇಕಾದದ್ದು ಸರ್ಕಾರದ ಜವಾಬ್ದಾರಿ” ಎಂಬುದು ತಿಳಿಸಿದರು. ಅರಣ್ಯ, ಕಂದಾಯ ಮತ್ತು ಕೃಷಿ ಇಲಾಖೆಗಳು ಒಟ್ಟಾಗಿ ಸೇರಿ ವಾಸ್ತವಿಕ ವರದಿಯನ್ನು ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸುವ ಮೂಲಕ ಈ ವಿವಾದವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವತ್ತ ಸರ್ಕಾರ ಚಿಂತನೆ ನಡೆಸಿದೆ.

Read More
Next Story