
ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಕೇರಳ ಮಾದರಿ ಅನುಸರಿಸಲಿ - ಅಶೋಕ್ ಆಗ್ರಹ
ಕಸ್ತೂರಿ ರಂಗನ್ ವರದಿಯ ಜಾರಿ ಎಂಬುದು ಕೇಂದ್ರ ಸರ್ಕಾರದ ಸ್ವಯಂಪ್ರೇರಿತ ನಿರ್ಧಾರವಲ್ಲ, ಬದಲಾಗಿ ಎನ್‌ಜಿಟಿ ಮತ್ತು ಸುಪ್ರೀಂ ಕೋರ್ಟ್‌ನ ಆದೇಶಗಳ ಒತ್ತಡ ಎಂದು ಆರ್. ಅಶೋಕ್ ಸ್ಪಷ್ಟಪಡಿಸಿದರು.
ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಲಕ್ಷಾಂತರ ರೈತರು ಮತ್ತು ಜನಸಾಮಾನ್ಯರ ಪಾಲಿಗೆ ಕಸ್ತೂರಿ ರಂಗನ್ ವರದಿ ಒಂದು ದೊಡ್ಡ ಆತಂಕವಾಗಿ ಪರಿಣಮಿಸಿದೆ. ಈ ವರದಿಯ ಜಾರಿಯಿಂದ ತಮ್ಮ ಭೂಮಿ, ತೋಟಗಳು ಮತ್ತು ಬದುಕಿನ ಮೂಲಾಧಾರಗಳೇ ಕಸಿದುಕೊಳ್ಳಲ್ಪಡುತ್ತವೆ ಎಂಬ ಭಯ ಅಲ್ಲಿನ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸರ್ಕಾರವು ರಾಜಕೀಯ ಆರೋಪ-ಪ್ರತ್ಯಾರೋಪಗಳನ್ನು ಬದಿಗಿಟ್ಟು, ಕೇರಳ ಮಾದರಿಯಲ್ಲಿ ನೆಲಮಟ್ಟದ ಸರ್ವೆ ನಡೆಸಿ ರೈತರನ್ನು ರಕ್ಷಿಸಬೇಕೆಂದು ಬಲವಾಗಿ ಪ್ರತಿಪಾದಿಸಿದ್ದಾರೆ.
ಚರ್ಚೆಯನ್ನು ಆರಂಭಿಸಿದ ಆರ್. ಅಶೋಕ್, ಕಸ್ತೂರಿ ರಂಗನ್ ವರದಿಯ ಜಾರಿ ಎಂಬುದು ಕೇಂದ್ರ ಸರ್ಕಾರದ ಸ್ವಯಂಪ್ರೇರಿತ ನಿರ್ಧಾರವಲ್ಲ, ಬದಲಾಗಿ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಮತ್ತು ಸುಪ್ರೀಂ ಕೋರ್ಟ್‌ನ ಆದೇಶಗಳ ಒತ್ತಡ ಎಂದು ಸ್ಪಷ್ಟಪಡಿಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಮಾಧವ ಗಾಡ್ಗೀಳ್ ಸಮಿತಿಯನ್ನು ರಚಿಸಲಾಗಿತ್ತು. ಆ ವರದಿಯ ಶಿಫಾರಸುಗಳು ಅತ್ಯಂತ ಕಠಿಣವಾಗಿದ್ದವು. ನಂತರ ಬಂದ ಕಸ್ತೂರಿ ರಂಗನ್ ಸಮಿತಿಯು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಶೇ. 37ಕ್ಕೆ (ಸುಮಾರು 59,940 ಚದರ ಕಿ.ಮೀ) ಸೀಮಿತಗೊಳಿಸಿ, ತುಸು ರಿಯಾಯಿತಿಗಳನ್ನು ನೀಡಿತ್ತು. ಗೋವಾ ಫೌಂಡೇಶನ್‌ನಂತಹ ಸಂಸ್ಥೆಗಳು ನಿರಂತರವಾಗಿ ನ್ಯಾಯಾಲಯದ ಮೊರೆ ಹೋಗುತ್ತಿದ್ದು, ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತಿವೆ. ಕೇಂದ್ರ ಸರ್ಕಾರವು ಎನ್‌ಜಿಟಿ ಆದೇಶವನ್ನು ಪಾಲಿಸುವ ಅನಿವಾರ್ಯತೆಯಲ್ಲಿ ಏಳನೇ ಬಾರಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಪ್ರಸ್ತುತ ಸಂಜಯ್ ಕುಮಾರ್ ನೇತೃತ್ವದ ಸಮಿತಿಯು 2027ರವರೆಗೆ ಈ ವಿಚಾರವನ್ನು ಪರಿಶೀಲಿಸುತ್ತಿದೆ ಎಂದು ಹೇಳಿದರು.
ಕರ್ನಾಟಕದ ವಾಸ್ತವ, ರೈತರ ಸಂಕಷ್ಟ
ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಸುಮಾರು 1,576 ಗ್ರಾಮಗಳು ಮತ್ತು 20,668 ಚದರ ಕಿ.ಮೀ ಪ್ರದೇಶವು ಪರಿಸರ ಸೂಕ್ಷ್ಮ ವಲಯದಲ್ಲಿ ಬರುತ್ತದೆ. ಇದು ಇತರ ರಾಜ್ಯಗಳಿಗೆ ಹೋಲಿಸಿದರೆ ಅತಿ ದೊಡ್ಡ ವ್ಯಾಪ್ತಿಯಾಗಿದೆ. ಕಸ್ತೂರಿ ರಂಗನ್ ವರದಿಯು ಸ್ಯಾಟಲೈಟ್ ಚಿತ್ರಗಳನ್ನು ಆಧರಿಸಿ ರೂಪಿಸಲಾಗಿದ್ದು, ಫಲವತ್ತಾದ ಗದ್ದೆಗಳು, ಕಾಫಿ ತೋಟಗಳು ಮತ್ತು ಜನವಸತಿ ಪ್ರದೇಶಗಳನ್ನೂ ಅರಣ್ಯ ಪ್ರದೇಶ ಎಂದು ತಪ್ಪಾಗಿ ಗುರುತಿಸಲಾಗಿದೆ. ವರದಿ ಜಾರಿಯಾದರೆ ಆ ಭಾಗದಲ್ಲಿ ರಸ್ತೆ ನಿರ್ಮಾಣ, ಸೇತುವೆ ದುರಸ್ತಿ, ವಿದ್ಯುತ್ ಸಂಪರ್ಕ ಅಥವಾ ಸಣ್ಣ ಮನೆಯ ದುರಸ್ತಿಯನ್ನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಲಿದೆ. ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಜನರು ಮೂಲಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ತಿಳಿಸಿದರು.
ಕೇರಳ ಮಾದರಿಯ ಪರಿಹಾರವೇ ದಾರಿ
ಕೇರಳದಲ್ಲಿ ಹಳ್ಳಿ ಹಳ್ಳಿಗಳಿಗೆ ಹೋಗಿ ಅಲ್ಲಿನ ಮನೆಗಳು, ತೋಟಗಳು ಮತ್ತು ಜನವಸತಿ ಪ್ರದೇಶಗಳನ್ನು ಗುರುತಿಸಿ, ವಾಸ್ತವಿಕ ವರದಿಯನ್ನು ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಆ ಮೂಲಕ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಕಡಿಮೆ ಮಾಡುವಲ್ಲಿ ಅವರು ಯಶಸ್ವಿಯಾದರು. ಇದೇ ಮಾದರಿಯನ್ನು ಕರ್ನಾಟಕ ಸರ್ಕಾರವೂ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಕೇವಲ ಕಚೇರಿಯಲ್ಲಿ ಕುಳಿತು ವರದಿ ಸಲ್ಲಿಸದೆ, ಪ್ರತಿಯೊಂದು ಗ್ರಾಮಕ್ಕೂ ಅಧಿಕಾರಿಗಳನ್ನು ಕಳುಹಿಸಿ ವಾಸ್ತವಿಕ ಚಿತ್ರಣವನ್ನು ದಾಖಲಿಸಬೇಕು. ಪರಿಸರ ಮತ್ತು ಕಾನೂನಿನ ಬಗ್ಗೆ ಆಳವಾದ ಜ್ಞಾನವಿರುವ ತಜ್ಞ ವಕೀಲರನ್ನು ಸುಪ್ರೀಂ ಕೋರ್ಟ್‌ನಲ್ಲಿ ನೇಮಿಸಿ, ರಾಜ್ಯದ ರೈತರ ಹಿತಾಸಕ್ತಿಯನ್ನು ಸಮರ್ಥವಾಗಿ ಮಂಡಿಸಬೇಕು.
ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಮೇಲೆ ಇಲ್ಲದ ಆರೋಪಗಳನ್ನು ಹೊರಿಸುವ ಬದಲಾಗಿ, ಕೇಂದ್ರ ಮತ್ತು ಎನ್‌ಜಿಟಿಯೊಂದಿಗೆ ಸಂವಾದ ನಡೆಸಿ ರಾಜ್ಯದ ನಿಲುವನ್ನು ಮನವರಿಕೆ ಮಾಡಿಕೊಡಬೇಕು ಎಂದರು. “ಒಂದು ವೇಳೆ ಈಗಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ, ಎನ್‌ಜಿಟಿ ಆದೇಶದಂತೆ ವರದಿ ಖಂಡಿತವಾಗಿ ಜಾರಿಯಾಗುತ್ತದೆ, ಆಗ ರೈತರ ಬದುಕು ಬೀದಿಗೆ ಬರುತ್ತದೆ” ಎಂದು ಅಶೋಕ್ ಎಚ್ಚರಿಸಿದರು.

