ಕಸ್ತೂರಿ ರಂಗನ್ ವರದಿ ಮತ್ತೆ ಮುನ್ನೆಲೆಗೆ: 3 ದಿನಗಳ ವಿಶೇಷ ಅಧಿವೇಶನ
ಪಶ್ಚಿಮ ಘಟ್ಟದ ಜೀವವೈವಿಧ್ಯ ಸಂರಕ್ಷಣೆಯ ಉದ್ದೇಶದಿಂದ ಕೇಂದ್ರ ಸರ್ಕಾರ ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿಯು ಪಶ್ಚಿಮ ಘಟ್ಟದ ಒಟ್ಟು ಪ್ರದೇಶದ ಶೇ.37ರಷ್ಟನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಶಿಫಾರಸು ಮಾಡಿತ್ತು.
ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿ ಮತ್ತೆ ಮುನ್ನೆಲೆಗೆ ಬಂದಿದೆ. ಕೇಂದ್ರ ಸರ್ಕಾರ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿರುವ ಬೆನ್ನಲ್ಲೇ ಮಲೆನಾಡು ಮತ್ತು ಕರಾವಳಿ ಭಾಗದ ಜನರಲ್ಲಿ ಆತಂಕ ಹಾಗೂ ವಿರೋಧ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ವರದಿಯ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಮೂರು ದಿನಗಳ ವಿಶೇಷ ವಿಧಾನಮಂಡಲ ಅಧಿವೇಶನ ಕರೆಯಲು ನಿರ್ಧರಿಸಿದೆ.
ಪಶ್ಚಿಮ ಘಟ್ಟದ ಶೇ.37ರಷ್ಟು ಪ್ರದೇಶ ಇಎಸ್ಎ ವ್ಯಾಪ್ತಿಗೆ
ಪಶ್ಚಿಮ ಘಟ್ಟದ ಜೀವವೈವಿಧ್ಯ ಸಂರಕ್ಷಣೆಯ ಉದ್ದೇಶದಿಂದ ಕೇಂದ್ರ ಸರ್ಕಾರ ಮಾಧವ್ ಗಾಡ್ಗೀಳ್ ಹಾಗೂ ಬಳಿಕ ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಿತ್ತು. ಕಸ್ತೂರಿರಂಗನ್ ಸಮಿತಿಯು ಪಶ್ಚಿಮ ಘಟ್ಟದ ಒಟ್ಟು ಪ್ರದೇಶದ ಶೇ.37ರಷ್ಟನ್ನು ಪರಿಸರ ಸೂಕ್ಷ್ಮ ವಲಯ (ESA) ಎಂದು ಘೋಷಿಸಲು ಶಿಫಾರಸು ಮಾಡಿತ್ತು.
10 ಜಿಲ್ಲೆಗಳ 1,449 ಗ್ರಾಮಗಳ ಮೇಲೆ ಪರಿಣಾಮದ ಆತಂಕ
ಕರ್ನಾಟಕದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಉತ್ತರ ಕನ್ನಡ, ಬೆಳಗಾವಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ 39 ತಾಲೂಕುಗಳ 1,449 ಗ್ರಾಮಗಳು ಪ್ರಸ್ತಾವಿತ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರಲಿವೆ ಎಂಬ ಆತಂಕ ವ್ಯಕ್ತವಾಗಿದೆ. ಗಣಿಗಾರಿಕೆ, ಬೃಹತ್ ಯೋಜನೆಗಳು, ಟೌನ್‌ಶಿಪ್‌ಗಳು ಹಾಗೂ ದೊಡ್ಡ ಕಟ್ಟಡ ನಿರ್ಮಾಣಗಳಿಗೆ ನಿರ್ಬಂಧಗಳು ಎದುರಾಗುವ ಸಾಧ್ಯತೆಯಿದೆ.
ಕೃಷಿ ಮತ್ತು ಸಾಮಾನ್ಯ ವಸತಿ ಚಟುವಟಿಕೆಗಳಿಗೆ ವರದಿಯಲ್ಲಿ ನೇರ ನಿಷೇಧವಿಲ್ಲದಿದ್ದರೂ, ಮನೆ ದುರಸ್ತಿ, ರಸ್ತೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಇತರ ಕಾಮಗಾರಿಗಳಿಗೆ ತೊಡಕು ಉಂಟಾಗಬಹುದು ಎಂಬ ಭಯ ಮಲೆನಾಡು ಭಾಗದ ಜನರಲ್ಲಿದೆ.
ವಿಶೇಷ ಅಧಿವೇಶನದಲ್ಲಿ ವರದಿ ತಿರಸ್ಕಾರದ ಬಗ್ಗೆ ಚರ್ಚೆ
ಹಿಂದಿನ ವಿಧಾನಸಭಾ ಅಧಿವೇಶನದಲ್ಲಿ ಪ್ರತಿಪಕ್ಷಗಳ ಗದ್ದಲದಿಂದಾಗಿ ಹಲವು ಪ್ರಮುಖ ವಿಚಾರಗಳ ಕುರಿತು ಸಮರ್ಪಕ ಚರ್ಚೆ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಸ್ತೂರಿರಂಗನ್ ವರದಿ ತಿರಸ್ಕಾರ, ಬರ ಪರಿಹಾರ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ನಡೆಸಲು ಸರ್ಕಾರ ಮುಂದಾಗಿದೆ.
ಸೆಪ್ಟೆಂಬರ್ 5ರಿಂದ ತೀರ್ಥಹಳ್ಳಿಯಲ್ಲಿ ಬೃಹತ್ ಹೋರಾಟ
ಇದೇ ವೇಳೆ ಕಸ್ತೂರಿರಂಗನ್ ವರದಿಯನ್ನು ಪರಿಷ್ಕರಿಸಬೇಕು ಎಂದು ಆಗ್ರಹಿಸಿ ತೀರ್ಥಹಳ್ಳಿಯಲ್ಲಿ ಸೆಪ್ಟೆಂಬರ್ 5ರಿಂದ ಪಕ್ಷಾತೀತ ಬೃಹತ್ ಪಾದಯಾತ್ರೆ ಹಾಗೂ ಹೋರಾಟಕ್ಕೆ ಸ್ಥಳೀಯರು ಸಜ್ಜಾಗಿದ್ದಾರೆ. ಪರಿಸರ ಸಂರಕ್ಷಣೆಯ ಜೊತೆಗೆ ಮಲೆನಾಡು ಮತ್ತು ಕರಾವಳಿ ಭಾಗದ ಜನರ ಜೀವನೋಪಾಯ ಹಾಗೂ ಅಭಿವೃದ್ಧಿಗೂ ಧಕ್ಕೆಯಾಗದಂತೆ ಸಮತೋಲನದ ನಿರ್ಧಾರ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

