ರಾಜ್ಯದ ಹಿತಾಸಕ್ತಿಯ ವಿಚಾರದಲ್ಲಿ ರಾಜಕೀಯ ಬೇಡ, ಒಗ್ಗಟ್ಟು ಇರಲಿ: ಪರಮೇಶ್ವರ್‌
x

ರಾಜ್ಯದ ಹಿತಾಸಕ್ತಿಯ ವಿಚಾರದಲ್ಲಿ ರಾಜಕೀಯ ಬೇಡ, ಒಗ್ಗಟ್ಟು ಇರಲಿ: ಪರಮೇಶ್ವರ್‌

ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಏಕಪಕ್ಷೀಯ ಬದಲು, ಆಡಳಿತ, ವಿರೋಧ ಪಕ್ಷಗಳ ಸದಸ್ಯರು ಮುಕ್ತವಾಗಿ ಚರ್ಚಿಸಿ ಒಮ್ಮತದ ನಿಲುವನ್ನು ಕೇಂದ್ರಕ್ಕೆ ತಿಳಿಸುವುದು ಸೂಕ್ತ ಎಂದು ಡಿಸಿಎಂ ಹೇಳಿದ್ದಾರೆ.


Click the Play button to hear this message in audio format

ಕಸ್ತೂರಿ ರಂಗನ್ ವರದಿ ಹಾಗೂ ರಾಜ್ಯದಲ್ಲಿ ಉಂಟಾಗಿರುವ ಗಂಭೀರ ಬರ ಪರಿಸ್ಥಿತಿಯ ಕುರಿತು ವಿಧಾನಮಂಡಲದಲ್ಲಿ ಪಕ್ಷಾತೀತವಾಗಿ ಸಮಗ್ರ ಚರ್ಚೆ ನಡೆಸಿ, ರಾಜ್ಯದ ಹಿತಾಸಕ್ತಿಗೆ ಪೂರಕವಾದ ಒಮ್ಮತದ ನಿರ್ಣಯ ಕೈಗೊಳ್ಳಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.

ವಿಧಾನಪರಿಷತ್‌ನಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯ 7ನೇ ಕರಡು ಪ್ರತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನಿಗದಿತ ಅವಧಿಯೊಳಗೆ ತನ್ನ ಅಭಿಪ್ರಾಯವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಬೇಕಿದೆ. ಸರ್ಕಾರದ ಅಭಿಪ್ರಾಯವನ್ನಷ್ಟೇ ಏಕಪಕ್ಷೀಯವಾಗಿ ಸಲ್ಲಿಸುವ ಬದಲು, ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಮುಕ್ತವಾಗಿ ಚರ್ಚಿಸಿ, ರಾಜ್ಯದ ಹಿತದೃಷ್ಟಿಯಿಂದ ಒಮ್ಮತದ ನಿಲುವನ್ನು ಕೇಂದ್ರಕ್ಕೆ ತಿಳಿಸುವುದು ಸೂಕ್ತ ಎಂಬ ಉದ್ದೇಶದಿಂದ ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಈ ಬಾರಿ ಬರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಇದು ಕೆಲವೇ ತಾಲೂಕುಗಳಿಗೆ ಸೀಮಿತವಾಗಿಲ್ಲ. ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ತೀವ್ರ ಕೊರತೆ ಕಂಡುಬಂದಿದ್ದು, ಕೃಷಿ ಚಟುವಟಿಕೆ ಮತ್ತು ರೈತರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಹಿಂದಿನ ತೀವ್ರ ಬರ ಪರಿಸ್ಥಿತಿಗಳೊಂದಿಗೆ ಈ ವರ್ಷದ ಅಂಕಿ-ಅಂಶಗಳನ್ನು ಹೋಲಿಕೆ ಮಾಡಲಾಗುತ್ತಿದ್ದು, ಪ್ರಸ್ತುತ ಪರಿಸ್ಥಿತಿಯ ತೀವ್ರತೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪೆಸಿಫಿಕ್ ಸಾಗರದ ಮೇಲ್ಮೈ ನೀರಿನ ತಾಪಮಾನ ಹೆಚ್ಚಳದಿಂದ ಉಂಟಾಗುವ ಎಲ್ ನಿನೋ ಪ್ರಕ್ರಿಯೆಯೂ ಮಳೆ ಕೊರತೆಗೆ ಕಾರಣವಾಗಿದ್ದು, ಈ ಬಾರಿ ಅದರ ತೀವ್ರತೆ ಹೆಚ್ಚಿದೆ ಎಂದರು.

ವಾಡಿಕೆಗಿಂತ ಮಳೆ ಕೊರತೆ

ರಾಜ್ಯದಲ್ಲಿ ವಾಡಿಕೆಯಂತೆ ಸುಮಾರು 852 ಮಿ.ಮೀ. ಮಳೆಯಾಗಬೇಕಿತ್ತು, ಆದರೆ 642 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ. ಜೂನ್‌ನಿಂದ ಸೆಪ್ಟೆಂಬರ್ ರವರೆಗಿನ ಅವಧಿಯಲ್ಲಿ ವಿವಿಧ ಪ್ರದೇಶಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ. ರಾಜ್ಯದ ಸರಾಸರಿ ಮಳೆ ಕೊರತೆ ಶೇ.36ರಷ್ಟಿದ್ದು, ದಕ್ಷಿಣ ಒಳನಾಡಿನಲ್ಲಿ ಶೇ.46, ಉತ್ತರ ಒಳನಾಡಿನಲ್ಲಿ ಶೇ.44, ಮಲೆನಾಡಿನಲ್ಲಿ ಶೇ.38 ಹಾಗೂ ಕರಾವಳಿ ಭಾಗದಲ್ಲಿ ಶೇ.28ರಷ್ಟು ಮಳೆ ಕೊರತೆ ದಾಖಲಾಗಿದೆ. ಮಳೆ ಆರಂಭವಾದ ಸಂದರ್ಭದಲ್ಲಿ ರೈತರು ಬಿತ್ತನೆ ಕೈಗೊಂಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಮಳೆ ಕೈಕೊಟ್ಟ ಪರಿಣಾಮ ಮೊಳಕೆಯೊಡೆದ ಬೆಳೆಗಳು ಒಣಗಿವೆ. ನಂತರ ಮಳೆಯಾದಾಗ ಎರಡನೇ ಬಾರಿ ಬಿತ್ತನೆ ಮಾಡಿದ ಬೆಳೆಗಳಿಗೂ ಹಾನಿಯಾಗಿದೆ. ಹಲವು ಪ್ರದೇಶಗಳಲ್ಲಿ ಬೆಳೆ ಹಾನಿ ತೀವ್ರವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರವು 2020ರಲ್ಲಿ ರೂಪಿಸಿರುವ ಬರ ಘೋಷಣೆಯ ಮಾರ್ಗಸೂಚಿಗಳ ಪ್ರಕಾರವೇ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕಾಗುತ್ತದೆ. ಆ ಮಾನದಂಡಗಳನ್ನು ಅನುಸರಿಸಿ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ನಿರಂತರ ಪರಿಶೀಲನೆಯ ಬಳಿಕ ಮತ್ತೂ 23 ತಾಲೂಕುಗಳನ್ನು ಸೇರ್ಪಡೆ ಮಾಡಲಾಗಿದ್ದು, ಇದೀಗ ಮತ್ತೆ 53 ತಾಲೂಕುಗಳನ್ನು ಪಟ್ಟಿಗೆ ಸೇರಿಸಲಾಗುತ್ತಿದೆ. ಇದರೊಂದಿಗೆ ಒಟ್ಟು 177 ತಾಲೂಕುಗಳು ಬರಪೀಡಿತ ಪ್ರದೇಶಗಳಾಗಿ ಘೋಷಣೆಯಾಗಲಿವೆ. ಇಷ್ಟಕ್ಕೇ ಪ್ರಕ್ರಿಯೆ ಮುಗಿಯುವುದಿಲ್ಲ. ನೆಲಮಟ್ಟದ ಪರಿಸ್ಥಿತಿ, ಮಳೆ ಕೊರತೆ, ಬೆಳೆ ಹಾನಿ ಸೇರಿದಂತೆ ನಿಗದಿತ ಮಾನದಂಡಗಳ ಆಧಾರದಲ್ಲಿ ನಿರಂತರ ಮೌಲ್ಯಮಾಪನ ನಡೆಸಲಾಗುವುದು. ಮುಂದಿನ ಹಂತದಲ್ಲಿ ಮತ್ತಷ್ಟು ತಾಲೂಕುಗಳು ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿದ್ದು, ಬರಪೀಡಿತ ತಾಲೂಕುಗಳ ಸಂಖ್ಯೆ ಸುಮಾರು 200ರವರೆಗೆ ತಲುಪಬಹುದು ಎಂದು ತಿಳಿಸಿದರು.

ನಿಯಮಗಳ ಚೌಕಟ್ಟಿನಲ್ಲಿಯೇ ಕ್ರಮ

ಕೇಂದ್ರ ಸರ್ಕಾರವೇ ಬರ ಘೋಷಣೆ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಮಾನದಂಡಗಳನ್ನು ರೂಪಿಸಿರುವುದರಿಂದ, ರಾಜ್ಯ ಸರ್ಕಾರವು ಆ ನಿಯಮಗಳ ಚೌಕಟ್ಟಿನಲ್ಲಿಯೇ ಕ್ರಮ ಕೈಗೊಳ್ಳಬೇಕಾಗಿದೆ. ಮಾನದಂಡಗಳನ್ನು ಮೀರಿ ರಾಜ್ಯದ ಎಲ್ಲ ತಾಲೂಕುಗಳನ್ನು ಏಕಾಏಕಿ ಬರಪೀಡಿತ ಎಂದು ಘೋಷಿಸಿದರೆ ಕೇಂದ್ರದಿಂದ ಪರಿಹಾರ ಪಡೆಯುವ ಪ್ರಕ್ರಿಯೆಗೆ ತೊಡಕು ಉಂಟಾಗಬಹುದು. ಕೇಂದ್ರ ಸರ್ಕಾರ ರೂಪಿಸಿರುವ ನಿಯಮಗಳ ಪ್ರಕಾರವೇ ನಾವು ನಡೆದುಕೊಳ್ಳುತ್ತಿದ್ದೇವೆ. ಆ ನಿಯಮಗಳಡಿ ರಾಜ್ಯಕ್ಕೆ ದೊರೆಯಬೇಕಾದ ಬರ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಬೇಕು. ಅದೇ ವೇಳೆ ರಾಜ್ಯ ಸರ್ಕಾರವೂ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯದೆ, ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಿ ರೈತರಿಗೆ ಪರಿಹಾರ ತಲುಪಿಸುವ ಕೆಲಸ ಮಾಡಲಿದೆ. ಕಸ್ತೂರಿ ರಂಗನ್ ವರದಿ ಮತ್ತು ಬರಗಾಲ ಎರಡೂ ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ಮಹತ್ವದ ವಿಷಯಗಳಾಗಿವೆ. ಹೀಗಾಗಿ ಆಡಳಿತ ಮತ್ತು ವಿರೋಧ ಪಕ್ಷಗಳು ಪಕ್ಷಭೇದ ಮರೆತು ಸದನದಲ್ಲಿ ಸಮಗ್ರವಾಗಿ ಚರ್ಚಿಸಿ, ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಒಗ್ಗಟ್ಟಿನ ನಿಲುವನ್ನು ಕೇಂದ್ರ ಸರ್ಕಾರದ ಮುಂದೆ ಮಂಡಿಸಬೇಕಿದೆ ಎಂದರು.

Read More
Next Story