ಕರ್ತವ್ಯದ ಮೂಲಕ ಆಡಳಿತದಲ್ಲಿ ಡಿಜಿಟಲ್ ಕ್ರಾಂತಿ: ಕರ್ನಾಟಕದ ಹೊಸ ಹೆಜ್ಜೆ
x

'ಕರ್ತವ್ಯ'ದ ಮೂಲಕ ಆಡಳಿತದಲ್ಲಿ ಡಿಜಿಟಲ್ ಕ್ರಾಂತಿ: ಕರ್ನಾಟಕದ ಹೊಸ ಹೆಜ್ಜೆ

ಕೇವಲ ಹಾಜರಾತಿಯನ್ನು ದಾಖಲಿಸುವ ಆ್ಯಪ್ ಮಾತ್ರವಲ್ಲ, ಬದಲಾಗಿ ಸರ್ಕಾರಿ ಸೇವೆಯನ್ನು ನಾಗರಿಕರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಒಂದು ಬೃಹತ್ ಡಿಜಿಟಲ್ ಸುಧಾರಣೆಯಾಗಿದೆ.


Click the Play button to hear this message in audio format

ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಮರುಸ್ಥಾಪಿಸುವ ಮಹತ್ವದ ಗುರಿಯೊಂದಿಗೆ ಕರ್ನಾಟಕ ಸರ್ಕಾರವು ‘ಕರ್ತವ್ಯ’ ಎಂಬ ಅತ್ಯಾಧುನಿಕ ಹಾಜರಾತಿ ನಿರ್ವಹಣಾ ತಂತ್ರಜ್ಞಾನವನ್ನು ಜಾರಿಗೆ ತಂದಿದೆ. ಇದು ಕೇವಲ ಹಾಜರಾತಿಯನ್ನು ದಾಖಲಿಸುವ ಆ್ಯಪ್ ಮಾತ್ರವಲ್ಲ, ಬದಲಾಗಿ ಸರ್ಕಾರಿ ಸೇವೆಯನ್ನು ನಾಗರಿಕರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಒಂದು ಬೃಹತ್ ಡಿಜಿಟಲ್ ಸುಧಾರಣೆಯಾಗಿದೆ.

ಸರ್ಕಾರದ ಸಚಿವಾಲಯ ಹಾಗೂ ಇಲಾಖೆಗಳಲ್ಲಿ ಉನ್ನತ ಅಧಿಕಾರಿಗಳೊಂದಿಗೆ ನಡೆಸಿದ ಮೊದಲ ಸಭೆಯಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರಿ ನೌಕರರ ಕಚೇರಿ ಹಾಜರಾತಿಯ ಬಗ್ಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದರು. ಕಚೇರಿ ವೇಳೆಯಲ್ಲಿ ನೌಕರರು ಶೇ.100 ರಷ್ಟು ಹಾಜರಿರಬೇಕು ಮತ್ತು ಸಾರ್ವಜನಿಕರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂಬುದು ಸರ್ಕಾರದ ಮುಖ್ಯ ಆದೇಶವಾಗಿತ್ತು. ಈ ಹಿಂದೆ ಜಾರಿಯಲ್ಲಿದ್ದ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಹಲವು ಲೋಪದೋಷಗಳಿದ್ದವು. ಕೆಲವೆಡೆ ನೌಕರರು ಡಿಜಿಟಲ್ ಸಹಿ ಮಾಡಿ ಕಚೇರಿಯಿಂದ ಗೈರಾಗುವ ಸಾಧ್ಯತೆಗಳಿದ್ದವು. ಇಂತಹ ದೋಷಗಳನ್ನು ತಡೆಗಟ್ಟಲು ಮತ್ತು ಉದ್ಯೋಗಿಗಳ ಭೌತಿಕ ಉಪಸ್ಥಿತಿಯನ್ನು ಖಾತ್ರಿಪಡಿಸಲು 'ಕರ್ತವ್ಯ' ವ್ಯವಸ್ಥೆಯನ್ನು ರೂಪಿಸಲಾಗಿದೆ.

ಸಂಪೂರ್ಣ "ಮೇಡ್-ಇನ್-ಕರ್ನಾಟಕ" ಆವಿಷ್ಕಾರ

'ಕರ್ತವ್ಯ'ದ ಅತಿ ದೊಡ್ಡ ವಿಶೇಷತೆಯೆಂದರೆ, ಇದು ಸಂಪೂರ್ಣವಾಗಿ ಸ್ವದೇಶಿ ಆವಿಷ್ಕಾರ. ಯಾವುದೇ ಬಾಹ್ಯ ಖಾಸಗಿ ತಂತ್ರಜ್ಞಾನ ಸಂಸ್ಥೆಗಳ ನೆರವಿಲ್ಲದೆ, ಸರ್ಕಾರದ ಆಂತರಿಕ ವ್ಯವಸ್ಥೆಯಲ್ಲೇ ಇದನ್ನು ಸಿದ್ಧಪಡಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಉಸ್ತುವಾರಿಯಲ್ಲಿ, 'ಸೆಂಟರ್ ಫಾರ್ ಇ-ಗವರ್ನೆನ್ಸ್' ಮತ್ತು 'ಕರ್ನಾಟಕ ಎಐ ಸೆಲ್' ಜಂಟಿಯಾಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. ಈ ಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ವೆಂಡರ್ ವೆಚ್ಚ ಉಳಿತಾಯವಾಗಿದೆ. ಇದಕ್ಕಿಂತ ಮಿಗಿಲಾಗಿ, ದತ್ತಾಂಶದ ಸುರಕ್ಷತೆ ಮತ್ತು ಸರ್ಕಾರಿ ಸ್ವಾಯತ್ತತೆ ಹೆಚ್ಚಾಗಿದೆ. ಕರ್ನಾಟಕದ ಈ ಯಶಸ್ವಿ ಮಾದರಿಯು ಇಂದು ಇಡೀ ದೇಶಕ್ಕೆ ಮಾದರಿಯಾಗಿದೆ.

ತಂತ್ರಜ್ಞಾನದ ಪ್ರಮುಖ ವೈಶಿಷ್ಟ್ಯಗಳು

'ಕರ್ತವ್ಯ' ತಂತ್ರಜ್ಞಾನವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಕೃತಕ ಬುದ್ಧಿಮತ್ತೆ ಆಧಾರಿತ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸಲಾಗಿದೆ. ಇದರಲ್ಲಿನ 'ಲೈವ್‌ನೆಸ್ ಡಿಟೆಕ್ಷನ್' ಮೂಲಕ ನಕಲಿ ಹಾಜರಾತಿಯನ್ನು ಸಂಪೂರ್ಣವಾಗಿ ತಡೆಯಬಹುದು. ಜಿಐಎಸ್ ತಂತ್ರಜ್ಞಾನವನ್ನು ಬಳಸಿ, ಉದ್ಯೋಗಿ ತಾನು ಕರ್ತವ್ಯ ನಿರ್ವಹಿಸುವ ಕಚೇರಿಯ ನಿಗದಿತ ಪರಿಧಿಯೊಳಗೆ ಇದ್ದಾಗ ಮಾತ್ರ ಹಾಜರಾತಿ ದಾಖಲಿಸಲು ಸಾಧ್ಯವಾಗುವಂತೆ ಮಾಡಲಾಗಿದೆ. ಈ ವ್ಯವಸ್ಥೆಯನ್ನು ಆಧಾರ್ ಇ-ಕೆವೈಸಿ ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಆಪ್‌ಗಳ ಮೂಲಕ ಉದ್ಯೋಗಿಗಳು ತಮ್ಮ ಹಾಜರಾತಿ, ರಜೆ ಮತ್ತು ಅಧಿಕೃತ ಹೊರಗಿನ ಕೆಲಸದ ವಿವರಗಳನ್ನು ಸುಲಭವಾಗಿ ದಾಖಲಿಸಬಹುದು.

ಅಭೂತಪೂರ್ವ ನೋಂದಣಿ - ವೇಗದ ಅನುಷ್ಠಾನ

ಮುಖ್ಯಮಂತ್ರಿಗಳ ಆದೇಶದ ಬೆನ್ನಲ್ಲೇ ಇಲಾಖೆಗಳಲ್ಲಿ 'ಕರ್ತವ್ಯ' ಆ್ಯಪ್‌ನ ಅಳವಡಿಕೆ ಭರದಿಂದ ಸಾಗಿದೆ. ಕೇವಲ ಒಂದು ವಾರದಲ್ಲಿ ನೋಂದಣಿಯಲ್ಲಿ ಶೇ. 25ಕ್ಕೂ ಹೆಚ್ಚು ಬೆಳವಣಿಗೆ ಕಂಡುಬಂದಿದೆ. ನೋಂದಾಯಿತ ಉದ್ಯೋಗಿಗಳ ಸಂಖ್ಯೆ 2.46 ಲಕ್ಷದಿಂದ 3.01 ಲಕ್ಷಕ್ಕೆ ಜಿಗಿದಿದೆ. ದೈನಂದಿನ ಚೆಕ್-ಇನ್ ಸಂಖ್ಯೆ 1.85 ಲಕ್ಷದಿಂದ 2.32 ಲಕ್ಷಕ್ಕೆ ಏರಿಕೆಯಾಗಿದೆ. ಶಾಲಾ ಶಿಕ್ಷಣ ಇಲಾಖೆಯು ಒಟ್ಟು 1.76 ಲಕ್ಷ ಉದ್ಯೋಗಿಗಳಲ್ಲಿ 1.68 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದು, ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 66,969 ನೋಂದಣಿಯೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಅಲ್ಲದೆ ಆಯುಷ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೈಗಾರಿಕಾ ತರಬೇತಿ ಇಲಾಖೆಗಳು ಈಗಾಗಲೇ ಶೇ.90 ಕ್ಕಿಂತ ಹೆಚ್ಚು ನೋಂದಣಿ ಗುರಿಯನ್ನು ತಲುಪಿವೆ.

ಮೊಬೈಲ್ ಮೂಲಕವೇ ಹಾಜರಾತಿ ದಾಖಲಿಸುವ ಸೌಲಭ್ಯ ಇರುವುದರಿಂದ ನೌಕರರು ಬಯೋಮೆಟ್ರಿಕ್ ಯಂತ್ರಗಳ ಮುಂದೆ ಸಾಲುಗಟ್ಟಿ ನಿಲ್ಲುವ ಸಮಯ ಉಳಿತಾಯವಾಗಿದ್ದು, ಆ ಸಮಯವನ್ನು ಸಾರ್ವಜನಿಕರ ಸೇವೆಗಾಗಿ ವಿನಿಯೋಗಿಸಬಹುದಾಗಿದೆ. ಇದು ಸರ್ಕಾರಿ ಸೇವೆಯ ಗುಣಮಟ್ಟವನ್ನು ಹೆಚ್ಚಿಸಿದೆ. ‘ಕರ್ತವ್ಯ’ ತಂತ್ರಜ್ಞಾನವು ಕರ್ನಾಟಕದ ಆಡಳಿತದಲ್ಲಿ ಹೊಸ ಸಂಸ್ಕೃತಿಯನ್ನು ಜಾರಿಗೆ ತಂದಿದೆ. ಇದು ಕೇವಲ ನೌಕರರ ಮೇಲೆ ನಿಗಾ ಇಡುವ ಸಾಧನವಲ್ಲ, ಬದಲಾಗಿ ಪ್ರತಿಯೊಬ್ಬ ಸರ್ಕಾರಿ ನೌಕರನೂ ತನ್ನ ಜವಾಬ್ದಾರಿಯನ್ನು ಹೆಮ್ಮೆ ಮತ್ತು ಶಿಸ್ತಿನಿಂದ ನಿರ್ವಹಿಸುವಂತೆ ಪ್ರೇರೇಪಿಸುವ ವ್ಯವಸ್ಥೆಯಾಗಿದೆ. ಅಧಿಕಾರಿಗಳ ಭೌತಿಕ ಲಭ್ಯತೆಯು ಖಾತ್ರಿಯಾಗುವ ಮೂಲಕ, ನಾಗರಿಕರಿಗೆ ಸಿಗುವ ಸೇವೆಗಳು ಇನ್ನು ಮುಂದೆ ತಡೆರಹಿತವಾಗಿರಲಿವೆ. ಡಿಜಿಟಲ್ ಆಡಳಿತ ಮತ್ತು ನಾಗರಿಕ ಕೇಂದ್ರಿತ ಸುಧಾರಣೆಯಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿ ರಾಜ್ಯವಾಗಿ ಹೊರಹೊಮ್ಮಿರುವುದು ಹೆಮ್ಮೆಯ ಸಂಗತಿಯಾಗಿದೆ.

Read More
Next Story