19 ವರ್ಷಗಳ ಸೇವೆ, ಕಾಯಂ ಉದ್ಯೋಗವಿಲ್ಲ: ವಿಕಲಚೇತನರ ಹೋರಾಟಕ್ಕೆ ಬ್ರೇಕ್
ಗೌರವಧನ ಹೆಚ್ಚಳ, ಉದ್ಯೋಗ ಕಾಯಂ, ಕನಿಷ್ಠ ವೇತನ ಹಾಗೂ ಪಿಂಚಣಿ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿಕಲಚೇತನರು ಕಳೆದ 30 ದಿನಗಳಿಂದ ಹೋರಾಟ ನಡೆಸುತ್ತಿದ್ದರು.
ಕರ್ನಾಟಕದಲ್ಲಿ ಕಳೆದ 19 ವರ್ಷಗಳಿಂದ ಗೌರವಧನದ ಆಧಾರದ ಮೇಲೆ ಕೆಲಸ ಮಾಡುತ್ತಿರುವ ವಿಕಲಚೇತನರ ಕಾರ್ಯಕರ್ತರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ನವೆಂಬರ್ 1ರೊಳಗೆ ಸಭೆಯ ದಿನಾಂಕ ನಿಗದಿಪಡಿಸುವುದಾಗಿ ಮುಖ್ಯಮಂತ್ರಿ ಕಚೇರಿ ಅಧಿಕೃತ ಪತ್ರ ಹೊರಡಿಸಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಈ ನಿರ್ಧಾರ ಕೈಗೊಂಡಿದ್ದಾರೆ.
ಗೌರವಧನ ಹೆಚ್ಚಳ, ಉದ್ಯೋಗ ಕಾಯಂ, ಕನಿಷ್ಠ ವೇತನ ಹಾಗೂ ಪಿಂಚಣಿ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿಕಲಚೇತನರು ಕಳೆದ 30 ದಿನಗಳಿಂದ ಹೋರಾಟ ನಡೆಸುತ್ತಿದ್ದರು. ರಾಮನಗರದಿಂದ ಪಾದಯಾತ್ರೆ ಆರಂಭಿಸಿದ್ದ ಪ್ರತಿಭಟನಾಕಾರರು ಬೆಂಗಳೂರಿನ ಕುಂಬಳಗೋಡು ಪ್ರದೇಶದಲ್ಲಿ ಸಭೆ ಸೇರಿ ಮುಂದಿನ ಹೋರಾಟದ ಕುರಿತು ಚರ್ಚೆ ನಡೆಸಿದರು.
ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಿದ್ಧವಿದ್ದರೂ, ಸಭೆಯ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಸಂಘಟನೆಯ ಮುಖಂಡರು ಪಟ್ಟುಹಿಡಿದಿದ್ದರು. ಕೊನೆಗೆ ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತ ಪತ್ರ ಬಿಡುಗಡೆಯಾದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
19 ವರ್ಷಗಳ ಸೇವೆ, ಇನ್ನೂ ಗೌರವಧನದ ಆಧಾರದಲ್ಲೇ ಕೆಲಸ
ರಾಜ್ಯದ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧೀನದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಆರ್ಡಬ್ಲ್ಯೂ (VRW), ತಾಲೂಕು ಪಂಚಾಯಿತಿ ಮಟ್ಟದಲ್ಲಿ ಎಂಆರ್ಡಬ್ಲ್ಯೂ (MRW) ಹಾಗೂ ನಗರ ಪ್ರದೇಶಗಳಲ್ಲಿ ಯುಆರ್ಡಬ್ಲ್ಯೂ (URW) ಕಾರ್ಯಕರ್ತರಾಗಿ ಸುಮಾರು ಆರೂವರೆ ಸಾವಿರ ಮಂದಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.
ಕಳೆದ 19 ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ತಮ್ಮನ್ನು ಕಾಯಂಗೊಳಿಸಿಲ್ಲ. ಈಗ ನೀಡಲಾಗುತ್ತಿರುವ ಗೌರವಧನವು ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ಆಹಾರ ಮತ್ತು ಇತರ ದೈನಂದಿನ ಖರ್ಚುಗಳನ್ನು ನಿಭಾಯಿಸಲು ಸಾಕಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡಿದ್ದಾರೆ.
ಕಾಯಮಾತಿ, ಗೌರವಧನ ಹೆಚ್ಚಳಕ್ಕೆ ಆಗ್ರಹ
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತೆ ಮಂಜುಳಾ ಅವರು ಉದ್ಯೋಗ ಕಾಯಮಾತಿ, ಗೌರವಧನವನ್ನು 35,000 ರೂ.ಗೆ ಹೆಚ್ಚಿಸುವುದು ಹಾಗೂ ಪಿಂಚಣಿಯನ್ನು 5,000 ರೂ.ಗೆ ಏರಿಸುವುದು ತಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದು ತಿಳಿಸಿದ್ದಾರೆ. ಇತರ ರಾಜ್ಯಗಳಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳಿಗೆ ಅನುಗುಣವಾಗಿ ಕರ್ನಾಟಕದಲ್ಲಿಯೂ ಗೌರವಧನ ಮತ್ತು ಸೌಲಭ್ಯಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇನ್ನೊಬ್ಬ ಕಾರ್ಯಕರ್ತೆ ನಾಗರತ್ನ ಅವರು, ಸುಮಾರು 19 ವರ್ಷಗಳಿಂದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದರೂ ಕನಿಷ್ಠ ವೇತನ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ 750 ರೂ. ಗೌರವಧನ ಪಡೆಯುತ್ತಿದ್ದ ತಮಗೆ ಹಂತ ಹಂತವಾಗಿ ಹೆಚ್ಚಳವಾಗಿದ್ದರೂ, ಪ್ರಸ್ತುತ ಮೊತ್ತದಲ್ಲಿ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ಹೇಳಿದ್ದಾರೆ.
ಅಧಿಕೃತ ಆದೇಶ ನೀಡುವಂತೆ ಮುಖಂಡರ ಪಟ್ಟು
ವಿಕಲಚೇತನರ ಸಂಘದ ಅಧ್ಯಕ್ಷ ಅಂಬಾಜಿ ಮೇಟಿ ಅವರು, ಗೌರವಧನ ಹೆಚ್ಚಳಕ್ಕಿಂತಲೂ ಮುಖ್ಯವಾಗಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಕನಿಷ್ಠ ವೇತನದ ಆಧಾರದ ಮೇಲೆ ಗೌರವಯುತ ಜೀವನ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಆಗ್ರಹವಾಗಿದೆ.
ಪ್ರತಿಭಟನೆಯನ್ನು ಮುಂದುವರಿಸಬೇಕೇ ಅಥವಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕೇ ಎಂಬ ಕುರಿತು ಸಭೆಯಲ್ಲಿ ಚರ್ಚೆ ನಡೆದಿತ್ತು. ಸರ್ಕಾರ ಮೂರು ದಿನಗಳ ಕಾಲಾವಕಾಶ ಕೇಳಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮುಖಂಡರು ಅಧಿಕೃತ ಆದೇಶ ನೀಡುವಂತೆ ಒತ್ತಾಯಿಸಿದ್ದರು. ಬೇಡಿಕೆಗಳು ಈಡೇರದಿದ್ದರೆ ಮತ್ತೆ ಬೀದಿಗಿಳಿದು ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನವೆಂಬರ್ 1ರೊಳಗೆ ಸಭೆ ನಿಗದಿ: ಸರ್ಕಾರದ ಭರವಸೆ
ಪ್ರತಿಭಟನಾಕಾರರ ಒತ್ತಾಯಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಕಚೇರಿ, ನವೆಂಬರ್ 1ರೊಳಗೆ ಸಭೆಯ ದಿನಾಂಕ ನಿಗದಿಪಡಿಸಿ, ಕಾರ್ಯಕರ್ತರ ಬೇಡಿಕೆಗಳ ಕುರಿತು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಅಧಿಕೃತ ಪತ್ರ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ಸಭೆಯಲ್ಲಿ ಸರ್ಕಾರದೊಂದಿಗೆ ಮಾತುಕತೆ ನಡೆಸಿದ ಬಳಿಕ ದೊರೆಯುವ ಪ್ರತಿಕ್ರಿಯೆ ಮತ್ತು ತೀರ್ಮಾನಗಳನ್ನು ಆಧರಿಸಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸುವುದಾಗಿ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

