
ರಾಜ್ಯದ 8 ಜಿಲ್ಲೆಗಳ ಜಿ.ಪಂ. ಕ್ಷೇತ್ರಗಳ ಪುನರ್ ವಿಂಗಡಣೆ; ಹೊಸ ಅಧಿಸೂಚನೆ ಪ್ರಕಟ
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ಹಾಸನ, ಉತ್ತರ ಕನ್ನಡ, ಯಾದಗಿರಿ, ಬೀದರ್, ಕೊಪ್ಪಳ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಈ ಬದಲಾವಣೆ ಮಾಡಲಾಗಿದೆ.
ಕರ್ನಾಟಕದ ಎಂಟು ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಸೀಮಾ ನಿರ್ಣಯದಲ್ಲಿ ರಾಜ್ಯ ಸರ್ಕಾರ ಮಹತ್ತರ ಬದಲಾವಣೆ ಮಾಡಿದೆ. ಬೆಂಗಳೂರು ಗ್ರಾಮಾಂತರ ಸೇರಿದಂತೆ ಒಟ್ಟು 8 ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಕ್ಷೇತ್ರಗಳ ಗಡಿ ಮತ್ತು ಸಂಖ್ಯೆಯನ್ನು ಮರುನಿಗದಿಪಡಿಸಿ ಸರ್ಕಾರವು ಅಧಿಕೃತ ರಾಜ್ಯ ಪತ್ರದಲ್ಲಿ ಅಧಿಸೂಚನೆ ಪ್ರಕಟಿಸಿದೆ.
ಯಾವೆಲ್ಲಾ ಜಿಲ್ಲೆಗಳಲ್ಲಿ ಬದಲಾವಣೆ?
ಎಂಟು ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ಮತ್ತು ವ್ಯಾಪ್ತಿಯನ್ನು ಮರುನಿಗದಿಪಡಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ಹಾಸನ, ಉತ್ತರ ಕನ್ನಡ, ಯಾದಗಿರಿ, ಬೀದರ್, ಕೊಪ್ಪಳ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಈ ಬದಲಾವಣೆ ಮಾಡಲಾಗಿದೆ.
ಮರು ವಿಂಗಡಣೆಗೆ ಕಾರಣವೇನು?
ಈ ಹಿಂದೆ ಹೊರಡಿಸಿದ್ದ ಅಧಿಸೂಚನೆ ನಂತರ ಆಗಿದ್ದ ಕೆಲ ಆಡಳಿತಾತ್ಮಕ ಬದಲಾವಣೆಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ನಗರಾಭಿವೃದ್ಧಿ ಇಲಾಖೆಯು ಎಂಟು ಜಿಲ್ಲೆಗಳ ಕೆಲವು ಗ್ರಾಮೀಣ ಪ್ರದೇಶಗಳನ್ನು ನಗರ ಸ್ಥಳೀಯ ಸಂಸ್ಥೆಗಳನ್ನಾಗಿ ಪರಿವರ್ತಿಸಿತ್ತು.
ಕಂದಾಯ ಇಲಾಖೆಯು ಮಾಗಡಿ ಮತ್ತು ನೆಲಮಂಗಲ ತಾಲ್ಲೂಕುಗಳ ಭೌಗೋಳಿಕ ಗಡಿಗಳನ್ನು ಪುನರ್ ರಚಿಸಿತ್ತು. ಈ ಕಾರಣಗಳಿಂದಾಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಗಡಿಗಳನ್ನು ಮತ್ತೊಮ್ಮೆ ಪರಿಷ್ಕರಿಸುವುದು ಅನಿವಾರ್ಯವಾಗಿತ್ತು.
ಏನೇನು ಬದಲಾಗಿದೆ?
ಭೌಗೋಳಿಕ ವ್ಯಾಪ್ತಿಗೆ ಅನುಗುಣವಾಗಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಗಡಿಗಳನ್ನು ಮರುನಿಗದಿಪಡಿಸಲಾಗಿದೆ. ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಕ್ರಮಸಂಖ್ಯೆಯ ನಿರಂತರತೆ ಕಾಪಾಡುವ ಉದ್ದೇಶದಿಂದ ಹಳೆಯ ಅಧಿಸೂಚನೆಗಳನ್ನು ಹಿಂಪಡೆದು ಹೊಸ ಕ್ರಮಸಂಖ್ಯೆಗಳೊಂದಿಗೆ ಕ್ಷೇತ್ರಗಳ ಹೆಸರು ಮತ್ತು ವ್ಯಾಪ್ತಿಯನ್ನು ಪ್ರಕಟಿಸಲಾಗಿದೆ.
ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಅಡಿಯಲ್ಲಿ ಬರುವ ಗ್ರಾಮಗಳ ವಿವರವಾದ ಪಟ್ಟಿಯನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 28 ಏಕ ಸದಸ್ಯ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಇದರಲ್ಲಿ ಹೊಸಕೋಟೆ (8), ದೇವನಹಳ್ಳಿ (7), ದೊಡ್ಡಬಳ್ಳಾಪುರ (7) ಮತ್ತು ನೆಲಮಂಗಲ (6) ಕ್ಷೇತ್ರಗಳನ್ನು ಒಳಗೊಂಡಿವೆ.
ಈ ಪರಿಷ್ಕೃತ ಪಟ್ಟಿಯು ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣಾ ಪ್ರಕ್ರಿಯೆಗಳಿಗೆ ಅಡಿಪಾಯವಾಗಲಿದೆ ಎನ್ನಲಾಗಿದೆ.

