x

ತಮಿಳುನಾಡಿಗೆ ನೀರು ಬಿಡಲ್ಲ: ಸಚಿವ ರಾಮಲಿಂಗಾ ರೆಡ್ಡಿ

ಯಾವುದೇ ಕಾರಣಕ್ಕೂ CWRC ಆದೇಶ ಪಾಲಿಸಲು ಆಗಲ್ಲ ನಮ್ಮಲ್ಲಿ ನೀರಿಲ್ಲ .ಕಾವೇರಿ ನೀರು ನಿಯಂತ್ರಣ ಸಮಿತಿ(CWMC) ಆದೇಶವನ್ನು ಪ್ರಶ್ನಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮನವಿ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.


ಕರ್ನಾಟಕದ ಜಲಾಶಯಗಳಲ್ಲಿ ಕುಡಿಯುವ ನೀರಿಗೆ ಸಾಕಾಗುವಷ್ಟು ಮಾತ್ರ ನೀರಿದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ. ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶ ಪ್ರಶ್ನಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ತಕ್ಷಣವೇ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ CWRC ಆದೇಶದ ಕುರಿತು ಮಾತನಾಡಿದ ಅವರು, ರಾಜ್ಯದ ಜಲಾಶಯಗಳ ಸ್ಥಿತಿಗತಿ, ಮೇಕೆದಾಟು ಯೋಜನೆ ಹಾಗೂ ವಿಪಕ್ಷಗಳ ಆರೋಪಗಳಿಗೆ ನೇರ ಹಾಗೂ ಸ್ಪಷ್ಟ ಉತ್ತರ ನೀಡಿದ್ದಾರೆ.

CWRC ಆದೇಶವು ರಾಜ್ಯಕ್ಕೆ ಆಘಾತ ತಂದಿರುವುದು ನಿಜ. ಆದರೆ, ಇದಕ್ಕೆ ಕಾನೂನಾತ್ಮಕವಾಗಿ ಎದುರಿಸಲು ಸರ್ಕಾರ ಸಿದ್ಧವಾಗಿದೆ. ಕಾವೇರಿ ಕೊಳ್ಳದ ನಾಲ್ಕೂ ಜಲಾಶಯಗಳಲ್ಲಿ ಪ್ರಸ್ತುತ 56 ಟಿಎಂಸಿ ನೀರಿದೆ. ಇದರಲ್ಲಿ 10 ಟಿಎಂಸಿ ಡೆಡ್ ಸ್ಟೋರೇಜ್ ಕಳೆದರೆ, ಬಳಕೆಗೆ ಲಭ್ಯವಿರುವುದು ಕೇವಲ 46 ಟಿಎಂಸಿ ಮಾತ್ರ.

ಕೊಡಗಿನಿಂದ ಹಿಡಿದು ಬೆಂಗಳೂರಿನವರೆಗೆ ಪ್ರತಿ ತಿಂಗಳು ಕುಡಿಯುವ ನೀರಿಗಾಗಿಯೇ ಕನಿಷ್ಠ 3.5 ಟಿಎಂಸಿ ನೀರು ಅಗತ್ಯವಿದೆ. ಹೀಗಿರುವಾಗ ತಮಿಳುನಾಡಿಗೆ ಹರಿಸಲು ನೀರೆಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

CWRC ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 30 ವರ್ಷಗಳಿಂದ ರಾಜ್ಯ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್ ಹಾಗೂ ಪ್ರಾಧಿಕಾರಗಳಲ್ಲಿ ಸಮರ್ಥ ವಾದ ಮಂಡಿಸುತ್ತಿರುವ ಕಾನೂನು ಸಲಹೆಗಾರ ರಾಮಯ್ಯ ಅವರೇ ಈ ಬಾರಿಯೂ ವಾದ ಮಂಡಿಸಲಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಈಗಲೂ 40 ಟಿಎಂಸಿ ನೀರಿದೆ. ಜೊತೆಗೆ ಅವರಿಗೆ ಶೀಘ್ರದಲ್ಲೇ ಈಶಾನ್ಯ ಮಾನ್ಸೂನ್ ಪ್ರಾರಂಭವಾಗಲಿದೆ. ಆದ್ದರಿಂದ ಅವರಿಗೆ ಕುಡಿಯುವ ನೀರಿಗೆ ಯಾವುದೇ ಅಭಾವವಿಲ್ಲ. ಸರ್ಕಾರವೇ ನೀರು ಬಿಡದಿರಲು ತೀರ್ಮಾನಿಸಿ ಮೇಲ್ಮನವಿ ಸಲ್ಲಿಸುತ್ತಿರುವಾಗ, ರಾಜ್ಯದ ರೈತರು ಹಾಗೂ ಸಂಘಟನೆಗಳು ಪ್ರತಿಭಟನೆ ಮಾಡುವ ಅಗತ್ಯವಿಲ್ಲ. ಮೇಲ್ಮನವಿಗೆ ಹೋಗುತ್ತಿದ್ದೇವೆ ಎಂದರೆ 'ನೀರು ಬಿಡುವುದಿಲ್ಲ' ಎಂದೇ ಅರ್ಥ ಎಂದು ಸ್ಪಷ್ಟಪಡಿಸಿದ್ದಾರೆ.

ಮೇಕೆದಾಟು ಯೋಜನೆ ಕುರಿತು ಮಾತನಾಡಿದ ಸಚಿವರು, ಇದು ರಾಜ್ಯಕ್ಕೆ ಸಿಕ್ಕ ದೊಡ್ಡ ಜಯ ಎಂದು ಬಣ್ಣಿಸಿದ್ದಾರೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ನೆರೆ ರಾಜ್ಯದ ಅನುಮತಿ ಅಗತ್ಯವಿಲ್ಲ ಎಂದು ನ್ಯಾಯಾಲಯದ ಹಂತದಲ್ಲಿ ಸ್ಪಷ್ಟತೆ ಸಿಕ್ಕಿದೆ. ಯೋಜನೆಯ ಡಿಪಿಆರ್ನಲ್ಲಿ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಿ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಮೇಕೆದಾಟು ಯೋಜನೆಯಿಂದ ನಾವು ಕೇವಲ 4.75 ಟಿಎಂಸಿ ನೀರನ್ನು ಬೆಂಗಳೂರಿನ ಕುಡಿಯುವ ನೀರಿಗೆ ಬಳಸಿಕೊಳ್ಳುತ್ತೇವೆ. ವಿದ್ಯುತ್ ಉತ್ಪಾದಿಸುತ್ತೇವೆ. ಇಲ್ಲಿ ಸಂಗ್ರಹವಾಗುವ ಹೆಚ್ಚುವರಿ ನೀರು ಅಂತಿಮವಾಗಿ ತಮಿಳುನಾಡಿನ ರೈತರಿಗೇ ತಲುಪುತ್ತದೆ. ಇದನ್ನು ತಮಿಳುನಾಡು ವಿರೋಧಿಸಿದರೆ ಅವರದೇ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ವಿಶ್ಲೇಷಿಸಿದ್ದಾರೆ.

ಆಗಸ್ಟ್ 3 ರಂದು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದಾರೆ. ಈ ಸಭೆಯ ವಿವರಗಳನ್ನು ಸಿಎಂ ಅವರೇ ಹಂಚಿಕೊಳ್ಳಲಿದ್ದಾರೆ.

ಜಲ ವಿವಾದಗಳನ್ನು ನ್ಯಾಯಾಲಯಕ್ಕೆ ಕೊಂಡೊಯ್ದರೆ ದಶಕಗಳ ಕಾಲ ಪರಿಹಾರ ಸಿಗುವುದಿಲ್ಲ. ಮಹಾರಾಷ್ಟ್ರ , ಗೋವಾ ಅಥವಾ ತಮಿಳುನಾಡು ಯಾವುದೇ ರಾಜ್ಯವಿರಲಿ, ನೆರೆ ರಾಜ್ಯಗಳ ಜೊತೆ ಸೌಹಾರ್ದಯುತವಾಗಿ ಚರ್ಚಿಸಿ ಬಗೆಹರಿಸಿಕೊಳ್ಳುವುದು ಎಲ್ಲರಿಗೂ ಒಳಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರ ಕದ್ದುಮುಚ್ಚಿ ನೀರು ಹರಿಸುತ್ತಿದೆ ಎಂಬ ವಿರೋಧ ಪಕ್ಷದ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, "ಬಿಳಿಗುಂಡ್ಲುವಿನಲ್ಲಿ ನೀರು ಹರಿಯುವುದನ್ನು ಕೇಂದ್ರ ಸರ್ಕಾರದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿಗಳು 24 ಗಂಟೆಯೂ ನಿಗಾ ವಹಿಸುತ್ತವೆ. ಪ್ರತಿಯೊಂದು ಹನಿಯ ಲೆಕ್ಕವೂ ಕೇಂದ್ರಕ್ಕೆ ತಲುಪುತ್ತದೆ. ಹೀಗಿರುವಾಗ ಕದ್ದುಮುಚ್ಚಿ ನೀರು ಬಿಡಲು ಹೇಗೆ ಸಾಧ್ಯ? ಹಿಂದೆ ಆಡಳಿತ ನಡೆಸಿದವರಿಗೂ ಇದು ಗೊತ್ತು. ಜನರನ್ನು ದಾರಿ ತಪ್ಪಿಸಲು ಈ ರೀತಿ ಮಾತನಾಡಬಾರದು. ವಾದ ಮಂಡನೆಯು ಅಂಕಿ-ಅಂಶಗಳ ಆಧಾರದ ಮೇಲೆ ನಡೆಯುತ್ತದೆಯೇ ಹೊರತು ಗಾಳಿಯಲ್ಲಿ ಅಲ್ಲ. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರಗಳಿದ್ದಾಗಲೂ ಇದೇ ಶ್ರೀರಾಮಯ್ಯ ಅವರೇ ಅಡ್ವೈಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ," ಎಂದು ತಿರುಗೇಟು ನೀಡಿದರು.


Read More
Next Story