
ರಾಜ್ಯಾದ್ಯಂತ ಒಣ ಹವೆ, ಚಿಂತಾಮಣಿಯಲ್ಲಿ ಕನಿಷ್ಠ ತಾಪಮಾನ ದಾಖಲು
ರಾಜ್ಯದ ಸಮತಟ್ಟಾದ ಪ್ರದೇಶಗಳ ಪೈಕಿ ಧಾರವಾಡದಲ್ಲಿ 13.6°C ಕನಿಷ್ಠ ತಾಪಮಾನ ದಾಖಲಾಗಿದೆ. ವಿಶೇಷವಾಗಿ ದಕ್ಷಿಣ ಒಳನಾಡಿನ ಚಿಂತಾಮಣಿಯಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಗಣನೀಯವಾಗಿ ಇಳಿಕೆಯಾಗಿದ್ದು, 10.4°C ದಾಖಲಾಗಿದೆ.
ರಾಜ್ಯದಲ್ಲಿ ಒಣ ಹವೆ ಮುಂದುವರಿದಿದ್ದು, ಧಾರವಾಡದಲ್ಲಿ 13.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದರೆ, ಹಾಸನ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿಯೂ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ಕಂಡುಬಂದಿದೆ.
ಇದಕ್ಕೆ ವಿರುದ್ಧವಾಗಿ ಬೆಳಗಾವಿ ವಿಮಾನ ನಿಲ್ದಾಣದ ಪ್ರದೇಶದಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಗಣನೀಯವಾಗಿ ಏರಿಕೆಯಾಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಶಿವಮೊಗ್ಗ ಮತ್ತು ಮಂಡ್ಯ ಭಾಗಗಳಲ್ಲಿಯೂ ತಾಪಮಾನದಲ್ಲಿ ಏರಿಕೆ ಕಂಡುಬಂದಿದೆ.
ಫೆಬ್ರವರಿ 8 ರವರೆಗೆ ರಾಜ್ಯದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಮಳೆಯಾಗುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಬೆಂಗಳೂರಿನ ಕೆಐಎಎಲ್ ವಿಮಾನ ನಿಲ್ದಾಣ ಮತ್ತು ಮೈಸೂರು ಭಾಗಗಳಲ್ಲಿ ಕನಿಷ್ಠ ತಾಪಮಾನವು 13.6 ರಿಂದ 16.0 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ.
ರಾಜ್ಯದ ದಕ್ಷಿಣ ಒಳನಾಡಿನ ಒಂದೆರಡು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ (-3.1° ಸೆಲ್ಸಿಯಸ್ ನಿಂದ -5.0 ಡಿಗ್ರಿ ಸೆಲ್ಸಿಯಸ್) ಗಣನೀಯವಾಗಿ ಕಡಿಮೆ ಇದ್ದು, ಕರ್ನಾಟಕದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಸಾಮಾನ್ಯಕ್ಕಿಂತ (-1.6 ಡಿಗ್ರಿ ಸೆಲ್ಸಿಯಸ್ ನಿಂದ -3.0 ಡಿಗ್ರಿ ಸೆಲ್ಸಿಯಸ್) ಕಡಿಮೆ ಇದೆ. ದಕ್ಷಿಣ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಸಾಮಾನ್ಯಕ್ಕಿಂತ (1.6 ಡಿಗ್ರಿ ಸೆಲ್ಸಿಯಸ್ ನಿಂದ 3.0 ಡಿಗ್ರಿ ಸೆಲ್ಸಿಯಸ್)ಹೆಚ್ಚಾಗಿದೆ; ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಸಾಮಾನ್ಯಕ್ಕಿಂತ (3.1° ಸೆಲ್ಸಿಯಸ್ ನಿಂದ 5.0 ಡಿಗ್ರಿ ಸೆಲ್ಸಿಯಸ್) ಗಣನೀಯವಾಗಿ ಹೆಚ್ಚಾಗಿದೆ ಮತ್ತು ಉಳಿದ ಸ್ಥಳಗಳಲ್ಲಿ ಸಾಮಾನ್ಯವಾಗಿದೆ.

