Weather Updates : ಸುಡುವ ಬಿಸಿಲಿನಿಂದ ಕಂಗೆಟ್ಟ ಜನತೆಗೆ ವರುಣನ ತಂಪು, ಕರಾವಳಿ ಸೇರಿ ಹಲವೆಡೆ ಯೆಲ್ಲೋ ಅಲರ್ಟ್!
x

Weather Updates : ಸುಡುವ ಬಿಸಿಲಿನಿಂದ ಕಂಗೆಟ್ಟ ಜನತೆಗೆ ವರುಣನ ತಂಪು, ಕರಾವಳಿ ಸೇರಿ ಹಲವೆಡೆ ಯೆಲ್ಲೋ ಅಲರ್ಟ್!

ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಪ್ರತ್ಯಾವರ್ತ ಮಾರುತಗಳು ಮುಂದುವರಿದಿರುವ ಕಾರಣ, ಏಪ್ರಿಲ್ ಅಂತ್ಯದಲ್ಲಿ ಹಾಗೂ ಮೇ ಮೊದಲ ವಾರದಲ್ಲಿ ರಾಜ್ಯದಾದ್ಯಂತ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ.


Click the Play button to hear this message in audio format

ರಾಜ್ಯದಲ್ಲಿ ದಿನೇ ದಿನೇ ಸೂರ್ಯನ ತಾಪಮಾನ ಏರುತ್ತಿರುವ ಬೆನ್ನಲ್ಲೇ, ಬಿಸಿಲಿನ ಬೇಗೆಯಿಂದ ಬೆಂದು ಹೋಗಿದ್ದ ಕರುನಾಡಿನ ಜನತೆಗೆ ಹವಾಮಾನ ಇಲಾಖೆಯು ಸಿಹಿಸುದ್ದಿ ನೀಡಿದೆ. ವರುಣ ದೇವ ತಂಪೆರೆಯಲು ಸಜ್ಜಾಗಿದ್ದು, ಮುಂದಿನ 7 ದಿನಗಳ ಕಾಲ ರಾಜ್ಯದ ನಾನಾ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಮಳೆಯೊಂದಿಗೆ ಬಲವಾದ ಬಿರುಗಾಳಿಯೂ ಬೀಸಲಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಕರಾವಳಿ ಮತ್ತು ಉತ್ತರ ಒಳನಾಡಿಗೆ ಯೆಲ್ಲೋ ಅಲರ್ಟ್

ಹವಾಮಾನ ಇಲಾಖೆ (IMD) ನೀಡಿರುವ ವರದಿಯ ಪ್ರಕಾರ, ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೇವಲ ಮಳೆ ಮಾತ್ರವಲ್ಲದೆ, ಪ್ರತಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳಲ್ಲಿ ಉತ್ತರ ಒಳನಾಡಿನ ಬೀದರ್, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.

ಕರಾವಳಿ ಹಾಗೂ ಮಲೆನಾಡಿನಲ್ಲಿ ವರುಣನ ಆರ್ಭಟ

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಗಡಿನಾಡು ಕಾಸರಗೋಡು ಜಿಲ್ಲೆಗಳಲ್ಲಿ ಹಗಲಿನಲ್ಲಿ ತಾಪಮಾನ ಏರಿಕೆಯ ಲಕ್ಷಣಗಳಿದ್ದರೂ, ಸಂಜೆ ಹಾಗೂ ರಾತ್ರಿ ವೇಳೆಗೆ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದೆ. ಏಪ್ರಿಲ್ 25 ಹಾಗೂ 26ರಂದು ಈ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ.

ಇತ್ತ ಮಲೆನಾಡಿನ ಹಾಸನ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಬಿಸಿಲಿನ ಜೊತೆಗೆ ಮಳೆ ಮುಂದುವರಿಯಲಿದೆ. ಏಪ್ರಿಲ್ 25ರಿಂದ ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಲಕ್ಷಣಗಳಿದ್ದು, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಹೆಚ್ಚು ಜಾಗರೂಕರಾಗಿರಬೇಕು.

ದಕ್ಷಿಣ ಒಳನಾಡಿನಲ್ಲಿ ಹೇಗಿರಲಿದೆ ಹವಾಮಾನ?

ದಕ್ಷಿಣ ಒಳನಾಡಿನಲ್ಲಿ ಅಧಿಕ ತಾಪಮಾನ ಇರಲಿದ್ದು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಾತ್ರ ಸಂಜೆ ಅಥವಾ ರಾತ್ರಿ ವೇಳೆಗೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಬಿಸಿಲು ಮುಂದುವರಿಯಲಿದ್ದು, ಅಲ್ಲಲ್ಲಿ ಮೋಡ ಕವಿದ ಒಣಹವೆ ಇರಲಿದೆ.

ಮೇ ಮೊದಲ ವಾರದಲ್ಲಿ ಭರ್ಜರಿ ಮಳೆಯ ನಿರೀಕ್ಷೆ

ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಪ್ರತ್ಯಾವರ್ತ ಮಾರುತಗಳು ಮುಂದುವರಿದಿರುವ ಕಾರಣ, ಏಪ್ರಿಲ್ ಅಂತ್ಯದಲ್ಲಿ ಹಾಗೂ ಮೇ ಮೊದಲ ವಾರದಲ್ಲಿ ರಾಜ್ಯದಾದ್ಯಂತ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. ಒಟ್ಟಾರೆಯಾಗಿ ಪ್ರಕೃತಿಯ ಈ ಹವಾಮಾನ ವೈಪರೀತ್ಯವು ಜನರನ್ನು ಕೊಂಚ ಕಂಗಾಲಾಗಿಸಿದ್ದು, ಏಕಾಏಕಿ ವಾತಾವರಣ ಬದಲಾಗಿ ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇರುವುದರಿಂದ ವಾಹನ ಸವಾರರು ಹಾಗೂ ರೈತರು ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಉತ್ತಮ.

Read More
Next Story