
ಸಾಂದರ್ಭಿಕ ಚಿತ್ರ
ಕರಾವಳಿಗೆ ರೆಡ್ ಅಲರ್ಟ್- ಬೆಂಗಳೂರು, ಬಯಲುಸೀಮೆಯಲ್ಲಿ ಬಿರುಗಾಳಿ ಸಹಿತ ಚಳಿ ವಾತಾವರಣ
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮಳೆಯ ಆರ್ಭಟ ಮುಂದುವರಿಯಲಿದೆ. ಬಹುತೇಕ ಎಲ್ಲಾ ತಾಲೂಕುಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಮುದ್ರ ತೀರ ಹಾಗೂ ತಗ್ಗು ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ರಾಜ್ಯದಲ್ಲಿ ಮುಂಗಾರು ಮಳೆ ಮತ್ತಷ್ಟು ಚುರುಕುಗೊಂಡಿದ್ದು, ಮುಂದಿನ 24 ಗಂಟೆಗಳಲ್ಲಿ ಕರಾವಳಿ ಮತ್ತು ಮಲೆನಾಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವರುಣನ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದರೆ, ಬಯಲುಸೀಮೆ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣದೊಂದಿಗೆ ಬಲವಾದ ಗಾಳಿ ಬೀಸಲಿದ್ದು, ಚಳಿಯ ವಾತಾವರಣ ಇರಲಿದೆ.
ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್
ಕರಾವಳಿಯ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮಳೆಯ ಆರ್ಭಟ ಮುಂದುವರಿಯಲಿದೆ. ಬಹುತೇಕ ಎಲ್ಲಾ ತಾಲೂಕುಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಮುದ್ರ ತೀರ ಹಾಗೂ ತಗ್ಗು ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಮಳೆಯ ಜೊತೆಗೆ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ.
ಉತ್ತರ ಒಳನಾಡು ಹಲವೆಡೆ ಬಿರುಗಾಳಿ
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಧ್ಯಮ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದೆ. ಇನ್ನುಳಿದಂತೆ ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಕಡಿಮೆ ಇದ್ದರೂ, ದಿನವಿಡೀ ನಿರಂತರವಾಗಿ ಚಳಿ ಗಾಳಿ ಬೀಸಲಿದೆ.
ಬಯಲುಸೀಮೆಯಲ್ಲಿ ಬಿರುಗಾಳಿಯ ಅಬ್ಬರ
ದಕ್ಷಿಣ ಒಳನಾಡಿನ ಮಲೆನಾಡು ಭಾಗಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಾಳಿ ಸಹಿತ ಲಘು ಮಳೆಯಾಗಲಿದೆ. ಆದರೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಸೇರಿದಂತೆ ಬಯಲುಸೀಮೆಯ ಜಿಲ್ಲೆಗಳಲ್ಲಿ ಮಳೆಗಿಂತ ಗಾಳಿಯ ತೀವ್ರತೆ ಹೆಚ್ಚಿರಲಿದೆ. ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ತಿಳಿಸಿದೆ.

