ಕರ್ನಾಟಕಕ್ಕೆ ಶಾಕ್! ಆಂಧ್ರ ಗಡಿಯಲ್ಲಿ 4.58 ಲಕ್ಷ ಕೋಟಿ ರೂ. ಹೂಡಿಕೆ
ಒಂದು ಕಾಲದಲ್ಲಿ ಫ್ಯಾಕ್ಷನಿಸಂಗೆ ಹೆಸರಾಗಿದ್ದ ರಾಯಲಸೀಮೆಯಲ್ಲಿ 4.58 ಲಕ್ಷ ಕೋಟಿ ರೂ. ಬೃಹತ್ ಹೂಡಿಕೆ ಹರಿದುಬಂದಿದೆ. ಬೆಂಗಳೂರಿನ ಟ್ರಾಫಿಕ್ ಮತ್ತು ದುಬಾರಿ ಭೂಮಿಯಿಂದ ಬೇಸತ್ತು ಕಂಪನಿಗಳು ಆಂಧ್ರದತ್ತ ಮುಖ ಮಾಡುತ್ತಿವೆಯೇ?
ಒಂದು ಕಾಲದಲ್ಲಿ ದ್ವೇಷ, ಪ್ರತೀಕಾರ ಹಾಗೂ ಪಾಳೆಗಾರಿಕೆಯಂತಹ ‘ಫ್ಯಾಕ್ಷನಿಸಂ’ ರಾಜಕಾರಣಕ್ಕೆ ಹೆಸರಾಗಿದ್ದ ಆಂಧ್ರಪ್ರದೇಶದ ರಾಯಲಸೀಮೆ ವಲಯ, ಇಂದು ದಕ್ಷಿಣ ಭಾರತದ ಹೊಸ ಹೂಡಿಕೆ ಸಾಮ್ರಾಜ್ಯವಾಗಿ ಮರುಜನ್ಮ ಪಡೆಯುತ್ತಿದೆ. ಈ ಬೆಳವಣಿಗೆಯು ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕದ ಕೈಗಾರಿಕಾ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ. ಬೆಂಗಳೂರಿನ ‘ಬ್ರ್ಯಾಂಡ್ ವ್ಯಾಲ್ಯೂ’ ಅನ್ನು ಬಳಸಿಕೊಂಡೇ ಕರ್ನಾಟಕದ ಗಡಿಗೆ ತೀರಾ ಹತ್ತಿರದಲ್ಲಿ ನಡೆಯುತ್ತಿರುವ ಈ ಬೃಹತ್ ಕೈಗಾರಿಕಾ ಕ್ರಾಂತಿ, ಭವಿಷ್ಯದಲ್ಲಿ ರಾಜ್ಯದ ಆರ್ಥಿಕತೆಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗುವ ಮುನ್ಸೂಚನೆ ನೀಡಿದೆ.
4.58 ಲಕ್ಷ ಕೋಟಿ ಹೂಡಿಕೆ, 3.57 ಲಕ್ಷ ಉದ್ಯೋಗ ಸೃಷ್ಟಿಯ ನಿರೀಕ್ಷೆ
ಪ್ರಸ್ತುತ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ರಾಯಲಸೀಮೆಯ ಅನಂತಪುರ, ಚಿತ್ತೂರು, ಕರ್ನೂಲು ಮತ್ತು ವೈಎಸ್ಆರ್ ಕಡಪ ಜಿಲ್ಲೆಗಳಲ್ಲಿ ಸುಮಾರು 275 ಕೈಗಾರಿಕಾ ಯೋಜನೆಗಳಿಗೆ ಬರೋಬ್ಬರಿ 4.58 ಲಕ್ಷ ಕೋಟಿ ರೂಪಾಯಿ ಹೂಡಿಕೆ ಹರಿದುಬಂದಿದೆ. ಇದರಿಂದಾಗಿ ಈ ಭಾಗದಲ್ಲಿ ಸುಮಾರು 3.57 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ನವೀಕರಿಸಬಹುದಾದ ಇಂಧನ, ಉತ್ಪಾದನಾ ವಲಯ, ಎಲೆಕ್ಟ್ರಾನಿಕ್ಸ್, ಲಾಜಿಸ್ಟಿಕ್ಸ್, ಸೆಮಿಕಂಡಕ್ಟರ್, ಉಕ್ಕು, ಆಹಾರ ಸಂಸ್ಕರಣೆ ಹಾಗೂ ಆಟೋಮೊಬೈಲ್ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳ ಜಾಗತಿಕ ಕಂಪನಿಗಳು ರಾಯಲಸೀಮೆಯತ್ತ ಮುಖ ಮಾಡಿವೆ. ಇದು ಕರ್ನಾಟಕದ ಕೈಗಾರಿಕಾ ಮತ್ತು ಆರ್ಥಿಕ ಪ್ರಗತಿಗೆ ಪೈಪೋಟಿಯಷ್ಟೇ ಅಲ್ಲದೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಬೆಂಗಳೂರನ್ನೇ ಮೆಟ್ಟಿಲಾಗಿಸಿಕೊಳ್ಳುತ್ತಿರುವ ರಾಯಲಸೀಮೆ!
ಇಲ್ಲಿ ಒಂದು ಕುತೂಹಲಕಾರಿ ಆಯಾಮವಿದೆ. ಹೊಸದಾಗಿ ಸ್ಥಾಪನೆಯಾಗುತ್ತಿರುವ ಆಂಧ್ರದ ಕೈಗಾರಿಕೆಗಳು ಆರಂಭದಲ್ಲಿ ರಫ್ತು, ಆಮದು ಮತ್ತು ಜಾಗತಿಕ ಸಂಪರ್ಕಕ್ಕಾಗಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನೇ (KIA) ಅವಲಂಬಿಸಬೇಕಾಗುತ್ತದೆ. ಇದು ಸದ್ಯಕ್ಕೆ ಕರ್ನಾಟಕದ ಲಾಜಿಸ್ಟಿಕ್ಸ್ ವಲಯಕ್ಕೆ ಲಾಭ ತರಬಹುದು. ಆದರೆ, ದೀರ್ಘಾವಧಿಯಲ್ಲಿ ಆಂಧ್ರವು ಬೆಂಗಳೂರಿನ ಜಾಗತಿಕ ಇಕೋ ಸಿಸ್ಟಮ್ ಹಾಗೂ ನುರಿತ ಮಾನವ ಸಂಪನ್ಮೂಲವನ್ನೇ ಮೆಟ್ಟಿಲಾಗಿ ಬಳಸಿಕೊಂಡು ತನ್ನದೇ ಆದ ಸ್ವಾವಲಂಬಿ ಕೈಗಾರಿಕಾ ಸಾಮ್ರಾಜ್ಯವನ್ನು ಕಟ್ಟಿಕೊಳ್ಳುತ್ತಿದೆ. ಒಮ್ಮೆ ಉದ್ಯಮಗಳು ಅಲ್ಲಿ ಗಟ್ಟಿಯಾಗಿ ನೆಲೆ ನಿಂತರೆ, ಕರ್ನಾಟಕದಿಂದ ಬಂಡವಾಳ ಕ್ರಮೇಣ ಆಂಧ್ರದತ್ತ ಜಾರಲಿದೆ.

