ಅರ್ಜಿ 7 ಬಂದ ತಕ್ಷಣ ಮತದಾರನ ಹೆಸರು ತೆಗೆದುಹಾಕುವುದಿಲ್ಲ : ಅನ್ಬುಕುಮಾರ್
x

ಅರ್ಜಿ 7 ಬಂದ ತಕ್ಷಣ ಮತದಾರನ ಹೆಸರು ತೆಗೆದುಹಾಕುವುದಿಲ್ಲ : ಅನ್ಬುಕುಮಾರ್

ಸುಳ್ಳು ಮಾಹಿತಿ ನೀಡುವುದು ಅಪರಾಧವಾಗಿದ್ದು, ಇಂತಹ ಕೃತ್ಯ ಸಾಬೀತಾದಲ್ಲಿ ಸಂಬಂಧಪಟ್ಟ ಅರ್ಜಿದಾರರ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಇದೀಗ ರಾಜ್ಯದ ರಾಜಕೀಯ ಮತ್ತು ನಾಗರಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಏಕಾಏಕಿ ಕೈಬಿಡಲಾಗುತ್ತಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್, "ಈವರೆಗೆ 91,278 ಅರ್ಜಿ 7 ಸಲ್ಲಿಕೆಯಾಗಿವೆ ಎಂಬುದು ನಿಜ. ಆದರೆ, ಅರ್ಜಿ ಬಂದ ತಕ್ಷಣ ಮತದಾರನ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವುದಿಲ್ಲ. ಪ್ರತಿಯೊಂದು ಅರ್ಜಿಯನ್ನೂ ಕಾನೂನಾತ್ಮಕವಾಗಿ ಪರಿಶೀಲಿಸಲಾಗುತ್ತದೆ" ಎಂದು ಸ್ಪಷ್ಟನೆ ನೀಡಿದ್ದಾರೆ.

ಅರ್ಜಿ 7 ಸಲ್ಲಿಕೆಯಾದ ಕೂಡಲೇ ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳು ಅರ್ಜಿ ಸಲ್ಲಿಸಿದ ವ್ಯಕ್ತಿ ಮತ್ತು ಯಾರ ಹೆಸರನ್ನು ತೆಗೆಯಬೇಕೆಂದು ಕೋರಲಾಗಿದೆಯೋ ಆ ಮತದಾರರಿಬ್ಬರಿಗೂ ನೋಟಿಸ್ ನೀಡುತ್ತಾರೆ. ನೋಟಿಸ್ ನೀಡಿದ ಏಳು ದಿನಗಳ ನಂತರ ಇಬ್ಬರನ್ನೂ ಕರೆಸಿ ಕಡ್ಡಾಯವಾಗಿ ವಿಚಾರಣೆ ನಡೆಸಲಾಗುತ್ತದೆ. ಸಾಕ್ಷ್ಯ ಮತ್ತು ವಾಸ್ತವಾಂಶಗಳ ಆಧಾರದ ಮೇಲೆ ಮಾತ್ರ ಹೆಸರು ತೆಗೆಯುವ ಅಥವಾ ಮುಂದುವರಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಸುಳ್ಳು ಮಾಹಿತಿ ನೀಡಿದರೆ ಕಾನೂನು ಕ್ರಮ

ಅರ್ಜಿ 7 ಸಲ್ಲಿಸುವಾಗ ಸುಳ್ಳು ಮಾಹಿತಿ ಅಥವಾ ಸುಳ್ಳು ಘೋಷಣೆ ನೀಡುವುದು ಗಂಭೀರ ಅಪರಾಧ. ಇಂತಹ ಕೃತ್ಯ ಸಾಬೀತಾದಲ್ಲಿ ಸಂಬಂಧಪಟ್ಟ ಅರ್ಜಿದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. "ಸದ್ಯಕ್ಕೆ ಇಂತಹ ದೂರುಗಳು ದಾಖಲಾಗಿಲ್ಲವಾದರೂ, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಖಚಿತ" ಎಂದು ಎಚ್ಚರಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಬಲ್ಕ್ (ಒಟ್ಟಾರೆಯಾಗಿ ದೊಡ್ಡ ಪ್ರಮಾಣದಲ್ಲಿ) ಅರ್ಜಿ 7 ಸಲ್ಲಿಕೆಯಾಗುತ್ತಿರುವ ಬಗ್ಗೆ ಕೇಳಿಬರುತ್ತಿರುವ ಆರೋಪಗಳಿಗೆ ಉತ್ತರಿಸಿದ ಅನ್ಬುಕುಮಾರ್‌, ಸ್ಥಳೀಯ ಮಟ್ಟದಲ್ಲಿ ಇಆರ್‌ಒಗಳಿಗೆ ತನಿಖೆ ನಡೆಸಲು ಸೂಚಿಸಲಾಗಿದೆ ಎಂದಿದ್ದಾರೆ. ಒಬ್ಬ ವ್ಯಕ್ತಿ ದಿನಕ್ಕೆ ಗರಿಷ್ಠ 10 ಅರ್ಜಿ 7 ಮಾತ್ರ ಸಲ್ಲಿಕೆ ಅವಕಾಶ ಇದ್ದು, ಇಡೀ ಪ್ರಕ್ರಿಯೆಯ ಅವಧಿಯಲ್ಲಿ ಒಬ್ಬ ವ್ಯಕ್ತಿ ಗರಿಷ್ಠ 50 ಅರ್ಜಿ 7 ಮಾತ್ರ ಸಲ್ಲಿಸಲು ಅವಕಾಶವಿದೆ. ಮಿತಿ ಮೀರಿದ ಅರ್ಜಿಗಳನ್ನು ಸ್ವೀಕರಿಸದಂತೆ ಮತ್ತು ತಿರಸ್ಕರಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ 4.50 ಕೋಟಿ ಮತದಾರರ ಪೈಕಿ, ತಾರ್ಕಿಕ ವ್ಯತ್ಯಾಸ ಮತ್ತು ನೋ-ಮ್ಯಾಪಿಂಗ್ ಕಾರಣಕ್ಕಾಗಿ ಸುಮಾರು 43.82 ಲಕ್ಷ ಮತದಾರರಿಗೆ ನೋಟಿಸ್‌ಗಳನ್ನು ಜನರೇಟ್ ಮಾಡಲಾಗಿತ್ತು. ಇದರಲ್ಲಿ ಶೇ. 99.40ರಷ್ಟು ಅಂದರೆ 43.55 ಲಕ್ಷ ಮತದಾರರಿಗೆ ನೋಟಿಸ್ ತಲುಪಿಸಲಾಗಿದೆ. ಈ ಪೈಕಿ ಶೇ. 84.69ರಷ್ಟು (36.89 ಲಕ್ಷ) ಪ್ರಕರಣಗಳು ವಿಲೇವಾರಿಯಾಗಿವೆ. ಉಳಿದ 6.66 ಲಕ್ಷ ಪ್ರಕರಣಗಳನ್ನು ಅಕ್ಟೋಬರ್ 12ರೊಳಗೆ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದರು.

ಅ.27ಕ್ಕೆ ಅಂತಿಮ ಪಟ್ಟಿ: ನಂತರ ವಿಶೇಷ ಅಭಿಯಾನ

ಅ.27ರಂದು ರಾಜ್ಯದ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ಇದರ ನಂತರ ಅರ್ಹ ಮತದಾರರನ್ನು ಸೇರ್ಪಡೆ ಮಾಡಲು ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ವಿಶೇಷ ಅಭಿಯಾನ ನಡೆಸಲಾಗುವುದು. ಈ ವೇಳೆ ಬಿಎಲ್‌ಒಗಳು ಮನೆಮನೆಗೆ ಭೇಟಿ ನೀಡಿ, ಹಳೇ ಪಟ್ಟಿ ಮತ್ತು ಹೊಸ ಪಟ್ಟಿಯನ್ನು ಹೋಲಿಕೆ ಮಾಡಿ ಅರ್ಹರನ್ನು ಪಟ್ಟಿಗೆ ಸೇರಿಸಲಿದ್ದಾರೆ. ಇದೇ ವೇಳೆ ಕೆಲವೆಡೆ ಪೂರ್ವ ಮುದ್ರಿತ ಅರ್ಜಿ 7 ಸಿಗುತ್ತಿದ್ದು, ಇದರ ಹಿಂದೆ ಯಾರಿದ್ದಾರೆ?" ಎಂಬ ಪ್ರಶ್ನೆಗೆ ಉತ್ತರಿಸಿದ ಸಿಇಒ ಅನ್ಬುಕುಮಾರ್, ನೇರ ಉತ್ತರ ನೀಡದೇ, ಕಾನೂನು ಮತ್ತು ತಾಂತ್ರಿಕ ಪ್ರಕ್ರಿಯೆಗಳ ಬಗ್ಗೆ ಮಾತ್ರ ಒತ್ತಿ ಹೇಳಿದರು. ಅಲ್ಲದೆ, ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತದಾರರನ್ನು ಗುರಿ ಮಾಡುತ್ತಿದ್ದಾರೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

9.10 ಲಕ್ಷ ಫಾರ್ಮ್‌ 6 ಸಲ್ಲಿಕೆ

ಅಲ್ಲದೇ, ಅರ್ಜಿ 6ನಲ್ಲಿನ ಘೋಷಣಾ ಪ್ರಮಾಣ ಪತ್ರ ಇರುವುದಿಲ್ಲ. ಬಿಎಲ್‌ಒಗಳು ಹಳೇ ಮತದಾರರ ಪಟ್ಟಿ ಹಾಗೂ ಹೊಸ ಮತದಾರರ ಪಟ್ಟಿ ಪರಿಶೀಲಿಸಿ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಿದ್ದಾರೆ. ರಾಜ್ಯದಲ್ಲಿ ಕಳೆದ ಜೂ.16ರಿಂದ ಅ.4 ರವರೆಗೆ 9.10 ಲಕ್ಷ ಫಾರ್ಮ್‌ 6 ಸಲ್ಲಿಕೆಯಾಗಿವೆ. ಅಂತೆಯೆ 4,677 ಫಾರ್ಮ್‌ 6ಎ, 91,278 ಫಾರ್ಮ್‌ 7, 11.98 ಲಕ್ಷ ಫಾರ್ಮ್‌ 8 ಸೇರಿದಂತೆ ಒಟ್ಟು 22.05 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮಾಹಿತಿ ನೀಡಿದರು.

Read More
Next Story