x

ತಳಕಚ್ಚಿತೇ ಎಸ್​​​ಐಆರ್​ ವಿಶ್ವಾಸ? ಮತಪಟ್ಟಿಯಲ್ಲಿ ಆಲ್ಗಾರಿದಮ್​​ ಮಾಯಕ..!

ರಾಜ್ಯದಲ್ಲಿನ ಎಸ್​ಐಆರ್ ಪ್ರಕ್ರಿಯೆಯಲ್ಲಿ ಸಿದ್ಧವಾಗಿರುವ ಕರಡು ಮತಪಟ್ಟಿ ಮತ್ತೆ ರಾಜಕೀಯ ಹಾಗೂ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಮತದಾರರ ಮಾಹಿತಿ ಸಂಗ್ರಹಕ್ಕೆ ಡೇಟಾಬೇಸ್ ಬಳಕೆ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.


Click the Play button to hear this message in audio format

ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಮತದಾನದ ಹಕ್ಕಿನ ಆಧಾರವಾಗಿ. ನಮ್ಮ ದೇಶದಲ್ಲಿ ಮತದಾನಕ್ಕೆ ದೊಡ್ಡ ಮೌಲ್ಯವಿದೆ. ಆದರೆ, ಆದರೆ ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆ ಇದೀಗ ಮತದಾರರ ಪಟ್ಟಿಯ ನಿಖರತೆ ಮಾತ್ರವಲ್ಲ, ಪರಿಷ್ಕರಣೆ ಪ್ರಕ್ರಿಯೆಯೇ ಆನ್‌ಲೈನ್‌ ಮೂಲಕ ಕೇಂದ್ರೀಕೃತವಾಗಿ ನಿಯಂತ್ರಿಸಲಾಗುತ್ತಿದೆ ಎಂಬ ಆರೋಪಗಳ ಕಾರಣಕ್ಕೂ ಚರ್ಚೆಗೆ ಬಂದಿದೆ. 1.08 ಕೋಟಿಗೂ ಹೆಚ್ಚು ಮತದಾರರನ್ನು ಎಎಸ್‌ಡಿಡಿಒ ವರ್ಗದಲ್ಲಿ ಗುರುತಿಸಿರುವುದು, ನೋಟಿಸ್‌ ಹಾಗೂ ಹೆಸರುಗಳ ಪರಿಶೀಲನೆಗೆ ಸಂಬಂಧಿಸಿದ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ.

ಇದರ ಬೆನ್ನಲ್ಲೇ ಚುನಾವಣಾ ಆಯೋಗದ ಆಂತರಿಕ ಕಾರ್ಯವೈಖರಿ ಕುರಿತ ವರದಿಯೂ ಚರ್ಚೆಗೆ ಬಂದಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಪ್ರಕಾರ, ಇಬ್ಬರು ಚುನಾವಣಾ ಆಯುಕ್ತರು ಹಲವು ನಿರ್ಧಾರಗಳ ಕುರಿತು ಆಕ್ಷೇಪ ದಾಖಲಿಸಿದ್ದಾರೆ. ಆದರೆ ಈ ಆರೋಪಗಳ ನಡುವೆ ಚುನಾವಣಾ ಆಯೋಗ ತನ್ನದೇ ಸ್ಪಷ್ಟನೆ ನೀಡಿದೆ.

ಹಾಗಾದರೆ ಎಸ್‌ಐಆರ್‌ನಲ್ಲಿ ನಿಜವಾಗಿಯೂ ಏನಾಗುತ್ತಿದೆ? ಆನ್‌ಲೈನ್‌ ವ್ಯವಸ್ಥೆಯ ಮೂಲಕ ಮತದಾರರ ಪಟ್ಟಿಯ ಪರಿಷ್ಕರಣೆ ಹೇಗೆ ನಡೆಯುತ್ತಿದೆ? ಅರ್ಹ ಮತದಾರರ ಹೆಸರು ತಪ್ಪಾಗಿ ಹೊರಗುಳಿಯದಂತೆ ಯಾವ ವ್ಯವಸ್ಥೆಯಿದೆ? ಚುನಾವಣಾ ಆಯೋಗದೊಳಗಿನ ಆಕ್ಷೇಪಗಳಿಗೂ ಕರ್ನಾಟಕದ ಮತದಾರರ ಆತಂಕಕ್ಕೂ ಏನು ಸಂಬಂಧ? ಈ ಎಲ್ಲ ಪ್ರಶ್ನೆಗಳ ಸುತ್ತ ನಡೆಯುತ್ತಿರುವ ಚರ್ಚೆಯ ಸಂಪೂರ್ಣ ಚಿತ್ರಣ ಇಲ್ಲಿದೆ.

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ತಂತ್ರಜ್ಞಾನ ಮತ್ತು ದತ್ತಾಂಶ ಆಧಾರಿತ ಪರಿಶೀಲನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿರುವುದು ಗೊತ್ತಿರುವ ವಿಷಯ. ಮತದಾರರ ಹಿಂದಿನ ದಾಖಲೆಗಳು, ಪ್ರಸ್ತುತ ಮಾಹಿತಿಗಳು ಹಾಗೂ ಮನೆ-ಮನೆ ಸಮೀಕ್ಷೆಯಿಂದ ದೊರೆಯುವ ವಿವರಗಳನ್ನು ಹೋಲಿಕೆ ಮಾಡಲಾಗುತ್ತಿದೆ. ಆದರೆ, ಇಂತಹ ದೊಡ್ಡ ಪ್ರಮಾಣದ ದತ್ತಾಂಶವನ್ನು ತಾಂತ್ರಿಕವಾಗಿ ಸಂಸ್ಕರಿಸುವಾಗ ತಪ್ಪು ಸಂಭವಿಸಿದೆ ಎಂಬ ಪ್ರಶ್ನೆಯನ್ನು ಪ್ರತಿಪಕ್ಷಗಳು ಮತ್ತು ನಾಗರಿಕ ಸಂಘಟನೆಗಳು ಎತ್ತಿವೆ. ಕರ್ನಾಟಕದಲ್ಲಿ 1.08 ಕೋಟಿಗೂ ಹೆಚ್ಚು ಮತದಾರರು ಈ ವರ್ಗದಲ್ಲಿ ಗುರುತಿಸಲ್ಪಟ್ಟಿದ್ದು, ಅವರಲ್ಲಿ ಕೆಲವರ ವರ್ಗೀಕರಣವೇ ತಪ್ಪಾಗಿದೆ ಎಂಬುದಕ್ಕೆ ನಂತರದ ತಿದ್ದುಪಡಿಗಳೇ ಸಾಕ್ಷಿ. ಆಗಸ್ಟ್‌ನಲ್ಲಿ 85,267 ಮತದಾರರನ್ನು ತಪ್ಪಾಗಿ ‘ಗೈರು’ ಎಂದು ಹಾಗೂ 95,037 ಮಂದಿಯನ್ನು ‘ಸ್ಥಳಾಂತರಗೊಂಡವರು’ ಎಂದು ಗುರುತಿಸಲಾಗಿತ್ತು; ಬಳಿಕ ಈ ವರ್ಗೀಕರಣಗಳನ್ನು ಸರಿಪಡಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದ್ದನ್ನು ಸ್ಮರಿಸಲೇಬೇಕು.

ಇದೇ ಕಾರಣಕ್ಕೆ ತಂತ್ರಜ್ಞಾನ ಆಧಾರಿತ ಹೋಲಿಕೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಬೆಂಗಳೂರಿನಲ್ಲಿ ಉದ್ಯೋಗ ಅಥವಾ ಶಿಕ್ಷಣದ ಕಾರಣಕ್ಕೆ ಜನರು ಆಗಾಗ್ಗೆ ಮನೆ ಬದಲಾಯಿಸುವುದು ಸಾಮಾನ್ಯವಾಗಿರುವುದರಿಂದ ವಿಳಾಸ ಮಾಹಿತಿ ವ್ಯತ್ಯಾಸ ಕಂಡುಬರಬಹುದು. ಇಂತಹ ವ್ಯತ್ಯಾಸವನ್ನು ಮುಂದಿಟ್ಟುಕೊಂಡು ಸಾಫ್ಟ್ವೇರ್ ಏನಾದರೂ ಅವರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಿದರೆ ಅದಕ್ಕೆ ಹೊಣೆ ಯಾರು? ಸರಿಪಡಿಸುವುದು ಹೇಗೆ? ಇದಕ್ಕೆಲ್ಲ ಉತ್ತರ ಕೊಡಬೇಕಾದವರೇ ಕಳೆದ ಕೆಲವು ದಿನಗಳಿಂದ ನಿರುತ್ತರ. ಈಗಿನ ಪ್ರಮುಖ ಪ್ರಶ್ನೆ ತಂತ್ರಜ್ಞಾನ ಬಳಸಬಾರದೇ ಎಂಬುದಲ್ಲ; ತಂತ್ರಜ್ಞಾನದಿಂದ ಗುರುತಿಸಲಾದ ವ್ಯತ್ಯಾಸಗಳನ್ನು ಸ್ಥಳೀಯ ಅಧಿಕಾರಿಗಳು ಹೇಗೆ ಪರಿಶೀಲಿಸುತ್ತಾರೆ, ತಪ್ಪಾದರೆ ಯಾರು ಹೊಣೆ ಹೊರುತ್ತಾರೆ ಮತ್ತು ಸರಿಪಡಿಸುವುದು ಯಾರು ಎಂಬ ಪ್ರಶ್ನೆ. ಯಂತ್ರವೇ? ಮಾನವರೇ?

Read More
Next Story