
ರಾಜ್ಯದಲ್ಲಿ1ಕೋಟಿ ಮತದಾರರ ಭವಿಷ್ಯ ಡೋಲಾಯಮಾನ: ಎಸ್‌ಐಆರ್ ಆಘಾತಕಾರಿ ಅಂಕಿಅಂಶ
ಬೆಂಗಳೂರು ನಗರವೊಂದರಲ್ಲೇ ಸುಮಾರು 49.42 ಲಕ್ಷ ಮತದಾರರ ಹೆಸರುಗಳು ಕತ್ತರಿ ಬೀಳುವ ಭೀತಿಯಲ್ಲಿವೆ. ರಾಜ್ಯದಲ್ಲಿ 1 ಕೋಟಿಗೂ ಅಧಿಕ ಮತದಾರರ ಹೆಸರುಗಳನ್ನು ಗುರುತಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗವು ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ರಾಜ್ಯಾದ್ಯಂತ ಬರೋಬ್ಬರಿ 1 ಕೋಟಿಗೂ ಅಧಿಕ ಮತದಾರರ ಹೆಸರುಗಳು ಮತಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ಇದರಲ್ಲಿ ಬೆಂಗಳೂರು ನಗರವೊಂದರಲ್ಲೇ ಸುಮಾರು 49.42 ಲಕ್ಷ ಮತದಾರರ ಹೆಸರುಗಳು ಕತ್ತರಿ ಬೀಳುವ ಭೀತಿಯಲ್ಲಿವೆ. ರಾಜ್ಯದಲ್ಲಿ 1 ಕೋಟಿಗೂ ಅಧಿಕ ಮತದಾರರ ಹೆಸರುಗಳನ್ನು ಗುರುತಿಸಲಾಗಿದ್ದು, ದೇಶದಲ್ಲಿ ಅತಿ ಹೆಚ್ಚು ಡಿಲಿಟ್ ಆಗಿರುವ ಸಂಖ್ಯೆ ಅಧಿಕೃತವಾದರೆ ಕರ್ನಾಟಕ ಮುಂಚೂಣಿಯಲ್ಲಿರಲಿದೆ.
ರಾಜ್ಯದಲ್ಲಿ ಒಟ್ಟು 1,10,50,144 ಮತದಾರರನ್ನು ಎಎಸ್‌ಡಿಡಿಒ ವರ್ಗದಡಿ ಗುರುತಿಸಲಾಗಿದೆ. ಇದು ಒಟ್ಟು ಮತದಾರರ ಪಟ್ಟಿಯ ಶೇ. 19.93 ರಷ್ಟಿದೆ. ಇದರಲ್ಲಿ ನೇರವಾಗಿ ಪಟ್ಟಿಯಿಂದ ಡಿಲೀಟ್ ಆಗಿರುವವರ ಸಂಖ್ಯೆ ಮತ್ತು ಪ್ರಕ್ರಿಯೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶಾಶ್ವತವಾಗಿ ಸ್ಥಳಾಂತರಗೊಂಡವರು 66,43,426 ಇದ್ದು, ಇದು ಅತಿದೊಡ್ಡ ಸಂಖ್ಯೆಯಾಗಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗಿರುವವರ ಪ್ರಮಾಣ ರಾಜ್ಯದಲ್ಲಿ ಎಷ್ಟಿದೆ ಎಂಬುದನ್ನು ಇದು ತೋರಿಸುತ್ತದೆ.
ಮೃತಪಟ್ಟವರು 16,32,816, ಪತ್ತೆಯಾಗದ ಅಥವಾ ಗೈರು ಹಾಜರಾದವರು 16,12,634, ದೋಷಪೂರಿತ ನೊಂದಣಿ 6,93,448 ಸಂಖ್ಯೆ ಇದೆ. ಈ ಬೃಹತ್ ಪ್ರಮಾಣದ ಹೆಸರುಗಳ ಕೈಬಿಡುವಿಕೆ ಅಥವಾ ಗುರುತಿಸುವಿಕೆ ಪ್ರಕ್ರಿಯೆಯು, ಕರ್ನಾಟಕದಲ್ಲಿ ಮತದಾರರ ಪಟ್ಟಿಯ ಶುದ್ಧೀಕರಣ ಯಾವ ಮಟ್ಟದಲ್ಲಿ ನಡೆದಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಕರ್ನಾಟಕ ಅಗ್ರಸ್ಥಾನದಲ್ಲಿರಲು ಕಾರಣ
ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದಲ್ಲಿ ಡಿಲೀಟ್ ಆಗಿರುವವರ ಸಂಖ್ಯೆ ಹೆಚ್ಚಿರಲು ಕೇಂದ್ರ ಚುನಾವಣಾ ಆಯೋಗದ ಕಟ್ಟುನಿಟ್ಟಾದ ಮನೆ-ಮನೆ ಸಮೀಕ್ಷೆ ಮುಖ್ಯ ಕಾರಣವಾಗಿದೆ. 2026ರ ಜೂನ್-ಆಗಸ್ಟ್ ಅವಧಿಯಲ್ಲಿ ನಡೆದ ಈ ಸಮೀಕ್ಷೆಯು, ಹಲವು ದಶಕಗಳಿಂದ ಪಟ್ಟಿಯಲ್ಲಿ ಉಳಿದುಕೊಂಡಿದ್ದ 'ಸತ್ತವರು' ಮತ್ತು 'ವಲಸೆ ಹೋಗಿ ವರ್ಷಗಳೇ ಕಳೆದವರು' ಎಂಬ ಸಮಸ್ಯೆಗಳನ್ನು ಬುಡಸಮೇತ ಕಿತ್ತೊಗೆಯುವ ಪ್ರಯತ್ನ ಮಾಡಿದೆ. ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುವವರ ಸಂಖ್ಯೆ ಹೆಚ್ಚು. ಇವರು ಒಂದೇ ವರ್ಷಕ್ಕೆ ಮನೆಯನ್ನು ಬದಲಾಯಿಸುವುದರಿಂದ, ಆ ಹಳೆಯ ವಿಳಾಸದಲ್ಲಿ ಅವರ ಹೆಸರು ಮುಂದುವರಿಯುತ್ತದೆ. ಇಂತಹ ಕೋಟ್ಯಂತರ ಮತದಾರರ ದತ್ತಾಂಶವನ್ನು ಈಗ ಶುದ್ಧೀಕರಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಖಚಿತಪಡಿಸಿಕೊಳ್ಳುತ್ತಿರುವುದು ಮತ್ತು ತಂತ್ರಜ್ಞಾನದ ಬಳಕೆಯಿಂದ ಪತ್ತೆಯಾಗದ ಹೆಸರುಗಳನ್ನು ಗುರುತಿಸುತ್ತಿರುವುದು ಈ ಬೃಹತ್ ಸಂಖ್ಯೆಗೆ ಕಾರಣವಾಗಿದೆ.
ಮತದಾರರ ಪಟ್ಟಿಯಿಂದ ಲಕ್ಷಾಂತರ ಮತದಾರರ ಹೆಸರು ಡಿಲೀಟ್ ಆಗುವುದರಿಂದ, ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುವ ಅಥವಾ ತಮ್ಮ ಬೆಂಬಲಿಗರ ಮತಗಳು ಕಳೆದುಹೋಗುವ ಭೀತಿ ರಾಜಕೀಯ ಪಕ್ಷಗಳಲ್ಲಿ ಮನೆಮಾಡಿದೆ. ಒಂದು ವೇಳೆ ತಾಂತ್ರಿಕ ದೋಷದಿಂದ ಸಕ್ರಿಯ ಮತದಾರನ ಹೆಸರೂ 'ಗೈರು ಹಾಜರು' ಎಂದು ಪಟ್ಟಿಯಲ್ಲಿ ಬಂದರೆ, ಆತ ಮತದಾನದ ದಿನದಂದು ಹಕ್ಕು ಚಲಾಯಿಸಲು ಸಾಧ್ಯವಾಗುವುದಿಲ್ಲ. ಈ ಭಯವು ನಾಗರಿಕರಲ್ಲಿಯೂ ಇದೆ. ಶನಿವಾರದೊಳಗೆ ದೋಷ ಸರಿಪಡಿಸಲು ಅವಕಾಶ ನೀಡಲಾಗಿದೆ. ಆದರೆ, ಲಕ್ಷಾಂತರ ಮಂದಿ ಅಲ್ಪಾವಧಿಯಲ್ಲಿ ತಮ್ಮ ತಪ್ಪುಗಳನ್ನು ಗುರುತಿಸಿ, ಅರ್ಜಿ ಸಲ್ಲಿಸುವುದು ಕಷ್ಟ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಆತಂಕದ ವಾತಾವರಣ
ಬೆಂಗಳೂರಿನಂತಹ ಮೆಟ್ರೋ ನಗರದಲ್ಲಿ ಈ ಪರಿಷ್ಕರಣೆ ಅತ್ಯಂತ ದೊಡ್ಡ ಪರಿಣಾಮ ಬೀರಲಿದೆ. ನಗರದಲ್ಲಿ ಒಟ್ಟು 1,03,88,363 ಮತದಾರರ ಪೈಕಿ, ಬರೋಬ್ಬರಿ 49,42,750 ಮತದಾರರನ್ನು ಎಎಸ್‌ಡಿಡಿಒ ಪಟ್ಟಿಗೆ ಸೇರಿಸಲಾಗಿದೆ. ಅಂದರೆ, ಪ್ರತಿ ಇಬ್ಬರು ಮತದಾರರಲ್ಲಿ ಒಬ್ಬರ ಹೆಸರು ಪಟ್ಟಿಯಿಂದ ಮಾಯವಾಗುವ ಸಾಧ್ಯತೆ ಇದೆ.
ಬೆಂಗಳೂರಲ್ಲಿ ಸ್ಥಳಾಂತರಗೊಂಡವರು 33,80,013 ಸಂಖ್ಯೆ ಇದೆ. ಇದು ಅತಿ ದೊಡ್ಡ ಸಂಖ್ಯೆಯಾಗಿದೆ. ಬಾಡಿಗೆ ಮನೆಗಳಲ್ಲಿ ವಾಸಿಸುವವರು ಮತ್ತು ಉದ್ಯೋಗದ ನಿಮಿತ್ತ ವಿಳಾಸ ಬದಲಿಸುವವರೇ ಇಲ್ಲಿ ಹೆಚ್ಚಾಗಿದೆ. ಗೈರುಹಾಜರಾದವರು 7,96,277, ಮೃತರು 3,15,335, ನಕಲಿ 60,092, ಇತರೆ 3,91,033 ಸಂಖ್ಯೆ ಇದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಹೇಳಿದೆ.

