
ಎಸ್‌ಐಆರ್: ನಿಮ್ಮ ಮನೆಗೆ ಬರುವ ಬಿಎಲ್‌ಒಗಳಿಗೆ ಯಾವ ಮಾಹಿತಿ ನೀಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ
ರಾಜ್ಯದ ಸುಮಾರು 5.54 ಕೋಟಿ ಮತದಾರರನ್ನು ತಲುಪುವ ಗುರಿಯನ್ನು ಹೊಂದಲಾಗಿದ್ದು, ಇದಕ್ಕಾಗಿ ಸುಮಾರು 11 ಕೋಟಿ ಅರ್ಜಿಗಳನ್ನು ಸಿದ್ಧಪಡಿಸಲಾಗಿದೆ.
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಅಧಿಕೃತವಾಗಿ ಆರಂಭವಾಗಿದ್ದು, ಜೂ. 30ರಿಂದ ಜು. 29ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಪ್ರತಿ ಮನೆಗೆ ಭೇಟಿ ನೀಡಲಿದ್ದಾರೆ. ಈ ಮಹತ್ವದ ಅಭಿಯಾನದ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ.
ಮನೆ ಮನೆಗೆ ಬಿಎಲ್‌ಒ ಭೇಟಿ
ರಾಜ್ಯದ ಸುಮಾರು 5.54 ಕೋಟಿ ಮತದಾರರನ್ನು ತಲುಪುವ ಗುರಿಯನ್ನು ಹೊಂದಲಾಗಿದ್ದು, ಇದಕ್ಕಾಗಿ ಸುಮಾರು 11 ಕೋಟಿ ಅರ್ಜಿಗಳನ್ನು ಸಿದ್ಧಪಡಿಸಲಾಗಿದೆ. ಬಿಎಲ್‌ಒಗಳು ಪ್ರತಿ ಮನೆಗೆ ಭೇಟಿ ನೀಡಿದಾಗ ಎರಡು ಸೆಟ್ 'ಎನ್ಯುಮರೇಷನ್ ಫಾರ್ಮ್'ಗಳನ್ನು (ಗಣತಿ ಅರ್ಜಿ) ನೀಡಲಿದ್ದಾರೆ. ಮತದಾರರು ಈ ಅರ್ಜಿಯಲ್ಲಿ ತಮ್ಮ ಫೋಟೋ ಅಂಟಿಸಿ, ಅಗತ್ಯ ಮಾಹಿತಿ ಭರ್ತಿ ಮಾಡಿ ಸಹಿ ಮಾಡಬೇಕು. ಒಂದು ಪ್ರತಿಯನ್ನು ಬಿಎಲ್‌ಒಗೆ ವಾಪಸ್ ನೀಡಬೇಕು ಮತ್ತು ಮತ್ತೊಂದು ಪ್ರತಿಯನ್ನು ಬಿಎಲ್‌ಒ ಅವರಿಂದ ಸಹಿ ಪಡೆದು ಸ್ವೀಕೃತಿಯಾಗಿ ತಮ್ಮ ಬಳಿಯೇ ಇಟ್ಟುಕೊಳ್ಳಬೇಕು.
ಯಾವುದೇ ದಾಖಲೆಗಳ ಅಗತ್ಯವಿಲ್ಲ
ಈ ಹಂತದಲ್ಲಿ ಸಾರ್ವಜನಿಕರು ಬಿಎಲ್‌ಒಗಳಿಗೆ ಯಾವುದೇ ದಾಖಲೆಗಳನ್ನು ಅಥವಾ ಗುರುತಿನ ಚೀಟಿಗಳ ಪ್ರತಿಯನ್ನು ನೀಡುವ ಅಗತ್ಯವಿಲ್ಲ ಎಂದು ವಿ. ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ. "ಜೂ. 30ರಿಂದ ಜು. 29ರವರೆಗೆ ನಡೆಯುವ ಗಣತಿ ಹಂತದಲ್ಲಿ ಕೇವಲ ಫಾರ್ಮ್ ಭರ್ತಿ ಮಾಡಿ ನೀಡಿದರೆ ಸಾಕು. ಆ. 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಅಗತ್ಯವಿದ್ದಲ್ಲಿ ಮಾತ್ರ ದಾಖಲೆಗಳನ್ನು ಕೇಳಲಾಗುತ್ತದೆ," ಎಂದು ಅವರು ತಿಳಿಸಿದ್ದಾರೆ.
ಹೊಸ ಮತದಾರರಿಗೆ ಅವಕಾಶ
2026ರ ಅ. 1ರೊಳಗೆ 18 ವರ್ಷ ಪೂರೈಸುವ ಯುವಕರು ಈ ಸಂದರ್ಭದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದೆ. ಅಂತಹವರು ಬಿಎಲ್‌ಒ ಬಳಿ 'ಫಾರ್ಮ್ 6' ಪಡೆದು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಸರು ಡಿಲೀಟ್ ಆಗುವ ಆತಂಕ ಬೇಡ
ಅರ್ಹ ಮತದಾರರ ಹೆಸರುಗಳು ಯಾವುದೇ ಕಾರಣಕ್ಕೂ ಪಟ್ಟಿಯಿಂದ ಕೈಬಿೋಗುವುದಿಲ್ಲ ಎಂದು ಚುನಾವಣಾಧಿಕಾರಿಗಳು ಭರವಸೆ ನೀಡಿದ್ದಾರೆ. "ಒಂದು ವೇಳೆ ಹೆಸರನ್ನು ತೆಗೆದುಹಾಕುವ ಅನಿವಾರ್ಯತೆ ಬಂದಲ್ಲಿ, ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಿದ ನಂತರವೇ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲಾಗುವುದು. ಯಾರೂ ಆತಂಕ ಪಡುವ ಅಗತ್ಯವಿಲ್ಲ," ಎಂದು ಅವರು ಸಂದರ್ಶನದಲ್ಲಿ ವಿವರಿಸಿದ್ದಾರೆ.
ಕುಟುಂಬದ ಸದಸ್ಯರು ಲಭ್ಯವಿಲ್ಲದಿದ್ದಲ್ಲಿ, ಮನೆಯಲ್ಲಿರುವ ಹಿರಿಯರು ಅಥವಾ ವಯಸ್ಕ ಸದಸ್ಯರು ಅವರ ಪರವಾಗಿ ಅರ್ಜಿಗೆ ಸಹಿ ಮಾಡಬಹುದಾಗಿದೆ. ಈ ಸಮಗ್ರ ಪರಿಷ್ಕರಣಾ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯಲಿದ್ದು, ಸಾರ್ವಜನಿಕರು ಬಿಎಲ್‌ಒಗಳಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

