
ಎಐ ಆಧಾರಿತ ಚಿತ್ರ
ಮತದಾರರೇ ಗಮನಿಸಿ| ಜೂ.30ರಿಂದ ಬಿಎಲ್‌ಓಗಳಿಂದ ಮನೆ ಮನೆ ಸಮೀಕ್ಷೆ; ಗಣತಿ ನಮೂನೆ ಸಲ್ಲಿಕೆ ಕಡ್ಡಾಯ
ಮನೆ ಮನೆ ಭೇಟಿಯ ಸಂದರ್ಭದಲ್ಲಿ ಬಿಎಲ್‌ಓಗಳು ಮತದಾರರ ಪಟ್ಟಿಯಲ್ಲಿ ಹೆಸರಿರುವ ಸಾರ್ವಜನಿಕರಿಗೆ 'ಗಣತಿ ನಮೂನೆ'ಯನ್ನು ವಿತರಿಸಲಿದ್ದಾರೆ. ಈ ವೇಳೆ ಮನೆಗಳ ಮುಂದೆ ಎರಡು ಪ್ರತ್ಯೇಕ ಬಣ್ಣದ ಸ್ಟಿಕ್ಕರ್‌ಗಳನ್ನು ಅಂಟಿಸಲಾಗುತ್ತದೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಇಂದಿನಿಂದ ಚುರುಕುಗೊಂಡಿದ್ದು, ಜೂ.30 ರಿಂದ ಜು. 29 ರವರೆಗೆ ರಾಜ್ಯಾದ್ಯಂತ ಬಿಎಲ್‌ಓ (ಬೂತ್ ಮಟ್ಟದ ಅಧಿಕಾರಿ) ಗಳಿಂದ ಮನೆ ಮನೆ ಸಮೀಕ್ಷೆ ನಡೆಯಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.
ಸೋಮವಾರ(ಜೂ.29) ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷ್ಕರಣೆ ಪ್ರಕ್ರಿಯೆಯ ಸಂಪೂರ್ಣ ವೇಳಾಪಟ್ಟಿ ಹಾಗೂ ಕೈಗೊಂಡಿರುವ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ಜೂ.30 ರಿಂದ ಜು. 29 ರವರೆಗೆ ಮನೆ ಮನೆ ಸಮೀಕ್ಷೆ, ಜು. 29 ರೊಳಗೆ ಮತಗಟ್ಟೆಗಳ ಮರುಹೊಂದಾಣಿಕೆ, ಆ. 5ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟಣೆ, ಆ. 5 ರಿಂದ ಸೆ. 4ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ. ಆ. 5 ರಿಂದ ಅ. 3ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಹಾಗೂ ಅ. 10ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾತನಾಡಿದರು.
5.54 ಕೋಟಿ ಮತದಾರರ ಪರಿಶೀಲನೆ
ರಾಜ್ಯದ ಒಟ್ಟು 5,54,32,314 ಮತದಾರರು ಈ ಬಾರಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಒಳಪಡಲಿದ್ದಾರೆ. ಈ ಬೃಹತ್ ಕಾರ್ಯಕ್ಕಾಗಿ ರಾಜ್ಯಾದ್ಯಂತ ಒಟ್ಟು 59,050 ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ), 31 ಜಿಲ್ಲಾ ಚುನಾವಣಾಧಿಕಾರಿಗಳು, 4 ಅಪರ ಜಿಲ್ಲಾ ಚುನಾವಣಾಧಿಕಾರಿಗಳು, 224 ಮತದಾರರ ನೋಂದಣಾಧಿಕಾರಿಗಳು, 336 ಸಹಾಯಕ ನೋಂದಣಾಧಿಕಾರಿಗಳು ಹಾಗೂ 7,556 ಮೇಲ್ವಿಚಾರಕರಿಗೆ ಈಗಾಗಲೇ ವಿಶೇಷ ತರಬೇತಿ ನೀಡಲಾಗಿದೆ. ಇದರೊಂದಿಗೆ ರಾಜಕೀಯ ಪಕ್ಷಗಳ 1,15,112 ಬೂತ್ ಮಟ್ಟದ ಏಜೆಂಟರಿಗೂ ತರಬೇತಿ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸ್ಟಿಕ್ಕರ್ ಗುರುತು ಮತ್ತು ಗಣತಿ ನಮೂನೆ ಕಡ್ಡಾಯ
ಮನೆ ಮನೆ ಭೇಟಿಯ ಸಂದರ್ಭದಲ್ಲಿ ಬಿಎಲ್‌ಓಗಳು ಮತದಾರರ ಪಟ್ಟಿಯಲ್ಲಿ ಹೆಸರಿರುವ ಸಾರ್ವಜನಿಕರಿಗೆ 'ಗಣತಿ ನಮೂನೆ'ಯನ್ನು ವಿತರಿಸಲಿದ್ದಾರೆ. ಈ ವೇಳೆ ಮನೆಗಳ ಮುಂದೆ ಎರಡು ಪ್ರತ್ಯೇಕ ಬಣ್ಣದ ಸ್ಟಿಕ್ಕರ್‌ಗಳನ್ನು ಅಂಟಿಸಲಾಗುತ್ತದೆ. ನೇರಳೆ ಬಣ್ಣದ ಸ್ಟಿಕ್ಕರ್ ಗಣತಿ ನಮೂನೆಯನ್ನು ಯಶಸ್ವಿಯಾಗಿ ವಿತರಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದ ವೃತ್ತಾಕಾರದ ಸ್ಟಿಕ್ಕರ್ ಸಂಬಂಧಪಟ್ಟ ಮನೆಗೆ ಬೀಗ ಹಾಕಲಾಗಿದೆ ಅಥವಾ ಮುಚ್ಚಲಾಗಿದೆ ಎಂಬುದನ್ನು ಸಾರುತ್ತದೆ. ಸಾರ್ವಜನಿಕರು ಭರ್ತಿ ಮಾಡಿ, ಸಹಿ ಮಾಡಿದ ಗಣತಿ ನಮೂನೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಇಲ್ಲದಿದ್ದರೆ ಅಂತಹವರ ಹೆಸರನ್ನು ಕರಡು ಮತದಾರರ ಪಟ್ಟಿಗೆ ಸೇರಿಸಲು ಸಾಧ್ಯವಾಗುವುದಿಲ್ಲ. ಈ ನಮೂನೆಗಳನ್ನು ಸಂಗ್ರಹಿಸಲು ಬಿಎಲ್‌ಓಗಳು ಕನಿಷ್ಠ ಮೂರು ಬಾರಿ ನಿಮ್ಮ ಮನೆಗೆ ಭೇಟಿ ನೀಡಲಿದ್ದಾರೆ. ಸಂಗ್ರಹಿಸಿದ ನಮೂನೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುವುದು ಎಂದರು.
ಆನ್‌ಲೈನ್‌ನಲ್ಲೂ ಸೌಲಭ್ಯ
ಮನೆಗೆ ಬರುವ ಬೂತ್ ಮಟ್ಟದ ಅಧಿಕಾರಿಗಳು (BLO) ಸಾರ್ವಜನಿಕರಿಂದ ಯಾವುದೇ ಭೌತಿಕ ದಾಖಲೆಗಳನ್ನು ಕೇಳುವುದಿಲ್ಲ. ಮತದಾರರು ಯಾವೆಲ್ಲಾ ದಾಖಲೆಗಳನ್ನು ಹೊಂದಿರಬೇಕು ಎಂಬುದರ ಕುರಿತು ಈಗಾಗಲೇ ಪ್ರಕಟಣೆಗಳ ಮೂಲಕ ಜಾಹೀರಾತು ನೀಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದರು. ಇದೇ ವೇಳೆ, ಸಾರ್ವಜನಿಕರು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ (https://voters.eci.gov.in) ಅಥವಾ ECINET ಆಪ್ ಮೂಲಕವೂ ಗಣತಿ ನಮೂನೆಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

