
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
ಎಸ್‌ಐಆರ್‌ನಲ್ಲಿ 50 ಲಕ್ಷ ಮತದಾರರ ಕೈಬಿಡಲು ಸಂಚು: ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ
ಬಿಎಲ್‌ಒಗಳು ಕೊಳಗೇರಿ ಪ್ರದೇಶಗಳಿಗೆ ಭೇಟಿ ನೀಡಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ಅರ್ಜಿ ಭರ್ತಿ ಮಾಡುತ್ತಿದ್ದಾರೆ ಎಂದು ಹರಿಪ್ರಸಾದ್ ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ಮತದಾರರ ಗುರುತಿನ ಚೀಟಿ ವಿಶೇಷ ಸಮಗ್ರ ಪರಿಷ್ಕರಣೆ ಹಾಗೂ ರಾಜಕೀಯ ಮೈತ್ರಿ ಹಗ್ಗಜಗ್ಗಾಟ ತಾರಕಕ್ಕೇರಿದೆ. "ರಾಜ್ಯದ 5.65 ಕೋಟಿ ಮತದಾರರ ಪೈಕಿ ಬರೋಬ್ಬರಿ 50 ಲಕ್ಷ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ದೊಡ್ಡ ಸಂಚು ನಡೆಯುತ್ತಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ತುರ್ತು ಮಾಧ್ಯಮಗೋಷ್ಠಿಯಲ್ಲಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಚುನಾವಣಾ ಅಕ್ರಮ ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿಯ ಒಳಸುಳಿಗಳನ್ನು ಬಿಚ್ಚಿಟ್ಟರು.
ದೇವಸ್ಥಾನ, ಮಸೀದಿಗಳಲ್ಲಿ ಅರ್ಜಿ ಭರ್ತಿ: ಸ್ಪಷ್ಟನೆ
ಬಿಎಲ್‌ಒಗಳು ಕೊಳಗೇರಿ ಪ್ರದೇಶಗಳಿಗೆ ಭೇಟಿ ನೀಡಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ಅರ್ಜಿ ಭರ್ತಿ ಮಾಡುತ್ತಿದ್ದಾರೆ ಎಂದು ಹರಿಪ್ರಸಾದ್ ಸಮರ್ಥಿಸಿಕೊಂಡರು. "ಚುನಾವಣಾ ಆಯೋಗದ ನಿಯಮಾವಳಿಗಳ ಪ್ರಕಾರವೇ ಸಮುದಾಯ ಭವನ, ದೇವಸ್ಥಾನ ಮತ್ತು ಮಸೀದಿಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಗಣತಿ ನಮೂನೆ ಭರ್ತಿ ಮಾಡಲು ಅವಕಾಶವಿದೆ. ಎಸ್‌ಐಆರ್ ಸುಗಮವಾಗಿ ನಡೆಯಲು ಇದು ಪೂರಕ" ಎಂದರು.
ಬಿಜೆಪಿ ವಿರುದ್ಧ ಅಕ್ರಮದ ಆರೋಪ
"ಮಹಾಲಕ್ಷ್ಮಿ ಲೇಔಟ್‌ನಲ್ಲಿ ಬಿಜೆಪಿ ಬಿಎಲ್‌ಎಗಳು ಮತದಾರರ ಮೇಲೆ ಒತ್ತಡ ಹೇರುತ್ತಿದ್ದಾರೆ. ಸದಾಶಿವನಗರದಲ್ಲಿ ಬಲವಂತದ ಸೇರ್ಪಡೆ ಹಾಗೂ ಜಯನಗರದಲ್ಲಿ ಮತದಾರರಿಗೆ ಧಮಕಿ ಹಾಕಲಾಗುತ್ತಿದೆ. ಇದರ ಬಗ್ಗೆ ಪ್ರತಿಪಕ್ಷಗಳು ಏಕೆ ಮೌನವಾಗಿವೆ" ಎಂದು ಪ್ರಶ್ನಿಸಿದರು.
ಹೆಚ್‌ಡಿಕೆಗೆ 'ಬಾಂಗ್ಲಾ' ಪ್ರಶ್ನೆ
ರಾಮನಗರದ ಮಸೀದಿ ಹಾಗೂ ಕಾಂಗ್ರೆಸ್ ನಾಯಕರ ಮನೆಗಳಲ್ಲಿ ಗಣತಿ ನಮೂನೆ ತುಂಬಲಾಗುತ್ತಿದೆ ಎಂಬ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಹರಿಪ್ರಸಾದ್, "ಹಾಗಾದರೆ ರಾಮನಗರ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರು 1 ಲಕ್ಷ ಮತಗಳ ಅಂತರದಿಂದ ಗೆದ್ದಾಗ ಅಲ್ಲಿ ಬಾಂಗ್ಲಾದೇಶದವರು ಇರಲಿಲ್ಲವೇ?" ಎಂದು ವಾಗ್ದಾಳಿ ನಡೆಸಿದ್ದಾರೆ.
ಜೋಶಿ ದಾಳಕ್ಕೆ ಹೆಚ್‌ಡಿಕೆ ಬಲಿ
ದೇಶಾದ್ಯಂತ ಶಿವಸೇನೆ, ಅಕಾಲಿದಳ, ಟಿಎಂಸಿ, ಜೆಡಿಯು ಪಕ್ಷಗಳನ್ನು ಸೀಳಿ ರಾಜಕೀಯ ಬೇಳೆ ಬೇಯಿಸಿಕೊಂಡ ಇತಿಹಾಸ ಬಿಜೆಪಿಯದ್ದು. ಈಗ ಕರ್ನಾಟಕದಲ್ಲಿ ಜೆಡಿಎಸ್ ಸರದಿ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಕೇವಲ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಹಿಂದೆ ಜೋಶಿ ವಿರುದ್ಧ ಕೆಂಡ ಕಾರುತ್ತಿದ್ದ ಕುಮಾರಸ್ವಾಮಿ, ಈಗ ಅವರದ್ದೇ ಕೈಗೊಂಬೆಯಾಗಿದ್ದು ದುರಂತ" ಎಂದರು.

