ಕರ್ನಾಟಕದ ಮತದಾರರ ಪಟ್ಟಿಯಲ್ಲಿ 11 ಮಂದಿ ವಿದೇಶಿಗರ ಹೆಸರು; ವಿವರ ಪರಿಶೀಲನೆ
x

ಕರ್ನಾಟಕದ ಮತದಾರರ ಪಟ್ಟಿಯಲ್ಲಿ 11 ಮಂದಿ ವಿದೇಶಿಗರ ಹೆಸರು; ವಿವರ ಪರಿಶೀಲನೆ

ಪತ್ತೆಯಾಗಿರುವ 11 ಮಂದಿಯು ಶ್ರೀಲಂಕಾ ಮೂಲದವರೆಂದು ಶಂಕಿಸಲಾಗಿದ್ದು, ಅವರ ವಿರುದ್ಧ ವಿವಿಧ ಕ್ರಿಮಿನಲ್ ಪ್ರಕರಣಗಳೂ ದಾಖಲಾಗಿವೆ ಎನ್ನಲಾಗಿದೆ.


ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ 11ಮಂದಿ ವಿದೇಶಿ ಪ್ರಜೆಗಳ ಮೂಲ ಹಾಗೂ ವಿವರ ಪತ್ತೆಗಾಗಿ ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ಪರಿಶೀಲನಾ ತೀವ್ರಗೊಳಿಸಿದೆ. ತಮಿಳುನಾಡಿನಲ್ಲಿ ಪತ್ತೆಯಾಗಿರುವ ಈ 11 ಮಂದಿ ವಿದೇಶಿ ಪ್ರಜೆಗಳು ಕರ್ನಾಟಕದ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆಂಬ ಮಾಹಿತಿ ಬೆನ್ನಲ್ಲೇ ವಿದೇಶಿಗರ ನೋಂದಣಿ ಕಚೇರಿಯು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಸಂಪೂರ್ಣ ವಿವರಗಳನ್ನು ಕೋರಿದೆ.

ಪತ್ತೆಯಾಗಿರುವ 11 ಮಂದಿಯು ಶ್ರೀಲಂಕಾ ಮೂಲದವರೆಂದು ಶಂಕಿಸಲಾಗಿದ್ದು, ಅವರ ವಿರುದ್ಧ ವಿವಿಧ ಕ್ರಿಮಿನಲ್ ಪ್ರಕರಣಗಳೂ ದಾಖಲಾಗಿವೆ ಎನ್ನಲಾಗಿದೆ. ಈ ವ್ಯಕ್ತಿಗಳ ಹೆಸರಿನಲ್ಲಿರುವ ಮತದಾರರ ಗುರುತಿನ ಚೀಟಿಗಳು ನಕಲಿಯೇ ಅಥವಾ ನೈಜವೇ ಎಂಬುದರ ಜೊತೆಗೆ, ಈ ಹಿಂದೆ ನಡೆದ ಯಾವುದೇ ಚುನಾವಣೆಗಳಲ್ಲಿ ಮತದಾನಕ್ಕಾಗಿ ಬಳಸಲಾಗಿದೆಯೇ ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಡಿ ಈ ಅನುಮಾನಾಸ್ಪದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಗೋವಾ, ಅಂಡಮಾನ್ ಮತ್ತು ಒಡಿಶಾ ರಾಜ್ಯಗಳ ಚುನಾವಣಾ ಅಧಿಕಾರಿಗಳೂ ಕರ್ನಾಟಕದ ಮುಖ್ಯ ಚುನಾವಣಾ ಕಚೇರಿಯನ್ನು ಸಂಪರ್ಕಿಸಿದ್ದು, ತಮ್ಮ ರಾಜ್ಯದ ಎಸ್ಐಆರ್ ಅರ್ಜಿಗಳಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಮಾಹಿತಿಗಳು ಕಂಡುಬಂದ ಹಿನ್ನೆಲೆಯಲ್ಲಿ ದಾಖಲೆಗಳ ದೃಢೀಕರಣಕ್ಕೆ ಕೋರಿದ್ದಾರೆ. ನೋ-ಮ್ಯಾಪಿಂಗ್ ವಿಭಾಗಕ್ಕೆ ಸೇರಿದ ದಾಖಲೆಗಳನ್ನು ಚುನಾವಣಾ ನೋಂದಣಿ ಅಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಹಂತದಲ್ಲಿ ಎರಡು ಬಾರಿ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.

ಅಸಹಜತೆ ಕಂಡುಬರುವ ಪ್ರಕರಣಗಳಲ್ಲಿ ಮತದಾರರ ಪಾಸ್ಪೋರ್ಟ್ ಮಾಹಿತಿಗಳನ್ನು ಸಂಗ್ರಹಿಸಿ, ಕೇಂದ್ರ ಸಚಿವಾಲಯಗಳ ಮೂಲಕ ಪೌರತ್ವ ಮತ್ತು ದಾಖಲೆಗಳ ನೈಜತೆ ಖಚಿತಪಡಿಸಿಕೊಳ್ಳಲಾಗುತ್ತಿದೆ. ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡ ನಂತರವೂ ಅನುಮಾನಾಸ್ಪದ ದಾಖಲೆಗಳನ್ನು ಸರಿಪಡಿಸಿ ಮತದಾರರ ಪಟ್ಟಿಯನ್ನು ಸಂಪೂರ್ಣ ಶುದ್ಧೀಕರಿಸಲು ಇಲಾಖೆ ನಿರ್ಧರಿಸಿದೆ.

Read More
Next Story