Great news from the state government for transport employees: Basic salary hike of 12.50%.
x

ಸಿಎಂ ಸಿದ್ದರಾಮಯ್ಯ

ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ: ಮೂಲ ವೇತನ ಶೇ.12.50 ರಷ್ಟು ಹೆಚ್ಚಳ

ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ನೌಕರರ ವೇತನ ಶೇ.12.50 ರಷ್ಟು ಹೆಚ್ಚಳವಾಗಿದ್ದು, ದಿನಾಂಕ 2025ರ ಮಾರ್ಚ್ 31ರಂದು ಪಡೆಯುತ್ತಿದ್ದ ಮೂಲ ವೇತನದ ಆಧಾರದ ಮೇಲೆ ಈ ಶೇ.12.50 ರಷ್ಟು ಹೆಚ್ಚಳವನ್ನು ಲೆಕ್ಕಹಾಕಲಾಗುತ್ತದೆ.


Click the Play button to hear this message in audio format

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ಹಾಗೂ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಸಾರಿಗೆ ನೌಕರರ ಮೂಲ ವೇತನವನ್ನು ಶೇ.12.50 ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ದಿನಾಂಕ 12 ಮೇ 2026 ರಂದು ಹೊರಡಿಸಲಾದ ಸರ್ಕಾರದ ಆದೇಶದ ಪ್ರಕಾರ , ಕೆಎಸ್ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಅಧಿಕಾರಿಗಳು ಮತ್ತು ನೌಕರರು 2025 ಮಾರ್ಚ್‌ 31ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಶೇ.12.50 ರಷ್ಟು ಹೆಚ್ಚಿಸಿ ಪರಿಷ್ಕರಿಸಲು ಸರ್ಕಾರವು ಅನುಮೋದನೆ ನೀಡಿದೆ.

ಜುಲೈ ತಿಂಗಳಿನಿಂದ ಕೈಸೇರಲಿದೆ ಪರಿಷ್ಕೃತ ವೇತನ

ಈ ಪರಿಷ್ಕೃತ ವೇತನವು 2025ರ ಏಪ್ರಿಲ್​ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಆದರೆ, ಸರ್ಕಾರದ ನೂತನ ಆದೇಶದನ್ವಯ ಈ ವೇತನ ಪರಿಷ್ಕರಣೆಯನ್ನು ಜುಲೈ ವೇತನದಲ್ಲಿ ಅನುಷ್ಠಾನಗೊಳಿಸಿ, ಆ ತಿಂಗಳಿನಿಂದ ಎಲ್ಲಾ ಅರ್ಹ ಅಧಿಕಾರಿ ಮತ್ತು ನೌಕರರಿಗೆ ಪಾವತಿಸಲು ಸೂಚಿಸಲಾಗಿದೆ.

ಹಿಂಬಾಕಿ ಪಾವತಿ ಹೇಗೆ?

ಸಾರಿಗೆ ನಿಗಮಗಳು ಕಳೆದ ಹಲವಾರು ವರ್ಷಗಳಿಂದ ನಷ್ಟವನ್ನು ಅನುಭವಿಸುತ್ತಿದ್ದು, ಪ್ರಸ್ತುತ ರೂ. 7130.80 ಕೋಟಿ ನಷ್ಟದಲ್ಲಿದೆ. ಈ ಆರ್ಥಿಕ ಹೊರೆಯ ಹಿನ್ನೆಲೆಯಲ್ಲಿ ವೇತನ ಪರಿಷ್ಕರಣೆಯ ಹಿಂಬಾಕಿಯನ್ನು ಮುಂದಿನ ದಿನಗಳಲ್ಲಿ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹಂತ ಹಂತವಾಗಿ ಪಾವತಿಸಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಆದೇಶದ ಪ್ರಮುಖ ಅಂಶಗಳೇನು?

ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳು ಮತ್ತು ಪೂರ್ವ ಕಿಂಕೋ ನೌಕರರ ವೇತನ ಶೇ.12.50 ರಷ್ಟು ಹೆಚ್ಚಳವಾಗಿದ್ದು, ದಿನಾಂಕ 2025ರ ಮಾರ್ಚ್ 31ರಂದು ಪಡೆಯುತ್ತಿದ್ದ ಮೂಲ ವೇತನದ ಆಧಾರದ ಮೇಲೆ ಈ ಶೇ.12.50 ರಷ್ಟು ಹೆಚ್ಚಳವನ್ನು ಲೆಕ್ಕಹಾಕಲಾಗುತ್ತದೆ.

ಉನ್ನತ ವೇತನ ಶ್ರೇಣಿ ಹಾಗೂ ಮಧ್ಯಂತರ ವೇತನ ಶ್ರೇಣಿಗಳು ಸೇರಿದಂತೆ ಪ್ರಸ್ತುತ ಇರುವ ಎಲ್ಲಾ ವೇತನ ಶ್ರೇಣಿಗಳನ್ನು ಈ ಹೆಚ್ಚಳದೊಂದಿಗೆ ಪರಿಷ್ಕರಿಸಲಾಗುತ್ತದೆ.

ಈ ಹಿಂದೆ 2023ರ ಮಾರ್ಚ್​ 1ರಂದು ಜಾರಿಗೆ ಬರುವಂತೆ ನೌಕರರ ಮೂಲ ವೇತನವನ್ನು ಶೇ.15 ರಷ್ಟು ಹೆಚ್ಚಿಸಿ ಆದೇಶಿಸಲಾಗಿತ್ತು. ಇದೀಗ ಮತ್ತೊಮ್ಮೆ ವೇತನ ಪರಿಷ್ಕರಣೆಗೆ ಒಪ್ಪಿಗೆ ಸೂಚಿಸಿ, ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್. ಅವರು ರಾಜ್ಯಪಾಲರ ಆದೇಶಾನುಸಾರ ಈ ಅಧಿಕೃತ ಆದೇಶ ಹೊರಡಿಸಿದ್ದಾರೆ.

Read More
Next Story