ಭವಿಷ್ಯದ ತಂತ್ರಜ್ಞಾನದ ಕೇಂದ್ರವಾಗಲಿದೆ ಕರ್ನಾಟಕ: ಸಚಿವ ಡಾ. ಅಜಯ್ ಧರ್ಮಸಿಂಗ್
x

ಭವಿಷ್ಯದ ತಂತ್ರಜ್ಞಾನದ ಕೇಂದ್ರವಾಗಲಿದೆ ಕರ್ನಾಟಕ: ಸಚಿವ ಡಾ. ಅಜಯ್ ಧರ್ಮಸಿಂಗ್

ಕ್ವಾಂಟಮ್ ಸಿಟಿ ಕೇವಲ ಕಟ್ಟಡಗಳ ಸಮೂಹವಲ್ಲ, ಇದು ಜಾಗತಿಕ ಮಟ್ಟದ ಡೀಪ್‌ಟೆಕ್ ಪರಿಸರ ವ್ಯವಸ್ಥೆಯ ಭದ್ರ ಬುನಾದಿ ಎಂದು ಸಚಿವ ಅಜಯ್‌ ಧರ್ಮಸಿಂಗ್ ಹೇಳಿದ್ದಾರೆ.


Click the Play button to hear this message in audio format

ಕರ್ನಾಟಕ ರಾಜ್ಯವು ಇದೀಗ ಭವಿಷ್ಯದ ತಂತ್ರಜ್ಞಾನಗಳಾದ ಕ್ವಾಂಟಮ್ ಕಂಪ್ಯೂಟಿಂಗ್, ಬಾಹ್ಯಾಕಾಶ ಸಂಶೋಧನೆ ಮತ್ತು ಡ್ರೋನ್ ತಂತ್ರಜ್ಞಾನದಲ್ಲಿ ಜಾಗತಿಕ ಕೇಂದ್ರವಾಗಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವಾಕಾಂಕ್ಷಿ ‘ಕ್ವಾಂಟಮ್ ಸಿಟಿ’ ನಿರ್ಮಾಣದ ಸಂಕಲ್ಪ ಮಾಡಿದ್ದು, ಈ ಯೋಜನೆಗೆ ಕೈಜೋಡಿಸುವಂತೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಅವರು ಜಾಗತಿಕ ಹೂಡಿಕೆದಾರರು, ತಂತ್ರಜ್ಞಾನ ದಿಗ್ಗಜರು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಆಹ್ವಾನ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಬಾಹ್ಯಾಕಾಶ, ಮೊಬಿಲಿಟಿ ಮತ್ತು ಡ್ರೋನ್ ಕ್ಷೇತ್ರಗಳ ಉನ್ನತ ಮಟ್ಟದ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಸಚಿವ ಡಾ. ಅಜಯ್ ಧರ್ಮಸಿಂಗ್, ಕ್ವಾಂಟಮ್ ಸಿಟಿ ಕೇವಲ ಕಟ್ಟಡಗಳ ಸಮೂಹವಲ್ಲ, ಇದು ಜಾಗತಿಕ ಮಟ್ಟದ ಡೀಪ್‌ಟೆಕ್ ಪರಿಸರ ವ್ಯವಸ್ಥೆಯ ಭದ್ರ ಬುನಾದಿ ಎಂದು ಹೇಳಿದರು.

ಈ ಯೋಜನೆಯು ಕೇವಲ ಸರ್ಕಾರದ ಪ್ರಯತ್ನದಿಂದ ಮಾತ್ರ ಸಾಕಾರಗೊಳ್ಳುವುದಿಲ್ಲ. ಬದಲಾಗಿ, ಕೈಗಾರಿಕಾ ಕ್ಷೇತ್ರದ ನಾಯಕರು, ಸಂಶೋಧಕರು, ಸ್ಟಾರ್ಟ್‌ಅಪ್‌ಗಳು ಮತ್ತು ಹೂಡಿಕೆದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಇದರ ಯಶಸ್ಸಿಗೆ ಅನಿವಾರ್ಯ. ಆರಂಭಿಕ ಹಂತದಿಂದಲೇ ಈ ಮಧ್ಯಸ್ಥಗಾರರು ಸರ್ಕಾರದೊಂದಿಗೆ ಕೈಜೋಡಿಸಿದರೆ, ಕರ್ನಾಟಕವನ್ನು ತಂತ್ರಜ್ಞಾನದ ಜಾಗತಿಕ ಹಬ್ ಆಗಿ ರೂಪಿಸಲು ಸಾಧ್ಯ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ಸಹಭಾಗಿತ್ವದ ಮಂತ್ರ: "ನಿರ್ಮಿಸಿ - ಪರೀಕ್ಷಿಸಿ - ಉತ್ಪಾದಿಸಿ"

ಸಚಿವರು ಈ ಸಂದರ್ಭದಲ್ಲಿ ‘ಮೇಕ್ ಇನ್ ಕರ್ನಾಟಕ’ದ ಹೊಸ ಮಂತ್ರವನ್ನು ಉಚ್ಚರಿಸಿದರು. "ಕರ್ನಾಟಕದಲ್ಲಿ ನಿರ್ಮಿಸಿ, ಕರ್ನಾಟಕದಲ್ಲೇ ಪರೀಕ್ಷಿಸಿ, ಕರ್ನಾಟಕದಲ್ಲೇ ಉತ್ಪಾದಿಸಿ, ಇಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಇಡೀ ಜಗತ್ತಿಗೆ ಕೊಂಡೊಯ್ಯಿರಿ" ಎಂದು ಕರೆ ನೀಡಿದರು. ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದಾಗಿರುವ ಕಂಪನಿಗಳಿಗೆ ಭರವಸೆಯ ಕಿರಣವಾಗಿದೆ. ರಾಜ್ಯ ಸರ್ಕಾರವು ‘Ease of Doing Business’ಕ್ಕೆ (ಸುಗಮ ವ್ಯಾಪಾರ) ನೀಡುತ್ತಿರುವ ಆದ್ಯತೆಯನ್ನು ಎತ್ತಿ ಹಿಡಿದ ಅವರು, ತಂತ್ರಜ್ಞಾನ ಕಂಪನಿಗಳು ತಮ್ಮ ಹೊಸ ಆಲೋಚನೆಗಳನ್ನು ವಾಣಿಜ್ಯ ಮಟ್ಟದಲ್ಲಿ ವಿಸ್ತರಿಸಲು ಸರ್ಕಾರವು ಎಲ್ಲಾ ರೀತಿಯ ನೆರವು ಮತ್ತು ಅನುಕೂಲಕರ ವಾತಾವರಣ ಕಲ್ಪಿಸಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಭವಿಷ್ಯದ ತಂತ್ರಜ್ಞಾನಗಳ ಮೇಲೆ ಕರ್ನಾಟಕದ ಕಣ್ಣು

ಐಟಿ ಮತ್ತು ಏರೋಸ್ಪೇಸ್ ವಲಯದಲ್ಲಿ ಕರ್ನಾಟಕ ಹೊಂದಿರುವ ಬಲವಾದ ಅಡಿಪಾಯವನ್ನು ಬಳಸಿಕೊಂಡು, ಮುಂದಿನ ಹಂತದ ತಂತ್ರಜ್ಞಾನಗಳಾದ ಕ್ವಾಂಟಮ್ ತಂತ್ರಜ್ಞಾನವು ಡೇಟಾ ಸಂಸ್ಕರಣೆ ಮತ್ತು ಭದ್ರತೆಯಲ್ಲಿ ಕ್ರಾಂತಿಯನ್ನುಂಟು ಮಾಡಲಿದೆ. ಸ್ಪೇಸ್‌ಟೆಕ್ ಮತ್ತು ಡ್ರೋನ್‌ಟೆಕ್ ಬಾಹ್ಯಾಕಾಶ ಪರಿಶೋಧನೆ ಮತ್ತು ಕೃಷಿ/ಭದ್ರತಾ ಕಾರ್ಯಗಳಲ್ಲಿ ಡ್ರೋನ್‌ಗಳ ಬಳಕೆಗೆ ಅನುಕೂಲವಾಗಲಿದೆ. ಕೃತಕ ಬುದ್ಧಿಮತ್ತೆ ಮತ್ತು ಜಿಯೋಸ್ಪೇಷಿಯಲ್ ತಂತ್ರಜ್ಞಾನವು ದತ್ತಾಂಶ ಆಧಾರಿತ ಆಡಳಿತ ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಾಗಿದೆ. ಈ ಎಲ್ಲ ಕ್ಷೇತ್ರಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ರಾಜ್ಯವನ್ನು ಜಾಗತಿಕ ಪೈಪೋಟಿಯಲ್ಲಿ ಮುಂಚೂಣಿಗೆ ತರುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.

ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025–30

‘ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025–30’ರ ಮಹತ್ವವನ್ನು ವಿವರಿಸಿದ ಸಚಿವರು, ಈ ನೀತಿಯು ಅತ್ಯಂತ ಮಹತ್ವಾಕಾಂಕ್ಷಿ ಗುರಿಗಳನ್ನು ಹೊಂದಿದೆ ಎಂದು ಹೇಳಿದರು. 2033ರ ವೇಳೆಗೆ ಭಾರತದ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಶೇ. 50 ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಶೇ. 5ರಷ್ಟು ಪಾಲನ್ನು ಗಳಿಸುವುದು.

ಮುಂದಿನ ದಶಕದಲ್ಲಿ 3 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಬೃಹತ್ ಹೂಡಿಕೆಯನ್ನು ಆಕರ್ಷಿಸುವುದು ಮತ್ತು 50,000ಕ್ಕೂ ಹೆಚ್ಚು ವೃತ್ತಿಪರರಿಗೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ವಿಶೇಷ ತರಬೇತಿ ನೀಡಿ, ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದರು. ತಂತ್ರಜ್ಞಾನವು ಕೇವಲ ಲ್ಯಾಬ್‌ಗಳಿಗೆ ಸೀಮಿತವಾಗಬಾರದು. ಅದು ಜನರ ನಿಜವಾದ ಸಮಸ್ಯೆಗಳನ್ನು ಪರಿಹರಿಸಿದಾಗ ಮಾತ್ರ ಅದರ ನಿಜವಾದ ಮೌಲ್ಯ ಸಿಗುತ್ತದೆ ಎಂದು ನುಡಿದರು.

ಅಂತರ್ಜಲ ನಿರ್ವಹಣೆ, ಕೆರೆಗಳ ಡಿಜಿಟಲ್ ಮ್ಯಾಪಿಂಗ್, ನೀರಾವರಿ ಆಸ್ತಿಗಳ ನಿರ್ವಹಣೆ ಮತ್ತು ಯೋಜನೆಗಳ ಮೇಲ್ವಿಚಾರಣೆಯಲ್ಲಿ ಉಪಗ್ರಹ ಚಿತ್ರಣ, ಡ್ರೋನ್ ತಂತ್ರಜ್ಞಾನ, ಜಿಐಎಸ್ ಮತ್ತು ಎಐ ಬಳಕೆ ಮಾಡಲಾಗುತ್ತಿದೆ. ಇಂತಹ ತಂತ್ರಜ್ಞಾನದ ಬಳಕೆಯು ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕದ ಕ್ವಾಂಟಮ್ ಸಿಟಿ ಯೋಜನೆಯು ಕೇವಲ ಒಂದು ನಿರ್ಮಾಣ ಕಾರ್ಯವಲ್ಲ, ಇದು ದೇಶದ ತಂತ್ರಜ್ಞಾನ ರಫ್ತಿನ ದಿಕ್ಕನ್ನು ಬದಲಿಸುವ ಒಂದು ತಂತ್ರವಾಗಿದೆ. ಜಾಗತಿಕ ಕಂಪನಿಗಳಿಗೆ ಕರ್ನಾಟಕವು ತನ್ನ ಅಗಾಧ ಪ್ರತಿಭಾ ಸಂಪತ್ತು, ಉತ್ತಮ ಮೂಲಸೌಕರ್ಯ ಮತ್ತು ಸರ್ಕಾರದ ಪೂರಕ ನೀತಿಗಳ ಮೂಲಕ ಆಕರ್ಷಕ ತಾಣವಾಗಿ ಹೊರಹೊಮ್ಮಿದೆ.

Read More
Next Story