
ವಿದ್ಯುತ್ ವಲಯದಲ್ಲಿ 3 ಲಕ್ಷಕೋಟಿ ರೂ. ಹೂಡಿಕೆ : 2030ರ ವೇಳೆಗೆ 66 GW ಸಾಮರ್ಥ್ಯದ ಗುರಿ
ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಮೂರನೇ ಎರಡರಷ್ಟು ಪಾಲು ಪರಿಸರ ಸ್ನೇಹಿ ಮೂಲಗಳಿಂದ ಬರುತ್ತಿದೆ. ಮುಂದಿನ ದಿನಗಳಲ್ಲಿ ಈ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಸಜ್ಜಾಗಿದೆ.
ಭಾರತದ ಅಭಿವೃದ್ಧಿಯ ವೇಗಕ್ಕೆ ಇಂಧನ ಭದ್ರತೆಯೇ ಬೆನ್ನೆಲುಬು ಎಂಬುದನ್ನು ಮನಗಂಡಿರುವ ರಾಜ್ಯ ಸರ್ಕಾರವು ಮುಂದಿನ ಒಂದು ದಶಕದಲ್ಲಿ ರಾಜ್ಯವನ್ನು ಇಂಧನ ಉತ್ಪಾದನೆಯಲ್ಲಿ ಜಾಗತಿಕ ಹಬ್ ಆಗಿ ಪರಿವರ್ತಿಸಲು ಮಹತ್ವದ ಕಾರ್ಯತಂತ್ರ ರೂಪಿಸಿದೆ. ಪ್ರಸ್ತುತ 39 ಗಿಗಾವ್ಯಾಟ್ ಇರುವ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 2030ರ ವೇಳೆಗೆ 66 ಗಿಗಾವ್ಯಾಟ್‌ಗೆ ಏರಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ.
ದೆಹಲಿಯಲ್ಲಿ ನಡೆದ ‘ಭಾರತ್ ಎಲೆಕ್ಟ್ರಿಸಿಟಿ, ಪವರ್‌ಜೆನ್ ಇಂಡಿಯಾ ಮತ್ತು ಇಂಡಿಯನ್ ಯುಟಿಲಿಟಿ ವೀಕ್ 2026ರ ಸಮಾವೇಶದಲ್ಲಿ ಕರ್ನಾಟಕದ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ರಾಜ್ಯದ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅನಾವರಣಗೊಳಿಸಿದರು.
ಕರ್ನಾಟಕ ಈಗಾಗಲೇ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಮೂರನೇ ಎರಡರಷ್ಟು ಪಾಲು ಜಲವಿದ್ಯುತ್, ಸೌರಶಕ್ತಿ ಮತ್ತು ಪವನ ಶಕ್ತಿಯಂತಹ ಪರಿಸರ ಸ್ನೇಹಿ ಮೂಲಗಳಿಂದ ಬರುತ್ತಿದೆ. ಮುಂದಿನ ದಿನಗಳಲ್ಲಿ ಈ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಸಜ್ಜಾಗಿದೆ. ರಾಜ್ಯದ ಕೈಗಾರಿಕಾ ವಿಸ್ತರಣೆ, ಎಲೆಕ್ಟ್ರಿಕ್ ವಾಹನಗಳ ಹೆಚ್ಚಳ ಮತ್ತು ಬೆಂಗಳೂರು, ಮೈಸೂರು, ಮಂಗಳೂರಿನಂತಹ ನಗರಗಳಲ್ಲಿ ಸ್ಥಾಪನೆಯಾಗುತ್ತಿರುವ ಬೃಹತ್ ಡೇಟಾ ಸೆಂಟರ್‌ಗಳಿಂದಾಗಿ ವಿದ್ಯುತ್ ಬೇಡಿಕೆ ದ್ವಿಗುಣಗೊಳ್ಳುವ ಸಾಧ್ಯತೆಯಿದೆ. ಈ ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು ಸಂಪನ್ಮೂಲಗಳ ಸಮರ್ಪಕ ಬಳಕೆಗೆ ರಾಜ್ಯ ಒತ್ತು ನೀಡಿದೆ.
ಶರಾವತಿ ಪಂಪ್ಡ್ ಸ್ಟೋರೇಜ್ - ಬ್ಯಾಟರಿ ತಂತ್ರಜ್ಞಾನ
ವಿದ್ಯುತ್ ಉತ್ಪಾದನೆಯ ಜತೆಗೆ ಅದರ ಸ್ಥಿರತೆ ಮತ್ತು ಸಂಗ್ರಹಣೆಯೂ ಅಷ್ಟೇ ಮುಖ್ಯ ಎಂದು ಪ್ರತಿಪಾದಿಸಿದ ಗೌರವ್ ಗುಪ್ತ ಅವರು, 2,000 ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ ಎಂದು ತಿಳಿಸಿದರು. ಗ್ರಿಡ್‌ನ ಸ್ಥಿರತೆ ಕಾಪಾಡಲು ಕೆಪಿಟಿಸಿಎಲ್‌ನ ಪ್ರಮುಖ ಉಪಕೇಂದ್ರಗಳಲ್ಲಿ 'ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್‌ಗಳನ್ನು' ಅಳವಡಿಸಲಾಗುತ್ತಿದೆ. ಪಾವಗಡ ಸೋಲಾರ್ ಪಾರ್ಕ್ ವಿಸ್ತರಣೆ ಮತ್ತು ಪಿಎಂ ಕುಸುಮ್-ಸಿ ಹಾಗೂ ಸಿಎಂ ಸೌರ ಕೃಷಿ ಯೋಜನೆಯ ಮೂಲಕ ಕೃಷಿ ಕ್ಷೇತ್ರಕ್ಕೆ ನಿರಂತರ ವಿದ್ಯುತ್ ನೀಡಲು ಸೌರೀಕರಣವನ್ನು ಉತ್ತೇಜಿಸಲಾಗುತ್ತಿದೆ. ಸರ್ಕಾರವು ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಕ್ಷೇತ್ರದಲ್ಲಿ ಖಾಸಗಿಯವರ ಪಾಲ್ಗೊಳ್ಳುವಿಕೆಯನ್ನು ಸ್ವಾಗತಿಸಿದೆ. ಮುಂದಿನ 4-5 ವರ್ಷಗಳಲ್ಲಿ ಈ ವಲಯದಲ್ಲಿ ಸುಮಾರು 2 ರಿಂದ 3 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆ ಇದೆ. ಹೂಡಿಕೆದಾರರಿಗೆ ಅನುಕೂಲವಾಗುವಂತೆ ಭೂಮಿಗೆ ಸಂಬಂಧಿಸಿದ ನಿಯಮಗಳು ಮತ್ತು ಯೋಜನೆಗಳ ಅನುಮೋದನಾ ಪ್ರಕ್ರಿಯೆಯನ್ನು ಆನ್‌ಲೈನ್ ವ್ಯವಸ್ಥೆಗೆ ಒಳಪಡಿಸಿ, ಸರಳೀಕರಿಸಲಾಗುತ್ತಿದೆ. ಈ ಪಾರದರ್ಶಕ ವ್ಯವಸ್ಥೆಯು ಹೆಚ್ಚು ಹೂಡಿಕೆದಾರರನ್ನು ರಾಜ್ಯದತ್ತ ಸೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕಕ್ಕೆ ಇಂಧನ ಕ್ಷೇತ್ರದಲ್ಲಿ ಸುದೀರ್ಘ ಇತಿಹಾಸವಿದೆ. 1902ರಲ್ಲಿ ಏಷ್ಯಾದ ಮೊದಲ ಜಲವಿದ್ಯುತ್ ಸ್ಥಾವರ ಶಿವನಸಮುದ್ರದಲ್ಲಿ ಸ್ಥಾಪನೆಯಾಗಿದ್ದು ನಮ್ಮ ಹೆಮ್ಮೆ. 1905ರಲ್ಲೇ ದಕ್ಷಿಣ ಏಷ್ಯಾದಲ್ಲಿ ವಿದ್ಯುದ್ದೀಕರಣಗೊಂಡ ಮೊದಲ ನಗರವಾಗಿ ಬೆಂಗಳೂರು ಇತಿಹಾಸ ಸೃಷ್ಟಿಸಿತ್ತು. ಇದೇ ಪರಂಪರೆಯನ್ನು ಮುಂದುವರಿಸುತ್ತಾ, ಪ್ರಸರಣ ನಷ್ಟವನ್ನು ಶೇ.3ಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿಸಲಾಗಿದೆ ಎಂದರು.
ಡಿಜಿಟಲೀಕರಣ, ಏಕಗವಾಕ್ಷಿ ವ್ಯವಸ್ಥೆ
ಕ್ರೆಡಲ್‌ನ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಪ್ರಭು ಅವರು, "ಭವಿಷ್ಯದ ಬೆಳವಣಿಗೆಯಲ್ಲಿ ಡಿಜಿಟಲೀಕರಣ ಮತ್ತು ಕೃತಕ ಬುದ್ಧಿಮತ್ತೆ ನಿರ್ಣಾಯಕ ಪಾತ್ರ ವಹಿಸುತ್ತಿವೆ" ಎಂದರು. ವಿದ್ಯುತ್ ಬೇಡಿಕೆಯನ್ನು ಮುಂಚಿತವಾಗಿ ಅಂದಾಜಿಸುವಲ್ಲಿ ಇಂದಿನ ತಂತ್ರಜ್ಞಾನ ನೆರವಾಗುತ್ತಿದೆ. ಹೂಡಿಕೆದಾರರಿಗೆ ಅನುಕೂಲವಾಗಲೆಂದು ರಾಜ್ಯದಲ್ಲಿ ಯೋಜನೆಗಳ ಮ್ಯಾಪಿಂಗ್ ಮಾಡಲಾಗಿದ್ದು, ಸಮಗ್ರ ಮಾಹಿತಿಗಾಗಿ ಏಕಗವಾಕ್ಷಿ ಡಿಜಿಟಲ್ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಗ್ರೀನ್ ಹೈಡ್ರೋಜನ್ ಮತ್ತು ಸ್ಮಾರ್ಟ್-ಗ್ರಿಡ್ ಆಟೊಮೇಷನ್ ಕ್ಷೇತ್ರಗಳಲ್ಲಿ ಕರ್ನಾಟಕ ಜಾಗತಿಕ ಪಾಲುದಾರಿಕೆಗೆ ಮುಕ್ತವಾಗಿದೆ ಎಂದು ತಿಳಿಸಿದರು.
ಕರ್ನಾಟಕದ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಸಾವಿರಾರು ಕಿಲೋಮೀಟರ್ ಹೊಸ ಪ್ರಸರಣ ಮಾರ್ಗಗಳು ಮತ್ತು ಸೂಪರ್-ಗ್ರಿಡ್ ಉಪಕೇಂದ್ರಗಳ ನಿರ್ಮಾಣದ ಮೂಲಕ ಭವಿಷ್ಯದ ಬೇಡಿಕೆಯನ್ನು ಎದುರಿಸಲು ಸಿದ್ಧವಾಗುತ್ತಿದೆ. ನವೀಕರಿಸಬಹುದಾದ ಇಂಧನ ಮೂಲಗಳು, ಸ್ಮಾರ್ಟ್ ಗ್ರಿಡ್‌ಗಳು ಮತ್ತು ಇಂಧನ ಸಂಗ್ರಹಣಾ ತಂತ್ರಜ್ಞಾನದ ಒಟ್ಟುಗೂಡುವಿಕೆಯಿಂದಾಗಿ, ಕರ್ನಾಟಕವು ಕೇವಲ ತನ್ನ ವಿದ್ಯುತ್ ಅಗತ್ಯವನ್ನು ಪೂರೈಸಿಕೊಳ್ಳುವುದಷ್ಟೇ ಅಲ್ಲದೆ, ದೇಶದ ಇಂಧನ ಭದ್ರತೆಯಲ್ಲೂ ಮಹತ್ತರ ಪಾತ್ರ ವಹಿಸಲಿದೆ.
ಈ ಸಮಾವೇಶವು ಕರ್ನಾಟಕದ ಇಂಧನ ನೀತಿ ಎಷ್ಟು ದೃಢವಾಗಿದೆ ಮತ್ತು ಹೂಡಿಕೆದಾರರಿಗೆ ರಾಜ್ಯವು ಎಷ್ಟು ಸುರಕ್ಷಿತ ಮತ್ತು ಸುಲಭವಾದ ತಾಣವಾಗಿದೆ ಎಂಬುದನ್ನು ಜಗತ್ತಿಗೆ ಸಾರಿದೆ. ಇಂಧನ ಕ್ಷೇತ್ರದಲ್ಲಿನ ಸ್ವಾವಲಂಬನೆ ಮತ್ತು ಪರಿಸರ ಸ್ನೇಹಿ ಬೆಳವಣಿಗೆಯು ಕರ್ನಾಟಕವನ್ನು ಮುಂದಿನ ದಿನಗಳಲ್ಲಿ ದೇಶದ ಇಂಧನ ಶಕ್ತಿಯ ಕೇಂದ್ರವನ್ನಾಗಿ ಮಾಡಲಿದೆ.

