x

ಸಕ್ಕರೆ ಕಾರ್ಖಾನೆ, ಸರ್ಕಾರಗಳಿಗೆ ರೈತರ ಬೆಳೆದ ಕಬ್ಬಿನ ಲಾಭ ; ಬೆಂಬಲ ಬೆಲೆಗೆ ಒತ್ತಾಯ

ಕೇಂದ್ರ ಸರ್ಕಾರವು ಸಕ್ಕರೆ ಕಾರ್ಖಾನೆಗಳಿಂದ ಎಥೆನಾಲ್ ಅನ್ನು ಉತ್ತಮ ದರಕ್ಕೆ ಖರೀದಿಸುತ್ತಿದೆ. ಇದರಿಂದ ಕಾರ್ಖಾನೆಗಳಿಗೆ ಉಪ ಉತ್ಪನ್ನಗಳ ಮೂಲಕ ಆದಾಯ ಹೆಚ್ಚಲಿದೆ. ಆದರೆ, ಈ ಹೆಚ್ಚುವರಿ ಲಾಭದ ಒಂದು ಪಾಲು ರೈತರಿಗೆ ಗೆ ಸಿಗುತ್ತಿಲ್ಲ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ.


ಕರ್ನಾಟಕದಲ್ಲಿ ಪ್ರಸಕ್ತ ಹಂಗಾಮಿನ ಕಬ್ಬು ಕಟಾವಿಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಕಬ್ಬು ರಾಜಕೀಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಪ್ರತಿ ಟನ್ ಕಬ್ಬಿಗೆ 5,500 ದರ ನಿಗದಿ, ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಏರಿಕೆ, ಸಕ್ಕರೆ ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದ ಯಂತ್ರಗಳ ಸ್ಥಾಪನೆ, ಕಬ್ಬಿನ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳೊಂದಿಗೆ ಕಬ್ಬು ಬೆಳೆಗಾರರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹೊಸ ರಾಜಕೀಯ ಜಟಾಪಟಿಗೆ ನಾಂದಿ ಹಾಡಿದೆ.

ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಅಕ್ಟೋಬರ್-ನವೆಂಬರ್ ತಿಂಗಳು ಬಂದರೆ ಸಾಕು ಕಬ್ಬಿನ ಸುಗ್ಗಿ ಆರಂಭವಾಗಲಿದೆ. ಆದರೆ, ಈ ಸಂಭ್ರಮ ಎಂದಿನಂತೆ ಕಬ್ಬು ಬೆಳೆಗಾರರ ಪಾಲಿಗೆ ಸಿಹಿ ನೀಡುವ ಬದಲು ಕಹಿಯನ್ನೇ ಉಡುಗೊರೆಯಾಗಿ ನೀಡಿದೆ. ಕಬ್ಬು ಬೆಳೆಗಾರರು ರಸಗೊಬ್ಬರ, ಕ್ರಿಮಿನಾಶಕ, ಆಳುಗಳ ಕೂಲಿ, ಸಾಗಣೆ ಹಾಗೂ ಡೀಸೆಲ್ ದರ ಹೀಗೆ ಪ್ರತಿಯೊಂದಕ್ಕೂ ಸಾಕಷ್ಟು ಹಣ ವ್ಯಯಿಸಬೇಕು. ಆದರೆ, ಕಬ್ಬಿಗೆ ಸರಿಯಾದ ಬೆಲೆ ಸಿಗದೇ ಹೋದರೆ ಅದೇ ಲಾಭದ ಆಸೆ ಕೈ ಬಿಡಬೇಕಾಗುತ್ತದೆ. ಪ್ರಸ್ತುತ, ವೆಚ್ಚಕ್ಕೆ ಅನುಗುಣವಾಗಿ ಬೆಲೆ ಸಿಗದಿರುವುದು ರೈತರನ್ನ ಮತ್ತೆ ಬೀದಿಗೆ ತಂದಿದೆ.

ಹಣ ಪಾವತಿ ವಿಳಂಬ

ಇನ್ನು ಕಬ್ಬು ಪೂರೈಸಿದ 14 ದಿನಗಳ ಒಳಗಾಗಿ ಹಣ ಪಾವತಿಸಬೇಕು ಎಂಬ ನಿಯಮವಿದ್ದರೂ, ಅನೇಕ ಸಕ್ಕರೆ ಕಾರ್ಖಾನೆಗಳು ತಿಂಗಳುಗಟ್ಟಲೇ ರೈತರ ಹಣ ತಡೆಹಿಡಿಯುತ್ತವೆ. ಜೊತೆಗೆ ತೂಕದ ವ್ಯತ್ಯಾಸ ತೋರಿಸಿ ರೈತರನ್ನು ವಂಚಿಸುವುದು ನಿಂತಿಲ್ಲ ಎಂಬ ಆರೋಪಗಳೂ ಇಂದಿಗೂ ಜೀವಂತವಾಗಿವೆ.

ಪ್ರತಿ ಬಾರಿ ಎಫ್ಆರ್‌ಪಿ ದರವನ್ನು ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಸಕ್ಕರೆ ಕಾರ್ಖಾನೆಗಳು ಹಲವು ತಾಂತ್ರಿಕ ಕಾರಣಗಳನ್ನು ಮುನ್ನೆಲೆಗೆ ತರುತ್ತವೆ. ಕಬ್ಬಿನ ಬೆಲೆ ಹೆಚ್ಚಿಸಿದರೆ, ಸಕ್ಕರೆ ಉತ್ಪಾದನಾ ವೆಚ್ಚ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಸಕ್ಕರೆ ದುಬಾರಿಯಾಗಲಿದೆ. ಇದು ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸರ್ಕಾರದ ವಾದವಾದರೆ, ಸಕ್ಕರೆ ಇಳುವರಿ ಕಡಿಮೆಯಿರುವ ಪ್ರದೇಶಗಳಲ್ಲಿ ಎಫ್ಆರ್‌ಪಿ ದರ ನಾವ್ಯಾಕೆ ನೀಡಬೇಕು ಎಂಬುದು ಕಾರ್ಖಾನೆಗಳ ವಾದವಾಗಿದೆ.

ಕೇಂದ್ರ ಸರ್ಕಾರ ಎಫ್ಆರ್‌ಪಿ ದರ ನಿಗದಿಪಡಿಸುತ್ತದೆ. ಅದನ್ನು ಸಮರ್ಪಕವಾಗಿ ಜಾರಿಗೊಳಿಸುವುದು, ಕಾರ್ಖಾನೆಗಳಿಂದ ರೈತರಿಗೆ ಕಾಲಕಾಲಕ್ಕೆ ಬಾಕಿ ಹಣ ಕೊಡಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ. ರಾಜ್ಯ ಸರ್ಕಾರವೇ ರೈತರ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂಬುದು ಕೇಂದ್ರ ಸರ್ಕಾರದ ಆರೋಪ. ಆದರೆ, ಇದಕ್ಕೆ ತಿರುಗೇಟು ನೀಡಿರುವ ರಾಜ್ಯ ಸರ್ಕಾರ, 2018ರಿಂದಲೂ ಕೇಂದ್ರ ಸರ್ಕಾರವು ಕಬ್ಬಿಗೆ ವೈಜ್ಞಾನಿಕವಾದ ಎಫ್ಆರ್ಪಿ ದರ ಹೆಚ್ಚಿಸಿಲ್ಲ. ಸಕ್ಕರೆ ನಿಯಂತ್ರಣ ಕಾಯ್ದೆ ಕೇಂದ್ರದ ವ್ಯಾಪ್ತಿಗೆ ಬರುತ್ತದೆ. ನೆರೆ ರಾಜ್ಯಗಳಾದ ಉತ್ತರ ಪ್ರದೇಶ ಅಥವಾ ಮಹಾರಾಷ್ಟ್ರದಲ್ಲಿ ನೀಡಲಾಗುತ್ತಿರುವ ಮಾದರಿಯಲ್ಲಿ ಸೂಕ್ತ ಪ್ರೋತ್ಸಾಹಕ ಬೆಲೆ ನೀಡಲು ಕೇಂದ್ರದ ಬೆಂಬಲ ಅಗತ್ಯ ಎಂದು ಪ್ರತಿಪಾದಿಸುತ್ತಿದೆ.

ರೈತರಿಗೆ ಸಿಗದ ಎಥೆನಾಲ್ ಲಾಭ

ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳಿಂದ ಎಥೆನಾಲ್ ಅನ್ನು ಉತ್ತಮ ದರಕ್ಕೆ ಖರೀದಿಸುತ್ತಿದೆ. ಇದರಿಂದ ಕಾರ್ಖಾನೆಗಳಿಗೆ ಉಪ ಉತ್ಪನ್ನಗಳ ಮೂಲಕ ಆದಾಯ ಹೆಚ್ಚಿದೆ. ಆದರೆ, ಈ ಹೆಚ್ಚುವರಿ ಲಾಭದ ಒಂದು ಪಾಲು ರೈತರಿಗೆ ಗೆ ಸಿಗುತ್ತಿಲ್ಲ.

ಸಕ್ಕರೆ ಕಾರ್ಖಾನೆಗಳು ಶೇ.100 ರಷ್ಟು ಎಥೆನಾಲ್ ಉತ್ಪಾದಿಸಿದರೂ ಕೇಂದ್ರ ಸರ್ಕಾರ ತಾನು ನಿಗದಿಪಡಿಸಿದಷ್ಟೇ ಖರೀದಿಸಲಿದೆ. ಆದ್ದರಿಂದ ಎಥೆನಾಲ್ ಅನ್ನು ಮುಕ್ತವಾಗಿ ಮಾರಾಟ ಮಾಡಲು ಅನುಮತಿ ನೀಡಬೇಕು. ಹಾಗೆಯೇ, ಕೇಂದ್ರ ಸರ್ಕಾರ ಎಥೆನಾಲ್ ಖರೀದಿ ಬೆಲೆ ಹೆಚ್ಚಿಸಿ, ಆ ಲಾಭವನ್ನು ರೈತರಿಗೆ ತಲುಪಿಸುವಂತೆ ಕಾರ್ಖಾನೆಗಳಿಗೆ ಸೂಚಿಸಬೇಕು ಎಂಬುದು ಕಬ್ಬು ಬೆಳೆಗಾರರ ಆಗ್ರಹ.

ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹ

ರೈತ ಸಂಘಟನೆಗಳು ಕಳೆದ ಕೆಲ ದಶಕಗಳಿಂದ ಬಹಳ ಪ್ರಮುಖವಾದ ಬೇಡಿಕೆಯಾದ ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡುವಂತೆ ಸರ್ಕಾರಗಳನ್ನು ಆಗ್ರಹಿಸುತ್ತಲೇ ಇದ್ದಾರೆ. ಈವರೆಗೂ ವರದಿ ಜಾರಿ ಮಾಡಿಲ್ಲ. ಸ್ವಾಮಿನಾಥನ್ ವರದಿ ಅನುಷ್ಟಾನವಾದರೆ ರೈತರ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಏಕೆಂದರೆ, ಕೃಷಿ ಉತ್ಪನ್ನದ ಸಮಗ್ರ ಉತ್ಪಾದನಾ ವೆಚ್ಚಕ್ಕೆ ಶೇ. 50 ರಷ್ಟು ಲಾಭ ಸೇರಿಸಿ ಬೆಂಬಲ ಬೆಲೆ ನಿಗದಿಪಡಿಸಬೇಕು. ಈ ಶಿಫಾರಸು ಜಾರಿಯಾದರೆ ಬೆಂಬಲ ಬೆಲೆ ಕುರಿತು ಅರ್ಧದಷ್ಟು ರೈತರ ಸಮಸ್ಯೆಗಳು ಬಗೆಹರಿಯಲಿವೆ. ಹಾಗಾಗಿ, ಕಬ್ಬು ಬೆಳೆಗಾರರು ಸ್ವಾಮಿನಾಥವ್ ವರದಿ ಜಾರಿಗೂ ಒತ್ತಾಯಿಸುತ್ತಿದ್ದಾರೆ.

ಇನ್ನು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮಾರಾಟವಾಗುವ ಸಕ್ಕರೆ ದರ ಹಾಗೂ ಇತರ ಕೃಷಿ ಉತ್ಪನ್ನಗಳ ಬೆಲೆ ಏರಿಕೆಯಾಗಿದ್ದರೂ ಕಬ್ಬಿಗೆ ಸಿಗುತ್ತಿರುವ ದರ ಮಾತ್ರ ಉತ್ಪಾದನಾ ವೆಚ್ಚಕ್ಕೆ ಸರಿ ಹೊಂದುತ್ತಿಲ್ಲ. ಹೀಗಾಗಿ ಸ್ವಾಮಿನಾಥನ್ ವರದಿಯಂತೆ ಕಬ್ಬಿಗೂ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು ಎಂಬುದು ರೈತರ ಆಗ್ರಹವಾಗಿದೆ. ಕೇಂದ್ರ ಸರ್ಕಾರದ 'ಎಥೆನಾಲ್ ಬ್ಲೆಂಡಿಂಗ್ ಪಾಲಿಸಿ ಅಂದರೆ E-20 ಮೂಲಕ ತೈಲ ಕಂಪನಿಗಳು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ವರದಾನವಾಗಿದೆ. ಹೇಗೆಂದರೆ, ಎಥೆನಾಲ್ ನೀತಿಯಲ್ಲಿ ಲಾಭ ಹಂಚಿಕೆಯ ಯಾವುದೇ ಪ್ರಸ್ತಾವವಿಲ್ಲ.

ಸಕ್ಕರೆ ಕಾರ್ಖಾನೆಗಳು ಸಕ್ಕರೆ ಜೊತೆಗೆ ಕಬ್ಬಿನ ರಸ ಹಾಗೂ ಮೊಲಾಸಸ್ ಬಳಸಿ ಎಥೆನಾಲ್ ತಯಾರಿಸಿ ತೈಲ ಸಂಸ್ಥೆಗಳಿಗೆ ಉತ್ತಮ ದರಕ್ಕೆ ಮಾರಾಟ ಮಾಡುತ್ತವೆ. ಕಬ್ಬಿನಿಂದ ಬರುವ ಉಪ ಆದಾಯದಲ್ಲಿ ರೈತರಿಗೆ ಯಾವುದೇ ನಿರ್ದಿಷ್ಟ ಪಾಲು ನೀಡುವುದಿಲ್ಲ. ಸರ್ಕಾರ ನಿಗದಿಪಡಿಸುವ ಎಫ್ಆರ್ಪಿ ದರವು ಸಕ್ಕರೆ ಇಳುವರಿ ಆಧಾರದ ಮೇಲಿದೆಯೇ ವಿನಃ, ಎಥೆನಾಲ್ನಿಂದ ಕಾರ್ಖಾನೆಗಳು ಗಳಿಸುವ ಹೆಚ್ಚುವರಿ ಲಾಭದ ಮೇಲೆ ಇರುವುದಿಲ್ಲ.

ಎಥೆನಾಲ್ ಉತ್ಪಾದನೆಗೂ ಕೋಟಾ ನಿಗದಿ

ವೀಕ್ಷಕರೇ, ಕಬ್ಬಿನ ರಸದಿಂದ ನೇರವಾಗಿ ಎಥೆನಾಲ್ ಉತ್ಪಾದಿಸಿದರೆ ದೇಶದಲ್ಲಿ ಸಕ್ಕರೆ ಅಭಾವ ಉಂಟಾಗಬಹುದು ಎಂಬ ಹೆದರಿಕೆಯಿಂದ ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಎಥೆನಾಲ್ ಉತ್ಪಾದನೆಗೆ ಕೋಟಾ ನಿಗದಿಪಡಿಸುತ್ತದೆ. ಇದರಿಂದಾಗಿ ಸಕ್ಕರೆ ಕಾರ್ಖಾನೆಗಳು ತಮಗೆ ಸಿಗಬಹುದಾದ ಸಂಪೂರ್ಣ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ, ಆದ್ದರಿಂದಲೇ ರೈತರಿಗೆ ಸೂಕ್ತ ಬೆಲೆ ನೀಡಲು ಹಿಂದೇಟು ಹಾಕುತ್ತಿವೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಇಲ್ಲಿ ಕಾರ್ಖಾನೆಗಳು ಎಥೆನಾಲ್ ಮತ್ತು ವಿದ್ಯುತ್ ಮಾರಾಟದಿಂದ ಗಳಿಸುವ ಲಾಭದ ಶೇ 70-75 ರಷ್ಟು ಹಣವನ್ನು ಕಬ್ಬು ಬೆಳೆಗಾರರಿಗೆ ಕಡ್ಡಾಯವಾಗಿ ಹಂಚುವಂತೆ ಕಾನೂನು ತರಬೇಕು. ಕಬ್ಬು ಬೆಳೆಯಲು ತಗುಲುವ ಸಮಗ್ರ ವೆಚ್ಚಕ್ಕೆ ಶೇ.50 ರಷ್ಟು ಲಾಭ ಸೇರಿಸಿ ಕಬ್ಬಿನ ಬೆಲೆಯನ್ನು ವೈಜ್ಞಾನಿಕವಾಗಿ ನಿಗದಿಪಡಿಸಬೇಕು. ಕಬ್ಬು ಸರಬರಾಜು ಮಾಡಿದ 14 ದಿನಗಳ ಒಳಗಾಗಿ ಎಥೆನಾಲ್ ಆದಾಯದಿಂದ ಬಾಕಿ ಹಣ ಪಾವತಿಸದ ಕಾರ್ಖಾನೆಗಳ ಮೇಲೆ ಕಠಿಣ ದಂಡ ವಿಧಿಸಬೇಕು.

ಸಕ್ಕರೆ ಇಳುವರಿ ಮೇಲೆ ಎಫ್ಆರ್‌ಪಿ ನಿಗದಿ

ಎಫ್ಆರ್ಪಿ ದರವನ್ನು ಮೂಲ ಸಕ್ಕರೆ ಇಳುವರಿ ಶೇ. 10.20ರ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ. 2024-25 ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್‌ಗೆ 340 ದರ ನಿಗದಿಪಡಿಸಿತ್ತು. 2025-26 ರಲ್ಲಿ ಪ್ರತಿ ಕ್ವಿಂಟಲ್‌ಗೆ 355 ರೂಪಾಯಿಗೆ ಹೆಚ್ಚಿಸಲಾಗಿತ್ತು. ಪ್ರಸಕ್ತ ವರ್ಷ ಕ್ವಿಂಟಲ್ ಎಫ್ಆರ್‌ಪಿ ದರವನ್ನು 365 ರೂ.ಗೆ ಹೆಚ್ಚಿಸಲಾಗಿದೆ. ಇಲ್ಲಿ ಪ್ರತಿ ಕ್ವಿಂಟಲ್‌ಗೆ ಸಕ್ಕರೆ ಇಳುವರಿ ಶೇ.10.25 ರಷ್ಟು ಹೆಚ್ಚಾದರೆ ರೈತರಿಗೆ ಪ್ರತಿ ಕ್ವಿಂಟಲ್‌ಗೆ ಹೆಚ್ಚುವರಿಯಾಗಿ 3 ರೂಪಾಯಿ 46 ಪೈಸೆ ಹೆಚ್ಚುವರಿ ಹಣ ಸಿಗುತ್ತದೆ.

ಇಳುವರಿ ಶೇ. 9.5 ಕ್ಕಿಂತ ಕಡಿಮೆಯಿದ್ದರೂ ಸಹ ರೈತರಿಗೆ ಮೂಲ ಕನಿಷ್ಠ ಬೆಲೆ ಅಂದರೆ ಪ್ರತಿ ಕ್ವಿಂಟಲ್‌ಗೆ 365 ರೂ. ನೀಡಬೇಕೆಂಬ ನಿಯಮವಿದೆ. ಆದರೆ, ಬಹುತೇಕ ಸಕ್ಕರೆ ಕಾರ್ಖಾನೆಗಳು ಎಫ್ಆರ್‌ಪಿ ದರವನ್ನು ಸಕ್ಕರೆ ಇಳುವರಿಯ ಮೇಲೆ ನಿಗದಿ ಮಾಡುತ್ತವೆ. ಇದರಿಂದ ಸಕ್ಕರೆ ಇಳುವರಿ ಕಡಿಮೆ ಪ್ರದೇಶಗಳಲ್ಲಿ ರೈತರಿಗೆ ಹೆಚ್ಚು ನಷ್ಟವಾಗಲಿದೆ.

Read More
Next Story