ಪಿಒಪಿ ಮೂರ್ತಿಗಳಿಗಿಲ್ಲ ಅವಕಾಶ, ಶಬ್ಧ ಮಾಲಿನ್ಯಕ್ಕೂ ಅನುಮತಿ ಇಲ್ಲ: ಈಶ್ವರ್‌ ಖಂಡ್ರೆ
x

ಪಿಒಪಿ ಮೂರ್ತಿಗಳಿಗಿಲ್ಲ ಅವಕಾಶ, ಶಬ್ಧ ಮಾಲಿನ್ಯಕ್ಕೂ ಅನುಮತಿ ಇಲ್ಲ: ಈಶ್ವರ್‌ ಖಂಡ್ರೆ

ಪಿಒಪಿ ಮೂರ್ತಿಗಳ ತಯಾರಿಕೆ, ಮಾರಾಟ ಸಂಪೂರ್ಣ ನಿಷೇಧಿತವಾಗಿದೆ. ಇದನ್ನು ಎಲ್ಲಾ ಗ್ರಾಮ ಪಂಚಾಯತಿಗಳು ಪಾಲಿಸಲೇಬೇಕು ಎಂದು ಸಚಿವ ಈಶ್ವರ್‌ ಖಂಡ್ರೆ ಸೂಚನೆ ನೀಡಿದ್ದಾರೆ.


Click the Play button to hear this message in audio format

ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುವ ಗಣೇಶ ಹಬ್ಬವು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಅದು ಪರಿಸರ ಸಂರಕ್ಷಣೆಯ ಸಂದೇಶವನ್ನೂ ಸಾರಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸುವಂತೆ ರಾಜ್ಯದ ಜನತೆಗೆ ಮತ್ತು ಆಡಳಿತ ಯಂತ್ರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸೆಪ್ಟೆಂಬರ್ 14ರಂದು ನಡೆಯಲಿರುವ ಗಣೇಶ ಚತುರ್ಥಿಯ ಸಿದ್ಧತೆಗಳ ಹಿನ್ನೆಲೆಯಲ್ಲಿ, ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳ ವಿರುದ್ಧ ಸರ್ಕಾರ ಸಮರ ಸಾರಿದೆ. ಸಚಿವ ಈಶ್ವರ್ ಖಂಡ್ರೆ ಅವರು ಇಲಾಖೆಯ ಕಾರ್ಯದರ್ಶಿಯವರಿಗೆ ಬರೆದಿರುವ ಪತ್ರದಲ್ಲಿ, ಪಿಒಪಿ ಮೂರ್ತಿಗಳು ಪರಿಸರದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕ್ಯಾಲ್ಷಿಯಂ ಸಲ್ಫೇಟ್ ಹೆಮಿಹೈಡ್ರೇಟ್‌ನಿಂದ ತಯಾರಾಗುವ ಪಿಒಪಿ ಮೂರ್ತಿಗಳಲ್ಲಿ ಗಂಧಕ, ರಂಜಕ, ಜಿಪ್ಸಮ್ ಮತ್ತು ಮ್ಯಾಗ್ನೀಷಿಯಂನಂತಹ ಅಪಾಯಕಾರಿ ಅಂಶಗಳು ಇರುತ್ತವೆ. ಮೂರ್ತಿಗಳಿಗೆ ಬಳಸಲಾಗುವ ರಾಸಾಯನಿಕ ಬಣ್ಣಗಳಲ್ಲಿ ಪಾದರಸ, ಕ್ಯಾಡ್ಮಿಯಂ, ಸೀಸ ಮತ್ತು ಇಂಗಾಲದಂತಹ ಘನ ಲೋಹಗಳು ಇರುತ್ತವೆ. ಇಂತಹ ಮೂರ್ತಿಗಳನ್ನು ಕೆರೆ, ನದಿ ಅಥವಾ ಬಾವಿಗಳಿಗೆ ವಿಸರ್ಜಿಸಿದಾಗ, ಅವು ಕರಗುವುದಿಲ್ಲ. ಬದಲಾಗಿ, ಈ ವಿಷಕಾರಿ ಅಂಶಗಳು ನೀರಿನಲ್ಲಿ ಸೇರಿ ಜನ-ಜಾನುವಾರುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಅಲ್ಲದೆ, ಇದು ಜಲಚರಗಳ ಸಾವಿಗೂ ಕಾರಣವಾಗುತ್ತದೆ. ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯಿದೆ 1974ರ ಕಲಂ 33(ಎ) ಅಡಿಯಲ್ಲಿ ರಾಜ್ಯದ ಯಾವುದೇ ಜಲಮೂಲಗಳಲ್ಲಿ ಪಿಒಪಿ ಮೂರ್ತಿಗಳ ವಿಸರ್ಜನೆಯನ್ನು ಸರ್ಕಾರ ಈಗಾಗಲೇ ನಿಷೇಧಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪಂಚಾಯತ್ ರಾಜ್ ಇಲಾಖೆಯ ಕಟ್ಟುನಿಟ್ಟಿನ ಆದೇಶ

ಹಬ್ಬಕ್ಕೆ ಮುನ್ನವೇ ಪಿಒಪಿ ಮೂರ್ತಿಗಳ ತಯಾರಿಕೆ, ದಾಸ್ತಾನು, ಸಾಗಾಟ ಮತ್ತು ಮಾರಾಟಕ್ಕೆ ಕಡಿವಾಣ ಹಾಕಬೇಕು. ಈ ಕಾರ್ಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಕಾರ ಪಡೆಯಲು ಸೂಚಿಸಲಾಗಿದೆ. ಮಣ್ಣಿನ ಮೂರ್ತಿಗಳಿಗೆ ಪ್ರೋತ್ಸಾಹ: ಮಣ್ಣಿನಿಂದ ಹುಟ್ಟಿದ ದೇವರಿಗೆ ಮಣ್ಣಿನ ಮೂರ್ತಿಯೇ ಶ್ರೇಷ್ಠ. ಆದ್ದರಿಂದ ಪರಿಸರ ಸ್ನೇಹಿ, ಬಣ್ಣ ರಹಿತ ಅಥವಾ ನೈಸರ್ಗಿಕ ಬಣ್ಣ ಬಳಸಿರುವ ಮಣ್ಣಿನ ಗಣಪತಿ ಮೂರ್ತಿಗಳ ಪೂಜೆಗೆ ಸಾರ್ವಜನಿಕರನ್ನು ಪ್ರೇರೇಪಿಸಬೇಕು. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಧಾರ್ಮಿಕ ಮುಖಂಡರು ಮತ್ತು ಸಂಘ-ಸಂಸ್ಥೆಗಳ ಸಭೆ ಕರೆದು, ಪರಿಸರ ಸ್ನೇಹಿ ಗಣೇಶೋತ್ಸವದ ಬಗ್ಗೆ ಜಾಗೃತಿ ಮೂಡಿಸಬೇಕು. ಹಬ್ಬದ ಸಂಭ್ರಮದಲ್ಲಿ ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಎಚ್ಚರಿಕೆ ವಹಿಸಿ, ಕಾನೂನಾತ್ಮಕ ನಿಯಮಗಳನ್ನು ಪಾಲಿಸಬೇಕು ಎಂದಿದ್ದಾರೆ.

ಶಬ್ಧ ಮಾಲಿನ್ಯಕ್ಕೂ ಕಡಿವಾಣ

ಗಣೇಶೋತ್ಸವದ ಸಂದರ್ಭದಲ್ಲಿ ನಡೆಯುವ ಅನಿಯಂತ್ರಿತ ಧ್ವನಿವರ್ಧಕಗಳ ಬಳಕೆಯನ್ನು ಸಚಿವರು ತೀವ್ರವಾಗಿ ಖಂಡಿಸಿದ್ದಾರೆ. "ಉತ್ಸವದ ಹೆಸರಿನಲ್ಲಿ ಶಬ್ಧ ಮಾಲಿನ್ಯಕ್ಕೆ ಅವಕಾಶವಿಲ್ಲ. ಕಾನೂನಿನ ಪ್ರಕಾರ ನಿಗದಿತ ಡೆಸಿಬಲ್ ಮಟ್ಟದಲ್ಲಿ ಮಾತ್ರ ಸ್ಪೀಕರ್‌ಗಳನ್ನು ಬಳಸಬೇಕು" ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದು ಸಾರ್ವಜನಿಕರಿಗೆ, ವಿಶೇಷವಾಗಿ ವೃದ್ಧರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ನ್ಯಾಯಾಲಯದ ಆದೇಶದಂತೆ, ಪಿಒಪಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ಸಂಪೂರ್ಣ ನಿಷೇಧಿತವಾಗಿದೆ. ರಾಜ್ಯ ಉಚ್ಚ ನ್ಯಾಯಾಲಯವು ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ನಿರ್ದೇಶನ ನೀಡಿದೆ. ಈ ಕಾನೂನು ಪ್ರಕ್ರಿಯೆಯನ್ನು ಗ್ರಾಮ ಪಂಚಾಯತಿಗಳು ಪಾಲಿಸಲೇಬೇಕೆಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಹಬ್ಬವು ಪ್ರಕೃತಿಯ ಆರಾಧನೆಯಾಗಿದೆ. ಪ್ರಕೃತಿಯನ್ನು ಹಾಳುಮಾಡುವ ಯಾವುದೇ ಆಚರಣೆ ದೈವಿಕವಲ್ಲ. ಈ ಬಾರಿ ಪ್ರತಿಯೊಬ್ಬರೂ ಪರಿಸರ ಪ್ರೇಮಿಗಳಾಗಿ, ಮಣ್ಣಿನ ಗಣಪತಿಯನ್ನು ಪೂಜಿಸಿ, ಜಲಮೂಲಗಳನ್ನು ಸಂರಕ್ಷಿಸುವ ಸಂಕಲ್ಪ ಮಾಡಬೇಕು. ಗ್ರಾಮ ಪಂಚಾಯತಿಗಳು ಈ ನಿಟ್ಟಿನಲ್ಲಿ ಸ್ಥಳೀಯರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Read More
Next Story