
ಪೊಲೀಸ್ ಇಲಾಖೆಗೆ ಅಂತಾರಾಷ್ಟ್ರೀಯ ಮನ್ನಣೆ: 'ಐಎಸ್‌ಒ/ಐಇಸಿ 27001' ಪ್ರಮಾಣಪತ್ರ ಲಭ್ಯ
ಐಎಸ್‌ಒ/ಐಇಸಿ 27001 ಎಂಬುದು ಮಾಹಿತಿ ಭದ್ರತಾ ನಿರ್ವಹಣಾ ವ್ಯವಸ್ಥೆಗಾಗಿ ಇರುವ ಅಂತಾರಾಷ್ಟ್ರೀಯ ಮಾನದಂಡವಾಗಿದೆ. ಇಲಾಖೆಯ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ವ್ಯವಸ್ಥೆಗಳ ದಕ್ಷತೆಯನ್ನು ಬಿಂಬಿಸುತ್ತದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ತನ್ನ ಡಿಜಿಟಲ್ ಮೂಲಸೌಕರ್ಯ ಮತ್ತು ದತ್ತಾಂಶ ನಿರ್ವಹಣೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇಲಾಖೆಯ ಡೇಟಾ ಸೆಂಟರ್‌ಗೆ ಐಎಸ್‌ಒ/ಐಇಸಿ 27001 ಪ್ರಮಾಣಪತ್ರ ಲಭಿಸಿರುವುದು, ಭಾರತದ ಪೊಲೀಸ್ ಪಡೆಗಳಲ್ಲೇ ರಾಜ್ಯವು ತಾಂತ್ರಿಕವಾಗಿ ಎಷ್ಟು ಮುಂಚೂಣಿಯಲ್ಲಿದೆ ಎಂಬುದನ್ನು ಸಾಬೀತುಪಡಿಸುತ್ತದೆ.
ಐಎಸ್‌ಒ/ಐಇಸಿ 27001 ಎಂಬುದು ಮಾಹಿತಿ ಭದ್ರತಾ ನಿರ್ವಹಣಾ ವ್ಯವಸ್ಥೆಗಾಗಿ ಇರುವ ಅಂತಾರಾಷ್ಟ್ರೀಯ ಮಾನದಂಡವಾಗಿದೆ. ಒಂದು ಸಂಸ್ಥೆಯು ತನ್ನ ದತ್ತಾಂಶವನ್ನು ಹೇಗೆ ಸಂಗ್ರಹಿಸುತ್ತದೆ, ಸಂಸ್ಕರಿಸುತ್ತದೆ ಮತ್ತು ನಿರ್ವಹಿಸುತ್ತದೆ ಎಂಬುದನ್ನು ಈ ಪ್ರಮಾಣೀಕರಣವು ಮೌಲ್ಯಮಾಪನ ಮಾಡುತ್ತದೆ. ಈ ಪ್ರಮಾಣೀಕರಣವು ಪೊಲೀಸ್ ಇಲಾಖೆಯು ಜಾಗತಿಕ ಗುಣಮಟ್ಟದ ಮಾಹಿತಿ ಭದ್ರತಾ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಖಚಿತಪಡಿಸುತ್ತದೆ. ಇದು ಇಲಾಖೆಯ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ, ಸೈಬರ್ ಭದ್ರತಾ ಕ್ರಮಗಳು ಮತ್ತು ದತ್ತಾಂಶ ಸಂರಕ್ಷಣಾ ವ್ಯವಸ್ಥೆಗಳ ದಕ್ಷತೆಯನ್ನು ಬಿಂಬಿಸುತ್ತದೆ.
ಸಾಧನೆಯಿಂದಾಗುವ ನೇರ ಪರಿಣಾಮಗಳು
ರಾಜ್ಯ ಪೊಲೀಸ್ ಇಲಾಖೆಯ ಡೇಟಾ ಸೆಂಟರ್‌ನಲ್ಲಿ ಸಿಸಿಟಿಎನ್‌ಎಸ್, ಐಸಿಜೆಎಸ್, ಎಎಫ್‌ಐಎಸ್, ಸೈಬರ್ ಅಪರಾಧ ಮಾಹಿತಿ ವ್ಯವಸ್ಥೆಗಳು, ಪೊಲೀಸ್ ಮೊಬೈಲ್ ಆಪ್‌ಗಳು ಮತ್ತು ಸ್ಮಾರ್ಟ್ ಇ-ಬೀಟ್‌ನಂತಹ ಸಂವೇದನಾಶೀಲ ಡಿಜಿಟಲ್ ಸೇವೆಗಳು ಕಾರ್ಯನಿರ್ವಹಿಸುತ್ತವೆ. ಈ ಪ್ರಮಾಣೀಕರಣದ ನಂತರದ ಪ್ರಮುಖ ಬದಲಾವಣೆಗಳಾಗಲಿವೆ. ಸೈಬರ್ ದಾಳಿಗಳು ಮತ್ತು ಅನಧಿಕೃತ ಪ್ರವೇಶಗಳ ವಿರುದ್ಧದ ರಕ್ಷಣಾ ವ್ಯವಸ್ಥೆ ಹೆಚ್ಚು ಬಲಗೊಂಡಿದೆ. ಸಾರ್ವಜನಿಕರ ವೈಯಕ್ತಿಕ ಮಾಹಿತಿ ಹಾಗೂ ಪೊಲೀಸ್ ಇಲಾಖೆಯ ಸೂಕ್ಷ್ಮ ದತ್ತಾಂಶಗಳ ಗೌಪ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಹೆಚ್ಚಿನ ಭರವಸೆ ಸಿಕ್ಕಿದೆ. ದತ್ತಾಂಶ ನಿರ್ವಹಣೆಯಲ್ಲಿ ಪಾರದರ್ಶಕತೆ ಹೆಚ್ಚಾಗುವುದರಿಂದ ಆಡಳಿತಾತ್ಮಕ ಜವಾಬ್ದಾರಿ ಹೆಚ್ಚುತ್ತದೆ. ಡಿಜಿಟಲ್ ಸೇವೆಗಳ ಮೇಲೆ ನಾಗರಿಕರ ವಿಶ್ವಾಸ ಹೆಚ್ಚುತ್ತದೆ, ಇದು ಇ-ಆಡಳಿತದ ಯಶಸ್ಸಿಗೆ ಅತ್ಯಗತ್ಯ. ಯಾವುದೇ ತಾಂತ್ರಿಕ ಅಡಚಣೆಗಳು ಉಂಟಾದಲ್ಲಿ, ವ್ಯವಹಾರ ನಿರಂತರತೆಯನ್ನು ಕಾಯ್ದುಕೊಳ್ಳಲು ಬೇಕಾದ ಸಿದ್ಧತೆಗಳನ್ನು ಇದು ಖಚಿತಪಡಿಸುತ್ತದೆ.
ಸಾಂಸ್ಥಿಕ ಬದ್ಧತೆ
ಈ ಸಾಧನೆಯು ಹಠಾತ್ತಾಗಿ ಸಿಕ್ಕಿದ್ದಲ್ಲ. ಇಲಾಖೆಯ ಅತ್ಯುನ್ನತ ತಾಂತ್ರಿಕ ಪ್ರಾವೀಣ್ಯತೆ ಹೊಂದಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ವೃತ್ತಿಪರ ಕಾರ್ಯನಿರ್ವಹಣೆಯ ಫಲ ಇದಾಗಿದೆ. ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕ ಡಾ. ಎಂ.ಎ. ಸಲೀಂ ಮಾರ್ಗದರ್ಶನದಲ್ಲಿ, ಪೊಲೀಸ್ ಗಣಕ ವಿಭಾಗದ ತಾಂತ್ರಿಕ ತಂಡ ಮತ್ತು ಡೇಟಾ ಸೆಂಟರ್ ಸಿಬ್ಬಂದಿಯ ಸಮನ್ವಯಿತ ಪರಿಶ್ರಮವು ಈ ಪ್ರಮಾಣೀಕರಣವನ್ನು ಸಾಧ್ಯವಾಗಿಸಿದೆ. ಡಿಜಿಟಲ್ ಯುಗದಲ್ಲಿ ಅಪರಾಧಗಳು ಕೂಡ ಡಿಜಿಟಲೀಕರಣಗೊಳ್ಳುತ್ತಿವೆ. ಅಂತಹ ಸನ್ನಿವೇಶದಲ್ಲಿ ಪೊಲೀಸ್ ಇಲಾಖೆಯು ಕೇವಲ ದೈಹಿಕ ಬಲದಿಂದಷ್ಟೇ ಅಲ್ಲದೆ, ತಾಂತ್ರಿಕವಾಗಿ ಅತ್ಯಂತ ಬಲಿಷ್ಠವಾಗಿರುವುದು ಅನಿವಾರ್ಯ. ಐಎಸ್‌ಒ/ಐಇಸಿ 27001 ಪ್ರಮಾಣೀಕರಣವು ಕರ್ನಾಟಕ ಪೊಲೀಸರಿಗೆ ಸೈಬರ್ ಅಪರಾಧಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ತನಿಖಾ ಪ್ರಕ್ರಿಯೆಯನ್ನು ಆಧುನೀಕರಿಸಲು ಒಂದು ಭದ್ರ ಬುನಾದಿಯನ್ನು ಒದಗಿಸಿದೆ.

