An attempt to shed light on the fear of Hindi imposition; Government marks the time for implementing the state education policy
x

ಸಾಂದರ್ಭಿಕ ಚಿತ್ರ

ಹಿಂದಿ ಹೇರಿಕೆಯ ಆತಂಕಕ್ಕೆ ತೆರೆ ಎಳೆಯುವ ಪ್ರಯತ್ನ; ರಾಜ್ಯ ಶಿಕ್ಷಣ ನೀತಿ ಜಾರಿಗೆ ಸರ್ಕಾರ ಮುಹೂರ್ತ

ಇತಿಹಾಸದಲ್ಲೇ ಮೊದಲ ಬಾರಿಗೆ, ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲೂ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಮೀಸಲಾತಿ ಜಾರಿಗೊಳಿಸುವಂತೆ ವರದಿ ಶಿಫಾರಸು ಮಾಡಿದೆ.


Click the Play button to hear this message in audio format

ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸಿ, ಕರ್ನಾಟಕದ ವಿಶಿಷ್ಟ ಭೌಗೋಳಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗೆ ಪೂರಕವಾಗಿ ಸಿದ್ಧಪಡಿಸಲಾಗಿರುವ 'ರಾಜ್ಯ ಶಿಕ್ಷಣ ನೀತಿ' (ಎಸ್‌ಇಪಿ) ಜಾರಿಗೆ ರಾಜ್ಯ ಸರ್ಕಾರ ಈಗ ಅಧಿಕೃತವಾಗಿ ಮುಹೂರ್ತ ನಿಗದಿಪಡಿಸಿದೆ. ಪ್ರೊ. ಸುಖದೇವ್ ಥೋರಟ್ ಸಮಿತಿ ಸಲ್ಲಿಸಿರುವ ಎಂಟು ಸಂಪುಟಗಳ ಬೃಹತ್ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಲು 'ಸಚಿವ ಸಂಪುಟ ಉಪಸಮಿತಿ' ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.

ಪ್ರೊ. ಸುಖದೇವ್ ಥೋರಟ್ ಸಮಿತಿಯು ಶೈಕ್ಷಣಿಕ ಗುಣಮಟ್ಟ, ಸಾಮಾಜಿಕ ನ್ಯಾಯ ಮತ್ತು ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಹಲವಾರು ಶಿಫಾರಸುಗಳನ್ನು ಮಾಡಿದ್ದು, ಹಂತ-ಹಂತವಾಗಿ ಅನುಷ್ಠಾನಗೊಳಿಸುವಂತೆ ತಿಳಿಸಿದೆ.

ದ್ವಿಭಾಷಾ ನೀತಿ, ಕನ್ನಡಕ್ಕೆ ಮೊದಲ ಆದ್ಯತೆ

ರಾಜ್ಯದ ಶಾಲೆಗಳಲ್ಲಿ ದ್ವಿಭಾಷಾ ನೀತಿಯನ್ನು ಕಡ್ಡಾಯಗೊಳಿಸಲು ಶಿಫಾರಸು ಮಾಡಲಾಗಿದೆ. ಮಾತೃಭಾಷೆ ಅಥವಾ ಕನ್ನಡವು ಕಡ್ಡಾಯ ಕಲಿಕಾ ಭಾಷೆಯಾಗಲಿದೆ, ಇದು ಹಿಂದಿ ಹೇರಿಕೆಯ ಆತಂಕಕ್ಕೆ ತೆರೆ ಎಳೆಯುವ ಪ್ರಯತ್ನವಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ, ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲೂ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಮೀಸಲಾತಿ ಜಾರಿಗೊಳಿಸುವಂತೆ ವರದಿ ಶಿಫಾರಸು ಮಾಡಿದೆ.

ʼಶಿಕ್ಷಣ ಸೆಸ್‌ʼ ವಿಧಿಸಲು ಸಲಹೆ

ಖಾಸಗಿ ಶಾಲಾ-ಕಾಲೇಜುಗಳು ಮನಬಂದಂತೆ ವಿಧಿಸುವ ಶುಲ್ಕಕ್ಕೆ ಕಡಿವಾಣ ಹಾಕಲು ಸೂಕ್ತ ನಿಯಂತ್ರಣ ವ್ಯವಸ್ಥೆ ಜಾರಿಗೆ ತರಲು ಸಮಿತಿ ಸೂಚಿಸಿದೆ. ಶಿಕ್ಷಣದ ಗುಣಮಟ್ಟ ಸುಧಾರಿಸಲು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಪರೋಕ್ಷ ತೆರಿಗೆಗಳ ಮೇಲೆ 'ಶಿಕ್ಷಣ ಸೆಸ್' ವಿಧಿಸುವ ಮೂಲಕ ಬಜೆಟ್ ಹೆಚ್ಚಿಸಲು ಸಲಹೆ ನೀಡಲಾಗಿದೆ.

ಸಚಿವ ಸಂಪುಟ ಉಪಸಮಿತಿ ಯಾಕೆ?

ವರದಿಯು ಎಂಟು ಸಂಪುಟಗಳಷ್ಟು ವಿಸ್ತಾರವಾಗಿರುವುದರಿಂದ ಹಾಗೂ ಇದರಲ್ಲಿ ಆರ್ಥಿಕ ಮತ್ತು ಕಾನೂನು ವಿಚಾರಗಳು ಒಳಗೊಂಡಿರುವುದರಿಂದ, ಸರ್ಕಾರವು ಉಪಸಮಿತಿಯನ್ನು ರಚಿಸಿದೆ. ವರದಿಯಲ್ಲಿನ ಶಿಫಾರಸುಗಳನ್ನು ಹಂತ ಹಂತವಾಗಿ ಹೇಗೆ ಜಾರಿಗೊಳಿಸಬೇಕು ಎಂಬ ನಕ್ಷೆ ಸಿದ್ಧಪಡಿಸುವುದು. ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿಯಂತಹ ಸೂಕ್ಷ್ಮ ವಿಷಯಗಳು ಕಾನೂನು ಸಂಘರ್ಷಕ್ಕೆ ಕಾರಣವಾಗದಂತೆ ತಜ್ಞರ ಸಲಹೆ ಪಡೆಯುವುದು. ಮಾಧ್ಯಮಿಕ ಶಿಕ್ಷಣವನ್ನು ರಾಜ್ಯಾದ್ಯಂತ ಸಾರ್ವತ್ರಿಕಗೊಳಿಸುವ ನಿಟ್ಟಿನಲ್ಲಿ ಮಾನವ ಸಂಪನ್ಮೂಲದ ಲಭ್ಯತೆ ಪರಿಶೀಲಿಸುವುದು ಉಪ ಸಮಿತಿಯ ಕಾರ್ಯವಾಗಿದೆ.

ಸದ್ಯಕ್ಕಿಲ್ಲ ಗೊಂದಲ: ಹಳೇ ಪದ್ಧತಿಯೇ ಮುಂದುವರಿಕೆ

ಹೊಸ ನೀತಿಯು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿನ ಗೊಂದಲ ಸದ್ಯಕ್ಕೆ ನಿವಾರಣೆಯಾಗಿದೆ. ಸರ್ಕಾರದ ಈ ಮಹತ್ವಾಕಾಂಕ್ಷಿ ನಡೆಯ ಮುಂದೆ ಹಲವು ಸವಾಲುಗಳಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ವಿರೋಧ, ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಹಾಗೂ ಹೊಸ ಸೆಸ್‌ ವಿಧಿಸುವುದರಿಂದ ಸಾಮಾನ್ಯ ಜನರ ಮೇಲೆ ಬೀಳುವ ಆರ್ಥಿಕ ಹೊರೆಯ ಬಗ್ಗೆ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ.

Read More
Next Story