
2025-26ರ ಬಜೆಟ್‌ನಲ್ಲಿ ಶಾಲಾ ಶಿಕ್ಷಣಕ್ಕೆ ರೂ. 78,571 ಕೋಟಿ ಮೀಸಲಿಡಲಾಗಿತ್ತಾದರೂ, ಪರಿಷ್ಕೃತ ಬಜೆಟ್‌ನಲ್ಲಿ ಅದನ್ನು ರೂ. 70,566 ಕೋಟಿಗೆ ಇಳಿಸಲಾಗಿತ್ತು.
ರಾಜ್ಯ ಶಿಕ್ಷಣ ನೀತಿ: ಥೋರಟ್ ವರದಿ ಪರಾಮರ್ಶೆಗೆ ಸಂಪುಟ ಉಪ ಸಮಿತಿ ರಚನೆ
ಪಠ್ಯಕ್ರಮದ ಸುಧಾರಣೆಗಳು, ಡೀಮ್ಡ್ ವಿಶ್ವವಿದ್ಯಾಲಯಗಳು, ಏಕೀಕೃತ ವಿಶ್ವವಿದ್ಯಾಲಯಗಳು ಹಾಗೂ ಹೊಸದಾಗಿ ಸ್ಥಾಪಿಸಲಾದ ವಿಶ್ವವಿದ್ಯಾಲಯಗಳ ರಚನೆ ಮತ್ತು ನಿಯಮಾವಳಿಗಳ ಕುರಿತು ವರದಿಯಲ್ಲಿರುವ ಅಂಶಗಳನ್ನು ಸಮಿತಿ ವಿಶ್ಲೇಷಿಸಲಿದೆ.
ರಾಜ್ಯ ಶಿಕ್ಷಣ ನೀತಿಯ ಅಂತಿಮ ವರದಿಯನ್ನು ವಿಸ್ತೃತವಾಗಿ ಅಧ್ಯಯನ ನಡೆಸಿ, ಅನುಷ್ಠಾನಗೊಳಿಸಲು ಸೂಕ್ತ ಶಿಫಾರಸು ನೀಡಲು ಸೂಚಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಉಪಸಮಿತಿ ರಚಿಸಿದ್ದಾರೆ.
ಮೇ 7 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲು ತೀರ್ಮಾನಿಸಲಾಗಿತ್ತು. ಉಪಸಮಿತಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಪುಟ ಸಭೆ ನೀಡಿತ್ತು.
ಅದರಂತೆ ಸಿದ್ದರಾಮಯ್ಯ ಅವರು ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಿ ಆದೇಶಿಸಿದ್ದಾರೆ. ಈ ಸಮಿತಿ ಅಧ್ಯಕ್ಷರಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇರಲಿದ್ದು, ಸದಸ್ಯರಾಗಿ ಕಾನೂನು ಸಚಿವ ಎಚ್. ಕೆ. ಪಾಟೀಲ್, ಸಮಾಜ ಕಲ್ಯಾಣ ಸಚಿವ ಡಾ. ಎಚ್. ಸಿ. ಮಹದೇವಪ್ಪ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಇರಲಿದ್ದಾರೆ.
ಸಮಿತಿಯ ಜವಾಬ್ದಾರಿಗಳೇನು?
ಯುಜಿಸಿ ಮಾಜಿ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗವು ಸಿದ್ಧಪಡಿಸಿರುವ ಸುಮಾರು 8 ಸಂಪುಟಗಳ ಬೃಹತ್ ಅಂತಿಮ ವರದಿಯನ್ನು ಸಮಿತಿಯು ಪರಾಮರ್ಶಿಸಲಿದೆ.
ಹೊಸ ನೀತಿಯನ್ನು ಜಾರಿಗೆ ತರಲು ತಗಲುವ ಒಟ್ಟು ಹಣಕಾಸಿನ ವೆಚ್ಚ ಹಾಗೂ ಅಗತ್ಯವಿರುವ ಹೆಚ್ಚುವರಿ ಮಾನವ ಸಂಪನ್ಮೂಲಗಳ (ಶಿಕ್ಷಕರು/ಸಿಬ್ಬಂದಿ) ಲಭ್ಯತೆಯ ಬಗ್ಗೆ ಸಮಿತಿ ಪರಿಶೀಲನೆ ನಡೆಸಲಿದೆ. ಪಠ್ಯಕ್ರಮದ ಸುಧಾರಣೆಗಳು, ಡೀಮ್ಡ್ ವಿಶ್ವವಿದ್ಯಾಲಯಗಳು, ಏಕೀಕೃತ ವಿಶ್ವವಿದ್ಯಾಲಯಗಳು ಹಾಗೂ ಹೊಸದಾಗಿ ಸ್ಥಾಪಿಸಲಾದ ವಿಶ್ವವಿದ್ಯಾಲಯಗಳ ರಚನೆ ಮತ್ತು ನಿಯಮಾವಳಿಗಳ ಕುರಿತು ವರದಿಯಲ್ಲಿರುವ ಅಂಶಗಳನ್ನು ಸಮಿತಿ ವಿಶ್ಲೇಷಿಸಲಿದೆ.
ಈ ಎಲ್ಲಾ ಆಡಳಿತಾತ್ಮಕ ಮತ್ತು ಕಾನೂನು ಚೌಕಟ್ಟುಗಳನ್ನು ಪರಿಶೀಲಿಸಿದ ಬಳಿಕ, ರಾಜ್ಯದಲ್ಲಿ SEP ಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಮಿತಿಯು ಸರ್ಕಾರಕ್ಕೆ ವರದಿ ಮತ್ತು ಶಿಫಾರಸುಗಳನ್ನು ಸಲ್ಲಿಸಲಿದೆ.
ಈ ಸಂಪುಟ ಉಪಸಮಿತಿಗೆ ಅಗತ್ಯವಿರುವ ಎಲ್ಲಾ ಆಡಳಿತಾತ್ಮಕ ಮತ್ತು ಸಚಿವಾಲಯದ (Secretariat) ಬೆಂಬಲವನ್ನು ಸರ್ಕಾರದ ನಿಯಮಾವಳಿಗಳ ಪ್ರಕಾರ ಉನ್ನತ ಶಿಕ್ಷಣ ಇಲಾಖೆಯು ಒದಗಿಸಲಿದೆ.
ಏನಿದು ಎಸ್ ಇಪಿ ನೀತಿ?
ಕರ್ನಾಟಕದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ರೂಪಿಸುವ ಉದ್ದೇಶದಿಂದ ಹಾಗೂ ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಗೆ (NEP) ಪರ್ಯಾಯವಾಗಿ ರಾಜ್ಯ ಶಿಕ್ಷಣ ನೀತಿ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು.
ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ಕರ್ನಾಟಕದಲ್ಲಿ ಮೊದಲಿನಿಂದಲೂ ವಿರೋಧಿಸಲಾಗಿತ್ತು. ಪದವಿ ಶಿಕ್ಷಣವನ್ನು 4 ವರ್ಷಗಳ ಅವಧಿಗೆ ವಿಸ್ತರಿಸಿದ್ದು ಮತ್ತು ಇತರ ಅಂಶಗಳು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಣ ವ್ಯವಸ್ಥೆಗೆ ಹೊರೆಯಾಗುತ್ತವೆ ಎಂಬುದು ರಾಜ್ಯದ ವಾದವಾಗಿತ್ತು.
ಹಾಗಾಗಿ, ಕರ್ನಾಟಕ ಸರ್ಕಾರವು ಎನ್‌ಇಪಿ (NEP) ರದ್ದುಗೊಳಿಸಿ, ರಾಜ್ಯಕ್ಕೆ ಸೂಕ್ತವಾದ ಹೊಸ ಶಿಕ್ಷಣ ನೀತಿಯನ್ನು (SEP) ರೂಪಿಸಲು 2024ರಲ್ಲಿ ಖ್ಯಾತ ಶಿಕ್ಷಣ ತಜ್ಞ ಪ್ರೊ. ಸುಖದೇವ್ ಥೋರಟ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿತು.
ಈ ಸುದೀರ್ಘ ಅಧ್ಯಯನದ ನಂತರ, ಈ ಸಮಿತಿಯು 2,197 ಪುಟಗಳ ಸಮಗ್ರ ವರದಿಯನ್ನು ಮತ್ತು ಕರಡು ನೀತಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಈ ನೀತಿಯು 2+8+4 ಶೈಕ್ಷಣಿಕ ಸೂತ್ರವನ್ನು ಒಳಗೊಂಡಿದ್ದು, ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ಅಗತ್ಯಗಳಿಗೆ ಹೆಚ್ಚು ಒತ್ತು ನೀಡುತ್ತದೆ. ಅಲ್ಲದೆ, ಪದವಿ ವ್ಯಾಸಂಗವನ್ನು ಮತ್ತೆ 3 ವರ್ಷಗಳ ಅವಧಿಗೆ ಮರುಸ್ಥಾಪಿಸುವುದು ಹಾಗೂ ರಾಜ್ಯದ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಸಮಾನತೆ ಮತ್ತು ಮೀಸಲಾತಿಗೆ ಆದ್ಯತೆ ನೀಡಲು ಶಿಫಾರಸು ಮಾಡಿದೆ.

