ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಮೂರು ಪರೀಕ್ಷೆಗಳ ಬದಲಿಗೆ ಎರಡೇ ಪರೀಕ್ಷೆ
x

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಮೂರು ಪರೀಕ್ಷೆಗಳ ಬದಲಿಗೆ ಎರಡೇ ಪರೀಕ್ಷೆ

ಮೂರು ಮುಖ್ಯ ಪರೀಕ್ಷೆಗಳ ವ್ಯವಸ್ಥೆಯನ್ನು ಈ ಶೈಕ್ಷಣಿಕ ವರ್ಷದಿಂದ ಕೈಬಿಡಲು ಇಲಾಖೆ ನಿರ್ಧರಿಸಿದೆ. ಇನ್ಮುಂದೆ ವಿದ್ಯಾರ್ಥಿಗಳಿಗೆ ಕೇವಲ ಎರಡು ಮುಖ್ಯ ಪರೀಕ್ಷೆಗಳು ಮಾತ್ರ ನಡೆಯಲಿವೆ.


Click the Play button to hear this message in audio format

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯೊಂದನ್ನು ಜಾರಿಗೆ ತಂದಿದೆ. ಕಳೆದ ಎರಡು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಜಾರಿಯಲ್ಲಿದ್ದ ಮೂರು ಮುಖ್ಯ ಪರೀಕ್ಷೆಗಳ ವ್ಯವಸ್ಥೆಯನ್ನು ಈ ಶೈಕ್ಷಣಿಕ ವರ್ಷದಿಂದ ಕೈಬಿಡಲು ಇಲಾಖೆ ನಿರ್ಧರಿಸಿದೆ. ಇನ್ಮುಂದೆ ವಿದ್ಯಾರ್ಥಿಗಳಿಗೆ ಕೇವಲ ಎರಡು ಮುಖ್ಯ ಪರೀಕ್ಷೆಗಳು ಮಾತ್ರ ನಡೆಯಲಿವೆ.

ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಮೂರು ಪರೀಕ್ಷೆಗಳನ್ನು ಬರೆಯುವ ಅವಕಾಶ ನೀಡಲಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಸಿಗುತ್ತದೆ ಎಂಬುದು ಒಂದು ವಾದವಾದರೂ, ಆಡಳಿತಾತ್ಮಕವಾಗಿ ಮತ್ತು ಶೈಕ್ಷಣಿಕವಾಗಿ ಇದು ಹಲವು ಸಮಸ್ಯೆಗಳನ್ನು ಸೃಷ್ಟಿಸಿತ್ತು. ಪರೀಕ್ಷಾ ಮಂಡಳಿಗೆ ಮಾರ್ಚ್‌ನಿಂದ ಸೆಪ್ಟೆಂಬರ್ ವರೆಗೆ ಪರೀಕ್ಷೆಯನ್ನೇ ನಡೆಸುವುದು ಮತ್ತು ಅದರ ನಿರ್ವಹಣೆಯೇ ದೊಡ್ಡ ಸವಾಲಾಗಿತ್ತು. ಸುಮಾರು ಏಳು ತಿಂಗಳ ಕಾಲ ಪರೀಕ್ಷಾ ಪ್ರಕ್ರಿಯೆಗಳಲ್ಲಿಯೇ ಮಗ್ನರಾಗುವುದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿತ್ತು. ಅಲ್ಲದೆ, ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಗಳ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತಿತ್ತು ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿತ್ತು. ಕಳೆದ ವರ್ಷ ಮೂರು ಪರೀಕ್ಷೆಗಳ ನಂತರ ಫಲಿತಾಂಶದಲ್ಲಿ ದಾಖಲೆ ಪ್ರಮಾಣದ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ, ಇಲಾಖೆಯು ಪರೀಕ್ಷಾ ಮಾದರಿಯನ್ನು ಮರುಪರಿಶೀಲಿಸಿದೆ. ಎರಡು ಪರೀಕ್ಷೆಗಳ ವ್ಯವಸ್ಥೆಯೇ ಸಮರ್ಪಕ ಎಂದು ತೀರ್ಮಾನಿಸಿ, ಮೂರನೇ ಪರೀಕ್ಷೆಗೆ ಇಲಾಖೆ ಕೊಕ್ ನೀಡಿದೆ.

ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯ ಎಚ್ಚರಿಕೆ

ಪರೀಕ್ಷೆಗಳ ಸಂಖ್ಯೆ ಕಡಿಮೆಯಾದ ಕೂಡಲೇ ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆಯಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ಶಿಕ್ಷಣ ಇಲಾಖೆ ಕಟ್ಟುನಿಟ್ಟಾಗಿ ಎಚ್ಚರಿಸಿದೆ. ಮೂರು ಬಾರಿ ಪರೀಕ್ಷೆ ಬರೆಯಬಹುದು ಎಂಬ ಆಲೋಚನೆಯಲ್ಲಿ ಸಿದ್ಧತೆಯನ್ನು ಮುಂದೂಡಬೇಡಿ. ಇನ್ಮುಂದೆ ಎರಡು ಮುಖ್ಯ ಪರೀಕ್ಷೆಗಳನ್ನೇ ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ಓದಿನ ಕಡೆ ಹೆಚ್ಚಿನ ಗಮನಹರಿಸಿ ಎಂದು ಇಲಾಖೆ ಸೂಚನೆ ನೀಡಿದೆ. ಶಿಕ್ಷಕರು ಮತ್ತು ಅಧಿಕಾರಿಗಳು ವಿದ್ಯಾರ್ಥಿಗಳನ್ನು ಈ ಹೊಸ ಪರೀಕ್ಷಾ ಮಾದರಿಗೆ ಅನುಗುಣವಾಗಿ ಸಿದ್ಧಪಡಿಸುವಂತೆ ಇಲಾಖೆ ನಿರ್ದೇಶನ ನೀಡಿದೆ.

ಪರ-ವಿರೋಧದ ಚರ್ಚೆಗಳು

ಮೂರು ಪರೀಕ್ಷೆಗಳ ವ್ಯವಸ್ಥೆಯನ್ನು ಜಾರಿಗೆ ತಂದಾಗ ಮತ್ತು ಈಗ ಅದನ್ನು ರದ್ದುಗೊಳಿಸಿದಾಗಲೂ ರಾಜ್ಯದಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ. ಮೂರು ಪರೀಕ್ಷೆಗಳನ್ನು ನಡೆಸುವುದರಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಹೆಚ್ಚಿನ ಅವಕಾಶಗಳು ಸಿಗುತ್ತವೆ. ಒಂದು ಪರೀಕ್ಷೆಯಲ್ಲಿ ವಿಫಲವಾದರೆ ಧೃತಿಗೆಡದೆ ಮತ್ತೊಂದು ಪರೀಕ್ಷೆಗೆ ಸಜ್ಜಾಗಲು ವಿದ್ಯಾರ್ಥಿಗಳಿಗೆ ಮಾನಸಿಕ ಬಲ ಸಿಗುತ್ತದೆ ಎಂಬುದು ಕೆಲವರ ವಾದವಾಗಿತ್ತು. ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರ ಮೇಲೆ ನಿರಂತರ ಕಾರ್ಯದೊತ್ತಡ ಹೆಚ್ಚಾಗುತ್ತದೆ. ಮರುಮೌಲ್ಯಮಾಪನ, ಅಂಕಗಳ ಮರುಎಣಿಕೆ, ಅಂಕಪಟ್ಟಿ ವಿತರಣೆ ಹೀಗೆ ನಿರಂತರವಾಗಿ ಪರೀಕ್ಷಾ ಕೆಲಸಗಳಲ್ಲಿ ತೊಡಗುವುದರಿಂದ ಪಾಠ ಪ್ರವಚನಗಳಿಗೆ ಸಮಯ ಸಿಗುತ್ತಿಲ್ಲ. ಇದು ಒಟ್ಟಾರೆ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ವಿರೋಧಿಸುವವರ ಅಭಿಪ್ರಾಯ.

ಆಡಳಿತಾತ್ಮಕ ಹೊರೆ, ಶೈಕ್ಷಣಿಕ ಪರಿಣಾಮ

ವಾಸ್ತವದಲ್ಲಿ, ವರ್ಷದಲ್ಲಿ ಏಳು ತಿಂಗಳು ಪರೀಕ್ಷೆ ನಡೆಸುವುದೇ ಒಂದು ದೊಡ್ಡ ಸವಾಲಾಗಿತ್ತು. ಪರೀಕ್ಷಾ ಮಂಡಳಿಯು ಕೇವಲ ಪರೀಕ್ಷೆಗಳನ್ನು ನಡೆಸುವುದರಲ್ಲೇ ನಿರತವಾದರೆ, ಇತರ ಶೈಕ್ಷಣಿಕ ಸುಧಾರಣೆಗಳನ್ನು ಮಾಡುವುದು ಹೇಗೆ ಎಂಬ ಪ್ರಶ್ನೆ ಇಲಾಖೆಯ ಮುಂದಿತ್ತು. ಪರೀಕ್ಷಾ ದಿನಾಂಕಗಳು ವೃತ್ತಿಪರ ಕೋರ್ಸ್‌ಗಳಾದ ನೀಟ್ , ಸಿಇಟಿ ಮತ್ತು ಜೆಇಇ ಪರೀಕ್ಷೆಗಳ ದಿನಾಂಕಗಳೊಂದಿಗೆ ಸಂಘರ್ಷವಾಗುತ್ತಿತ್ತು. ಈಗ ಎರಡು ಪರೀಕ್ಷೆಗಳಿಗೆ ಸೀಮಿತಗೊಳಿಸಿರುವುದರಿಂದ ಆಡಳಿತಾತ್ಮಕವಾಗಿ ಇಲಾಖೆಗೆ ಮತ್ತು ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಯ ಸಿಗಲಿದೆ ಎಂಬುದು ಇಲಾಖೆಯ ಆಶಯವಾಗಿದೆ.

ಪರೀಕ್ಷೆಗಳ ಸಂಖ್ಯೆ ಕಡಿಮೆ ಇರುವುದರಿಂದ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಮತ್ತು ಪುನರಾವರ್ತಿಸಲು ಹೆಚ್ಚು ಸಮಯ ಮೀಸಲಿಡಬೇಕು. ಮೂರನೇ ಅವಕಾಶ ಇಲ್ಲದಿರುವುದರಿಂದ ಮೊದಲ ಎರಡು ಪರೀಕ್ಷೆಗಳನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಶಾಲೆಗಳಲ್ಲಿ ನಡೆಯುವ ತರಗತಿಗಳನ್ನು ತಪ್ಪಿಸದೆ, ಶಿಕ್ಷಕರ ಮಾರ್ಗದರ್ಶನದಲ್ಲಿ ಎರಡು ಪರೀಕ್ಷೆಗಳ ಮಾದರಿಗೆ ಅನುಗುಣವಾಗಿ ಸಿದ್ಧರಾಗಬೇಕು.

ಒಟ್ಟಾರೆಯಾಗಿ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ವ್ಯವಸ್ಥೆಯಲ್ಲಿನ ಈ ಬದಲಾವಣೆ ಎಷ್ಟರಮಟ್ಟಿಗೆ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂಬುದನ್ನು ಈ ಸಾಲಿನ ಫಲಿತಾಂಶ ತಿಳಿಸಲಿದೆ. ಇಲಾಖೆಯು ಇನ್ನು ಮುಂದೆ ಯಾವುದೇ ಬದಲಾವಣೆಗಳನ್ನು ಮಾಡದೆ, ಒಂದು ಸ್ಥಿರವಾದ ಪರೀಕ್ಷಾ ನೀತಿಯನ್ನು ಅನುಸರಿಸುವುದು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಅತಿ ಅಗತ್ಯವಾಗಿದೆ.

Read More
Next Story