
ಕ್ರೀಡಾ ಸಾಧಕರಿಗೆ ಉದ್ಯೋಗ ಮೀಸಲಾತಿ ; 5 ಲಕ್ಷ ರೂ. ವಿಶೇಷ ಪ್ರೋತ್ಸಾಹಧನ
ಶೇ.2 ರಷ್ಟು ಹುದ್ದೆಗಳನ್ನು ಕ್ರೀಡಾಪಟುಗಳಿಗೆ ಮೀಸಲಿಡಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಕರಡು ಅಧಿಸೂಚನೆ ಹೊರಡಿಸಲಾಗಿದೆ.
ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್‌ಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ 5 ಲಕ್ಷ ರೂ.ವಿಶೇಷ ಪ್ರೋತ್ಸಾಹಧನ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದಲ್ಲದೇ ಇಲಾಖೆಯಲ್ಲಿಖಾಲಿ ಇರುವ ತರಬೇತುದಾರರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, 50 ಕಾಯಂ ತರಬೇತುದಾರರ ಹುದ್ದೆಗಳನ್ನು ಶೀಘ್ರವೇ ನೇಮಕಾತಿ ಮಾಡಲಾಗುವುದು ಎಂದು ಕಂದಾಯ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಹಾಜರಾತಿಯಲ್ಲಿ ಶೇ. 15 ರಷ್ಟು ವಿನಾಯಿತಿ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಶೇ. 25ರಷ್ಟು ಹಾಜರಾತಿ ವಿನಾಯಿತಿ ನೀಡಲಾಗುವುದು. ಇದನ್ನು ಕೂಡಲೇ ಅನುಷ್ಟಾನಗೊಳಿಸಲಾಗಿದ್ದು, ಸರ್ಕಾರಿ ಆದೇಶ ಹೊರಡಿಸಿರುವುದಾಗಿ ತಿಳಿಸಿದ್ದಾರೆ.
ಸರ್ಕಾರವು ರಾಜ್ಯದ ಸಾಧಕ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ ನೀಡಲು ಹೆಚ್ಚಿನ ಆದ್ಯತೆ ನೀಡುತ್ತಿದೆ. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ 72 ಸಾವಿರ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಶೇ.2 ರಷ್ಟು ಹುದ್ದೆಗಳನ್ನು ಕ್ರೀಡಾಪಟುಗಳಿಗೆ ಮೀಸಲಿಡಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಕರಡು ಅಧಿಸೂಚನೆ ಹೊರಡಿಸಲಾಗಿದೆ. ಸಾರ್ವಜನಿಕರ ಮತ್ತು ಕ್ರೀಡಾಪಟುಗಳ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಶೀಲಿಸಿ, ಶೀಘ್ರ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.
ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಹಾಜರಾತಿ ಶೇ 50ರಷ್ಟು ಇದ್ದರೂ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಇದು ನನ್ನ ಸ್ವಂತ ಅನುಭವವೂ ಹೌದು. ಹಾಗಾಗಿ ಯಾವುದೇ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಬಾರದು. ಒಟ್ಟು 34 ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಹಾಜರಾತಿ ವಿನಾಯಿತಿ ನೀಡಲಾಗಿದ್ದು, ಕ್ರೀಡಾಕೂಟಗಳ ಪಟ್ಟಿ ಸಹ ಒದಗಿಸಲಾಗಿದೆ ಎಂದು ವಿವರಿಸಿದ್ದಾರೆ.
ಉದ್ಯೋಗದಲ್ಲೂ ಮೀಸಲಾತಿ
ಸರ್ಕಾರವು ರಾಜ್ಯದ ಕ್ರೀಡಾಸಾಧಕರಿಗೆ ಉದ್ಯೋಗಾವಕಾಶ ನೀಡಲು ಹೆಚ್ಚಿನ ಆದ್ಯತೆ ನೀಡುತ್ತಿದೆ. ಶೇ.2 ರಷ್ಟು ಹುದ್ದೆಗಳನ್ನು ಕ್ರೀಡಾಪಟುಗಳಿಗೆ ಮೀಸಲಿಡಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಕರಡು ಅಧಿಸೂಚನೆ ಹೊರಡಿಸಲಾಗಿದೆ. ಸಾರ್ವಜನಿಕರ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಶೀಲಿಸಿ, ಶೀಘ್ರ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.
72 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಶೇ.2 ರಷ್ಟು ಕ್ರೀಡಾ ಮೀಸಲಾತಿ ಪ್ರಕಾರ 2 ಸಾವಿರ ಹುದ್ದೆಗಳು ಕ್ರೀಡಾಪಟುಗಳಿಗೆ ಲಭ್ಯವಾಗಲಿದೆ. ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್‌ಗಳಲ್ಲಿ ಪದಕ ವಿಜೇತ ಸಾಧಕ ಕ್ರೀಡಾಪಟುಗಳಿಗೆ ‘ಎ’ ಮತ್ತು ‘ಬಿ’ ಗುಂಪಿನ ಹುದ್ದೆಗಳನ್ನು ವಿಶೇಷ ನೇಮಕಾತಿಯಡಿ ಭರ್ತಿ ಮಾಡುತ್ತಿದೆ. ಈಗಾಗಲೇ 13 ಕ್ರೀಡಾಪಟುಗಳಿಗೆ ಆದೇಶ ಪತ್ರಗಳನ್ನು ನೀಡಿದ್ದು, 11 ಜನ ವರದಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಮೊಟ್ಟ ಮೊದಲ ಬಾರಿಗೆ 'ಅಂತಾರಾಷ್ಟ್ರೀಯ ಮಟ್ಟದ ಯುವ ಜನೋತ್ಸವ' ಆಯೋಜಿಸಲು ಚಿಂತನೆ ನಡೆಯುತ್ತಿದೆ. ಡಿಸೆಂಬರ್ ಅಥವಾ ಜನವರಿಯಲ್ಲಿ ಯುವಜನೋತ್ಸವ ಆಚರಿಸಲಾಗುವುದು. ರಾಜ್ಯದಲ್ಲಿ 32 ಕಡೆ 36 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ಅಭಿವೃದ್ಧಿ ಮಾಡುತ್ತಿದ್ದೇವೆ. ಈ ಬಾರಿಯ ಬಜೆಟ್‌ನಲ್ಲೂ ಹಲವು ಕಾರ್ಯಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದವರು ಹೇಳಿದ್ದಾರೆ.
ಕಂಠೀರವ ಕ್ರೀಡಾಂಗಣ ಮರು ಅಭಿವೃದ್ಧಿ
ನಮ್ಮ ಸರ್ಕಾರ ಕ್ರೀಡಾ ಚಟುವಟಿಕೆ ಉತ್ತೇಜಿಸಲು ದೊಡ್ಡ ಹೆಜ್ಜೆ ಇರಿಸಿದೆ. ಕಂಠೀರವ ಕ್ರೀಡಾಂಗಣವನ್ನು ಪುನರ್ ಅಭಿವೃದ್ಧಿ ಮಾಡಲಾಗುವುದು. ಅಂತಾರಾಷ್ಟ್ರೀಯ ಮಟ್ಟದ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಜೊತೆಗೆ ಕಾಮನ್‌ವೆಲ್ತ್ ಗೇಮ್ಸ್ ಅಥವಾ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನು ಆಯೋಜಿಸಲು ಬೇಕಾದ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಕ್ಯಾಬಿನೆಟ್‌ನಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಯುವಜನತೆಗೆ ಭಾರತದ ಬಹುತ್ವದ ಸಂಸ್ಕೃತಿ, ಮತ್ತು ಇತಿಹಾಸದ ಸಂದೇಶವನ್ನು ತಲುಪಿಸುವ ಉದ್ದೇಶದಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 3,570 ಕಿ.ಮೀ.ಗಳಷ್ಟು ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದರು. ಅದರ ನೆನಪಿಗಾಗಿ ವಿಶೇಷ ಕಾರ್ಯಕ್ರಮ ಘೋಷಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೆವು. ಅದರಂತೆ ಭಾರತ್ ಜೋಡೋ ಯುವ ಸಂಘವನ್ನು ಆರಂಭಿಸುತ್ತಿದ್ದೇವೆ. ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೇಗದುಕೊಂಡಿದ್ದಾರೆ. ಯುವಕರನ್ನು ಆಯ್ಕೆ ಮಾಡಿ ಭಾರತ್ ಜೋಡೋ ಸಂಘ ಮಾಡಲು ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದು ವಿವರಿಸಿದ್ದಾರೆ.
ಒಂದೊಂದು ಪಂಚಾಯಿತಿಯಲ್ಲಿ 200 ಜನರನ್ನೊಳಗೊಂಡಂತೆ 10 ಸಾವಿರ ಸಂಘಗಳನ್ನು ಮಾಡಿ, ಒಂದು ಸಂಘಕ್ಕೆ ವರ್ಷಕ್ಕೆ 10 ಲಕ್ಷ ರೂ. ನೀಡಲಾಗುವುದು. ಇದರ ಪರಿಶೀಲನೆಗೆ ನೋಡಲ್ ಅಧಿಕಾರಿಯನ್ನು ನೇಮಿಸಲಾಗುತ್ತದೆ. ರಾಷ್ಟ್ರದ ಇತಿಹಾಸ, ಸಂಸ್ಕೃತಿ, ಸಾಹಿತ್ಯ ಸೇರಿದಂತೆ ಇತರೆ ಚಟುವಟಿಕೆಗಳ ಮೂಲಕ ಯುವಕರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಇದನ್ನು ಫ್ಲ್ಯಾಗ್‌ಶಿಪ್ ಪ್ರೋಗ್ರಾಮ್ ರೀತಿಯಲ್ಲಿ ಘೋಷಿಸಲಾಗಿದೆ. ಇದಕ್ಕೆ1,010 ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಎರಡು ವರ್ಷದಿಂದ ಏಕಲವ್ಯ, ಕ್ರೀಡಾ ರತ್ನ, ಕ್ರೀಡಾ ಪೋಷಕ ಮತ್ತು ಜೀವಮಾನ ಸಾಧನೆ ಪ್ರಶಸ್ತಿಗಳನ್ನು ನೀಡಿಲ್ಲ. ಈ ಪ್ರಶಸ್ತಿಗಳನ್ನು ಆಗಸ್ಟ್ 29, ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಅವರ ಜನ್ಮದಿನದಂದು ವಿತರಿಸಲಾಗುವುದು ಎಂದು ಈ ವೇಳೆ ತಿಳಿಸಿದ್ದಾರೆ.

