ಎಸ್‌ಎಲ್‌ಬಿಸಿ ಸಭೆ: 13.52 ಲಕ್ಷ ಕೋಟಿ ರೂ. ವಾರ್ಷಿಕ ಸಾಲ ಯೋಜನೆ ಬಿಡುಗಡೆ
x

ಎಸ್‌ಎಲ್‌ಬಿಸಿ ಸಭೆ: 13.52 ಲಕ್ಷ ಕೋಟಿ ರೂ. ವಾರ್ಷಿಕ ಸಾಲ ಯೋಜನೆ ಬಿಡುಗಡೆ

ಕೃಷಿ ವಲಯಕ್ಕೆ 2,50,548 ಕೋಟಿ ರೂ., ಎಂಎಸ್‌ಎಂಇ ವಲಯಕ್ಕೆ 2,27,208 ಕೋಟಿ ರೂ., ಆದ್ಯತಾ ವಸತಿ ಕ್ಷೇತ್ರಕ್ಕೆ 9,465 ಕೋಟಿ ರೂ. ಮತ್ತು ಶಿಕ್ಷಣಕ್ಕೆ 2,528 ಕೋಟಿ ರೂ. ನಿಗದಿ ಮಾಡಲಾಗಿದೆ.


Click the Play button to hear this message in audio format

ರಾಜ್ಯದ ಆರ್ಥಿಕ ಅಭಿವೃದ್ಧಿಗೆ ವೇಗ ನೀಡುವ ನಿಟ್ಟಿನಲ್ಲಿ, ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ ತನ್ನ 175ನೇ ಸಭೆಯಲ್ಲಿ 2026-27ನೇ ಸಾಲಿಗೆ ಬರೋಬ್ಬರಿ 13,52,987 ಕೋಟಿ ರೂ.ಗಳ ಬೃಹತ್ ರಾಜ್ಯ ವಾರ್ಷಿಕ ಸಾಲ ಯೋಜನೆಯನ್ನು ಬಿಡುಗಡೆ ಮಾಡಿದೆ. ವಿಧಾನಸೌಧದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಸಾಧನೆಗಳನ್ನು ಅವಲೋಕಿಸಲಾಯಿತು ಮತ್ತು ಮುಂದಿನ ವರ್ಷದ ಗುರಿಗಳನ್ನು ನಿಗದಿಪಡಿಸಲಾಯಿತು.

2025-26ನೇ ಸಾಲಿನಲ್ಲಿ ಕಳೆದ ವರ್ಷ ರಾಜ್ಯದ ಬ್ಯಾಂಕುಗಳು ಅತ್ಯುತ್ತಮ ಸಾಧನೆ ಮಾಡಿವೆ. ನಿಗದಿಪಡಿಸಿದ್ದ 11.88 ಲಕ್ಷ ಕೋಟಿ ರೂ.ಗಳ ಗುರಿಯನ್ನು ಮೀರಿ, 12.71 ಲಕ್ಷ ಕೋಟಿ ರೂ.ಗಳ ಸಾಲವನ್ನು ವಿತರಿಸುವ ಮೂಲಕ ಶೇ. 107 ರಷ್ಟು ಪ್ರಗತಿ ಸಾಧಿಸಿವೆ.

ಕೃಷಿ ವಲಯದಲ್ಲಿ ರೈತರಿಗೆ ಸಾಲ ನೀಡುವುದರಲ್ಲಿ ಬ್ಯಾಂಕುಗಳು ಶೇ. 111 ರಷ್ಟು ಗುರಿ ತಲುಪಿವೆ. 2.22 ಲಕ್ಷ ಕೋಟಿ ಗುರಿಯಿದ್ದರೂ, 2.47 ಲಕ್ಷ ಕೋಟಿ ಸಾಲ ನೀಡಲಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆ ವಲಯದಲ್ಲಿ ಶೇ. 106 ರಷ್ಟು ಪ್ರಗತಿಯಾಗಿದ್ದು, ಸುಮಾರು 2 ಲಕ್ಷ ಕೋಟಿ ಸಾಲ ವಿತರಣೆಯಾಗಿದೆ. ಸಣ್ಣ ಉದ್ಯಮಗಳಿಗೆ ಬೆಂಬಲ ನೀಡುವ ಮುದ್ರಾ ಯೋಜನೆಯಲ್ಲಿ ದೇಶದಲ್ಲೇ 6ನೇ ಸ್ಥಾನ ಮತ್ತು ಬೀದಿಬದಿ ವ್ಯಾಪಾರಿಗಳಿಗೆ ನೆರವಾಗುವ 'ಪಿಎಂ ಸ್ವಾನಿಧಿ' ಯೋಜನೆಯಲ್ಲಿ ದೇಶದಲ್ಲೇ 7ನೇ ಸ್ಥಾನವನ್ನು ಕರ್ನಾಟಕ ಕಾಯ್ದುಕೊಂಡಿದೆ. ಆದರೆ, ವಸತಿ ಹಾಗೂ ಶಿಕ್ಷಣ ಸಾಲದ ವಿಚಾರದಲ್ಲಿ ಬ್ಯಾಂಕುಗಳು ಹಿಂದೇಟು ಹಾಕಿವೆ. ವಸತಿ ವಲಯದಲ್ಲಿ ಶೇ. 70 ಮತ್ತು ಶಿಕ್ಷಣ ವಲಯದಲ್ಲಿ ಶೇ. 89 ರಷ್ಟು ಮಾತ್ರ ಪ್ರಗತಿಯಾಗಿದ್ದು, ಈ ಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ.

ಹೊಸ ಸಾಲ ಯೋಜನೆ (2026-27)

ಮುಂದಿನ ಆರ್ಥಿಕ ವರ್ಷಕ್ಕೆ (2026-27) ಬ್ಯಾಂಕುಗಳು 13,52,987 ಕೋಟಿ ರೂ.ಗಳನ್ನು ಸಾಲವಾಗಿ ವಿತರಿಸುವ ಬೃಹತ್ ಗುರಿ ಇಟ್ಟುಕೊಂಡಿವೆ. ಇದರಲ್ಲಿ ಪ್ರಮುಖ ವಲಯಗಳಿಗೆ ಈ ರೀತಿಯಾಗಿ ಅನುದಾನ ಹಂಚಿಕೆಯಾಗಿದೆ. ಕೃಷಿ ವಲಯಕ್ಕೆ 2,50,548 ಕೋಟಿ ರೂ., ಎಂಎಸ್‌ಎಂಇ ವಲಯಕ್ಕೆ 2,27,208 ಕೋಟಿ ರೂ., ಆದ್ಯತಾ ವಸತಿ ಕ್ಷೇತ್ರಕ್ಕೆ 9,465 ಕೋಟಿ ರೂ. ಮತ್ತು ಶಿಕ್ಷಣಕ್ಕೆ 2,528 ಕೋಟಿ ರೂ. ನಿಗದಿ ಮಾಡಲಾಗಿದೆ.

ಮುಖ್ಯ ಕಾರ್ಯದರ್ಶಿಗಳ ಕಟ್ಟುನಿಟ್ಟಿನ ಸೂಚನೆ

ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಬ್ಯಾಂಕರ್‌ಗಳಿಗೆ ಎರಡು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ಬ್ಯಾಂಕಿಂಗ್ ಸೇವೆಗಳು ಮನೆಬಾಗಿಲಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಬ್ಬರು 'ಬಿಸಿ ಸಖಿ'ಯರನ್ನು ನೇಮಕ ಮಾಡಬೇಕು. ದೀರ್ಘಾವಧಿಯಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ ಈ ಸೌಲಭ್ಯವನ್ನು ವಿಸ್ತರಿಸಬೇಕು. ಮನೆ ಇಲ್ಲದವರಿಗೆ ಸೂರಿಲ್ಲದವರಿಗೆ ಆಶ್ರಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಆದ್ದರಿಂದ, ಗೃಹ ಸಾಲದ ಅರ್ಜಿಗಳಿಗೆ ಬ್ಯಾಂಕುಗಳು ಆದ್ಯತೆ ನೀಡಬೇಕು ಮತ್ತು ಸಾಲವನ್ನು ವಿಳಂಬವಿಲ್ಲದೆ ಮಂಜೂರು ಮಾಡಿ ವಿತರಿಸಬೇಕು.

ಆರ್ಥಿಕ ಸ್ಥಿತಿಗತಿಯ ಒಂದು ಅವಲೋಕನ

ರಾಜ್ಯದಲ್ಲಿ ಜನ ಸಾಮಾನ್ಯರು ಬ್ಯಾಂಕಿನಲ್ಲಿ ಇಡುವ ಠೇವಣಿಗಳ ಬೆಳವಣಿಗೆ ದರ ಶೇ. 13.31 ಇದೆ. ಆದರೆ, ಸಾಲ ನೀಡುವ ಪ್ರಮಾಣ ಶೇ. 12.77ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಸ್ವಲ್ಪ ಕಡಿಮೆಯಾಗಿದೆ. ಹಾಗೆಯೇ, ಬ್ಯಾಂಕುಗಳು ತಮ್ಮಲ್ಲಿರುವ ಠೇವಣಿಯಲ್ಲಿ ಎಷ್ಟು ಹಣವನ್ನು ಸಾಲವಾಗಿ ನೀಡುತ್ತವೆ ಎಂಬುದನ್ನು ಸೂಚಿಸುವ ಸಿ.ಡಿ ಅನುಪಾತ ಕಳೆದ ವರ್ಷ ಶೇ.79 ರಷ್ಟು ಇದ್ದದ್ದು, ಈಗ ಶೇ.77 ಕ್ಕೆ ಇಳಿಕೆಯಾಗಿದೆ. ಇದು ಬ್ಯಾಂಕುಗಳು ಸಾಲ ವಿತರಣೆಯನ್ನು ಮತ್ತಷ್ಟು ವೇಗಗೊಳಿಸಬೇಕಾದ ಅಗತ್ಯತೆಯನ್ನು ತೋರಿಸುತ್ತದೆ.

ಈ ಬಾರಿಯ ವಾರ್ಷಿಕ ಸಾಲ ಯೋಜನೆಯು ಕಳೆದ ವರ್ಷದ ಸಾಧನೆಗಿಂತ ಹೆಚ್ಚು ಮಹತ್ವಾಕಾಂಕ್ಷೆಯದ್ದಾಗಿದೆ. ವಿಶೇಷವಾಗಿ ಶಿಕ್ಷಣ ಮತ್ತು ವಸತಿ ವಲಯಗಳಿಗೆ ನಬಾರ್ಡ್ ನಿಗದಿಪಡಿಸಿರುವ ಗುರಿಗಳು ಕಳೆದ ವರ್ಷಕ್ಕಿಂತ ಗಣನೀಯವಾಗಿ ಹೆಚ್ಚಿವೆ. ಒಟ್ಟಾರೆಯಾಗಿ, ಕರ್ನಾಟಕದ ಕೃಷಿ, ಸಣ್ಣ ಕೈಗಾರಿಕೆ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಈ ಸಾಲದ ಮೊತ್ತವು ಆರ್ಥಿಕ ಬಲ ತುಂಬಲಿದ್ದು, ರಾಜ್ಯದ ಅಭಿವೃದ್ಧಿಗೆ ಹೊಸ ಚಾಲನೆ ನೀಡಲಿದೆ.

Read More
Next Story