ಬಹುಮತದ ತೀರ್ಮಾನಕ್ಕೆ ಬೆಲೆ ಕೊಡದ ಚುನಾವಣಾ ಆಯೋಗ; ನೂರ್ ಶ್ರೀಧರ್ ಆಕ್ರೋಶ
ಇಬ್ಬರು ಚುನಾವಣಾ ಆಯುಕ್ತರು ಎಸ್ಐಆರ್ ಪ್ರಕ್ರಿಯೆ ವಿರೋಧಿಸಿ ಪತ್ರ ಬರೆದಿರುವುದು ಹಾಗೂ ಪ್ರಕ್ರಿಯೆ ಅಕ್ರಮ ಎಂದು ಅಭಿಪ್ರಾಯಪಟ್ಟಿರುವುದು ಐತಿಹಾಸಿಕ ಬೆಳವಣಿಗೆ ಎಂದು ಎದ್ದೇಳು ಕರ್ನಾಟಕ ಸಂಘಟನೆ ಸಂಚಾಲಕ ನೂರ್ ಶ್ರೀಧರ್ ಹೇಳಿದ್ದಾರೆ.
ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಎಸ್ಐಆರ್ ಪ್ರಕ್ರಿಯೆ ಹಾಗೂ ಚುನಾವಣಾ ಆಯುಕ್ತರ ಆಕ್ಷೇಪದ ವಿಚಾರಗಳು ಚರ್ಚೆಯ ಮುನ್ನೆಲೆಗೆ ಬಂದಿವೆ. ಈ ಕುರಿತು ‘ಎದ್ದೇಳು ಕರ್ನಾಟಕ’ ಸಂಘಟನೆ ಮತ್ತು ವಿವಿಧ ನಾಗರಿಕ ಸಂಘಟನೆಗಳು ಎಸ್ಐಆರ್ ಪ್ರಕ್ರಿಯೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.
ಇಬ್ಬರು ಚುನಾವಣಾ ಆಯುಕ್ತರು ಎಸ್ಐಆರ್ ಪ್ರಕ್ರಿಯೆ ವಿರೋಧಿಸಿ ಪತ್ರ ಬರೆದಿರುವುದು ಹಾಗೂ ಪ್ರಕ್ರಿಯೆ ಅಕ್ರಮ ಎಂದು ಅಭಿಪ್ರಾಯಪಟ್ಟಿರುವುದು ಐತಿಹಾಸಿಕ ಬೆಳವಣಿಗೆ ಎಂದು ಸಂಘಟನೆಗಳ ಮುಖಂಡರು ಹೇಳಿದ್ದಾರೆ. ಎದ್ದೇಳು ಕರ್ನಾಟಕದ ಸಂಚಾಲಕ ನೂರ್ ಶ್ರೀಧರ್ ಅವರು ದ ಫೆಡರಲ್ ಕರ್ನಾಟಕಕ್ಕೆ ನೀಡಿದ ಸಂದರ್ಶನದಲ್ಲಿ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ನಿರ್ಧಾರಗಳು ಸರ್ವಾಧಿಕಾರ ಧೋರಣೆಯಿಂದ ಕೂಡಿದ್ದು, ಬಹುಮತದ ತೀರ್ಮಾನಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಎಸ್ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಕೇಳುತ್ತಿರುವ ದಾಖಲೆಗಳು ಬಡವರು, ದಲಿತರು, ಆದಿವಾಸಿಗಳು ಮತ್ತು ಅಲೆಮಾರಿಗಳಂತಹ ತಳ ಸಮುದಾಯಗಳನ್ನು ಮತದಾರರ ಪಟ್ಟಿಯಿಂದ ಹೊರ ಹಾಕುವ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಸೂಕ್ಷ್ಮವಾಗಿದ್ದರೂ, ಎಸ್ಐಆರ್ ವಿರೋಧಿಸುವಲ್ಲಿ ಮತ್ತು ಜನರಿಗೆ ಹೆಲ್ಪ್ಲೈನ್ ಒದಗಿಸುವಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಪ್ರಕಾಶ್ ರೈ ನೇತೃತ್ವದಲ್ಲಿ ಕಲಬುರಗಿ, ಯಾದಗಿರಿ, ರಾಯಚೂರು ಸೇರಿದಂತೆ ರಾಜ್ಯಾದ್ಯಂತ ಜನಜಾಗೃತಿ ಅಭಿಯಾನ ನಡೆಯುತ್ತಿದೆ. 100 ಸ್ಯಾಂಪಲ್ ಬೂತ್ಗಳನ್ನು ಆಧರಿಸಿ ಪರ್ಯಾಯ ಸಮೀಕ್ಷೆ ನಡೆಸಲಾಗುತ್ತಿದ್ದು, ಇದರ ವರದಿಯನ್ನು ಸೆ.30 ರಂದು ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ. ಅ.1 ರಂದು ದೆಹಲಿಯಲ್ಲಿ ಅಖಿಲ ಭಾರತ ಮಟ್ಟದ ಪತ್ರಿಕಾಗೋಷ್ಠಿ ನಡೆಸಿ, ರಾಷ್ಟ್ರವ್ಯಾಪಿ ‘ಎಸ್ಐಆರ್ ತಿರಸ್ಕಾರ ಚಳವಳಿ’ಯ ಮುಂದಿನ ಹೋರಾಟದ ರೂಪುರೇಷೆಗಳನ್ನು ಘೋಷಿಸಲಾಗುತ್ತದೆ ಎಂದು ನೂರ್ ಶ್ರೀಧರ್ ತಿಳಿಸಿದ್ದಾರೆ.

