ಎಸ್ಐಆರ್ ಲೋಪ: 99 ಲಕ್ಷ ಹೆಸರು ಡಿಲೀಟ್ ಬೆನ್ನಲ್ಲೇ ಒಬ್ಬನ ಹೆಸರಿನಲ್ಲಿ ನಾಲ್ಕೈದು ವೋಟರ್ ಐಡಿ ಪತ್ತೆ
ಕರ್ನಾಟಕದ ಎಸ್ಐಆರ್ ಪ್ರಕ್ರಿಯೆಯಲ್ಲಿ ಮಹದೇವಪುರದ 397 ಜನರಿಗೆ ಸಂಬಂಧಿಸಿದ 803 ವೋಟರ್ ಐಡಿಗಳು ಪತ್ತೆಯಾಗಿವೆ. 99 ಲಕ್ಷಕ್ಕೂ ಹೆಚ್ಚು ಹೆಸರುಗಳ ತೆರವಿನ ಬೆನ್ನಲ್ಲೇ ದ್ವಿಪ್ರತಿ ನಮೂದುಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಮತದಾರರ ಪಟ್ಟಿಯಲ್ಲಿನ ನಕಲಿ ಮತ್ತು ದ್ವಿಪ್ರತಿ ಹೆಸರುಗಳನ್ನು ತೆಗೆದುಹಾಕುವ ಉದ್ದೇಶದಿಂದ ನಡೆದ ಎಸ್ಐಆರ್ ಪ್ರಕ್ರಿಯೆಯಲ್ಲೇ ಹಲವು ಲೋಪಗಳು ನಡೆದಿರುವುದು ಬೆಳಕಿಗೆ ಬಂದಿದೆ. ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 397 ಜನರಿಗೆ ಸಂಬಂಧಿಸಿದಂತೆ 803 ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದು, ಒಂದೇ ವ್ಯಕ್ತಿಯ ಹೆಸರಿನಲ್ಲಿ ಹಲವು ವೋಟರ್ ಐಡಿಗಳು ಸೃಷ್ಟಿಯಾಗಿರುವ ಪ್ರಕರಣಗಳು ಚರ್ಚೆಗೆ ಕಾರಣವಾಗಿವೆ.
ಒಂದೇ ಎಪಿಕ್ ಸಂಖ್ಯೆಯೊಂದಿಗೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಹೆಸರು ಕಾಣಿಸಿಕೊಂಡ ಕನಿಷ್ಠ ಏಳು ಪ್ರಕರಣಗಳು ಪತ್ತೆಯಾಗಿವೆ. ಮಹದೇವಪುರ ಮತ್ತು ಹೆಬ್ಬಾಳ, ದಾಸರಹಳ್ಳಿ ಹಾಗೂ ಸರ್ವಜ್ಞನಗರ ಕ್ಷೇತ್ರಗಳ ನಡುವೆ ಇಂತಹ ನಮೂದುಗಳು ಕಂಡುಬಂದಿವೆ. ಇದಲ್ಲದೆ, 63 ವರ್ಷದ ಸಂತೋಷ್ ಕುಮಾರ್ ಅವರ ಹೆಸರಿನಲ್ಲಿ ಐದು ವೋಟರ್ ಐಡಿಗಳಿರುವ ಪ್ರಕರಣವೂ ಬೆಳಕಿಗೆ ಬಂದಿದೆ. ಒಂದೇ ಮತಗಟ್ಟೆಯಲ್ಲಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಗುರುತಿನ ಚೀಟಿಗಳಿರುವ 500ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ ಎಂದು ವರದಿ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಒಂದಕ್ಕಿಂತ ಹೆಚ್ಚು ಬಾರಿ ಸಲ್ಲಿಕೆಯಾದ ಫಾರಂ 6 ಅರ್ಜಿಗಳನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಿದ್ದರಿಂದ ಹಲವು ಗುರುತಿನ ಚೀಟಿಗಳು ಸೃಷ್ಟಿಯಾಗಿರುವ ಸಾಧ್ಯತೆಯನ್ನು ವಿವರಿಸಿದೆ. ಹಾಗೆಯೇ, ಕ್ಷೇತ್ರ ಬದಲಾವಣೆಯ ಸಂದರ್ಭದಲ್ಲಿ ಫಾರಂ 8 ಮತ್ತು ಫಾರಂ 7 ಅರ್ಜಿಗಳ ವಿಲೇವಾರಿಯಲ್ಲಿನ ವಿಳಂಬದಿಂದಲೂ ಒಂದೇ ಹೆಸರು ಎರಡು ಕ್ಷೇತ್ರಗಳಲ್ಲಿ ಉಳಿದಿರಬಹುದು ಎಂದು ತಿಳಿಸಿದೆ.
ಇನ್ನೊಂದೆಡೆ, ಎಸ್ಐಆರ್ ಅಂತಿಮ ಪಟ್ಟಿಯಿಂದ 99.3 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ತೆರವುಗೊಳಿಸಿದ ಬಳಿಕವೂ ದ್ವಿಪ್ರತಿ ನಮೂದುಗಳು ಪತ್ತೆಯಾಗಿರುವುದು ಅರ್ಹ ಮತದಾರರ ಹೆಸರುಗಳ ಸುರಕ್ಷತೆ ಮತ್ತು ಪಟ್ಟಿಯ ನಿಖರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಆದರೆ, ಒಂದೇ ವ್ಯಕ್ತಿಗೆ ಹಲವು ವೋಟರ್ ಐಡಿಗಳಿವೆ ಎಂದ ಮಾತ್ರಕ್ಕೆ ಅವರು ಹಲವು ಬಾರಿ ಮತ ಚಲಾಯಿಸಿದ್ದಾರೆ ಎಂದರ್ಥವಲ್ಲ. ಈ ಪ್ರಕರಣಗಳ ಸಂಪೂರ್ಣ ಪರಿಶೀಲನೆ, ರಾಜ್ಯಾದ್ಯಂತ ಇಂತಹ ಲೋಪಗಳ ಪ್ರಮಾಣ ಮತ್ತು ತಿದ್ದುಪಡಿ ಕ್ರಮಗಳ ಕುರಿತು ಚುನಾವಣಾ ಆಯೋಗ ಸ್ಪಷ್ಟ ಮಾಹಿತಿ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.

