
ರಾಜ್ಯದಲ್ಲಿ 1.10 ಕೋಟಿ ಮತದಾರರ ಹೆಸರು ಡಿಲೀಟ್- ಪರಿಶೀಲನೆಗೆ ಆ.8 ಕೊನೆಯ ದಿನ
ಕರ್ನಾಟಕದಲ್ಲಿ SIR 2026 ಪ್ರಕ್ರಿಯೆಯಲ್ಲಿ 1.10 ಕೋಟಿ ಮತದಾರರ ಹೆಸರು ಡಿಲೀಟ್ ಪಟ್ಟಿಗೆ ಸೇರಿದೆ. ಬೆಂಗಳೂರಿನಲ್ಲಿ 49.34 ಲಕ್ಷ ಹೆಸರುಗಳು ರದ್ದಾಗುವ ಸಾಧ್ಯತೆ. ಆಗಸ್ಟ್ 8ರೊಳಗೆ BLO ಸಂಪರ್ಕಿಸಿ ಹೆಸರು ಪರಿಶೀಲಿಸಿ.
ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision - SIR) ಪ್ರಕ್ರಿಯೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈವರೆಗೆ ರಾಜ್ಯದ ಹಾಲಿ ಮತದಾರರ ಪಟ್ಟಿಯಿಂದ ಸುಮಾರು 1.10 ಕೋಟಿ (ಶೇ.20.02) ಮತದಾರರ ಹೆಸರುಗಳನ್ನು ರದ್ದುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ರಾಜಧಾನಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲೇ 49.34 ಲಕ್ಷ (ಶೇ.47.75) ಮತದಾರರ ಹೆಸರುಗಳು ಡಿಲೀಟ್ ಪಟ್ಟಿಗೆ ಸೇರಿವೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದು, ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಉಳಿದಿದೆಯೇ ಎಂಬುದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
1.10 ಕೋಟಿ ಹೆಸರುಗಳು ಏಕೆ ರದ್ದಾಗುತ್ತಿವೆ?
ಅಳಿಸಲು ಗುರುತಿಸಲಾದ ಮತದಾರರನ್ನು ವಿವಿಧ ವರ್ಗಗಳಾಗಿ ವಿಂಗಡಿಸಲಾಗಿದೆ.
• ಪತ್ತೆಯಾಗದವರು / ಗೈರು (A) – 16.27 ಲಕ್ಷ
• ಶಾಶ್ವತವಾಗಿ ಸ್ಥಳಾಂತರಗೊಂಡವರು (S) – 66.62 ಲಕ್ಷ
• ಮೃತರು (D2) – 16.31 ಲಕ್ಷ
• ಬೇರೆ ಕ್ಷೇತ್ರದಲ್ಲಿ ನೋಂದಣಿ ಮಾಡಿಕೊಂಡವರು (D) – 6.90 ಲಕ್ಷ
• ಇತರೆ ಕಾರಣಗಳು (O) – 4.85 ಲಕ್ಷ
ಈ ಎಲ್ಲ ವರ್ಗಗಳ ಮತದಾರರ ಹೆಸರುಗಳನ್ನು ಹಾಲಿ ಮತದಾರರ ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆ ನಡೆಯುತ್ತಿದೆ.
ಆಗಸ್ಟ್ 8 ಕೊನೆಯ ದಿನ
ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸಲು ಆಗಸ್ಟ್ 8 ಕೊನೆಯ ದಿನವಾಗಿದೆ. ಅರ್ಹರಾಗಿದ್ದರೂ ತಪ್ಪಾಗಿ ಡಿಲೀಟ್ ಪಟ್ಟಿಗೆ ಸೇರಿದ್ದರೆ, ಆಗಸ್ಟ್ 8ರ ಸಂಜೆ ಒಳಗೆ ಸಂಬಂಧಿತ ಬೂತ್ ಮಟ್ಟದ ಅಧಿಕಾರಿ (BLO) ಅವರನ್ನು ಸಂಪರ್ಕಿಸಿ ಮಾಹಿತಿ ಸರಿಪಡಿಸಿಕೊಳ್ಳಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ. ಸರಿಪಡಿಸಿದ ಹೆಸರುಗಳು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾಗಲಿವೆ.
5.54 ಕೋಟಿ ಮತದಾರರಿಗೆ ಗಣತಿ ನಮೂನೆ ವಿತರಣೆ
2026ರ ಜೂನ್ 16ರ ವೇಳೆಗೆ ರಾಜ್ಯದಲ್ಲಿ 5.54 ಕೋಟಿ ಮತದಾರರು ನೋಂದಣಿಯಾಗಿದ್ದರು. ಕಳೆದ 37 ದಿನಗಳಿಂದ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಎಲ್ಲಾ ಮತದಾರರಿಗೆ 5.54 ಕೋಟಿ ಗಣತಿ ನಮೂನೆಗಳು ವಿತರಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಸ್ಥಳಾಂತರಗೊಂಡಿದ್ದರೆ ಏನು ಮಾಡಬೇಕು?
ಶಾಶ್ವತವಾಗಿ ಬೇರೆ ಪ್ರದೇಶಕ್ಕೆ ಸ್ಥಳಾಂತರಗೊಂಡಿರುವ ಮತದಾರರು ಆಗಸ್ಟ್ 8ರ ಬಳಿಕ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಫಾರ್ಮ್-6 ಭರ್ತಿ ಮಾಡಿ ಸಲ್ಲಿಸಬಹುದು. ನಿಗದಿಪಡಿಸಿರುವ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದ ಬಳಿಕ, ಬಿಎಲ್‌ಒ ಹಾಗೂ ಚುನಾವಣಾ ನೋಂದಣಿ ಅಧಿಕಾರಿ (ERO) ಪರಿಶೀಲನೆ ನಡೆಸಿ ಮತದಾರರ ಪಟ್ಟಿಗೆ ಹೆಸರು ಸೇರಿಸಲಿದ್ದಾರೆ.
2002ರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ?
2002ರ ಎಸ್‌ಐಆರ್ ಪಟ್ಟಿಯಲ್ಲಿ ತಮ್ಮ ಅಥವಾ ಪೋಷಕರ ಹೆಸರು ಇಲ್ಲ ಎಂಬ ಕಾರಣಕ್ಕೆ ಗಣತಿ ನಮೂನೆ ಭರ್ತಿ ಮಾಡದೇ ಬಿಡಬಾರದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಅರ್ಜಿಯಲ್ಲಿ ಸಹಿ ಮಾಡಿ ಬಿಎಲ್‌ಒಗೆ ಸಲ್ಲಿಸಿದರೆ, ಅವರು ಅದನ್ನು ಡಿಜಿಟಲೀಕರಣಗೊಳಿಸುತ್ತಾರೆ. ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಬಳಿಕ ಅಗತ್ಯ ದಾಖಲೆ ಸಲ್ಲಿಸುವಂತೆ ಆಯೋಗ ನೋಟಿಸ್ ನೀಡುತ್ತದೆ. ದಾಖಲೆಗಳನ್ನು ಸಲ್ಲಿಸಿದ ನಂತರ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಲಿದೆ.
ಸ್ಥಳ ಮಹಜರು ಕಡ್ಡಾಯ
ಯಾವುದೇ ಮತದಾರರನ್ನು ಎಎಸ್‌ಡಿಡಿಒ (ASDDO) ವರ್ಗಕ್ಕೆ ಸೇರಿಸುವ ಮುನ್ನ ಬಿಎಲ್‌ಒಗಳು ಸ್ಥಳ ಮಹಜರು ನಡೆಸುವುದು ಕಡ್ಡಾಯವಾಗಿದೆ. ಒಂದು ವೇಳೆ ಜೀವಂತ ವ್ಯಕ್ತಿಯನ್ನು ತಪ್ಪಾಗಿ 'ಮೃತ' ಎಂದು ಗುರುತಿಸಿದ್ದರೆ ಅಥವಾ ಬೇರೆ ಯಾವುದೇ ತಪ್ಪು ವರ್ಗೀಕರಣವಾಗಿದ್ದರೆ, ತಕ್ಷಣ ಸಂಬಂಧಿತ ಬಿಎಲ್‌ಒ ಅವರನ್ನು ಸಂಪರ್ಕಿಸಿ ಮಾಹಿತಿ ಸರಿಪಡಿಸಿಕೊಳ್ಳುವಂತೆ ಚುನಾವಣಾ ಆಯೋಗ ಸೂಚಿಸಿದೆ.

