ರಾಜ್ಯದಲ್ಲಿ ಬಿಸಿಲಿನ ಅಬ್ಬರ: 45 ಡಿಗ್ರಿ ದಾಟಿದ ತಾಪಮಾನ, ನೀರಿಗೆ ಹಾಹಾಕಾರ, ಬೇಗೆಗೆ ಬೆಂದ ಉತ್ತರ ಕರ್ನಾಟಕ!
x
ಸಾಂದರ್ಭಿಕ ಚಿತ್ರ (ಕೃಪೆ- ಫ್ರೀಪಿಕ್​)

ರಾಜ್ಯದಲ್ಲಿ ಬಿಸಿಲಿನ ಅಬ್ಬರ: 45 ಡಿಗ್ರಿ ದಾಟಿದ ತಾಪಮಾನ, ನೀರಿಗೆ ಹಾಹಾಕಾರ, ಬೇಗೆಗೆ ಬೆಂದ ಉತ್ತರ ಕರ್ನಾಟಕ!

ಹವಾಮಾನ ಇಲಾಖೆ, ಏಕಕಾಲದಲ್ಲಿ ರಾಜ್ಯದ 8 ಜಿಲ್ಲೆಗಳಿಗೆ ಸತತ 4 ದಿನಗಳ ಕಾಲ 'ಹೀಟ್​ವೇವ್ ಅಲರ್ಟ್' ಘೋಷಿಸಿದೆ. ಆದಾಗ್ಯೂ, ಕರಾವಳಿಯಲ್ಲಿ ಬಿಸಿಲಿನ ಜೊತೆಗೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.


Click the Play button to hear this message in audio format

ಕರ್ನಾಟಕದಲ್ಲಿ ಈ ವರ್ಷ ವರುಣನ ಮುನಿಸಿನ ಜೊತೆಗೆ ಸೂರ್ಯನ ಪ್ರಖರತೆ ಮಿತಿಮೀರಿದೆ. ಹಲವು ವರ್ಷಗಳ ಬಳಿಕ ರಾಜ್ಯವು ಅತ್ಯಂತ ತೀವ್ರ ಸ್ವರೂಪದ ಶಾಖದ ಅಲೆಗೆ (ಹೀಟ್​​ವೇವ್​ಗೆ) ತತ್ತರಿಸಿ ಹೋಗಿದೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ತಾಪಮಾನ 44°C ಗಡಿ ದಾಟಿದ್ದು, ಅಕ್ಷರಶಃ ಜನಜೀವನ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸತತ ಎಚ್ಚರಿಕೆಗಳ ನಡುವೆಯೂ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ-ಅಂಶಗಳು ನಿಜಕ್ಕೂ ಬೆಚ್ಚಿಬೀಳಿಸುವಂತಿವೆ. ಪ್ರಸ್ತುತ ಬೀದರ್​ನಲ್ಲಿ ರಾಜ್ಯದಲ್ಲೇ ಅತ್ಯಧಿಕ ಅಂದರೆ 44.6 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ. ಬಿಸಿಲ ಝಳಕ್ಕೆ ಹೆದರಿ ಜನ ಹಗಲಿನಲ್ಲಿ ಮನೆ ಬಿಟ್ಟು ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ರಾಯಚೂರಿನಲ್ಲಿ 44.2 ಡಿಗ್ರಿ ಸೆಲ್ಸಿಯಸ್​, ಕಲಬುರಗಿಯಲ್ಲಿ 42 ಡಿಗ್ರಿ ಸೆಲ್ಸಿಯಸ್ಸ್​ನಿಂದ 45 ಡಿಗ್ರಿ ಸೆಲ್ಸಿಯಸ್​ ಹಾಗೂ ವಿಜಯಪುರ, ಬಳ್ಳಾರಿ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ ನಿರಂತರವಾಗಿ 40° ಡಿಗ್ರಿಗಿಂತ ಅಧಿಕ ತಾಪಮಾನ ದಾಖಲಾಗುತ್ತಿದೆ. ಕಲಬುರಗಿ ಜಿಲ್ಲೆಯ ಫರಹತಾಬಾದ್ ಹೋಬಳಿಯಲ್ಲಿ ಏಪ್ರಿಲ್ 16ರಂದು ದಾಖಲಾದ 45.3°C ಈ ಬೇಸಿಗೆ ಸೀಸನ್​ನಲ್ಲಿ ರಾಜ್ಯದ ಅತ್ಯಧಿಕ ತಾಪಮಾನ ಎಂಬ ಹೆಗ್ಗಳಿಕೆ ಪಡೆದಿದೆ.

ಭಾರತೀಯ ಹವಾಮಾನ ಇಲಾಖೆ, ಏಕಕಾಲದಲ್ಲಿ ರಾಜ್ಯದ 8 ಜಿಲ್ಲೆಗಳಿಗೆ ಸತತ 4 ದಿನಗಳ ಕಾಲ 'ಹೀಟ್​ವೇವ್ ಅಲರ್ಟ್' ಘೋಷಿಸಿದೆ. ಆದಾಗ್ಯೂ, ಕರಾವಳಿಯಲ್ಲಿ ಬಿಸಿಲಿನ ಜೊತೆಗೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.

ಬೆಂಗಳೂರಿಗೆ ಶಾಖ ದ್ವೀಪ'ದ ಎಫೆಕ್ಟ್

ಸದಾ ತಂಪಾದ ಹವಾಮಾನಕ್ಕೆ ಹೆಸರಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಈ ಬಾರಿ ಕುದಿಯುತ್ತಿದೆ. ನಗರದಲ್ಲಿ ತಾಪಮಾನ 35 ಡಿಗ್ರಿ ಸೆಲ್ಸಿಯಸ್​ನಿಂದ 38 ಡಿಗ್ರಿ ಸೆಲ್ಸಿಯಸ್​ ಗಡಿ ತಲುಪಿದ್ದು, ಇದು ವಾಡಿಕೆಗಿಂತ 4-5 ಡಿಗ್ರಿ ಸೆಲ್ಸಿಯಸ್​​ನಷ್ಟು ಹೆಚ್ಚಾಗಿದೆ. ಅವೈಜ್ಞಾನಿಕ ನಗರೀಕರಣ ಹಾಗೂ ಮರಗಳ ಮಾರಣಹೋಮದಿಂದಾಗಿ ನಗರದಲ್ಲಿ ಉಷ್ಣಾಂಶ ವರ್ಷದಿಂದ ವರ್ಷಕ್ಕೆ ಏರುತ್ತಿದೆ ಎಂದು ಹೇಳಲಾಗಿದೆ. ಜತೆಗೆ ನಗರದ ಹಲವೆಡೆ ಅನಧಿಕೃತ ಲೋಡ್ ಶೆಡ್ಡಿಂಗ್ ಶುರುವಾಗಿದ್ದು, ಸೆಕೆಗೆ ಫ್ಯಾನ್, ಎಸಿ ಬಳಸಲಾಗದೆ ಹಿರಿಯ ನಾಗರಿಕರು, ಕಾರ್ಮಿಕರು ಪರದಾಡುತ್ತಿದ್ದಾರೆ.

ಕಳೆದ ಐದು ವರ್ಷಗಳ ಹೋಲಿಕೆ ಇಲ್ಲಿದೆ

ಕಳೆದ ಐದು ವರ್ಷಗಳ (2022-2026) ಅಂಕಿಅಂಶ ಗಮನಿಸಿದರೆ ಕರ್ನಾಟಕದಲ್ಲಿ ಈ ವರ್ಷದ ಬೇಸಿಗೆ ಅತ್ಯಂತ ಭೀಕರವಾಗಿದೆ. 2022, 2023 ಮತ್ತು 2025ರಲ್ಲಿ ರಾಜ್ಯದ ಗರಿಷ್ಠ ತಾಪಮಾನ 41°C ಯಿಂದ 42°C ಆಸುಪಾಸಿನಲ್ಲಿದ್ದರೆ, 2024ರಲ್ಲಿ ಕಲಬುರಗಿಯಲ್ಲಿ ಗರಿಷ್ಠ 43°C ದಾಖಲಾಗಿತ್ತು. ಆದರೆ 2026ರಲ್ಲಿ ಕಲಬುರಗಿಯ ಫರಹತಾಬಾದ್​ನಲ್ಲಿ ಏಪ್ರಿಲ್ ತಿಂಗಳಲ್ಲೇ ದಾಖಲೆಯ 45.3°C ಉಷ್ಣಾಂಶ ವರದಿಯಾಗಿದ್ದು, ಬೀದರ್ ಮತ್ತು ರಾಯಚೂರಿನಲ್ಲಿ 44°C ದಾಟಿ ಹಲವು ವರ್ಷಗಳ ಬಳಿಕ ರಾಜ್ಯ ಅತ್ಯಂತ ತೀವ್ರ ಸ್ವರೂಪದ ಹೀಟ್​ವೇವ್​ಗೆ ತತ್ತರಿಸಿದೆ.

2026ರ ಹೀಟ್​ವೇವ್ ಪರಿಸ್ಥಿತಿಯು ಹಿಂದಿನ ವರ್ಷಗಳಿಗಿಂತ ಬಹಳ ಭಿನ್ನವಾಗಿದೆ; ಏಕೆಂದರೆ ಈ ಬಾರಿ ಫೆಬ್ರವರಿಯಿಂದಲೇ ಅಸಹಜ ಬಿಸಿಲು ಆರಂಭವಾಗಿ ವಾಡಿಕೆಗಿಂತ 4°C ಯಿಂದ 5°C ಹೆಚ್ಚು ತಾಪಮಾನ ದಾಖಲಾಗುತ್ತಿದೆ. ಬೆಂಗಳೂರಿನಲ್ಲೂ ತಾಪಮಾನ 38°C ಗಡಿ (2026ರ ಏಪ್ರಿಲ್​ 18ರಂದು) ತಲುಪಿದ್ದು, 2016ರ (39°C) ಸಾರ್ವಕಾಲಿಕ ದಾಖಲೆಯ ಬಳಿಕ ಅತ್ಯಂತ ಬಿಸಿಯಾದ ಏಪ್ರಿಲ್ ಇದಾಗಿದೆ.

ಮೂಕಪ್ರಾಣಿಗಳಿಗೂ ತಟ್ಟಿದ ಬಿಸಿಲ ಬೇಗೆ

ಬಿಸಿಲಿನ ತೀವ್ರತೆ ಕೇವಲ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳ ಜೀವವನ್ನೂ ಬಲಿ ಪಡೆಯುತ್ತಿದೆ. ತುಮಕೂರಿನಲ್ಲಿ ಬರೋಬ್ಬರಿ 35ಕ್ಕೂ ಹೆಚ್ಚು ನವಿಲುಗಳು ತೀವ್ರ ಶಾಖ ಮತ್ತು ನಿರ್ಜಲೀಕರಣದಿಂದ ಸತ್ತಿರುವುದು ವರದಿಯಾಗಿದೆ.

ಅದೇ ರೀತಿ ಇಬ್ಬರು ಮೃತಪಟ್ಟಿರುವುದಾಗಿಯೂ ಹೇಳಲಾಗಿದೆ. ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನಲ್ಲಿ 20 ವರ್ಷದ ಯುವಕ ಮಾರುಕಟ್ಟೆಗೆ ಹೋಗುವ ವೇಳೆ ಬಿಸಿಲಿನ ಝಳಕ್ಕೆ ಕುಸಿದು ಏಪ್ರಿಲ್ 20ರಂದು ಮೃತಪಟ್ಟ. ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರಿ ನೌಕರನೊಬ್ಬ ಏಪ್ರಿಲ್ 21ರಂದು ಬಿಸಿಲ ಝಳಕ್ಕೆ ಸಿಲುಕಿ ಕುಸಿದು ಮೃತಪಟ್ಟಿದ್ದಾರೆ. ಇವರಿಬ್ಬರು ಬಿಸಿಲಿನ ಆಘಾತಕ್ಕೆ ಮೃತಪಟ್ಟ ಹೊರತಾಗಿಯೂ ಆರೋಗ್ಯ ಇಲಾಖೆ, ಅವರಲ್ಲಿ ಒಬ್ಬರು ಮದ್ಯಪಾನ ಮಾಡಿದ್ದರು ಎಂದು ಹೇಳಿದೆ.

ಶಂಕಿತ ಹೀಟ್​ಸ್ಟ್ರೋಕ್ ಸಾವುಗಳ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ಏಪ್ರಿಲ್ 25ರಂದು ವಿಶೇಷ ಸುತ್ತೋಲೆ ಹೊರಡಿಸಿ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಹೀಟ್​ಸ್ಟ್ರೋಕ್ ವಾರ್ಡ್ ಕಡ್ಡಾಯ ಮಾಡಿದೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 2, ತಾಲೂಕು ಆಸ್ಪತ್ರೆಗಳಲ್ಲಿ 5 ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ 10 ಬೆಡ್​ಗಳನ್ನು ಮೀಸಲಿಡಲು ತಿಳಿಸಿದ್ದು, ಈ ವಾರ್ಡ್​ಗಳಲ್ಲಿ ಫ್ಯಾನ್, ಏರ್ ಕೂಲರ್, ಐಸ್ ಕ್ಯೂಬ್, ಥರ್ಮಾಮೀಟರ್ ಮತ್ತು ಓಆರ್​ಎಸ್ (ORS) ಕಾರ್ನರ್ ಕಡ್ಡಾಯವಾಗಿ ಇರಬೇಕೆಂದು ಸೂಚಿಸಲಾಗಿದ್ದು, ಈ ವ್ಯವಸ್ಥೆ ಮಾರ್ಚ್ 1ರಿಂದ ಜುಲೈ 31ರವರೆಗೆ ಜಾರಿಯಲ್ಲಿರಲಿದೆ.

ಶುರುವಾಯ್ತು ಜಲಕಂಟಕ: ಸಿಎಂ ಅಲರ್ಟ್

ಭೀಕರ ಬಿಸಿಲಿನಿಂದಾಗಿ ರಾಜ್ಯದ ಅಣೆಕಟ್ಟುಗಳು, ಕೆರೆ-ಕಟ್ಟೆಗಳು ಹಾಗೂ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ. ಕರಾವಳಿಯ ದಕ್ಷಿಣ ಕನ್ನಡದ (ಪುತ್ತೂರು, ಸುಳ್ಯ) ಸಾಂಪ್ರದಾಯಿಕ ಬಾವಿಗಳೂ ಬತ್ತಿ ಹೋಗುತ್ತಿವೆ. ಮುಂದಿನ ಎರಡು ತಿಂಗಳು ರಾಜ್ಯವು ತೀವ್ರ ಕುಡಿಯುವ ನೀರಿನ ಬಿಕ್ಕಟ್ಟು ಎದುರಿಸಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಸಿದ್ದಾರೆ.

ಸರ್ಕಾರದ ದಿಟ್ಟ ಹೆಜ್ಜೆ: ಕುಡಿಯುವ ನೀರಿನ ಹಾಹಾಕಾರ ತಪ್ಪಿಸಲು ಸಿಎಂ ಸಿದ್ದರಾಮಯ್ಯ ತುರ್ತು ಸಭೆ ನಡೆಸಿದ್ದು, ಪ್ರತಿ ಜಿಲ್ಲೆಯಲ್ಲಿ ಶಾಸಕರ ನೇತೃತ್ವದಲ್ಲಿ 'ವಿಶೇಷ ಟಾಸ್ಕ್ ಫೋರ್ಸ್' ರಚಿಸಲು ಸೂಚಿಸಿದ್ದಾರೆ. ಅಗತ್ಯ ಬಿದ್ದರೆ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ಜನರಿಗೆ ನೀರು ಒದಗಿಸಲು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಆರೋಗ್ಯ ಇಲಾಖೆ ಮಾರ್ಗಸೂಚಿ

ಹೀಟ್​ವೇವ್​ನಿಂದ ರಕ್ಷಣೆ ಪಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಶೇಷ SOP (ಮಾರ್ಗಸೂಚಿ) ಪ್ರಕಟಿಸಿದ್ದು, ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ವಿಶೇಷ ಉಷ್ಣಾಘಾತ ಚಿಕಿತ್ಸಾ ವಿಭಾಗಗಳನ್ನು ತೆರೆಯಲಾಗಿದೆ. ಚಾಮರಾಜನಗರದಲ್ಲಿ ವಿಶೇಷ ಅಲರ್ಟ್ ಘೋಷಿಸಲಾಗಿದೆ.

Read More
Next Story