1 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ರಾಜ್ಯದ ದಾಪುಗಾಲು – ಸಚಿವ ಎಂ.ಬಿ. ಪಾಟೀಲ್
x

1 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ರಾಜ್ಯದ ದಾಪುಗಾಲು – ಸಚಿವ ಎಂ.ಬಿ. ಪಾಟೀಲ್

ಕಳೆದ ಆರ್ಥಿಕ ವರ್ಷದಲ್ಲಿ 1.08 ಲಕ್ಷ ಕೋಟಿ ರೂ.ಗಿಂತ ಅಧಿಕ ವಿದೇಶಿ ನೇರ ಬಂಡವಾಳ ಸೆಳೆಯುವ ಮೂಲಕ ದೇಶದಲ್ಲೇ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.


Click the Play button to hear this message in audio format

ಕರ್ನಾಟಕವು ಕೈಗಾರಿಕಾ ಅಭಿವೃದ್ಧಿ ಹಾಗೂ ವಿದೇಶಿ ಹೂಡಿಕೆ ಆಕರ್ಷಣೆಯಲ್ಲಿ ದೇಶದಲ್ಲೇ ಮುಂಚೂಣಿ ರಾಜ್ಯವಾಗಿ ಮುಂದುವರಿದಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 12,939 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 1.08 ಲಕ್ಷ ಕೋಟಿ ರೂ.ಗಿಂತ ಅಧಿಕ) ವಿದೇಶಿ ನೇರ ಬಂಡವಾಳವನ್ನು ಸೆಳೆಯುವ ಮೂಲಕ ದೇಶದಲ್ಲೇ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಕೇಂದ್ರ ಸರ್ಕಾರವು ವಿಶ್ವದ ‌38 ಪ್ರಮುಖ ರಾಷ್ಟ್ರಗಳೊಂದಿಗೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದಗಳ ಅಪಾರ ಪ್ರಯೋಜನಗಳನ್ನು ಸಮರ್ಥವಾಗಿ ಬಳಸಿಕೊಂಡು ರಾಜ್ಯವನ್ನು ಒಂದು ಟ್ರಿಲಿಯನ್ ಡಾಲರ್ ಮೌಲ್ಯದ ಬೃಹತ್ ಆರ್ಥಿಕತೆಯನ್ನಾಗಿ ರೂಪಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರದ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ, ರಾಜ್ಯದ ವಿಶ್ವೇಶ್ವರಯ್ಯ ರಫ್ತು ಉತ್ತೇಜನ ಸಂಸ್ಥೆ ಹಾಗೂ ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟ ಜಂಟಿಯಾಗಿ ನಗರದಲ್ಲಿ ಆಯೋಜಿಸಿದ್ದ ಮುಕ್ತ ವ್ಯಾಪಾರ ಒಪ್ಪಂದಗಳ ಪ್ರಯೋಜನಗಳು ಮತ್ತು ರಫ್ತು ವಿಸ್ತರಣೆ ಕುರಿತ ರಾಜ್ಯ ಮಟ್ಟದ ಮಹತ್ವದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರವು ಜಾಗತಿಕ ಮಟ್ಟದಲ್ಲಿ ಭಾರತದ ವ್ಯಾಪಾರ ವಹಿವಾಟು ವಿಸ್ತರಿಸಲು ಹಲವು ಮುಂದುವರಿದ ಮತ್ತು ಪ್ರಮುಖ ಮಾರುಕಟ್ಟೆಗಳೊಂದಿಗೆ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಭಾರತವು ಸಂಯುಕ್ತ ಅರಬ್ ಸಂಸ್ಥಾನ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ಓಮಾನ್, ಯೂರೋಪಿಯನ್ ಒಕ್ಕೂಟ, ನ್ಯೂಜಿಲೆಂಡ್ ಸೇರಿದಂತೆ ವಿಶ್ವದ ಅತ್ಯಂತ ಪ್ರಭಾವಿ 38 ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಯಶಸ್ವಿಯಾಗಿ ಮಾಡಿಕೊಂಡಿದೆ. ಅಷ್ಟೇ ಅಲ್ಲದೆ, ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿರುವ ಅಮೆರಿಕದೊಂದಿಗೂ ಇಂತಹ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದವು ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರುವ ಭರವಸೆ ಇದೆ. ಈ ಒಪ್ಪಂದಗಳು ಜಾರಿಯಾಗುವುದರಿಂದ ಶೂನ್ಯ ಅಥವಾ ಅತ್ಯಂತ ಕಡಿಮೆ ಸುಂಕದೊಂದಿಗೆ ಭಾರತೀಯ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲು ಸಾಧ್ಯವಾಗಲಿದ್ದು, ಕರ್ನಾಟಕದ ಜಿಡಿಪಿ (ರಾಜ್ಯದ ಒಟ್ಟು ಆಂತರಿಕ ಉತ್ಪನ್ನ) ವಿಸ್ತರಣೆಗೆ ಇದು ಬೃಹತ್ ಶಕ್ತಿಯಾಗಿ ಪರಿಣಮಿಸಲಿದೆ ಎಂದರು.

ರಾಜ್ಯದ ರಫ್ತು ವಲಯಕ್ಕೆ ಸಿಕ್ಕಿರುವ ಸುವರ್ಣಾವಕಾಶಗಳು

ಮುಕ್ತ ವ್ಯಾಪಾರ ಒಪ್ಪಂದಗಳು ರಾಜ್ಯದ ಸಾಂಪ್ರದಾಯಿಕ ಹಾಗೂ ಆಧುನಿಕ ಕೈಗಾರಿಕಾ ವಲಯಗಳೆರಡಕ್ಕೂ ಸಮಾನ ಅವಕಾಶಗಳನ್ನು ಸೃಷ್ಟಿಸಿವೆ. ಈ ಒಪ್ಪಂದಗಳಿಂದ ರಾಜ್ಯದ ಪ್ರಮುಖ ವಲಯಗಳ ರಫ್ತಿಗೆ ಭಾರಿ ಬೇಡಿಕೆ ಸೃಷ್ಟಿಯಾಗಲಿದೆ. ಮೊಬೈಲ್ ಘಟಕಗಳು, ಗೃಹಬಳಕೆಯ ಎಲೆಕ್ಟ್ರಾನಿಕ್ಸ್ ಹಾಗೂ ಆಧುನಿಕ ಎಲೆಕ್ಟ್ರಿಕಲ್ ಉಪಕರಣಗಳ ಜಾಗತಿಕ ಪೂರೈಕೆ. ಕರ್ನಾಟಕದ ವಿಶಿಷ್ಟ ಸಾವಯವ ಉತ್ಪನ್ನಗಳು, ಸಿರಿಧಾನ್ಯಗಳು, ತೋಟಗಾರಿಕಾ ಬೆಳೆಗಳು ಹಾಗೂ ಸಂಸ್ಕರಿಸಿದ ಆಹಾರ ಉತ್ಪನ್ನಗಳಿಗೆ ಅರಬ್ ಮತ್ತು ಯುರೋಪ್ ಮಾರುಕಟ್ಟೆಯಲ್ಲಿ ಅಗ್ರ ಆದ್ಯತೆ. ರಾಜ್ಯದ ಬೆಂಗಳೂರು, ಬಳ್ಳಾರಿ ಮುಂತಾದ ಪ್ರಮುಖ ಜವಳಿ ಕೇಂದ್ರಗಳಿಂದ ಯುಕೆ, ಯುರೋಪ್ ಹಾಗೂ ಆಸ್ಟ್ರೇಲಿಯಾಗಳಿಗೆ ಸುಂಕ ಮುಕ್ತ ಉಡುಪುಗಳ ರಫ್ತು. ಕರಾವಳಿ ಭಾಗದ ಮೀನುಗಾರಿಕೆ ಹಾಗೂ ಸಂಸ್ಕರಿತ ಸಮುದ್ರ ಆಹಾರ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಬೇಡಿಕೆಯಾಗಿದೆ. ನಿಖರ ಎಂಜಿನಿಯರಿಂಗ್, ವಾಹನ ಬಿಡಿಭಾಗಗಳು ಮತ್ತು ಕೈಗಾರಿಕಾ ಯಂತ್ರೋಪಕರಣಗಳು, ಔಷಧ ಸೂತ್ರೀಕರಣಗಳು, ಜೈವಿಕ ಔಷಧಗಳು, ಆಯುರ್ವೇದ ಮತ್ತು ನೈಸರ್ಗಿಕ ಸೌಂದರ್ಯವರ್ಧಕ ಉತ್ಪನ್ನಗಳ ರಫ್ತು ಆಗಲಿದೆ.

ಬಂಡವಾಳ ಆಕರ್ಷಣೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನ

ಕಳೆದ ಹಣಕಾಸು ಸಾಲಿನಲ್ಲಿ ರಾಜ್ಯಕ್ಕೆ ಹರಿದು ಬಂದಿರುವ 12,939 ಮಿಲಿಯನ್ ಡಾಲರ್ ಎಫ್‌ಡಿಐ ಕುರಿತು ಹರ್ಷ ವ್ಯಕ್ತಪಡಿಸಿದ ಎಂ.ಬಿ. ಪಾಟೀಲರು, ಇದು ರಾಜ್ಯದ ಹೂಡಿಕೆ ಸ್ನೇಹಿ ವಾತಾವರಣ, ಸುಸ್ಥಿರ ಆಡಳಿತ ಮತ್ತು ನುರಿತ ಮಾನವ ಸಂಪನ್ಮೂಲಕ್ಕೆ ಜಾಗತಿಕ ಹೂಡಿಕೆದಾರರು ನೀಡಿರುವ ಸರ್ಟಿಫಿಕೇಟ್ ಆಗಿದೆ ಎಂದರು. "ದೇಶದ ಒಟ್ಟು ಸರಕುಗಳ ರಫ್ತಿನಲ್ಲಿ ಕರ್ನಾಟಕವು ಪ್ರಸ್ತುತ ೪ನೇ ಸ್ಥಾನದಲ್ಲಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇವಲ ಕಾಗದದ ಮೇಲಿನ ಹೂಡಿಕೆ ಒಡಂಬಡಿಕೆಗಳಿಗೆ ಸೀಮಿತವಾಗದೆ, ಅವುಗಳನ್ನು ನೈಜವಾಗಿ ನೆಲಮಟ್ಟದಲ್ಲಿ ಜಾರಿಗೆ ತರಲು ಪ್ರಾಮಾಣಿಕ ಶ್ರಮ ವಹಿಸುತ್ತಿದೆ. ಹೂಡಿಕೆದಾರರಿಗೆ ತ್ವರಿತವಾಗಿ ಭೂಮಿ ಹಂಚಿಕೆ, ಏಕಗವಾಕ್ಷಿ ಅನುಮೋದನೆ, ವಿದ್ಯುತ್ ಹಾಗೂ ರಿಯಾಯಿತಿಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಸಾಫ್ಟ್‌ವೇರ್‌ನಲ್ಲಿ ನಂ. 1, ಈಗ ಹಾರ್ಡ್‌ವೇರ್ ಕ್ರಾಂತಿ

ದೇಶದ ಜ್ಞಾನ ರಾಜಧಾನಿಯಾಗಿರುವ ಕರ್ನಾಟಕವು ಜಾಗತಿಕ ಸಾಫ್ಟ್‌ವೇರ್ ರಂಗದಲ್ಲಿ ಅಧಿಪತ್ಯ ಮುಂದುವರಿಸಿದೆ. ಭಾರತದಿಂದ ಹೊರದೇಶಗಳಿಗೆ ರಫ್ತಾಗುವ ಒಟ್ಟು ಸಾಫ್ಟ್‌ವೇರ್ ಹಾಗೂ ಮಾಹಿತಿ ತಂತ್ರಜ್ಞಾನ ಸಂಬಂಧಿತ ಸೇವೆಗಳಲ್ಲಿ ಕರ್ನಾಟಕವೊಂದೇ ಶೇ. ೪೦ ರಷ್ಟು ಅಗ್ರ ಪಾಲನ್ನು ಹೊಂದಿದೆ. ವಿಶ್ವದ ಪ್ರಸಿದ್ಧ ಎಲೆಕ್ಟ್ರಾನಿಕ್ಸ್ ತಯಾರಿಕಾ ದೈತ್ಯ ಫಾಕ್ಸ್‌ಕಾನ್, ಸೆಮಿಕಂಡಕ್ಟರ್ ಕ್ಷೇತ್ರದ ಮುಂಚೂಣಿ ಸಂಸ್ಥೆಗಳಾದ ಲ್ಯಾಮ್ ರಿಸರ್ಚ್ , ಅಪ್ಲೈಡ್ ಮೆಟೀರಿಯಲ್ಸ್ ಹಾಗೂ ರಕ್ಷಣಾ ವಲಯದ 'ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್' ನಂತಹ ಜಾಗತಿಕ ಕಂಪನಿಗಳು ರಾಜ್ಯದಲ್ಲಿ ತಮ್ಮ ಬೃಹತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿವೆ. ಜಾಗತಿಕ ದೈತ್ಯ ಕಂಪನಿಗಳ ಆಗಮನದಿಂದ ಕೇವಲ ದೊಡ್ಡ ಕೈಗಾರಿಕೆಗಳಿಗೆ ಮಾತ್ರವಲ್ಲದೆ, ರಾಜ್ಯದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಬೃಹತ್ ಮಾರುಕಟ್ಟೆ ತೆರೆದುಕೊಳ್ಳುತ್ತಿದೆ ಎಂದು ಹೇಳಿದರು.

Read More
Next Story