ಮಕ್ಕಳಿಗೆ ದೈಹಿಕ ಶಿಕ್ಷೆ, ಮಾನಸಿಕ ಕಿರುಕುಳ ನೀಡುವ ಶಾಲೆಗಳ ವಿರುದ್ಧ ಕ್ರಮಕ್ಕೆ ಒತ್ತಾಯ
x

ಮಕ್ಕಳಿಗೆ ದೈಹಿಕ ಶಿಕ್ಷೆ, ಮಾನಸಿಕ ಕಿರುಕುಳ ನೀಡುವ ಶಾಲೆಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷೆ ನೀಡುವುದು, ಮಾನಸಿಕವಾಗಿ ಹಿಂಸಿಸುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧ. ಈ ಕಾನೂನು ಜಾರಿಯಲ್ಲಿದ್ದರೂ ಕೆಲ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ.


ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ನೀಡುತ್ತಿರುವ ದೈಹಿಕ ಶಿಕ್ಷೆ ಹಾಗೂ ಮಾನಸಿಕ ಕಿರುಕುಳಕ್ಕೆ ಬ್ರೇಕ್‌ ಹಾಕುವಂತೆ ಪೋಷಕರು ಹಾಗೂ ಶಿಕ್ಷಣ ತಜ್ಞರಿಂದ ಪ್ರಬಲ ಒತ್ತಾಯ ಕೇಳಿ ಬಂದಿದೆ.

ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದನ್ನು ತಡೆಯಲು ಕಟ್ಟುನಿಟ್ಟಿನ ನಿಯಮ ಜಾರಿಗೆ ತರಬೇಕು. ಮಕ್ಕಳ ಸುರಕ್ಷತೆ ಮತ್ತು ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ ತಕ್ಷಣವೇ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಶಶಿಧರ್ ಕೊಸುಂಬೆ ಅವರು ಆಗ್ರಹಿಸಿದ್ದಾರೆ.

ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಅಧಿಕೃತ ಪತ್ರ ಬರೆದಿರುವ ಅವರು, "ಶಾಲೆಗಳಲ್ಲಿ ಯಾವುದೇ ರೀತಿಯ ದೈಹಿಕ ಶಿಕ್ಷೆ, ವಿದ್ಯಾರ್ಥಿಗಳನ್ನು ಸಹಪಾಠಿಗಳ ಮುಂದೆ ಅವಮಾನಿಸುವ ಕಠಿಣ ಶಿಕ್ಷೆ ಅಥವಾ ಮಾನಸಿಕ ಕಿರುಕುಳ ನೀಡುವುದನ್ನು ಸಂಪೂರ್ಣ ನಿಷೇಧಿಸಬೇಕು. ಈ ಕುರಿತು ರಾಜ್ಯದ ಎಲ್ಲಾ ಶಾಲೆಗಳಿಗೆ ಸ್ಪಷ್ಟ ಹಾಗೂ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು," ಎಂದು ಮನವಿ ಮಾಡಿದ್ದಾರೆ.

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009ರ ಸೆಕ್ಷನ್ 17ರ ಪ್ರಕಾರ, ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೂಪದ ದೈಹಿಕ ಶಿಕ್ಷೆ ನೀಡುವುದು, ಮಾನಸಿಕವಾಗಿ ಹಿಂಸಿಸುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧ. ಈ ಕಾನೂನು ಜಾರಿಯಲ್ಲಿದ್ದರೂ ಕೆಲ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಕಾನೂನಿನ ಭಯ ಮೂಡಿಸಲು ಇಲಾಖೆಯು ಮತ್ತೊಮ್ಮೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ಅವರು, "ಮಕ್ಕಳ ಸುರಕ್ಷತೆಗೆ ಸರ್ಕಾರ ಹಾಗೂ ಇಲಾಖೆ ಮೊದಲ ಆದ್ಯತೆ ನೀಡುತ್ತವೆ. ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ತಡೆಯಲು ಅಗತ್ಯವಿರುವ ಎಲ್ಲಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು," ಎಂದು ಭರವಸೆ ನೀಡಿದ್ದಾರೆ.

ಪೋಷಕರಲ್ಲಿ ಆತಂಕ ಹೆಚ್ಚಿಸಿದ ಘಟನೆಗಳು

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕೆಲವು ಸರಣಿ ಘಟನೆಗಳು ಪೋಷಕರು ಮತ್ತು ಸಾರ್ವಜನಿಕರನ್ನು ಕಂಗೆಡಿಸಿವೆ.

ಬೆಂಗಳೂರಿನ ಮರಿಯಪ್ಪನಪಾಳ್ಯದ ಸೆಂಟ್ ಫಿಲೋಮಿನಾಸ್ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕರು ನೀಡಿದ ಅತಿಯಾದ ದೈಹಿಕ ಹಾಗೂ ಅವಮಾನಕಾರಿ ಶಿಕ್ಷೆಯ ಕಾರಣದಿಂದ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಯಲಹಂಕದ ಶಾಲೆಯೊಂದರಲ್ಲಿ ವಿದ್ಯಾರ್ಥಿಯ ಅನುಮಾನಾಸ್ಪದ ಸಾವಿನ ಪ್ರಕರಣ ಕೂಡ ಶಾಲಾ ಸುರಕ್ಷತೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಶಾಲೆಗಳ ಮಾನ್ಯತೆ ರದ್ದತಿಗೆ ಸಲಹೆ

ಮಕ್ಕಳಿಗೆ ದೈಹಿಕ ಶಿಕ್ಷೆ ಹಾಗೂ ಮಾನಸಿಕ ಕಿರುಕುಳ ನೀಡುವ ಪ್ರಕರಣಗಳನ್ನು ರಾಜ್ಯ ಪೋಷಕರ ಸಮನ್ವಯ ಸಮಿತಿ ಕೂಡ ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿ ಹಾಗೂ ಶಿಕ್ಷಣ ಇಲಾಖೆ ಆಯುಕ್ತರಿಗೆ ಜಂಟಿ ಮನವಿ ಸಲ್ಲಿಸಿರುವ ಸಮಿತಿಯು, "ವಿದ್ಯಾರ್ಥಿಗಳಿಗೆ ದೈಹಿಕ ಹಲ್ಲೆ ಅಥವಾ ಮಾನಸಿಕ ಕಿರುಕುಳ ನೀಡುವ ಶಿಕ್ಷಕರು ಮತ್ತು ಅದಕ್ಕೆ ಬೆಂಬಲ ನೀಡುವ ಶಾಲಾ ಆಡಳಿತ ಮಂಡಳಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ತಪ್ಪುಗಳು ಮರುಕಳುಹಿಸಿದರೆ ಅಂತಹ ಶಾಲೆಗಳ ಮಾನ್ಯತೆ ರದ್ದುಗೊಳಿಸಬೇಕು," ಎಂದು ಒತ್ತಾಯಿಸಿದೆ.

"ಶಾಲೆಗಳು ಮಕ್ಕಳಿಗೆ ಜ್ಞಾನ ಮತ್ತು ಸಂಸ್ಕಾರ ನೀಡುವ ಪವಿತ್ರ ಸ್ಥಳಗಳಾಗಬೇಕೇ ಹೊರತು, ಮಕ್ಕಳಲ್ಲಿ ಭಯ ಮತ್ತು ಖಿನ್ನತೆ ಬಿತ್ತುವ ಕೇಂದ್ರಗಳಾಗಬಾರದು" ಎಂಬುದು ಶಿಕ್ಷಣ ತಜ್ಞರ ಮತ್ತು ಮನೋವಿಜ್ಞಾನಿಗಳ ಅಭಿಪ್ರಾಯವಾಗಿದೆ.

ಮಕ್ಕಳ ಮಾನಸಿಕ ಆರೋಗ್ಯ ಹಾಗೂ ಗೌರವಯುತ ಕಲಿಕಾ ವಾತಾವರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾದ ಅನಿವಾರ್ಯತೆ ಎದುರಾಗಿದ್ದು, ಮುಂಬರುವ ದಿನಗಳಲ್ಲಿ ಶಿಕ್ಷಣ ಇಲಾಖೆಯು ಕಠಿಣ ನಿಯಮಾವಳಿ ಜಾರಿಗೊಳಿಸುವ ಸಾಧ್ಯತೆ ಇದೆ.

Read More
Next Story