ಶಾಲಾ ಜಾಹೀರಾತುಗಳಲ್ಲಿ ಮಕ್ಕಳ ಅಂಕಗಳ ಬಳಕೆ: ಕಟ್ಟುನಿಟ್ಟಿನ ನಿಯಮಕ್ಕೆ ಒತ್ತಾಯ
x

ಶಾಲಾ ಜಾಹೀರಾತುಗಳಲ್ಲಿ ಮಕ್ಕಳ ಅಂಕಗಳ ಬಳಕೆ: ಕಟ್ಟುನಿಟ್ಟಿನ ನಿಯಮಕ್ಕೆ ಒತ್ತಾಯ

ಶೈಕ್ಷಣಿಕ ಸಂಸ್ಥೆಗಳು ತಮ್ಮ ಬ್ರ್ಯಾಂಡಿಂಗ್‌ಗಾಗಿ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಯನ್ನು ಬ್ಯಾನರ್‌, ಫೇಸ್‌ಬುಕ್ ವೇದಿಕೆಗಳಲ್ಲಿ ಬಳಕೆ ಮಾಡುವುದು ಕಾನೂನಿನ ಉಲ್ಲಂಘನೆಯಲ್ಲ. ಬದಲಿಗೆ ಮಕ್ಕಳ ಗೌಪ್ಯತೆಯ ಹಕ್ಕಿನ ಉಲ್ಲಂಘನೆಯಾಗಿದೆ.


Click the Play button to hear this message in audio format

ಇಂದಿನ ತಂತ್ರಜ್ಞಾನದ ಯುಗದಲ್ಲಿ, ಶಿಕ್ಷಣ ಸಂಸ್ಥೆಗಳು ತಮ್ಮ ಸಾಧನೆಗಳನ್ನು ಪ್ರಚಾರಪಡಿಸಲು ಸಾಮಾಜಿಕ ಜಾಲತಾಣಗಳನ್ನು ವ್ಯಾಪಕವಾಗಿ ಬಳಸುತ್ತಿವೆ. ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಫೋಟೋಗಳು, ಅಂಕಪಟ್ಟಿಗಳು ಮತ್ತು ವೈಯಕ್ತಿಕ ಮಾಹಿತಿಯನ್ನು ಅವರ ಅಥವಾ ಅವರ ಪೋಷಕರ ಪೂರ್ವಾನುಮತಿಯಿಲ್ಲದೆ ಬಳಸುವ ವಿದ್ಯಮಾನ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಪತ್ರ ಬರೆದಿದ್ದು, ವಿದ್ಯಾರ್ಥಿಗಳ ಗೌಪ್ಯತೆ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಮಾರ್ಗಸೂಚಿಯೊಂದನ್ನು ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಶೈಕ್ಷಣಿಕ ಸಂಸ್ಥೆಗಳು ತಮ್ಮ ಜಾಹೀರಾತು ಮತ್ತು ಬ್ರ್ಯಾಂಡಿಂಗ್‌ಗಾಗಿ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಯನ್ನು ಬ್ಯಾನರ್‌ಗಳು, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ವೇದಿಕೆಗಳಲ್ಲಿ ಮನಬಂದಂತೆ ಬಳಸುತ್ತಿವೆ. ಇದು ಕೇವಲ ಕಾನೂನಿನ ಉಲ್ಲಂಘನೆಯಲ್ಲ, ಬದಲಾಗಿ ಮಕ್ಕಳ ಗೌಪ್ಯತೆಯ ಹಕ್ಕಿನ ಉಲ್ಲಂಘನೆಯಾಗಿದೆ. ವಿದ್ಯಾರ್ಥಿಗಳ ಹಿಂದಿನ ಅಂಕಗಳನ್ನು ಪ್ರಸ್ತುತ ಸಾಧನೆಯೊಂದಿಗೆ ತುಲನೆ ಮಾಡಿ, ಕಡಿಮೆ ಅಂಕಗಳಿದ್ದ ವಿದ್ಯಾರ್ಥಿ ನಮ್ಮ ಸಂಸ್ಥೆಗೆ ಸೇರಿದ ಮೇಲೆ ಸುಧಾರಿಸಿದ್ದಾನೆ ಎಂಬಂತಹ ಬರಹಗಳನ್ನು ಪ್ರಕಟಿಸುವುದು, ಆ ಮಗುವಿನ ಆತ್ಮಗೌರವಕ್ಕೆ ಧಕ್ಕೆ ತರುತ್ತದೆ. ಅಲ್ಲದೇ, ಮಗುವನ್ನು ಮಾನಸಿಕ ಒತ್ತಡ, ಮುಜುಗರ ಮತ್ತು ಸಾಮಾಜಿಕ ಅವಮಾನಕ್ಕೆ ದೂಡುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕಾನೂನಾತ್ಮಕ ಚೌಕಟ್ಟು - ಸಾಂವಿಧಾನಿಕ ಹಕ್ಕುಗಳು

ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿ ರಕ್ಷಣೆ ಅಗತ್ಯ ಇದೆ. ಭಾರತೀಯ ಸಂವಿಧಾನದ ವಿಧಿ 21ರ ಪ್ರಕಾರ 'ಗೌಪ್ಯತೆಯ ಹಕ್ಕು' ಮೂಲಭೂತ ಹಕ್ಕಾಗಿದೆ. ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆಕ್ಟ್, 2023 ಕಾಯ್ದೆಯು ವ್ಯಕ್ತಿಯ ಅನುಮತಿಯಿಲ್ಲದೆ ವೈಯಕ್ತಿಕ ಮಾಹಿತಿಯನ್ನು ಸಂಸ್ಕರಿಸುವುದನ್ನು ನಿಷೇಧಿಸುತ್ತದೆ. ಕಡ್ಡಾಯವಾಗಿ ಪೋಷಕರ ಸ್ಪಷ್ಟ ಒಪ್ಪಿಗೆ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಮಕ್ಕಳ ನ್ಯಾಯ ಕಾಯ್ದೆ 2015ರ ಇದು ಮಕ್ಕಳ ಗುರುತನ್ನು ಬಹಿರಂಗಪಡಿಸುವುದನ್ನು ತಡೆಗಟ್ಟುವ ಮೂಲಕ ಅವರ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.


ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆಕ್ಷ್‌ನ ಸೆಕ್ಷನ್‌ 4 ಪ್ರಕಾರ ವೈಯಕ್ತಿಕ ಮಾಹಿತಿಯನ್ನು ಕಾನೂನುಬದ್ಧ ಉದ್ದೇಶ ಹಾಗೂ ವ್ಯಕ್ತಿಯ ಅನುಮತಿಯ ಆಧಾರದ ಮೇಲೆ ಮಾತ್ರ ಸಂಸ್ಕರಿಸಬೇಕು. ಸೆಕ್ಷನ್‌ 9ರ ಪ್ರಕಾರ ಮಕ್ಕಳ ವೈಯಕ್ತಿಕ ಮಾಹಿತಿಯನ್ನು ಕ್ರೋಢೀಕರಿಸುವಾಗ ವಿಶೇಷ ಜವಾಬ್ದಾರಿಯನ್ನು ಪಾಲಿಸಬೇಕು ಮತ್ತು ಪೋಷಕರ ದೃಢೀಕೃತ ಅನುಮತಿ ಪಡೆದುಕೊಳ್ಳಬೇಕು. ಮಕ್ಕಳ ಹಿತಾಸಕ್ತಿಗೆ ಧಕ್ಕೆಯುಂಟುಮಾಡುವ, ಮಾನಸಿಕ ಒತ್ತಡ ಉಂಟುಮಾಡುವ ಅಥವಾ ಶೋಷಣಾತ್ಮಕ ಸ್ವರೂಪದ ಡೇಟಾ ಬಳಕೆ ತಡೆಯಬೇಕೆಂದು ಕಾಯ್ದೆ ಒತ್ತಿ ಹೇಳುತ್ತದೆ ಎಂದು ಹೇಳಲಾಗಿದೆ.

ಶೈಕ್ಷಣಿಕ ಸಂಸ್ಥೆಗಳ ಜವಾಬ್ದಾರಿಗಳು

ಶೈಕ್ಷಣಿಕ ಸಂಸ್ಥೆಗಳು ತಮ್ಮ ಮಾರುಕಟ್ಟೆ ತಂತ್ರಗಳನ್ನು ಬದಲಾಯಿಸಿಕೊಳ್ಳಬೇಕಿದೆ. ಕೇವಲ ವಿದ್ಯಾರ್ಥಿಗಳ ಸಾಧನೆಯನ್ನು ಬಂಡವಾಳ ಮಾಡಿಕೊಳ್ಳುವ ಬದಲು, ಅವರ ಹಕ್ಕುಗಳನ್ನು ಗೌರವಿಸುವ ನೀತಿಯನ್ನು ಅಳವಡಿಸಿಕೊಳ್ಳಬೇಕು. ಪ್ರತಿಯೊಂದು ಶಾಲೆ, ಕಾಲೇಜು ತನ್ನದೇ ಆದ ವಿದ್ಯಾರ್ಥಿಗಳ ಹಕ್ಕುಗಳನ್ನು ಗೌರವಿಸಬೇಕು. ಯಾವುದೇ ಜಾಹೀರಾತು ಅಥವಾ ಪ್ರಚಾರಕ್ಕೆ ಮುನ್ನ ಪೋಷಕರಿಂದ ಸ್ಪಷ್ಟ ಲಿಖಿತ ಅನುಮತಿ ಪಡೆಯಬೇಕು. ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವುದನ್ನು ನಿಷೇಧಿಸಬೇಕು. ಶೈಕ್ಷಣಿಕ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳನ್ನು ಕೇವಲ ಅಂಕಗಳ ಸಾಧನಗಳಾಗಿ ನೋಡುವುದರಿಂದ ಅವರ ಮಾನಸಿಕ ಆರೋಗ್ಯ ಕುಸಿಯುತ್ತದೆ. ಸಾರ್ವಜನಿಕವಾಗಿ ತಮ್ಮ ಅಂಕಗಳನ್ನು ಅಥವಾ ವೈಯಕ್ತಿಕ ಸ್ಥಿತಿಯನ್ನು ಹೋಲಿಕೆ ಮಾಡುವುದು ಮಕ್ಕಳಲ್ಲಿ ಭಾವನಾತ್ಮಕ ಹಿನ್ನಡೆ ಉಂಟುಮಾಡುತ್ತದೆ ಎಂದು ತಿಳಿಸಲಾಗಿದೆ.

ಈ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಸದಸ್ಯ ಡಾ. ತಿಪ್ಪೇಸ್ವಾಮಿ.ಕೆ.ಟಿ., ಪತ್ರವನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯದ ಎಲ್ಲ ಶಾಲೆಗಳಿಗೆ ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಬೇಕಿದೆ. ನಿಯಮ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ಮೇಲೆ ದಂಡ ಅಥವಾ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಜಾರಿಯಾಗಬೇಕು. ಶಾಲೆಗಳ ಆಡಳಿತ ಮಂಡಳಿಗಳಿಗೆ ಈ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ವಿದ್ಯಾರ್ಥಿಗಳ ದತ್ತಾಂಶ ರಕ್ಷಣೆಯು ಕೇವಲ ಒಂದು ಆಡಳಿತಾತ್ಮಕ ಕೆಲಸವಾಗದೆ, ಶಿಕ್ಷಣದ ಭಾಗವಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.

Read More
Next Story