
ಪರಿಶಿಷ್ಟರ ಕಲ್ಯಾಣ ಕಾನೂನು|ಆಮೆಗತಿಯ ಅನುಷ್ಠಾನ; ಸಾವಿರಾರು ಕುಟುಂಬಗಳಿಗೆ ಇಂದಿಗೂ ಇಲ್ಲ ಭೂಮಿ ಭಾಗ್ಯ
ಪ್ರತಿ ತಾಲೂಕಿನಲ್ಲಿ ಭೂಮಿಯನ್ನು ಹಂಚುವಾಗ ಶೇ. 50 ರಷ್ಟು ಭೂಮಿಯನ್ನು ಎಸ್ಸಿ, ಎಸ್ಟಿ ಕುಟುಂಬಗಳಿಗೆ ಮೀಸಲಿಡಬೇಕು. ಒಂದು ವೇಳೆ ಈ ಅನುಪಾತ ಪಾಲನೆಯಾಗದಿದ್ದರೆ ಮುಂದಿನ ಹಂಚಿಕೆಯಲ್ಲಿ ಇದನ್ನು ಶೇ. 75ಕ್ಕೆ ಏರಿಸಬೇಕು ಎಂದು ವರದಿಯು ಶಿಫಾರಸು ಮಾಡಿದೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ಹಾಗೂ ಇತರೆ ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆಗಳ ಅನುಷ್ಠಾನ ಮಂದಗತಿಯಲ್ಲಿ ಸಾಗುತ್ತಿದೆ. ಇಂದಿಗೂ ಸಾವಿರಾರು ಕುಟುಂಬಗಳು ಭೂಮಿಯ ಹಕ್ಕಿನಿಂದ ವಂಚಿತವಾಗಿವೆ ಎಂಬ ಆತಂಕಕಾರಿ ಸಂಗತಿಯನ್ನು ಸಂಶೋಧನಾ ವರದಿ ಬಹಿರಂಗಪಡಿಸಿದೆ.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕೆ ಸಂಬಂಧಿಸಿದ ವಿಶೇಷ ಕಾನೂನುಗಳ ಅನುಷ್ಠಾನದ ಕುರಿತು ಸಿದ್ಧಾರ್ಥ್ ಕೆ. ಜೋಶಿ ಎಂಬುವರು ಕೈಗೊಂಡ ಸಂಶೋಧನಾ ವರದಿಯಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿವೆ.
ಸಮೀಕ್ಷೆಗೆ ಒಳಪಡಿಸಿದ ಕುಟುಂಬಗಳಲ್ಲಿ ಪರಿಶಿಷ್ಟ ಜಾತಿಯ ಶೇ. 35.87 ರಷ್ಟು ಮತ್ತು ಪರಿಶಿಷ್ಟ ಪಂಗಡದ ಶೇ. 21 ರಷ್ಟು ಕುಟುಂಬಗಳು ಇಂದಿಗೂ ಸಂಪೂರ್ಣ ಭೂಹೀನವಾಗಿವೆ. ಚಿಕ್ಕಮಗಳೂರು ಜಿಲ್ಲೆಯ ಸಮೀಕ್ಷೆಯಲ್ಲಿ ಭಾಗವಹಿಸಿದ ಎಲ್ಲಾ ಪರಿಶಿಷ್ಟ ಪಂಗಡದ ಕುಟುಂಬಗಳು ಭೂಹೀನರಾಗಿರುವುದು ವರದಿಯಿಂದ ತಿಳಿದುಬಂದಿದೆ.
ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರನ್ನು ಸಕ್ರಮಗೊಳಿಸುವ 'ಬಗರ್ ಹುಕುಂ' (ನಮೂನೆ 50, 53, 57) ಅರ್ಜಿಗಳು ದಶಕಗಳಿಂದ ಬಾಕಿ ಇವೆ. ಸಮೀಕ್ಷೆ ನಡೆಸಿದ ಮೂರು ಜಿಲ್ಲೆಗಳಲ್ಲಿ ಸುಮಾರು 8.4 ಲಕ್ಷಕ್ಕೂ ಅಧಿಕ ಅರ್ಜಿಗಳು ಇತ್ಯರ್ಥಗೊಳ್ಳದೆ ಬಾಕಿ ಉಳಿದಿವೆ.
ಕರ್ನಾಟಕ ಗ್ರಾಮ ಹುದ್ದೆಗಳ ರದ್ದಿಯಾತಿ ಕಾಯ್ದೆಯಡಿ ಇನಾಂ ಭೂಮಿ ಮರು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಹಲವು ಕುಟುಂಬಗಳಿಗೆ ಅರಿವಿನ ಕೊರತೆಯಿಂದ ಸಾಧ್ಯವಾಗಿಲ್ಲ. ಕೇವಲ ಶೇ. 30.43 ರಷ್ಟು ಕುಟುಂಬಗಳು ಮಾತ್ರ ತಮ್ಮ ಹೆಸರಿನಲ್ಲಿ ಭೂಮಿ ಹೊಂದಿವೆ.
94ಸಿ ಅರ್ಜಿಗಳ ವಿಲೇವಾರಿಯಲ್ಲಿ ನಿರ್ಲಕ್ಷ್ಯ
ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವ ಬಡ ಕುಟುಂಬಗಳು ಸಲ್ಲಿಸಿರುವ 94ಸಿ ಅರ್ಜಿಗಳ ಪೈಕಿ ಶೇ. 84.61 ರಷ್ಟು ಅರ್ಜಿಗಳು ಬಾಕಿ ಉಳಿದಿದ್ದು, ಜನಸಾಮಾನ್ಯರಿಗೆ ಸ್ವಂತ ಮನೆಯ ಹಕ್ಕು ದೊರೆಯುತ್ತಿಲ್ಲ ಎಂಬ ಅಂಶ ವರದಿಯಲ್ಲಿ ಉಲ್ಲೇಖವಾಗಿದೆ.
ವರದಿಯ ಶಿಫಾರಸುಗಳೇನು?
ಬಾಕಿ ಇರುವ ಎಲ್ಲಾ ಬಗರ್ ಹುಕುಂ ಮತ್ತು 94ಸಿ ಅರ್ಜಿಗಳನ್ನು ಗರಿಷ್ಠ ಒಂದು ವರ್ಷದ ಅವಧಿಯೊಳಗೆ ಕಡ್ಡಾಯವಾಗಿ ಇತ್ಯರ್ಥಪಡಿಸಬೇಕು.
ಅರ್ಜಿ ಸಲ್ಲಿಸಲು ಅರಿವಿಲ್ಲದ ಅಥವಾ ವಂಚಿತರಾದ ಕುಟುಂಬಗಳಿಗೆ 2022ರ ಜನವರಿ 1ನ್ನು ಕಟ್-ಆಫ್ ದಿನಾಂಕವಾಗಿರಿಸಿ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ನೀಡಬೇಕು. ಅರಣ್ಯ ಗಡಿ ಪ್ರದೇಶಗಳಲ್ಲಿ ಸಾಗುವಳಿ ಮಾಡುತ್ತಿರುವ ಕುಟುಂಬಗಳಿಗೆ ಅರಣ್ಯ ಇಲಾಖೆಯಿಂದ ಆಗುತ್ತಿರುವ ಕಿರುಕುಳ ತಪ್ಪಿಸಲು ಕಂದಾಯ ಮತ್ತು ಅರಣ್ಯ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಬೇಕು.
ಪ್ರತಿ ತಾಲೂಕಿನಲ್ಲಿ ಭೂಮಿಯನ್ನು ಹಂಚುವಾಗ ಶೇ. 50 ರಷ್ಟು ಭೂಮಿಯನ್ನು ಎಸ್ಸಿ, ಎಸ್ಟಿ ಕುಟುಂಬಗಳಿಗೆ ಮೀಸಲಿಡಬೇಕು. ಒಂದು ವೇಳೆ ಈ ಅನುಪಾತ ಪಾಲನೆಯಾಗದಿದ್ದರೆ ಮುಂದಿನ ಹಂಚಿಕೆಯಲ್ಲಿ ಇದನ್ನು ಶೇ. 75ಕ್ಕೆ ಏರಿಸಬೇಕು ಎಂದು ವರದಿಯು ಶಿಫಾರಸು ಮಾಡಿದೆ.
ಎಲ್ಲೆಲ್ಲಿ ಸಂಶೋಧನೆ?
ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ನಡೆಸಿದ ಸಂಶೋಧನೆಯಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ, ಕೊರಟಗೆರೆ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕೊಪ್ಪ ತಾಲೂಕು, ರಾಯಚೂರು ಜಿಲ್ಲೆಯ ಮಾನ್ವಿ, ಲಿಂಗಸುಗೂರು ತಾಲೂಕುಗಳಲ್ಲಿ ಒಟ್ಟು 25 ಗ್ರಾಮಗಳಲ್ಲಿ ಸುಮಾರು 1,123 ಕುಟುಂಬಗಳನ್ನು ಸಂದರ್ಶಿಸಿ ವರದಿ ತಯಾರಿಸಲಾಗಿದೆ.
ಸಂಶೋಧನೆಯ ಉದ್ದೇಶಕ್ಕಾಗಿ ಪ್ರಾಂತ್ಯವಾರು ಒಂದೊಂದು ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸರ್ಕಾರದ ಮಹತ್ವಾಕಾಂಕ್ಷಿ ಕಾನೂನುಗಳು ಕಾಗದದ ಮೇಲೆ ಮಾತ್ರ ಉಳಿಯದೆ, ಅರ್ಹ ಫಲಾನುಭವಿಗಳಿಗೆ ತಲುಪುವಂತಾಗಲು ಆಡಳಿತ ವ್ಯವಸ್ಥೆಯು ತೀವ್ರಗತಿಯಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದು ವರದಿ ಒತ್ತಿ ಹೇಳಿದೆ.
ಮಲಹೊರುವ ಪದ್ಧತಿಗೂ ಬೇಕಿದೆ ನಿಯಂತ್ರಣ
50 ಕಿ.ಮೀ. ಒಳಚರಂಡಿ ಜಾಲವಿದ್ದರೂ ಚಿಕ್ಕಮಗಳೂರು ನಗರಸಭೆಯ ಬಳಿ ಕೇವಲ 2 ಜೆಟ್ಟಿಂಗ್ ಯಂತ್ರಗಳಿವೆ. ಹಲವು ಪ್ರದೇಶಗಳಲ್ಲಿ ಪಿಟ್ ಶೌಚಾಲಯಗಳಿವೆ. ಆದರೆ, ನಗರಸಭೆಯಲ್ಲಿ ಸಕ್ಕಿಂಗ್ ಯಂತ್ರವಿಲ್ಲ. ಅಧ್ಯಯನ ಸಮಯದಲ್ಲಿ ಮಲ ಹೊರುವ ಪದ್ಧತಿಯಲ್ಲಿ ತೊಡಗಿರುವ 12ಕಾರ್ಮಿಕರು ಕಂಡು ಬಂದಿದ್ದಾರೆ. ಅವರಲ್ಲಿ ಯಾರನ್ನೂ ಚಿಕ್ಕಮಗಳೂರು ನಗರಸಭೆ ಗುರುತಿಸಿಲ್ಲ.
ಗುಬ್ಬಿ ತಾಲೂಕಿನಲ್ಲಿ ಅತಿ ಹೆಚ್ಚು ಪಿಟ್ ಲ್ಯಾಟರಿನ್‌ಗಳಿವೆ. ಪಟ್ಟಣ ಪಂಚಾಯಿತಿಯಲ್ಲಿ ಒಂದೇ ಒಂದು ಸಕ್ಕಿಂಗ್ ಯಂತ್ರವಿಲ್ಲ. ಅಧ್ಯಯನದ ವೇಳೆ 10 ಕಾರ್ಮಿಕರು ಮಲಹೊರುವ ಪದ್ಧತಿಯಲ್ಲಿ ತೊಡಗಿದ್ದಾರೆ ಎಂದು ಕಂಡು ಬಂದಿದೆ.
ದೇವದುರ್ಗದಲ್ಲಿ ತೆರೆದ ಚರಂಡಿ ಮತ್ತು ಗುಂಡಿ ಶೌಚಾಲಯಗಳಿವೆ. ಪಟ್ಟಣ ಪುರಸಭೆಯಲ್ಲಿ ಎರಡು ಸಕ್ಕಿಂಗ್ ಯಂತ್ರಗಳಿದ್ದು, ಎರಡೂ ನಿಷ್ಕ್ರಿಯವಾಗಿವೆ. ಇಲ್ಲಿ 27 ಕಾರ್ಮಿಕರಿದ್ದಾರೆ. ಅವರಲ್ಲಿ ಯಾರನ್ನೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಆಗಿ ಗುರುತಿಸಿಲ್ಲ ಎಂಬುದು ಕಂಡು ಬಂದಿದೆ.
ಮ್ಯಾನ್ಯುವೆಲ್ ಸ್ಕ್ಯಾವೆಂಜರ್‌ಗಳ ಮರು ಸಮೀಕ್ಷೆಗೆ ಸಲಹೆ
ವಿವಿಧ ಜಿಲ್ಲೆಗಳಲ್ಲಿ ಶೌಚಾಲಯ ಸೌಲಭ್ಯಗಳ ಮಾದರಿ ಹಾಗೂ ಅವುಗಳನ್ನು ಸ್ವಚ್ಛಗೊಳಿಸುವ ಕಾರ್ಮಿಕರನ್ನು ಗುರುತಿಸಲು ಸಮೀಕ್ಷೆ ನಡೆಸಿ, ಅದರ ಆಧಾರದ ಮೇಲೆ ಪ್ರತಿ ಪಟ್ಟಣ ಹಾಗೂ ಗ್ರಾಮ ಪಂಚಾಯಿತಿಗಳು ನೈಮರ್ಲ್ಯ ಯೋಜನೆಯನ್ನು ಸಿದ್ಧಪಡಿಸಬೇಕು. ಈ ಸಮೀಕ್ಷೆಯಲ್ಲಿಅನೈರ್ಮಲ್ಯ ಶೌಚಾಲಯಗಳು ಕಂಡು ಬಂದರೆ ಅವುಗಳನು ನಿರ್ಮೂಲನೆ ಮಾಡಬೇಕು. ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್ಗಳ ರೂಪದಲ್ಲಿ ಸಾಕಷ್ಟು ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಈ ಪ್ರಕ್ರಿಯೆ ಜೊತೆಗೆ ಗುರುತಿಸಲಾದ ಎಲ್ಲಾ ಮ್ಯಾನ್ಯುವೆಲ್ ಸ್ಕ್ಯಾವೆಂಜರ್‌ಗಳಿಗೆ ಪುನವರ್ಸತಿ ಮಾಡಬೇಕು ಎಂದು ಸಂಶೋಧನಾ ವರದಿ ಶಿಫಾರಸು ಮಾಡಿದೆ.
ಪರಿಶಿಷ್ಟು ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ನಿಯಮಗಳು 1995ರ ನಿಯಮ 4(2)ರ ಪ್ರಕಾರ, ಪ್ರತಿ ವರ್ಷ ಜನವರಿ ಮತ್ತು ಜುಲೈನಲ್ಲಿ ಸಾರ್ವಜನಿಕ ಅಭಿಯೋಜಕರ ಕಾರ್ಯಕ್ಷಮತೆಯನ್ನು ಪರಿಶೀಲಿಸಬೇಕು. ಈ ಪರಿಶೀಲನೆಗಳ ವರದಿಯನ್ನು ಸಾರ್ವಜನಿಕಗೊಳಿಸಬೇಕು. ನಿಯಮ 4(4)ರ ಪ್ರಕಾರ ಜಿಲ್ಲಾ ದಂಡಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಾಸಕ್ಯೂಷನ್ ಉಸ್ತುವಾರಿ ಅಧಿಕಾರಿಗಳು ಪ್ರಕರಣಗಳ ಮಾಸಿಕ ಪರಿಶೀಲನೆ ನಡೆಸಬೇಕು ಎಂದು ಹೇಳಿದೆ.

