
ಶೇ 56 ಮೀಸಲಾತಿ ಹೆಚ್ಚಳ| ಸರ್ಕಾರದ ಪರ ತೀರ್ಪು ಬಂದರೆ ಶೇ 6 ಬ್ಯಾಗ್‌ಲಾಗ್‌ಗೆ ಮೀಸಲು
ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಡ, ಬಲ ಹಾಗೂ ಇತರೆ ಸಮುದಾಯಗಳಿಗೆ 5.25:5.25:4.5 ಅನುಪಾತದಂತೆ ಮೀಸಲಾತಿ ಕಲ್ಪಿಸಲು ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ.
ಪರಿಶಿಷ್ಟ ಜಾತಿಯೊಳಗಿನ ಎಡ-ಬಲ ಹೋರಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ಇತಿಶ್ರೀ ಹಾಡಿದೆ. ಶೇ 50 ಮೀಸಲಾತಿ ಅನ್ವಯವೇ ಪರಿಶಿಷ್ಟ ಜಾತಿಗೆ ಶೇ 15 ಹಾಗೂ ಪರಿಶಿಷ್ಟ ವರ್ಗಗಳಿಗೆ ಶೇ.3 ಮೀಸಲಾತಿ ನಿಗದಿ ಮಾಡಿದೆ. ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗೆ ಶೇ.17 ಹಾಗೂ ಪರಿಶಿಷ್ಟ ಪಂಗಡಗಳಿಗೆ ಶೇ.7 ಮೀಸಲಾತಿ ಹೆಚ್ಚಿಸಿದೆ. ಆದರೆ, ಇದಕ್ಕೆ ಹೈಕೋರ್ಟ್ ತಡೆ ನೀಡಿರುವುದರಿಂದ ಹಳೆ ಮೀಸಲಾತಿಯಲ್ಲೇ ಒಳ ಮೀಸಲು ನೀಡಿದೆ.
ಒಂದು ವೇಳೆ ನ್ಯಾಯಾಲಯವು ಮೀಸಲಾತಿ ಹೆಚ್ಚಳದ ಪರ ತೀರ್ಪು ನೀಡಿದರೆ ಹೆಚ್ಚುವರಿಯಾಗಿರುವ ಶೇ 6 ರಷ್ಟು ಮೀಸಲಾತಿಯನ್ನು ಬ್ಯಾಗ್‌ಲಾಗ್ ಎಂದು ಪರಿಗಣಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.
ಬೆಂಗಳೂರಿನ ವಿಧಾನಸೌಧದಲ್ಲಿ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಶೇ 24 (ಪ. ಜಾತಿ -17, ಪ.ಪಂಗಡ-7) ಮೀಸಲಾತಿ ಒದಗಿಸಲು ಸರ್ಕಾರ ಬದ್ಧವಾಗಿದೆ. ಭವಿಷ್ಯದಲ್ಲಿ ಶೇ.17ರಷ್ಟು ಮೀಸಲಾತಿ ಕಲ್ಪಿಸಬಹುದು ಎಂದು ಸರ್ಕಾರದ ಪರ ತೀರ್ಪು ಬಂದರೆ ಈ ಹಿಂದೆ ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ 6:6:5 ಮೀಸಲಾತಿ ತೀರ್ಮಾನದಂತೆ ಶೇ 6ನ್ನು ಬ್ಯಾಕ್ ಲಾಗ್ ಎಂದು ಪರಿಗಣಿಸುತ್ತೇವೆ ಎಂದರು.
ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಡ, ಬಲ ಹಾಗೂ ಇತರೆ ಸಮುದಾಯಗಳಿಗೆ 5.25:5.25:4.5 ಅನುಪಾತದಂತೆ ಮೀಸಲಾತಿ ಕಲ್ಪಿಸಲು ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ. ಒಳಮೀಸಲಾತಿಗೆ ರಚಿಸಲಾಗಿದ್ದ ಕಾಯ್ದೆಗೆ ಅನುಗುಣವಾಗಿ ಶೇ17 ಮೀಸಲಾತಿಗೆ 6:6:5 ಇದ್ದರೆ, ಇದೀಗ ಶೇ15 ಮೀಸಲಾತಿಗೆ 5.3, 5.3 ಹಾಗೂ 4.4 ಮೀಸಲಾತಿ ನಿಗದಿ ಮಾಡಿ ಸಿಎಸ್ ನೇತೃತ್ವದ ತಾಂತ್ರಿಕ ಸಮಿತಿ ವರದಿ ನೀಡಿತ್ತು. ಅಂತಿಮವಾಗಿ ಸಚಿವ ಸಂಪುಟ ಸಭೆಯು ಎಡಗೈ ಸಂಬಂಧಿತ ಜಾತಿಗಳಿಗೆ 5.25, ಬಲಗೈ ಜಾತಿಗಳಿಗೆ 5.25, ಭೋವಿ, ಲಂಬಾಣಿ, ಕೊರಚ, ಕೊರಮ ಹಾಗೂ 59 ಅಲೆಮಾರಿ ಜಾತಿಗಳು ಸೇರಿ 4.5 ಮೀಸಲಾತಿ ನೀಡಲು ತೀರ್ಮಾನಿಸಿದೆ ಎಂದರು.
ಎಲ್ಲರಿಗೂ ಸಮಾನ ನ್ಯಾಯ
ಈ ನಿರ್ಧಾರದಿಂದ ಎಲ್ಲ ಸಮುದಾಯಗಳಿಗೂ ಸಮಾನ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ನೇಮಕಾತಿ ಮಾಡುವ ಸಂದರ್ಭದಲ್ಲಿ ಒಳಮೀಸಲಾತಿಯನ್ನು ಇದರನ್ವಯ ನಿರ್ಧರಿಸಬೇಕು. ಶೇ. ಆರರಷ್ಟು ಮೀಸಲಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ಅಂತಿಮವಾಗಿ ತೀರ್ಮಾನ ಕೈಗೊಳ್ಳುವವರೆಗೆ ಬ್ಯಾಕ್ ಲಾಗ್ ಎಂದು ಪರಿಗಣಿಸಲಾಗುವುದು ಎಂದರು.
ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಗೆ ಸಂಬಂಧಿಸಿದಂತೆ ರಾಷ್ಟ್ರದಲ್ಲಿಯೇ ಮಹತ್ವಪೂರ್ಣ ನಿರ್ಧಾರ ಇದಾಗಿದೆ. ರೋಸ್ಟರ್ ಸಂಬಂಧಿಸಿದಂತೆ ಸೂಕ್ತ ಪರಿಹಾರ ಕೈಗೊಂಡು ರಾಜ್ಯದ ಶೋಷಿತ ವರ್ಗಗಳ ಬದುಕಿನಲ್ಲಿ ತಿರುವು ನೀಡಲಾಗುತ್ತಿದೆ ಎಂದರು.
ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು ನಿರ್ಧಾರ
ಒಳಮೀಸಲಾತಿ ಕುರಿತು ಬಹುಕಾಲದಿಂದ ಅನೇಕ ಹೋರಾಟಗಳು ನಡೆದಿವೆ. ಚಿತ್ರದುರ್ಗದಲ್ಲಿ ನಡೆದ ಪರಿಶಿಷ್ಟ ಜಾತಿ ಸಮಾವೇಶದಲ್ಲಿ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಸಮಾವೇಶದಲ್ಲಿ 101 ಪರಿಶಿಷ್ಟ ಜಾತಿಗಳು, ಅಲೆಮಾರಿ ಸೇರಿದಂತೆ 59 ಜಾತಿಗಳ ಪ್ರತಿನಿಧಿಗಳು ಪಾಲ್ಗೊಂಡು ಒಳಮೀಸಲಾತಿಗೆ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದರು ಎಂದು ಸಿಎಂ ವಿವರಿಸಿದರು. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ರಚಿಸಿದ್ದ ಪ್ರಣಾಳಿಕಾ ಸಮಿತಿಯಲ್ಲಿಯೂ ಒಳಮೀಸಲಾತಿಯನ್ನು ಸರ್ಕಾರ ನೀಡಲಿದೆ ಎಂಬ ಭರವಸೆ ನೀಡಲಾಗಿತ್ತು.
ಸುಪ್ರೀಂಕೋರ್ಟ್ ಒಳಮೀಸಲಾತಿ ಕಲ್ಪಿಸುವ ತೀರ್ಮಾನವನ್ನು ಆಯಾ ರಾಜ್ಯಗಳೇ ತೆಗೆದುಕೊಳ್ಳಬಹುದು ಎಂದು ಆದೇಶ ನೀಡಿದ್ದರಿಂದ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗ ರಚಿಸಲಾಗಿತ್ತು. ಅವರು ನೀಡಿದ ವರದಿ ಆಧರಿಸಿ ಸಚಿವ ಸಂಪುಟವು ಪರಿಶಿಷ್ಟ ಜಾತಿಯ ಬಲ, ಎಡ ಸಮುದಾಯಗಳು ಹಾಗೂ ಇತರೆ ಅಲೆಮಾರಿ ಜಾತಿಗಳಿಗೆ ಕ್ರಮವಾಗಿ 6:6:5 ಮೀಸಲಾತಿ ಕಲ್ಪಿಸುವ ನಿರ್ಧಾರ ತೆಗೆದುಕೊಂಡಿತ್ತು.
ಪರಿಶಿಷ್ಟರಿಗೆ ಶೇ 24 ಅಂದರೆ ಪರಿಶಿಷ್ಟ ಪಂಗಡಕ್ಕೆ ಶೇ 7 ರಷ್ಟು , ಪರಿಶಿಷ್ಟ ಜಾತಿಗೆ ಶೇ 17 ರಷ್ಟು ಮೀಸಲಾತಿ ಹೆಚ್ಚಿಸಿದ್ದರಿಂದ ಒಟ್ಟು ಮೀಸಲಾತಿ ಪ್ರಮಾಣ ಶೇ 56 ರಷ್ಟು ಹೆಚ್ಚಳವಾಗಿತ್ತು. ನ್ಯಾಯಾಲಯವು ಇಂದಿರಾ ಸಹಾನಿ ಪ್ರಕರಣವನ್ನು ಉಲ್ಲೇಖಿಸಿ ಮೀಸಲಾತಿ ಶೇ 50 ರಷ್ಟು ಮೀರಬಾರದು ಎಂದು ಪುನರುಚ್ಛರಿಸಿದ ಹಿನ್ನೆಲೆಯಲ್ಲಿ ಈಗ ಹಳೆಯ ಮೀಸಲಾತಿಯಂತೆ ಒಳ ಮೀಸಲಾತಿ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ನೇಮಕಾತಿ ಪ್ರಕ್ರಿಯೆ ಶೀಘ್ರ ಆರಂಭ
ಈಗಾಗಲೇ ಬಜೆಟ್ ನಲ್ಲಿ ಘೋಷಿಸಿರುವಂತೆ ಈ ವರ್ಷ 56,432 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಿ, ತುರ್ತು ಕ್ರಮ ಕೈಗೊಳ್ಳಲಾಗುವುದು. ನೇಮಕಾತಿಗಳಲ್ಲಿ ಶೇ50ರ ಮೀಸಲಾತಿಯು ನ್ಯಾಯಾಲಯವು ಅಂತಿಮ ತೀರ್ಮಾನದ ಆಧಾರದ ಮೇಲೆ ನಡೆಯಲಿದೆ. ಸರ್ಕಾರವು ಈಗಾಗಲೇ ಶೇ 56ರ ಮೀಸಲಾತಿ ನೀಡಬೇಕೆನ್ನುವ ನಿರ್ಧಾರಕ್ಕೆ ಬದ್ಧವಾಗಿದೆ. ಸಿ ಕೆಟಗರಿಯಲ್ಲಿ ನೇಮಕಾತಿಗೆ ಲಭ್ಯವಾಗುವ ಹುದ್ದೆಗಳಲ್ಲಿ ಶೇ.20ರಷ್ಟು ಹುದ್ದೆಗಳನ್ನು 59 ಅಲೆಮಾರಿ ಜಾತಿಗಳಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ಈಗ ಪ್ರಸಕ್ತ ತೀರ್ಮಾನದಂತೆ ಸಿ ಕೆಟಗರಿಗೆ 4.5 ಮೀಸಲಾತಿ ಕಲ್ಪಿಸಲಾಗಿದೆ ಎಂದರು.

