
Internal Reservation| ಶೇ 15 ರಲ್ಲೇ ಒಳ ಮೀಸಲಾತಿ; ಅಲೆಮಾರಿಗಳಿಗೂ ಪ್ರಾತಿನಿಧ್ಯ
ರಾಜ್ಯ ಸರ್ಕಾರ ಕಳೆದ ಫೆ.27 ರಂದು ಹೊರಡಿಸಿದ್ದ ನೇಮಕಾತಿ ಅಧಿಸೂಚನೆಯನ್ನು ಹಿಂಪಡೆದು, ಅಂತಿಮ ಒಳ ಮೀಸಲಾತಿಗೆ ಅನ್ವಯಿಸುವಂತೆ ಹೊಸ ಅಧಿಸೂಚನೆ ಪ್ರಕಟಿಸಲಿದೆ.
ಪರಿಶಿಷ್ಟ ಜಾತಿಯ ಎಡಗೈ ಹಾಗೂ ಬಲಗೈ ಸಮುದಾಯದ ಮಧ್ಯೆ ತೀವ್ರ ಬಿಕ್ಕಟ್ಟು ಸೃಷ್ಟಿಸಿದ್ದ ಒಳ ಮೀಸಲಾತಿ ಬಿಕ್ಕಟ್ಟಿಗೆ ಕೊನೆಗೂ ರಾಜ್ಯ ಸರ್ಕಾರ ತೆರೆ ಎಳೆದಿದೆ. ಇದರಿಂದ ನೇಮಕಾತಿ ಅಧಿಸೂಚನೆಗೆ ಎದುರಾಗಿದ್ದ ಕಂಟಕ ತಪ್ಪಿದೆ. ಒಟ್ಟು ಮೀಸಲಾತಿ ಪ್ರಮಾಣ ಶೇ 50 ದಾಟಬಾರದೆಂಬ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆ ರಾಜ್ಯ ಸರ್ಕಾರದ ಶೇ 56 ರಷ್ಟು ಮೀಸಲಾತಿ ಹೆಚ್ಚಳ ಪ್ರಕರಣವು ಹೈಕೋರ್ಟ್‌ನಲ್ಲಿದೆ. ಹಾಗಾಗಿ, ಹಳೆಯ ಮೀಸಲಾತಿಯಂತೆ ಒಳ ಮೀಸಲಾತಿ ಹಂಚಿಕೆ ಮಾಡಿದೆ.
ಪರಿಶಿಷ್ಟರಿಗೆ ಮೀಸಲಿರುವ ಶೇ 15 ರಷ್ಟು ಮೀಸಲಾತಿಯಲ್ಲಿ ಪ್ರವರ್ಗ ಎ,ಬಿ,ಸಿ ಗುಂಪುಗಳಿಗೆ ಕ್ರಮವಾಗಿ 5.25: 5.25: 4.5 ಅನುಪಾತದಲ್ಲಿ ಹಂಚಿಕೆ ಮಾಡಲಾಗಿದೆ. ಶೇ17 ರಷ್ಟು ಮೀಸಲಾತಿಯು ಹೈಕೋರ್ಟ್ ಅಂಗಳದಲ್ಲಿರುವ ಕಾರಣ ಶೇ15 ರಷ್ಟು ಮೀಸಲಾತಿಯಲ್ಲೇ ಒಳ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಶೇ 17 ರಷ್ಟು ಮೀಸಲಾತಿ ಪ್ರಕರಣವು ನ್ಯಾಯಾಲಯದಲ್ಲಿ ಇತ್ಯರ್ಥವಾದ ಬಳಿಕ ಉಳಿದ ಶೇ 2 ಮೀಸಲಾತಿಯನ್ನು ಎಡ ಹಾಗೂ ಬಲಗೈ ಸಮುದಾಯಕ್ಕೆ ತಲಾ ಒಂದರಂತೆ ಹಂಚಿಕೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪ್ರವರ್ಗ ಎ ಗುಂಪಿನಲ್ಲಿ18 ಜಾತಿಗಳು, ಪ್ರವರ್ಗ ಬಿ ಗುಂಪಿನಲ್ಲಿ 20 ಜಾತಿಗಳು ಹಾಗೂ ಪ್ರವರ್ಗ ಸಿ ಗುಂಪಿನಲ್ಲಿ 59 ಜಾತಿಗಳು ಬರಲಿವೆ. ಈ ಸಮುದಾಯಗಳ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಆಧಾರದ ಮೇಲೆ ಒಳ ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಅಲೆಮಾರಿ ಸಮುದಾಯಗಳನ್ನು ಡಾ.ಎನ್.ಎನ್. ನಾಗಮೋಹನ್ ದಾಸ್ ವರದಿಯಲ್ಲಿ ಪ್ರತ್ಯೇಕ ಗುಂಪಾಗಿ ರಚಿಸಿ, ಶೇ 1 ರಷ್ಟು ಮೀಸಲಾತಿ ನಿಗದಿ ಮಾಡಲಾಗಿತ್ತು. ಆದರೆ, ಶೇ 1 ರಷ್ಟು ಮೀಸಲಾತಿಯಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುವುದಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಅಲೆಮಾರಿ ಸಮುದಾಯವನ್ನು ಪ್ರವರ್ಗ ಸಿ ಗುಂಪಿಗೆ (ಕೊರಚ, ಕೊರಮ, ಲಂಬಾಣಿ, ಭೋವಿ) ಸೇರಿಸಿ ಒಟ್ಟು ಮೀಸಲಾತಿಯನ್ನು ಶೇ4.5 ಹಂಚಿಕೆ ಮಾಡಿದೆ. 59 ಉಪ ಜಾತಿಗಳಿಗೆ ಶೇ 5 ರಲ್ಲಿ ಹುದ್ದೆಗಳು ಲಭ್ಯವಾಗಲಿವೆ. ಈ ಹುದ್ದೆಗಳ ಪೈಕಿ ಶೇ20 ರಷ್ಟು ಅಂದರೆ ಪ್ರತಿ ಐದು ಹುದ್ದೆಗೆ 1 ಹುದ್ದೆಯನ್ನು ಅಲೆಮಾರಿಗಳಿಗೆ ಮೀಸಲಿಡಲಾಗಿದೆ. ಇದರಿಂದ ಆ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಜ್ಯ ಸರ್ಕಾರ ಕಳೆದ ಫೆ.27 ರಂದು ಹೊರಡಿಸಿದ್ದ ನೇಮಕಾತಿ ಅಧಿಸೂಚನೆಯನ್ನು ಹಿಂಪಡೆದು, ಅಂತಿಮ ಒಳ ಮೀಸಲಾತಿಗೆ ಅನ್ವಯಿಸುವಂತೆ ಹೊಸ ಅಧಿಸೂಚನೆ ಪ್ರಕಟಿಸಲಿದೆ. 56,432 ಹುದ್ದೆಗಳಿಗೆ ಶೀಘ್ರವೇ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಿಸಲು ತೀರ್ಮಾನಿಸಲಾಗಿದೆ ಎಂದರು.
ರೋಸ್ಟರ್ ಬಿಂದು ಪರಿಷ್ಕರಣೆ
ರಾಜ್ಯ ಸರ್ಕಾರ ಈ ಹಿಂದೆ ಮಾಡಿದ್ದ 6:6:5 ಅನುಪಾತಕ್ಕೆ ಅನ್ವಯಿಸಿ 100 ಪಾಯಿಂಟ್‌ಗಳ ಆಧಾರದಲ್ಲಿ ರೋಸ್ಟರ್ ಪ್ರಕಟಿಸಿತ್ತು. ಈಗ ಅಂತಿಮವಾಗಿ ಒಳ ಮೀಸಲಾತಿಯು 5.25: 5.25: 4.5 ಆಗಿರುವುದರಿಂದ ರೋಸ್ಟರ್ ಬಿಂದುಗಳನ್ನು ಪರಿಷ್ಕರಿಸಬೇಕಾಗಿದೆ.
ಮೂಲಗಳ ಪ್ರಕಾರ ಈ ಬಾರಿ 1,000 ಬಿಂದುಗಳಿಗೆ ರೋಸ್ಟರ್ ಗೆ ತಯಾರಿಸಲಿದ್ದು, ಆ ಮೂಲಕ ಹುದ್ದೆ ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

