ರೋಸ್ಟರ್ ಬಿಂದು 400ಕ್ಕೆ ಹೆಚ್ಚಿಸಲು ಸಂಪುಟ ತೀರ್ಮಾನ; ಅಸಮಾಧಾನ ತಣಿಸಲು ಕಸರತ್ತು
x

ರೋಸ್ಟರ್ ಬಿಂದು 400ಕ್ಕೆ ಹೆಚ್ಚಿಸಲು ಸಂಪುಟ ತೀರ್ಮಾನ; ಅಸಮಾಧಾನ ತಣಿಸಲು ಕಸರತ್ತು

ರೋಸ್ಟರ್‌ ಬಿಂದುಗಳನ್ನು 100 ರಿಂದ 400 ಕ್ಕೆ ಹೆಚ್ಚಿಸುವ ಮೂಲಕ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಲು ಪ್ರಯತ್ನಿಸಿದೆ. ಈ ಬಗ್ಗೆ ʼದ ಫೆಡರಲ್‌ ಕರ್ನಾಟಕʼ ವರದಿ ಪ್ರಕಟಿಸಿತ್ತು


Click the Play button to hear this message in audio format

ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಈ ಮೊದಲಿನಿಂತೆ ಶೇ.15ರಷ್ಟು ಕಲ್ಪಿಸಲು ತೀರ್ಮಾನಿಸಿರುವ ರಾಜ್ಯ ಸರ್ಕಾರವು ರೋಸ್ಟರ್‌ ಬಿಂದುಗಳನ್ನು100 ರಿಂದ 400ಕ್ಕೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.

ರೋಸ್ಟರ್‌ ಬಿಂದು 100 ಇದ್ದ ಕಾರಣ ನೇಮಕಾತಿ ಪ್ರಕ್ರಿಯೆಯಲ್ಲಿ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಲು ಕಷ್ಟಕರವಾಗಿತ್ತು. ಹೀಗಾಗಿ ಇದನ್ನು ಹೆಚ್ಚಿಸುವ ಅನಿವಾರ್ಯತೆ ಸರ್ಕಾರಕ್ಕೆ ಇತ್ತು. ಈ ಹಿನ್ನೆಲೆ 100 ರಷ್ಟಿದ್ದ ರೋಸ್ಟರ್‌ ಬಿಂದುಗಳನ್ನು 400 ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಬಗ್ಗೆ ʼದ ಫೆಡರಲ್‌ ಕರ್ನಾಟಕʼ ವರದಿ ಪ್ರಕಟಿಸಿತ್ತು.

ರೋಸ್ಟರ್ ಬಿಂದು ಎನ್ನುವುದು ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿಯನ್ನು ಜಾರಿಗೊಳಿಸುವ ಒಂದು ಕ್ರಮ. ಈವರೆಗೆ ರಾಜ್ಯದಲ್ಲಿ 100 ಬಿಂದುಗಳ ರೋಸ್ಟರ್ ಚಾಲ್ತಿಯಲ್ಲಿದೆ. 100 ಹುದ್ದೆಗಳಿಗೆ ಇಂತಿಷ್ಟು ಹುದ್ದೆಗಳು ಇಂತಿಷ್ಟು ಸಮುದಾಯಗಳಿಗೆ ನಿಗದಿ ಮಾಡಲಾಗುತ್ತದೆ. 1995ರಿಂದ ಪಾಲಿಸಿಕೊಂಡು ಬಂದಿರುವ ಪರಿಶಿಷ್ಟ ಜಾತಿಗಳಿಗೆ ಶೇ.15ರಷ್ಟು ಮೀಸಲಾತಿ ನೀತಿಯನ್ನು ಮತ್ತೊಮ್ಮೆ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ. ಪರಿಶಿಷ್ಟ ಜಾತಿ ಎಡಗೈ ಹಾಗೂ ಬಲಗೈ ಸಮುದಾಯಗಳಿಗೆ ತಲಾ ಶೇ.5.25 ಹಾಗೂ ಸ್ಪರ್ಶ ಸಮುದಾಯ ಸೇರಿ ಅಲೆಮಾರಿ ಸಮುದಾಯಕ್ಕೆ ಶೇ.4.5ರಷ್ಟು ಪಾಲು ನೀಡುತ್ತಿರುವುದರಿಂದ ರೋಸ್ಟರ್ ಬಿಂದುಗಳನ್ನು 100ರಿಂದ 400ಕ್ಕೆ ಹೆಚ್ಚಿಸುವುದು ಅನಿವಾರ್ಯವಾಗಿದೆ.

ಇಲ್ಲಿ ಶೇ. 5.25 ಎನ್ನುವುದು ಪೂರ್ಣ ಸಂಖ್ಯೆಯಲ್ಲ. 100 ಹುದ್ದೆಗಳ ನೇಮಕಾತಿಯಲ್ಲಿ ಶೇ.5.25 ಹುದ್ದೆಗಳನ್ನು ನೀಡಲು ಸಾಧ್ಯವಿಲ್ಲ. ಪ್ರತಿ ಬಾರಿ ನೇಮಕಾತಿ ನಡೆದಾಗ ಈ ಶೇ.0.25 ರಷ್ಟು ಭಾಗ ಉಳಿಯುತ್ತಾ ಹೋಗುತ್ತದೆ. ನಾಲ್ಕು ಬಾರಿ ನೇಮಕಾತಿ ನಡೆದಾಗ ಮಾತ್ರ ಅದು ಒಂದು ಪೂರ್ಣ ಹುದ್ದೆಯಾಗುತ್ತದೆ (0.25 x4 = 1). ಈ ಗಣಿತದ ಬಿಕ್ಕಟ್ಟನ್ನು ನೀಗಿಸಲು ರೋಸ್ಟರ್ ಬಿಂದುಗಳನ್ನು 400ಕ್ಕೆ ಹೆಚ್ಚಿಸಬೇಕಾಗಿತ್ತು. 400ರ ರೋಸ್ಟರ್‌ನಲ್ಲಿ ಶೇ. 5.25 ಎಂದರೆ ನಿಖರವಾಗಿ 21 ಹುದ್ದೆಗಳಾಗುತ್ತವೆ

56,432 ಹುದ್ದೆಗಳ ನೇಮಕಾತಿಗೆ ತಕ್ಷಣದ ಅನ್ವಯ

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್.‌ಕೆ.ಪಾಟೀಲ್‌, ಈ ನಿರ್ಧಾರವು ಕೇವಲ ಕಾಗದದ ಮೇಲೆ ಉಳಿಯದೆ ತಕ್ಷಣ ಜಾರಿಗೆ ಬರಲಿದೆ. ಆರ್ಥಿಕ ಇಲಾಖೆಯು ಈಗಾಗಲೇ ಅನುಮೋದನೆ ನೀಡಿರುವ 56,432 ಸರ್ಕಾರಿ ಹುದ್ದೆಗಳ ನೇರ ನೇಮಕಾತಿಗೆ ಈ ಹೊಸ ಒಳಮೀಸಲಾತಿ ನೀತಿಯನ್ನು ಅನ್ವಯಿಸಲು ಸಚಿವ ಸಂಪುಟ ಆದೇಶಿಸಿದೆ. ಇದು ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ವಿಶೇಷವಾಗಿ ಈವರೆಗೆ ಮೀಸಲಾತಿಯ ಲಾಭದಿಂದ ವಂಚಿತರಾಗಿದ್ದ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಇದು ವರದಾನವಾಗಲಿದೆ ಎಂದರು.

ಅಲೆಮಾರಿ, ಅರೆ ಅಲೆಮಾರಿ ಜಾತಿಗಳಿಗೆ ಮೊದಲ ಆದ್ಯತೆ

ಸಚಿವ ಸಂಪುಟದ ಈ ನಿರ್ಧಾರದಲ್ಲಿ ಮಾನವೀಯ ದೃಷ್ಟಿಕೋನವೂ ಅಡಗಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಸುಮಾರು 59 ಅಲೆಮಾರಿ ಮತ್ತು ಅರೆ ಅಲೆಮಾರಿ ಜಾತಿಗಳಿಗೆ ಮೀಸಲಾತಿ ಹಂಚಿಕೆಯಲ್ಲಿ ಮೊದಲ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೀಸಲಾತಿಯ ಫಲ ಸಿಗಬೇಕು ಎಂಬುದು ಈ ನಿರ್ಧಾರದ ಮೂಲ ಉದ್ದೇಶವಾಗಿದೆ. ಸರ್ಕಾರದ ಈ ಹೊಸ ಒಳಮೀಸಲಾತಿ ನೀತಿಯು ಕೇವಲ ಉದ್ಯೋಗ ನೇಮಕಾತಿಗಷ್ಟೇ ಸೀಮಿತವಾಗಿಲ್ಲ. ಶಾಲಾ-ಕಾಲೇಜುಗಳ ಪ್ರವೇಶಾತಿಯಲ್ಲೂಇದೇ ಮಾದರಿಯನ್ನು ಅನುಸರಿಸಲಾಗುತ್ತದೆ. ಇದರಿಂದಾಗಿ ಪರಿಶಿಷ್ಟ ಜಾತಿಯ ಎಲ್ಲಾ ಒಳಪಂಗಡಗಳ ವಿದ್ಯಾರ್ಥಿಗಳಿಗೂ ಅವರವರ ಜನಸಂಖ್ಯೆಗೆ ಅನುಗುಣವಾಗಿ ಶೈಕ್ಷಣಿಕ ಅವಕಾಶಗಳು ದೊರೆಯಲಿವೆ ಎಂದು ತಿಳಿಸಿದರು.

ಚೆನ್ನೈ-ಬೆಂಗಳೂರು ಮತ್ತು ಹೈದರಾಬಾದ್-ಬೆಂಗಳೂರು ಹೈಸ್ಪೀಡ್ ರೈಲು

ಕೇಂದ್ರ ಸರ್ಕಾರ ಪ್ರಾಯೋಜಿತ ಚೆನ್ನೈ-ಬೆಂಗಳೂರು ಮತ್ತು ಹೈದರಾಬಾದ್-ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕರ್ನಾಟಕದ ವ್ಯಾಪ್ತಿಯಲ್ಲಿ ಅಲಿಪುರ, ದೇವನಹಳ್ಳಿ ಮತ್ತು ಕೋಡಿಹಳ್ಳಿಗಳಲ್ಲಿ ನಿಲ್ದಾಣಗಳು ಬರಲಿವೆ. ದೇವನಹಳ್ಳಿ ನಿಲ್ದಾಣವು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಒದಗಿಸಲಿದೆ ಎಂದು ಹೇಳಿದರು.


Read More
Next Story