
Internal Reservation| ಒಳ ಮೀಸಲಾತಿ ಕಗ್ಗಂಟು; ಕೈʼಬಲʼಕ್ಕೆ ʼಎಡʼ ಪೆಟ್ಟು!
ಗುರುವಾರ ನಡೆದ ಸಚಿವಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಕುರಿತು ಎಡಗೈ-ಬಲಗೈ ಸಮುದಾಯದ ನಾಯಕರ ಮಧ್ಯೆ ಒಮ್ಮತ ಮೂಡದ ಕಾರಣ, ನಾಳೆ (ಮಾ.10) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ರಾಜ್ಯದಲ್ಲಿ 35 ವರ್ಷಗಳಿಂದ ನಡೆಯುತ್ತಿದ್ದ ʼಒಳ ಮೀಸಲಾತಿʼ ಹೋರಾಟ ಸುಖಾಂತ್ಯವಾಯಿತು ಎನ್ನುವಷ್ಟರಲ್ಲಿ ಶೇ 56 ಮೀಸಲಾತಿ ಹೆಚ್ಚಳ ಹಾಗೂ ಒಳ ಮೀಸಲಾತಿ ಜಾರಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಪರಿಣಾಮ ಪರಿಶಿಷ್ಟ ಜಾತಿಯ ಉಪಪಂಗಡಗಳಾದ ಎಡಗೈ ಹಾಗೂ ಬಲಗೈ ಸಮುದಾಯಗಳ ಮಧ್ಯೆ ಬಿಕ್ಕಟ್ಟು ಸೃಷ್ಟಿಯಾಗಿದೆ.
ನೇಮಕಾತಿ ಹಾಗೂ ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳು ಕೂಡ ಗೊಂದಲ ಸೃಷ್ಟಿಸಿದ್ದು, ಪರಸ್ಪರ ಕಿತ್ತಾಟಕ್ಕೆ ಕಾರಣವಾಗಿದೆ. ಒಳ ಮೀಸಲಾತಿಗೆ ಪಟ್ಟು ಹಿಡಿದಿರುವ ಎಡಗೈ ಸಮುದಾಯವು ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದು, ಕಾಂಗ್ರೆಸ್‌ಗೆ ರಾಜಕೀಯವಾಗಿ ಪಾಠ ಕಲಿಸಲು ಮುಂದಾಗಿದೆ. ಇದೇ ವಿಚಾರ ಎಡಗೈ ಹಾಗೂ ಬಲಗೈ ಸಮುದಾಯದ ಸಚಿವರ ಮಧ್ಯೆ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ʼಕೈʼಯಿಂದ ದೂರ ಸರಿಯುವ ಎಚ್ಚರಿಕೆ
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಒಳ ಮೀಸಲಾತಿ ಜಾರಿ ಮಾಡದಿದ್ದರೆ ಇಡೀ ಸಮುದಾಯ ಕಾಂಗ್ರೆಸ್ ಪಕ್ಷದಿಂದ ದೂರ ಸರಿಯಲು ನಿರ್ಧರಿಸಿದೆ. 2012 ರಲ್ಲಿ ಅಂದಿನ ಬಿಜೆಪಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ನ್ಯಾ. ಸದಾಶಿವ ಆಯೋಗವು ವರದಿ ಸಲ್ಲಿಸಿತ್ತು. 2018 ರ ಚುನಾವಣೆ ಅವಧಿಯಲ್ಲಿ ವರದಿ ಜಾರಿಗೆ ಆಗ್ರಹಿಸಿ ಎಡಗೈ ಸಮುದಾಯವು ಬಿಜೆಪಿಯನ್ನು ಬೆಂಬಲಿಸಿತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜೆ.ಸಿ. ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪ ಸಮಿತಿಯು ಪರಿಶಿಷ್ಟರ ಒಟ್ಟು ಮೀಸಲಾತಿಯನ್ನು ಶೇ 17 ಕ್ಕೆ ಹೆಚ್ಚಿಸಿತ್ತು. ಅದರಂತೆ ಎಡಗೈ ಸಂಬಂಧಿತ ಜಾತಿಗಳಿಗೆ ಶೇ 6, ಬಲಗೈ ಸಂಬಂಧಿತ ಜಾತಿಗಳಿಗೆ ಶೇ 5.5, ಸ್ಪಶ್ಯ ಜಾತಿಗಳಿಗೆ ಶೇ 4.5 ಹಾಗೂ ಇತರರಿಗೆ ಶೇ 1 ರಷ್ಟು ಮೀಸಲಾತಿ ಹಂಚಿಕೆ ಮಾಡಿತ್ತು.
2020ರಲ್ಲಿ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಆಯೋಗವು ಪರಿಶಿಷ್ಟ ಪಂಗಡದವರ ಮೀಸಲಾತಿಯನ್ನು ಶೇ3 ರಿಂದ 7ಕ್ಕೆ ಹೆಚ್ಚಿಸಿತು. 2022 ರಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರವು ಚುನಾವಣೆ ಹೊಸ್ತಿಲಲ್ಲಿ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9 ನೇ ಅನುಸೂಚಿಗೆ ಸೇರಿಸಲು ಶಿಫಾರಸು ಮಾಡಿತ್ತು. ಆದರೆ, ಈವರೆಗೂ ಕೇಂದ್ರ ಸರ್ಕಾರ ಈ ಸಂಬಂಧ ಕ್ರಮ ಕೈಗೊಂಡಿರಲಿಲ್ಲ.
ಆಗ ಎಡಗೈ ಸಮುದಾಯವರು ಬಿಜೆಪಿಯಿಂದ ದೂರ ಸರಿದು ಕಾಂಗ್ರೆಸ್ ಬೆಂಬಲಿಸಿದರು. ಕಾಂಗ್ರೆಸ್ ಪಕ್ಷದಲ್ಲಿನ ಎಡಗೈ ಹಾಗೂ ಬಲಗೈ ಸಮುದಾಯದ ಹಿರಿಯ ನಾಯಕರು ಒಟ್ಟಾಗಿ ಚರ್ಚಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ಜಾರಿ ಮಾಡಲಿದೆ ಎಂದು ಘೋಷಿಸಿದ್ದರು. ಅದರಂತೆ 2023 ರ ಚುನಾವಣೆಯಲ್ಲಿ ಎಡಗೈ ಸಮುದಾಯವನ್ನು ಕಾಂಗ್ರೆಸ್ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು. ಚುನಾವಣೆಯಲ್ಲಿ ಗೆಲುವು ಸಾಧಿಸಿತು.
ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಅವರು, ಕೊಟ್ಟ ಮಾತಿನಂತೆ ಒಳ ಮೀಸಲಾತಿ ಜಾರಿಗಾಗಿ ನ್ಯಾ.ನಾಗಮೋಹನ್‌ದಾಸ್ ಆಯೋಗ ನೇಮಿಸಿದರು. ಹೊಸದಾಗಿ ಗಣತಿ ನಡೆಸಿದ ಆಯೋಗವು ಮೀಸಲಾತಿ ವರ್ಗೀಕರಿಸಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ರಾಜ್ಯ ಸರ್ಕಾರವು ಪ್ರಭಾವಿಗಳ ಒತ್ತಡಕ್ಕೆ ಮಣಿದು, ಶಿಫಾರಸುಗಳನ್ನು ಪರಿಷ್ಕರಿಸಿದ ನಂತರ ಒಳ ಮೀಸಲಾತಿ ವಿವಾದಕ್ಕೆ ಈಡಾಯಿತು. ಇಷ್ಟೆಲ್ಲಾ ಬಿಕ್ಕಟ್ಟಿಗೆ ಸರ್ಕಾರದ ಅವೈಜ್ಞಾನಿಕ ಕ್ರಮ ಹಾಗೂ ಎಡಗೈ ಸಮುದಾಯದೆಡೆಗಿನ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಗಳು ಕೇಳಿ ಬಂದವು.
ಈಗ ಒಳ ಮೀಸಲಾತಿ ಇಲ್ಲದೇ ನೇಮಕಾತಿ ಪ್ರಕ್ರಿಯೆ ನಡೆಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಇಡೀ ಸಮುದಾಯ ದೂರ ಸರಿಯಲು ತೀರ್ಮಾನಿಸಿದೆ ಎನ್ನಲಾಗಿದೆ.
ಸರ್ಕಾರಕ್ಕೆ ತಲೆನೋವಾದ ಒಳ ಮೀಸಲಾತಿ; ಬಿಜೆಪಿಗೆ ಲಾಭ?
56 ಸಾವಿರ ಸರ್ಕಾರಿ ಹುದ್ದೆಗಳನ್ನು ಶೇ 50ರ ಮೀಸಲಾತಿ ಆಧಾರದ ಮೇಲೆ ಭರ್ತಿ ಮಾಡಬೇಕೋ ಅಥವಾ ಒಳ ಮೀಸಲಾತಿ ಅನ್ವಯಿಸಿ ಭರ್ತಿ ಮಾಡಬೇಕೋ ಎಂಬ ಗೊಂದಲ ರಾಜ್ಯ ಸರ್ಕಾರವನ್ನು ಕಾಡುತ್ತಿದೆ.
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆಯಾಗದಿದ್ದರೆ ನೇಮಕಾತಿ ಪ್ರಕ್ರಿಯೆಯೇ ನಡೆಸಕೂಡದು" ಎಂದು ಮಾದಿಗ ಸಮುದಾಯದ ಸಂಘಟನೆಗಳು ಆಗ್ರಹಿಸಿವೆ. ಅಲ್ಲದೇ ಮಾ.12 ರಂದು ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ಕೊಟ್ಟಿವೆ.
ಇದಕ್ಕೆ ತದ್ವಿರುದ್ಧವಾಗಿ ಬಲಗೈ ಸಮುದಾಯವು ಯಾವುದೇ ವೈಜ್ಞಾನಿಕ ದತ್ತಾಂಶವಿಲ್ಲದೆ ತರಾತುರಿಯಲ್ಲಿ ಒಳ ಮೀಸಲಾತಿ ಜಾರಿ ಮಾಡಿದರೆ ನಮಗೆ ಅನ್ಯಾಯವಾಗಲಿದೆ. ಹಳೆಯ ಮೀಸಲಾತಿ ಅನ್ವಯವೇ ನೇಮಕಾತಿ ನಡೆಸಬೇಕು ಎಂದು ಹಠಕ್ಕೆ ಬಿದ್ದಿದೆ. ಪರಿಶಿಷ್ಟ ಜಾತಿಗಳಲ್ಲಿ ಎಡಗೈ ಹಾಗೂ ಬಲಗೈ ಸಮುದಾಯದ ಆಗ್ರಹದಿಂದ ಸರ್ಕಾರವು 'ತ್ರಿಶಂಕು' ಸ್ಥಿತಿಗೆ ತಲುಪಿದೆ.
ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರು ಸಹಿ ಹಾಕಿದ್ದರೂ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಸರ್ಕಾರದ ಕೈ ಕಟ್ಟಿಹಾಕಿದೆ. ಈ ಮಧ್ಯೆ, ಶೇ56 ಮೀಸಲಾತಿ ಹೆಚ್ಚಳಕ್ಕೂ ತಡೆ ನೀಡಿರುವುದರಿಂದ ಒಳ ಮೀಸಲಾತಿ ವರ್ಗೀಕರಣದ ಲೆಕ್ಕಾಚಾರವೇ ಬುಡಮೇಲಾಗಿದೆ.
ಮೀಸಲಾತಿ ಹೆಚ್ಚಳಕ್ಕೆ ತಡೆ
ಬಿಜೆಪಿ ಅವಧಿಯ ಸರ್ಕಾರ ಹೆಚ್ಚಿಸಿದ್ದ ಮೀಸಲಾತಿಯನ್ನು ಪ್ರಶ್ನಿಸಿ ಕೆಲ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳು ಹೈಕೋರ್ಟ್ ಮೊರೆ ಹೋದ ಹಿನ್ನೆಲೆ ಶೇ 56 ಮೀಸಲಾತಿಗೆ ನ್ಯಾಯಾಲಯದ ತಡೆ ನೀಡಿದೆ. ಇದರ ಬೆನ್ನಲ್ಲೇ ನ್ಯಾ.ನಾಗಮೋಹನ್‌ದಾಸ್ ಆಯೋಗದ ಒಳ ಮೀಸಲಾತಿ ವರದಿಯನ್ನು ಜಾರಿಗೆ ತಂದರೂ ನ್ಯಾಯಾಲಯ ತಡೆ ಕೊಟ್ಟಿದೆ. ಇದು ನೇಮಕಾತಿ ಪ್ರಕ್ರಿಯೆ ಮೇಲೆ ಪರಿಣಾಮ ಬೀರಿತ್ತು. ರಾಜ್ಯ ಸರ್ಕಾರ ಶೇ50 ರಷ್ಟು ಮೀಸಲಾತಿ ಆಧಾರದಲ್ಲಿ ನೇಮಕಾತಿ ನಡೆಸಿದರೆ ತನ್ನ ಅಭ್ಯಂತರವಿಲ್ಲ ಎಂಬ ಹೈಕೋರ್ಟ್ ಅಭಿಪ್ರಾಯದ ಮೇಲೆಯೇ ವಿದ್ಯಾರ್ಥಿ ಸಂಘಟನೆಗಳು ಹಾಗೂ ಉದ್ಯೋಗಾಕಾಂಕ್ಷಿಗಳು ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಗಡುವು ಸಹ ನೀಡಿದ್ದರು.
ಶೇ. 50 ಮೀಸಲಾತಿಯಡಿ ನೇಮಕಾತಿ
ವಿದ್ಯಾರ್ಥಿ ಸಂಘಟನೆಗಳ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಶೇ.50 ರಷ್ಟು ಮೀಸಲಾತಿ ಆಧಾರದಲ್ಲೇ ರಾಜ್ಯಾದ್ಯಂತ ಖಾಲಿ ಉಳಿದಿರುವ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಿದೆ. ಆದರೆ, ಒಳ ಮೀಸಲಾತಿ ಆಧಾರದಲ್ಲೇ ನೇಮಕಾತಿಗೆ ಎಡಗೈ ಸಮುದಾಯ ಪಟ್ಟು ಹಿಡಿದರೆ, ವಿವಾದ ಬಗೆಹರಿಯುವವರೆಗೂ ಹಳೆಯ ಮೀಸಲಾತಿಯಂತೆ ನೇಮಕಾತಿ ನಡೆಸುವಂತೆ ಬಲಗೈ ಸಮುದಾಯ ಪ್ರತಿಪಟ್ಟು ಹಿಡಿದಿದೆ. ಈ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆದರೂ ಯಾವುದೇ ಅಂತಿಮ ನಿರ್ಣಯ ಕೈಗೊಳ್ಳಲು ಆಗಿರಲಿಲ್ಲ.
35 ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ನಡೆಸಿದರೂ ಹಳೆಯ ಮೀಸಲಾತಿಯಲ್ಲೇ ನೇಮಕಾತಿ ನಡೆಸಿದರೆ ಸಮುದಾಯಕ್ಕೆ ಅನ್ಯಾಯವಾಗಲಿದೆ. ಒಂದು ವೇಳೆ ಸರ್ಕಾರ ತನ್ನ ನಿರ್ಧಾರಕ್ಕೆ ಕಟ್ಟಿಬಿದ್ದರೆ, ಶೇ 50 ರಷ್ಟು ಮೀಸಲಾತಿಯಲ್ಲೇ ಒಳ ಮೀಸಲಾತಿ ಒದಗಿಸಬೇಕು ಎಂದು ಎಡಗೈ ಸಮುದಾಯಕ್ಕೆ ಸೇರಿದ ಸರ್ಕಾರದ ಸಚಿವರು ಹಾಗೂ ಸಮಾಜದ ಮುಖಂಡರು ಒತ್ತಡ ಹೇರುತ್ತಿದ್ದಾರೆ.
ಒಳಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಒದಗಿಸುವ ಮಸೂದೆಗೆ ರಾಜ್ಯಪಾಲರು ಸಹಿ ಹಾಕಿದ ಮೇಲೂ ರಾಜ್ಯ ಸರ್ಕಾರ ಅನಗತ್ಯ ಕ್ರಮಗಳ ಮೂಲಕ ಗೊಂದಲ ಸೃಷ್ಟಿಸುತ್ತಿದೆ. ಒಳ ಮೀಸಲಾತಿಗೆ ಮಸೂದೆಯಿಂದ ಕಾನೂನು ರಕ್ಷಣೆ ಸಿಕ್ಕರೂ ಬೇಕೆಂತಲೇ ಒಳ ಮೀಸಲಾತಿ ಜಾರಿಯಿಂದ ಹಿಂದೆ ಸರಿಯುತ್ತಿದೆ ಎಂಬುದು ಎಡಗೈ ಸಮುದಾಯದ ನಾಯಕರ ಆರೋಪ.
ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಕುರಿತು ನಡೆದ ಚರ್ಚೆಯಲ್ಲಿ ಶೇ.50 ರಲ್ಲಿ ಒಳ ಮೀಸಲಾತಿ ಅನ್ವಯಿಸುವ ಬಗ್ಗೆ ಸರ್ಕಾರ ಭರವಸೆ ನೀಡಿದ್ದರೂ ಎಡಗೈ ಸಮುದಾಯದವರು ಅದನ್ನು ಅಧಿಕೃತವಾಗಿ ಘೋಷಿಸುವಂತೆ ಪಟ್ಟು ಹಿಡಿದಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆಯೇ ಇದೇ ರೀತಿಯ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ, ಅದನ್ನು ಈಡೇರಿಸಿರಲಿಲ್ಲ. ಹಾಗಾಗಿ, ಶೇ. 50 ರಷ್ಟು ಮೀಸಲಾತಿಯಲ್ಲಿ ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ಕಲ್ಪಿಸಬೇಕು. ಇದಕ್ಕೆ ನಾಗಮೋಹನ್ ದಾಸ್ ಅವರ ಎಂಫರಿಕಲ್ ಡೇಟಾ ಬಳಸಬೇಕು ಎಂದು ಎಡಗೈ ಸಮುದಾಯ ನಾಯಕರು ಆಗ್ರಹಿಸಿದ್ದಾರೆ.
ನಾಳೆ ಸಿಎಂ ನೇತೃತ್ವದಲ್ಲಿ ಸಭೆ
ಕಳೆದ ಗುರುವಾರ ನಡೆದ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಕುರಿತುಂತೆ ಎಡಗೈ ಹಾಗೂ ಬಲಗೈ ಸಮುದಾಯದ ನಾಯಕರ ಮಧ್ಯೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ನಾಳೆ (ಮಾ.10) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಸೋಮವಾರ ಬಲಗೈ ಸಮುದಾಯದ ಸಚಿವ ಡಾ.ಜಿ. ಪರಮೇಶ್ವರ್ ಅವರು ಎಡಗೈ ಸಮುದಾಯದ ಸಚಿವರಾದ ಕೆ.ಎಚ್.ಮುನಿಯಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರೂ ತೀವ್ರ ಕುತೂಹಲ ಪಡೆದುಕೊಂಡಿದೆ. ನಾಳೆ ನಡೆಯಲಿರುವ ಉನ್ನತ ಮಟ್ಟದ ಸಭೆ ಎರಡೂ ಸಮುದಾಯಗಳಿಗೆ ಅತ್ಯಂತ ನಿರ್ಣಾಯಕವಾಗಲಿದೆ. ಅಷ್ಟರಲ್ಲಿ ಏನಾದರೂ ಪರಿಹಾರ ಸೂತ್ರ ಕಂಡುಕೊಳ್ಳುವ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ.
ಕಾನೂನು ತಜ್ಞರು ಹೇಳುವುದೇನು?
ಒಳ ಮೀಸಲಾತಿಗೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ರಾಜ್ಯ ಸರ್ಕಾರವು ಬಲವಾದ ವೈಜ್ಞಾನಿಕ ದತ್ತಾಂಶಗಳನ್ನು ಒದಗಿಸಬೇಕು. ಬಲಗೈ ಮತ್ತು ಎಡಗೈ ಸಮುದಾಯಗಳ ನಡುವೆ ಸಮನ್ವಯ ಮೂಡಿಸಲು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯ ಪರಿಷ್ಕೃತ ಆವೃತ್ತಿಯನ್ನು ಜಾರಿಗೆ ತರುವ ಧೈರ್ಯ ತೋರಬೇಕು. ಆಗ ಮಾತ್ರ ಒಳ ಮೀಸಲಾತಿ ಬಿಕ್ಕಟ್ಟು ಬಗೆಹರಿಯುವ ಸಾಧ್ಯತೆ ಇದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

