
ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಮನೆಯಲ್ಲಿ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಸಚಿವ ಆರ್.ಬಿ. ತಿಮ್ಮಾಪುರ ಸೇರಿದಂತೆ ಸಮುದಾಯದ ಮುಖಂಡರು ಸಭೆ ನಡೆಸಿದರು.
Internal Reservation| ಒಗ್ಗಟ್ಟು ಪ್ರದರ್ಶಿಸಲು ದಲಿತ ಸಚಿವರ ತೀರ್ಮಾನ; ಇಂದೇ ಅಂತಿಮ ನಿರ್ಧಾರ ನಿರೀಕ್ಷೆ
ಯಾರಿಗೂ ಅನ್ಯಾಯವಾಗದಂತೆ ಎ, ಬಿ, ಸಿ ಮಾದರಿಯಲ್ಲಿ ಮೀಸಲಾತಿಯನ್ನು ಸಮಾನವಾಗಿ ಹಂಚಿಕೆ ಮಾಡಿಕೊಳ್ಳುವ ಕುರಿತು ಚರ್ಚಿಸಿದ್ದೇವೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಅವರು ಸಭೆಯ ಬಳಿಕ ತಿಳಿಸಿದ್ದಾರೆ.
ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಒಳಮೀಸಲಾತಿ ಬಿಕ್ಕಟ್ಟಿಗೆ ನ್ಯಾಯಸಮ್ಮತ ಪರಿಹಾರ ಕಂಡುಕೊಳ್ಳಲು ಪರಿಶಿಷ್ಟ ಜಾತಿಯ ಎಡಗೈ ಹಾಗೂ ಬಲಗೈ ಸಮುದಾಯದ ಸಚಿವರು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ (ಏ.24) ಆರಂಭವಾಗಿರುವ ವಿಶೇಷ ಸಚಿವ ಸಂಪುಟ ಸಭೆಗೂ ಮುನ್ನ ಪ್ರತ್ಯೇಕ ಸಭೆ ನಡೆಸಿದ ಸಚಿವರು, ಮೀಸಲಾತಿ ಹಂಚಿಕೆ ಕುರಿತು ಒಮ್ಮತದ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಹಾಗಾಗಿ, ಸಚಿವ ಸಂಪುಟ ಸಭೆಯ ಅಂತಿಮ ನಿರ್ಧಾರ ಇಂದೇ ಹೊರಬೀಳುವ ಸಾಧ್ಯತೆ ಇದೆ.
ಒಳಮೀಸಲಾತಿ ಹಂಚಿಕೆಯಲ್ಲಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಲು ಸಚಿವರು ನಿರ್ಧರಿಸಿದ್ದಾರೆ. ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ನಿವಾಸದಲ್ಲಿ ನಡೆದ ದಲಿತ ಸಮುದಾಯದ ಸಚಿವರ ಸಭೆಯಲ್ಲಿ ಕೆ.ಹೆಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ ಸೇರಿ ಹಲವು ನಾಯಕರು ಸುದೀರ್ಘ ಸಮಾಲೋಚನೆ ನಡೆಸಿದರು. ಒಳ ಮೀಸಲಾತಿ ವಿಚಾರದಲ್ಲಿ ಒಮ್ಮತದ ಒಗ್ಗಟ್ಟು ಪ್ರದರ್ಶಿಸಲು ನಿರ್ಧಾರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೆ.ಹೆಚ್. ಮುನಿಯಪ್ಪ, "ಯಾರಿಗೂ ಅನ್ಯಾಯವಾಗದಂತೆ ಎ-ಬಿ-ಸಿ ಮಾದರಿಯಲ್ಲಿ ಮೀಸಲಾತಿಯನ್ನು ಸಮಾನವಾಗಿ ಹಂಚಿಕೆ ಮಾಡಿಕೊಳ್ಳುವ ಕುರಿತು ಚರ್ಚಿಸಿದ್ದೇವೆ. ಇದೊಂದು ಸಂವೇದನಾಶೀಲ ವಿಚಾರ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಇಡೀ ಸಂಪುಟ ಸಭೆ ಒಮ್ಮತದ ನಿರ್ಧಾರ ಕೈಗೊಳ್ಳಲಿದೆ" ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಅಚಲ ನಿರ್ಧಾರ
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿ, "ಮೀಸಲಾತಿ ಹಂಚಿಕೆ ವಿಚಾರವಾಗಿ ಅಧಿವೇಶನದಲ್ಲೇ ನಾವು ಸ್ಪಷ್ಟ ನಿಲುವು ಪ್ರಕಟಿಸಿದ್ದೇವೆ. ಬಲಗೈ ಸಮುದಾಯದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಹೊಂದಿದ್ದಾರೆ, ಆದರೆ ಸರ್ಕಾರ ಅಂತಿಮವಾಗಿ ಜನಪರ ನಿರ್ಧಾರ ಕೈಗೊಳ್ಳಲಿದೆ. ರೋಸ್ಟರ್ ಹಂಚಿಕೆಯ ಬಗ್ಗೆ ಇಂದು ಸಂಪುಟದಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ" ಎಂದು ತಿಳಿಸಿದರು.
ಬಲಗೈ ಒಕ್ಕೂಟಗಳ ವಿರೋಧ
ಇದೇ ವೇಳೆ, ಬಲಗೈ ಸಮುದಾಯಗಳ ಒಕ್ಕೂಟವು ನ್ಯಾ. ನಾಗಮೋಹನ್ ದಾಸ್ ವರದಿ ತಿರಸ್ಕರಿಸುವಂತೆ ಹಾಗೂ 2025 ಆಗಸ್ಟ್ 18 ರ ಸಂಪುಟ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಒತ್ತಾಯಿಸಿದೆ.
ಏನಿದು ವಿವಾದ ?
ಪರಿಶಿಷ್ಟ ಜಾತಿಯಲ್ಲಿ ಹಿಂದುಳಿದವರಿಗೆ ಒಳ ಮೀಸಲು ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದ ಅನ್ವಯ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮಹೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿ ವೈಜ್ಞಾನಿಕ ದತ್ತಾಂಶ ಸಂಗ್ರಹಿಸಿತ್ತು. ವರದಿಯಲ್ಲಿ ಕೆಲವು ಮಾರ್ಪಾಡು ಮಾಡಿ ಪರಿಶಿಷ್ಟ ಜಾತಿಯನ್ನು ಎ, ಬಿ, ಸಿ ಪಂಗಡಗಳಾಗಿ ವಿಂಗಡಿಸಿ ಕ್ರಮವಾಗಿ ಶೇ.6, 6, 5 ಮೀಸಲಾತಿಯನ್ನು ಹಂಚಿಕೆ ಮಾಡಿ ರಾಜ್ಯಪಾಲರ ಅನುಮೋದನೆಯನ್ನೂ ಪಡೆಯಲಾಗಿತ್ತು. ಸರ್ಕಾರದ ಈ ನಿರ್ಧಾರದ ವಿರುದ್ದ, ಕೆಲವು ಸಚಿವರು ಹಾಗೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ರೋಸ್ಟರ್ ಪದ್ಧತಿಯನ್ನು ಮರು ನಿಗದಿಪಡಿಸುವಂತೆ ಆಗ್ರಹಿಸಿದ್ದರು.

