Internal Reservation| ಒಳ ಮೀಸಲಾತಿ ಬಿಕ್ಕಟ್ಟು ಕೊನೆಗೂ ಇತ್ಯರ್ಥ; ಎಡ-ಬಲಕ್ಕೆ ತಲಾ ಶೇ 5.25, ಸ್ಪೃಶ್ಯರಿಗೆ 4.5 ಮೀಸಲಾತಿ ಹಂಚಿಕೆ
x

Internal Reservation| ಒಳ ಮೀಸಲಾತಿ ಬಿಕ್ಕಟ್ಟು ಕೊನೆಗೂ ಇತ್ಯರ್ಥ; ಎಡ-ಬಲಕ್ಕೆ ತಲಾ ಶೇ 5.25, ಸ್ಪೃಶ್ಯರಿಗೆ 4.5 ಮೀಸಲಾತಿ ಹಂಚಿಕೆ

ಒಳ ಮೀಸಲಾತಿ ಜಾರಿಗೆ ತರಲೇಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದ ರಾಜ್ಯ ಸರ್ಕಾರ ಈ ಸಂಬಂಧ ಬಿಕ್ಕಟ್ಟು ಇತ್ಯರ್ಥ ಮಾಡಿಕೊಳ್ಳಲು ಸ್ವತಃ ಎಡ ಹಾಗೂ ಬಲಗೈ ಸಮುದಾಯದ ಸಚಿವರಿಗೆ ಸೂಚಿಸಲಾಗಿತ್ತು. ಸಂಪುಟ ಸಭೆಯಲ್ಲಿ ಸಮುದಾಯಗಳ ತೀರ್ಮಾನ ಆಧರಿಸಿ ಸಮಸ್ಯೆ ಇತ್ಯರ್ಥಪಡಿಸಿದೆ.


ಪರಿಶಿಷ್ಟ ಜಾತಿಯ ಎಡ ಹಾಗೂ ಬಲ ಸಮುದಾಯದ ತಿಕ್ಕಾಟಕ್ಕೆ ಕಾರಣವಾಗಿದ್ದ ಒಳ ಮೀಸಲಾತಿಗೆ ಕೊನೆಗೂ ತೆರೆಬಿದ್ದಿದೆ. ಶೇ 15ರಷ್ಟು ಮೀಸಲಾತಿಗೆ ಎ,ಬಿ,ಸಿ ಎಂದು ಮೂರು ಗುಂಪುಗಳನ್ನು ವರ್ಗೀಕರಿಸಿ ಕ್ರಮವಾಗಿ 5.25:5.25:4.5 ಅನುಪಾತದಲ್ಲಿ ಒಳ ಮೀಸಲಾತಿ ಜಾರಿಗೆ ವಿಶೇಷ ಸಂಪುಟ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.

ವಿಧಾನಸೌಧದಲ್ಲಿ ಶುಕ್ರವಾರ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಸಂಬಂಧ ಎದುರಾಗಿದ್ದ ಅಡೆತಡೆಯನ್ನು ಎರಡೂ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಗೆಹರಿಸಲಾಗಿದೆ. ಇದಕ್ಕೂ ಮುನ್ನ ಎಡ ಹಾಗೂ ಬಲ ಸಮುದಾಯದ ಸಚಿವರು ಪ್ರತ್ಯೇಕ ಸಭೆ ನಡೆಸಿ, ಯಾವುದೇ ಗೊಂದಲ ಇಲ್ಲದಂತೆ ಸಮಸ್ಯೆ ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದರು.ʼ ಸಚಿವ ಎಚ್‌.ಸಿ. ಮಹಾದೇವಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಂಡು, ಬಳಿಕ ಸಿಎಂ ಕಚೇರಿಯಲ್ಲಿ ಚರ್ಚಿಸಿದ್ದರು.

ಒಳ ಮೀಸಲಾತಿ ಜಾರಿಗೆ ತರಲೇಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದ ರಾಜ್ಯ ಸರ್ಕಾರ ಈ ಸಂಬಂಧ ಬಿಕ್ಕಟ್ಟು ಇತ್ಯರ್ಥ ಮಾಡಿಕೊಳ್ಳಲು ಸ್ವತಃ ಎಡ ಹಾಗೂ ಬಲಗೈ ಸಮುದಾಯದ ಸಚಿವರಿಗೆ ಸೂಚಿಸಲಾಗಿತ್ತು. ಸಂಪುಟ ಸಭೆಯಲ್ಲಿ ಸಮುದಾಯಗಳ ತೀರ್ಮಾನ ಆಧರಿಸಿ ಎ,ಬಿ,ಸಿ ಗುಂಪುಗಳಿಗೆ ಕ್ರಮವಾಗಿ 5.25:5.25:4.5 ಮೀಸಲಾತಿ ಹಂಚಿಕೆ ಮಾಡಲಾಗಿದೆ.

ಸುಪ್ರೀಂಕೋರ್ಟ್ ಇತ್ತೀಚೆಗೆ ಒಳಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ಹಸಿರು ನಿಶಾನೆ ತೋರಿಸಿದ ನಂತರ, ರಾಜ್ಯ ಸರ್ಕಾರ ಈ ಪ್ರಕ್ರಿಯೆಗೆ ವೇಗ ನೀಡಿತ್ತು.

ರಾಜ್ಯದಲ್ಲಿ ಈ ಹಿಂದೆ ಎ.ಜೆ. ಸದಾಶಿವ ಆಯೋಗ ಮತ್ತು ನಂತರದ ನಾಗಮೋಹನದಾಸ್ ಆಯೋಗಗಳ ವರದಿಗಳನ್ನು ಆಧರಿಸಿ ಚರ್ಚೆಗಳು ನಡೆಯುತ್ತಿವೆ. ಆದರೆ, ಇಲ್ಲಿ ಮುಖ್ಯವಾಗಿ ಮೀಸಲಾತಿ ಪ್ರಮಾಣ ಅತಿ ದೊಡ್ಡ ತಾಂತ್ರಿಕ ತೊಡಕಾಗಿ ಪರಿಣಮಿಸಿದೆ. ಸರ್ಕಾರ ಮೊದಲು ಪರಿಶಿಷ್ಟ ಜಾತಿಯ ಒಟ್ಟು ಮೀಸಲಾತಿಯನ್ನು ಶೇ. 17ಕ್ಕೆ ಹೆಚ್ಚಿಸಿ, ಅದನ್ನು ವರ್ಗೀಕರಣ ಮಾಡಲು ಉದ್ದೇಶಿಸಿತ್ತು. ಅದರಂತೆ ಎ-ಗುಂಪು ಬಲಗೈ-ಶೇ. 6, ಬಿ-ಗುಂಪು ಎಡಗೈ-ಶೇ. 6 ಮತ್ತು ಸಿ-ಗುಂಪು ಸ್ಪೃಶ್ಯರು ಶೇ. 5 ರಂತೆ ಹಂಚಿಕೆ ಮಾಡಲು ಯೋಜಿಸಲಾಗಿತ್ತು.

ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಒಟ್ಟು ಮೀಸಲಾತಿ ಪ್ರಮಾಣ ಶೇ. 50 ದಾಟುವಂತಿಲ್ಲ. ಒಂದು ವೇಳೆ ಶೇ. 17ರ ಲೆಕ್ಕಾಚಾರವನ್ನು ಅನ್ವಯಿಸಿದರೆ ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣ ಶೇ. 56ಕ್ಕೆ ಏರಿಕೆಯಾಗುತ್ತದೆ. ಇದು ಕಾನೂನು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ. ಹೀಗಾಗಿ, ಪ್ರಸ್ತುತ ಚಾಲ್ತಿಯಲ್ಲಿರುವ ಶೇ. 15ರಷ್ಟು ಮೀಸಲಾತಿಯಲ್ಲೇ ಒಳಮೀಸಲು ಹಂಚಿಕೆ ಮಾಡುವ ಅನಿವಾರ್ಯತೆಯಲ್ಲಿ ಸರ್ಕಾರವಿತ್ತು.

ಏಪ್ರಿಲ್ 16ರಂದು ನಡೆದ ಸಂಪುಟ ಸಭೆಯಲ್ಲಿ ಈ ಸಂಕೀರ್ಣತೆಯನ್ನು ಬಗೆಹರಿಸಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ವೈಜ್ಞಾನಿಕವಾಗಿ ದತ್ತಾಂಶ ವಿಶ್ಲೇಷಿಸಿ, ಅಂತಿಮವಾಗಿ ಒಳಮೀಸಲು ಹಂಚಿಕೆ ಮಾಡಲಾಗಿದೆ.

ಸಮಿತಿಯು ಬಲಗೈ ಸಮುದಾಯಕ್ಕೆ ಶೇ. 5.3, ಎಡಗೈ ಸಮುದಾಯಕ್ಕೆ ಶೇ. 5.3ರಷ್ಟು ಮೀಸಲಾತಿ ಕಲ್ಪಿಸಿದರೆ, ಸ್ಪೃಶ್ಯ ಜಾತಿಗಳಿಗೆ (ಲಂಬಾಣಿ, ಬೋವಿ, ಕೊರಚ, ಕೊರಮ ಇತ್ಯಾದಿ) ಶೇ. 4.4ರಷ್ಟು ಹಂಚಿಕೆ ಮಾಡಲು ಶಿಫಾರಸು ಮಾಡಿತ್ತು. ಈ ಶಿಫಾರಸಿನಲ್ಲಿ ಕೆಲ ಬದಲಾವಣೆಗಳನ್ನು ಮಾಡಿ, ಈಗ ಸಚಿವ ಸಂಪುಟ ಸಭೆ ತೀರ್ಮಾನ ಪ್ರಕಟಿಸಿದೆ.


Read More
Next Story