ಕೆಲಸ ತಡವಾದ್ರೆ ಅಧಿಕಾರಿಯೇ ಕಟ್ಟಬೇಕು ದಂಡ! ಸಕಾಲ ತಿದ್ದುಪಡಿ ನಿಯಮ ಜಾರಿ
x

ಕೆಲಸ ತಡವಾದ್ರೆ ಅಧಿಕಾರಿಯೇ ಕಟ್ಟಬೇಕು ದಂಡ! ಸಕಾಲ ತಿದ್ದುಪಡಿ ನಿಯಮ ಜಾರಿ

ಸಾರ್ವಜನಿಕರ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡದಿದ್ದರೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಿ, ಹೆಸರಿಸಲಾದ ಅಧಿಕಾರಿಗಳಿಂದ ಹಂತಹಂತವಾಗಿ ಪರಿಹಾರ ವಸೂಲಿ ಮಾಡಲಾಗುತ್ತದೆ.


Click the Play button to hear this message in audio format

ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ತಿಂಗಳುಗಟ್ಟಲೆ ಕಾಯುವುದು, ಅಧಿಕಾರಿಗಳ ಕೈಕಾಲು ಕಟ್ಟುವುದು ಇನ್ಮುಂದೆ ಅಷ್ಟು ಸುಲಭವಲ್ಲ. ಸಾರ್ವಜನಿಕರಿಗೆ ನಿಗದಿತ ಅವಧಿಯೊಳಗೆ ಸರ್ಕಾರಿ ಸೇವೆಗಳನ್ನು ತಲುಪಿಸುವ ಸಕಾಲ ವ್ಯವಸ್ಥೆಯನ್ನು ಸರ್ಕಾರ ಮತ್ತಷ್ಟು ಬಿಗಿಗೊಳಿಸಿದೆ. ಸೇವೆ ನೀಡಲು ಅನಗತ್ಯ ವಿಳಂಬ ಮಾಡುವ, ಅರ್ಜಿಯನ್ನು ಸುಖಾಸುಮ್ಮನೆ ತಿರಸ್ಕರಿಸುವ ಅಧಿಕಾರಿಗಳ ಜೇಬಿಗೆ ಕತ್ತರಿ ಹಾಕಲು ನಿರ್ಧರಿಸಿರುವ ಸರ್ಕಾರ, ಕರ್ನಾಟಕ ಸಕಾಲ ಸೇವೆಗಳ (ತಿದ್ದುಪಡಿ) ಅಧಿನಿಯಮ, 2026ರ ಅಡಿಯಲ್ಲಿ ನೂತನ ಅಧಿಸೂಚನೆ ಹೊರಡಿಸಿದೆ. ಇದರ ಅನ್ವಯ ವಿಳಂಬ ಮಾಡುವ ಅಧಿಕಾರಿಗಳಿಗೆ ಗರಿಷ್ಠ 1,500 ರೂ. ವರೆಗೆ ಪರಿಹಾರ ವೆಚ್ಚ (ದಂಡ) ವಿಧಿಸಲಾಗುತ್ತದೆ.

ಇದೇ ಸಂದರ್ಭದಲ್ಲಿ, ಪ್ರಾಮಾಣಿಕ ಅಧಿಕಾರಿಗಳಿಗೆ ಅನಗತ್ಯ ಕಿರುಕುಳ ನೀಡುವ ಅಥವಾ ದುರುದ್ದೇಶದಿಂದ ಸುಳ್ಳು ದೂರುಗಳನ್ನು ದಾಖಲಿಸುವ ಸಾರ್ವಜನಿಕರಿಗೂ ಬಿಸಿ ಮುಟ್ಟಿಸಲಾಗಿದ್ದು, ಅಂತಹವರಿಗೂ ತಲಾ 1,500 ರೂ. ದಂಡ ವಿಧಿಸುವ ಕ್ರಾಂತಿಕಾರಿ ನಿಯಮವನ್ನು ಜಾರಿಗೆ ತರಲಾಗಿದೆ. ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ಈ ಆದೇಶ ಹೊರಡಿಸಿದ್ದು, ಇದು ತಕ್ಷಣದಿಂದಲೇ ರಾಜ್ಯಾದ್ಯಂತ ಜಾರಿಗೆ ಬಂದಿದೆ. ಸಾರ್ವಜನಿಕರಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ, ರೇಷನ್ ಕಾರ್ಡ್, ಪಹಣಿ, ಖಾತಾ ಬದಲಾವಣೆ, ಚಾಲನಾ ಪರವಾನಗಿ (DL), ಕಟ್ಟಡ ನಿರ್ಮಾಣ ಅನುಮತಿ ಸೇರಿದಂತೆ ನೂರಾರು ಸೇವೆಗಳನ್ನು ಕಾಲಮಿತಿಯೊಳಗೆ ಒದಗಿಸಲು 2011ರಲ್ಲಿ ಸಕಾಲ ಕಾಯ್ದೆಯನ್ನು ತರಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಧಿಕಾರಿಗಳಲ್ಲಿ ಜವಾಬ್ದಾರಿ ಕಡಿಮೆಯಾಗಿ, ಅರ್ಜಿಗಳು ಸಕಾಲದ ವ್ಯಾಪ್ತಿಯಲ್ಲಿದ್ದರೂ ತಿಂಗಳುಗಟ್ಟಲೆ ಬಾಕಿ ಉಳಿಯುತ್ತಿದ್ದವು. ಹಳೆಯ ಕಾಯ್ದೆಯಲ್ಲಿದ್ದ ದಂಡದ ಮೊತ್ತ ಅತ್ಯಲ್ಪವಾಗಿದ್ದರಿಂದ ಅಧಿಕಾರಿಗಳು ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಮತ್ತೊಂದೆಡೆ, ಕೆಲವು ಪಟ್ಟಭದ್ರರು ಹಾಗೂ ಕಿಡಿಗೇಡಿಗಳು ಅಧಿಕಾರಿಗಳನ್ನು ಹೆದರಿಸಿ, ಬ್ಲ್ಯಾಕ್‌ಮೇಲ್ ಮಾಡಲು ದುರುದ್ದೇಶಪೂರಿತ ದೂರುಗಳನ್ನು ಸೃಷ್ಟಿಸುತ್ತಿದ್ದರು. ಈ ಎರಡೂ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 2026ರ ತಿದ್ದುಪಡಿ ತರಲಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಲ್ಯಾಬ್ ಆಧಾರಿತ ದಂಡ

ಹೊಸ ನಿಯಮದ ಪ್ರಕಾರ, ಸಾರ್ವಜನಿಕರ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡದಿದ್ದರೆ ಅಥವಾ ಮೇಲ್ಮನವಿಗಳನ್ನು ಇತ್ಯರ್ಥಪಡಿಸದಿದ್ದರೆ, ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಿ, ಹೆಸರಿಸಲಾದ ಅಧಿಕಾರಿ ಅಥವಾ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳಿಂದ ಹಂತಹಂತವಾಗಿ ಪರಿಹಾರ ವಸೂಲಿ ಮಾಡಲಾಗುತ್ತದೆ. ವಿಳಂಬವಾದ ದಿನಗಳಿಗೆ ಅನುಗುಣವಾಗಿ ದಂಡದ ದರಗಳನ್ನು ನಿಗದಿಪಡಿಸಲಾಗಿದೆ. 1 ರಿಂದ 5 ದಿನಗಳ ವಿಳಂಬಕ್ಕೆ ದಿನಕ್ಕೆ 20 ರೂ. ನಂತೆ (ಗರಿಷ್ಠ 100 ರೂ.), 6 ರಿಂದ 10 ದಿನಗಳ ವಿಳಂಬಕ್ಕೆ ದಿನಕ್ಕೆ 40 ರೂ. ನಂತೆ (ಗರಿಷ್ಠ 300 ರೂ.), 11 ರಿಂದ 15 ದಿನಗಳ ವಿಳಂಬವಾದರೆ ದಿನಕ್ಕೆ 60 ರೂ. ನಂತೆ (ಗರಿಷ್ಠ 600 ರೂ.), 16 ರಿಂದ 20 ದಿನಗಳ ವಿಳಂಬಗೊಂಡರೆ ದಿನಕ್ಕೆ 80 ರೂ. ನಂತೆ (ಗರಿಷ್ಠ 1,000 ರೂ.), 21 ರಿಂದ 25 ದಿನಗಳ ವಿಳಂಬವಾದರೆ ದಿನಕ್ಕೆ 100 ರೂ. ನಂತೆ ಒಟ್ಟಾರೆಯಾಗಿ ಗರಿಷ್ಠ 1,500 ರೂ. ಪರಿಹಾರ ನೀಡಬೇಕಾಗುತ್ತದೆ. ಈ ಹಣವನ್ನು ಸರ್ಕಾರದ ಖಜಾನೆಯಿಂದ ನೀಡದೆ, ಕೆಲಸ ಬಾಕಿ ಉಳಿಸಿಕೊಂಡ ಅಧಿಕಾರಿಯ ಸಂಬಳದಿಂದಲೇ ಕಟಾವು ಮಾಡಿ, ತೊಂದರೆಗೊಳಗಾದ ನಾಗರಿಕರಿಗೆ ಪರಿಹಾರವಾಗಿ ಪಾವತಿಸಲಾಗುತ್ತದೆ.

ಸುಖಾಸುಮ್ಮನೆ ಅರ್ಜಿ ತಿರಸ್ಕರಿಸಿದರೆ ಅಥವಾ ತಪ್ಪು ಸೇವೆ ನೀಡಿದರೆ 1,500 ರೂ. ದಂಡ

ಅನೇಕ ಕಚೇರಿಗಳಲ್ಲಿ ಅಧಿಕಾರಿಗಳು ತಮಗೆ ದಂಡ ಬೀಳುತ್ತದೆ ಎಂಬ ಭಯಕ್ಕೆ, ಕೊನೆಯ ದಿನದಂದು ಸರಿಯಾದ ಕಾರಣವನ್ನೇ ನೀಡದೆ ಅರ್ಜಿಗಳನ್ನು ತಿರಸ್ಕರಿಸುವ ಚಾಳಿ ಬೆಳೆಸಿಕೊಂಡಿದ್ದರು. ಇನ್ನು ಕೆಲವೆಡೆ ತಪ್ಪು ದಾಖಲೆಗಳನ್ನು ನೀಡಿ ಕೈತೊಳೆದುಕೊಳ್ಳುತ್ತಿದ್ದರು. ಇದಕ್ಕೂ ಹೊಸ ನಿಯಮದಲ್ಲಿ ಕಡಿವಾಣ ಹಾಕಲಾಗಿದೆ.

ಸೇವೆಗಳಲ್ಲಿ ಲೋಪದೋಷವಿದ್ದರೆ ಅರ್ಜಿದಾರರು ಕೇಳಿದ ದಾಖಲೆಯನ್ನು ಅಪೂರ್ಣವಾಗಿ ಅಥವಾ ತಪ್ಪಾಗಿ ನೀಡಿದರೆ, ಸೂಕ್ತ ಕಾರಣವಿಲ್ಲದೆ ತಿರಸ್ಕರಿಸಿದರೆ ಕೇವಲ ನೆಪ ಹೇಳಿ ಅರ್ಜಿಯನ್ನು ರದ್ದುಮಾಡಿದ್ದರೆ, ಅಂತಹ ಅಧಿಕಾರಿಯಿಂದ ನೇರವಾಗಿ ಗರಿಷ್ಠ 1,500 ರೂ. ಪರಿಹಾರವನ್ನು ವಸೂಲಿ ಮಾಡಿ ನಾಗರಿಕರಿಗೆ ನೀಡಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಹುಸಿ ಮತ್ತು ಕಿರುಕುಳಕಾರಿ ದೂರು ನೀಡುವ ನಾಗರಿಕರಿಗೂ ಬೀಳಲಿದೆ ದಂಡ

ಈ ತಿದ್ದುಪಡಿಯ ಅತ್ಯಂತ ಗಮನಾರ್ಹ ಅಂಶವೆಂದರೆ ಅಧಿಕಾರಿಗಳಿಗೂ ದೊರೆತಿರುವ ರಕ್ಷಣೆ. ಕಾಯ್ದೆ ಕೇವಲ ಸಾರ್ವಜನಿಕರ ಪರವಾಗಿ ಮಾತ್ರವಲ್ಲದೆ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ನೌಕರರ ಹಿತರಕ್ಷಣೆಯನ್ನೂ ಕಾಯುತ್ತದೆ. ದುರುದ್ದೇಶಪೂರಿತ ದೂರುಗಳಿಗೆ 1,500 ರೂ. ದಂಡ ವಿಧಿಸಲಾಗುತ್ತದೆ. ಸರ್ಕಾರಿ ನೌಕರರಿಗೆ ಕೇಡು ಉಂಟುಮಾಡುವ, ಮಾನಸಿಕ ಕಿರುಕುಳ ನೀಡುವ, ಬೆದರಿಕೆ ಹಾಕಿ ಕೆಲಸ ಮಾಡಿಸಿಕೊಳ್ಳುವ ಅಥವಾ ದ್ವೇಷ ಸಾಧನೆಗಾಗಿ ಸುಳ್ಳು ಕುಂದುಕೊರತೆ ದೂರುಗಳನ್ನು ದಾಖಲಿಸುವ ನಾಗರಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ದೂರುದಾರರು ಸಲ್ಲಿಸಿದ ದೂರು ಸುಳ್ಳು ಮತ್ತು ದುರುದ್ದೇಶಪೂರಿತ ಎಂದು ತನಿಖೆಯಲ್ಲಿ ಸಾಬೀತಾದರೆ, ಅಂತಹವರಿಗೆ ಪ್ರತಿ ಅರ್ಜಿಗೆ 1,500 ರೂ. ದಂಡ ವಿಧಿಸಲಾಗುತ್ತದೆ. ಅದೇ ತಪ್ಪನ್ನು ಮತ್ತೆ ಮುಂದುವರಿಸಿದರೆ, ಪುನಃ ಪ್ರತಿ ಅರ್ಜಿಗೆ 1,500 ರೂ. ದಂಡ ಬೀಳಲಿದೆ.

ಕಾನೂನು ಪ್ರಕ್ರಿಯೆ ಹಾಗೂ ವಸೂಲಾತಿ

ನಾಗರಿಕರಿಗೆ ದಂಡ ವಿಧಿಸುವ ಮುನ್ನ ಅವರಿಗೆ ತಮ್ಮ ವಾದ ಮಂಡಿಸಲು ನ್ಯಾಯಯುತ ಅವಕಾಶ ನೀಡಲಾಗುತ್ತದೆ. ಒಂದು ವೇಳೆ ದಂಡ ಕಟ್ಟಲು ನಿರಾಕರಿಸಿದರೆ, ಅದನ್ನು ಭೂ ಕಂದಾಯ ಹಿಂಬಾಕಿ ಎಂದು ಪರಿಗಣಿಸಿ, ಆಸ್ತಿ ಮುಟ್ಟುಗೋಲು ಅಥವಾ ಕಂದಾಯ ವಸೂಲಿ ಕಾಯ್ದೆಯಡಿ ಕಡ್ಡಾಯವಾಗಿ ವಸೂಲಿ ಮಾಡಲಾಗುತ್ತದೆ.

ಸಾಮಾನ್ಯ ನಾಗರಿಕರು ಸರ್ಕಾರಿ ಸೇವೆಗಳನ್ನು ಪಡೆಯುವಾಗ ಕೆಲವು ಹಂತಗಳನ್ನು ಅನುಸರಿಸಬೇಕು. ಯಾವುದೇ ಸರ್ಕಾರಿ ಕಚೇರಿ, ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿದಾಗ ಕಡ್ಡಾಯವಾಗಿ 15 ಅಂಕಿಯ ‘ಗ್ಯಾರಂಟಿ ಸರ್ವೀಸ್ ಸಿಟಿಜನ್’ (ಜಿಎಸ್‌ಸಿ) ಸಂಖ್ಯೆಯಿರುವ ರಸೀದಿ ಪಡೆಯಬೇಕು. ಆ ರಸೀದಿಯಲ್ಲಿ ನಿಮ್ಮ ಕೆಲಸ ಯಾವ ದಿನಾಂಕದೊಳಗೆ ಮುಗಿಯಬೇಕು ಎಂಬ ಗಡುವು ನಮೂದಾಗಿರುತ್ತದೆ. ‘ಸಕಾಲ ಆನ್‌ಲೈನ್ ಪೋರ್ಟಲ್’ ಅಥವಾ ಮೊಬೈಲ್ ಮೂಲಕ ನಿಮ್ಮ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ನಿಗದಿತ ದಿನಾಂಕ ಮುಗಿದರೂ ಸೇವೆ ಸಿಗದಿದ್ದರೆ, ಮೊದಲ ಮೇಲ್ಮನವಿ ಪ್ರಾಧಿಕಾರಕ್ಕೆ ಆನ್‌ಲೈನ್‌ನಲ್ಲೇ ದೂರು ನೀಡಬಹುದು. ಅಲ್ಲಿಂದಲೂ ನ್ಯಾಯ ಸಿಗದಿದ್ದರೆ ಎರಡನೇ ಮೇಲ್ಮನವಿ ಸಲ್ಲಿಸಿ ಪರಿಹಾರ ಪಡೆಯಬಹುದು.

Read More
Next Story