ಸಂಭ್ರಮದ ನಡುವೆ ಸಂಕಷ್ಟ: ರಾಜ್ಯ ಸರ್ಕಾರದ 3 ವರ್ಷದ ಸಾಧನಾ ಸಮಾವೇಶದ ಅಸಲಿ ಚಿತ್ರಣವೇನು?
x

ಸಂಭ್ರಮದ ನಡುವೆ ಸಂಕಷ್ಟ: ರಾಜ್ಯ ಸರ್ಕಾರದ 3 ವರ್ಷದ 'ಸಾಧನಾ ಸಮಾವೇಶ'ದ ಅಸಲಿ ಚಿತ್ರಣವೇನು?

ಈ ಹಬ್ಬದ ವಾತಾವರಣದ ತೆರೆಯ ಹಿಂದೆ ಆಡಳಿತ ಯಂತ್ರವನ್ನು ಕಾಡುತ್ತಿರುವ ಬಿಕ್ಕಟ್ಟುಗಳು ಹಾಗೂ ಭುಗಿಲೆದ್ದಿರುವ ಒಳಜಗಳದ ಅಸಲಿ ಚಿತ್ರಣ ಭಿನ್ನವಾಗಿದೆ.


Click the Play button to hear this message in audio format

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಯಶಸ್ವಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿಂದು ಬೃಹತ್ 'ಸಾಧನಾ ಸಮಾವೇಶ' ಆಯೋಜನೆಗೊಂಡಿದ್ದು, ಇದು ಮೇಲ್ನೋಟಕ್ಕೆ ಐದು ಗ್ಯಾರಂಟಿಗಳ ಯಶಸ್ಸಿನ ಸಂಭ್ರಮಾಚರಣೆಯಾಗಿ ಬಿಂಬಿತವಾಗುತ್ತಿದೆ. ಸುಮಾರು ಎರಡು ಲಕ್ಷಕ್ಕೂ ಅಧಿಕ ಜನ ಸೇರಿದ ಈ ವೇದಿಕೆಯಲ್ಲಿ, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ 1.52 ಲಕ್ಷ ಮಂದಿಗೆ ಏಕಕಾಲದಲ್ಲಿ ಇ-ಸ್ವತ್ತು ಹಕ್ಕುಪತ್ರ ವಿತರಿಸುವ ಮೂಲಕ ಗಿನ್ನೆಸ್ ದಾಖಲೆ ಬರೆಯಲು ಸರ್ಕಾರ ಸಜ್ಜಾಗಿದೆ.

ಇದರ ಜೊತೆಗೆ 482 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಪತ್ರ ವಿತರಿಸುವ ಮೂಲಕ ತನ್ನ ಸಾಧನೆಯ 'ರಿಪೋರ್ಟ್ ಕಾರ್ಡ್' ಅನ್ನು ಜನರ ಮುಂದಿಡುತ್ತಿದೆ.

ಬಿಕ್ಕಟ್ಟುಗಳ ಸಮಸ್ಯೆ

ಈ ಹಬ್ಬದ ವಾತಾವರಣದ ತೆರೆಯ ಹಿಂದೆ ಆಡಳಿತ ಯಂತ್ರವನ್ನು ಕಾಡುತ್ತಿರುವ ಬಿಕ್ಕಟ್ಟುಗಳು ಹಾಗೂ ಭುಗಿಲೆದ್ದಿರುವ ಒಳಜಗಳದ ಅಸಲಿ ಚಿತ್ರಣ ಭಿನ್ನವಾಗಿದೆ. ಮುಖ್ಯಮಂತ್ರಿ ಹುದ್ದೆಗಾಗಿ ಸಿಎಂ ಹಾಗೂ ಡಿಸಿಎಂ ಬಣಗಳ ನಡುವಿನ ಆಂತರಿಕ ಗುದ್ದಾಟ ಬೀದಿಗೆ ಬಂದಿದ್ದು, ಹೈಕಮಾಂಡ್‌ನ ಖಡಕ್ ಸೂಚನೆಯ ಮೇರೆಗೆ ನಾಯಕರು ವೇದಿಕೆ ಮೇಲೆ ಕೇವಲ ಒಗ್ಗಟ್ಟಿನ ಪ್ರದರ್ಶನ ಮಾಡುತ್ತಿದ್ದಾರಷ್ಟೇ. ನೆರೆಯ ಕೇರಳದಲ್ಲಿನ ಸ್ಥಿರತೆಯ ಎದುರು ಕರ್ನಾಟಕದ ಈ ಶೀತಲ ಸಮರ ದೆಹಲಿ ನಾಯಕರನ್ನು ಕಂಗೆಡಿಸಿದೆ. ಬಂಡಾಯದ ಭಯದಿಂದ ಮೂರು ವರ್ಷವಾದರೂ ಸಂಪುಟ ಪುನಾರಚನೆ ಮಾಡಲು ಸಾಧ್ಯವಾಗದೆ, ಇದೀಗ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ಸಮಾವೇಶದ ಬೆನ್ನಲ್ಲೇ 'ದೆಹಲಿ ಚಲೋ'ಗೆ ಸಜ್ಜಾಗಿದ್ದಾರೆ.

ಮತ್ತೊಂದೆಡೆ, ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಎದುರಾಗಿದ್ದು, ಬೆಂಗಳೂರಿನ ಮೂಲಸೌಕರ್ಯಗಳು ಕುಸಿದಿವೆ. ಇದಕ್ಕೆ ಸೇರ್ಪಡೆಯೆಂಬಂತೆ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಬಿಸಿ ಸರ್ಕಾರಕ್ಕೆ ತೀವ್ರ ಮುಜುಗರ ತಂದಿದೆ. ಇವೆಲ್ಲದರ ಜೊತೆಗೆ ಸರ್ಕಾರವು ಸಾಲು ಸಾಲು ಹಗರಣಗಳ ಸುಳಿಗೆ ಸಿಲುಕಿದೆ. ಮುಖ್ಯಮಂತ್ರಿಗಳ ಪತ್ನಿಗೆ ಸೇರಿದ ಮುಡಾ ಸೈಟ್ ಹಂಚಿಕೆ ಹಗರಣದಲ್ಲಿ ಇ.ಡಿ ಹಾಗೂ ಲೋಕಾಯುಕ್ತ ತನಿಖೆ ನಡೆಯುತ್ತಿದ್ದರೆ, 94 ಕೋಟಿ ರೂಪಾಯಿಗಳ ವಾಲ್ಮೀಕಿ ನಿಗಮದ ಅಕ್ರಮ ವರ್ಗಾವಣೆ ಹಗರಣದಲ್ಲಿ ಸಚಿವರಾಗಿದ್ದ ಬಿ. ನಾಗೇಂದ್ರ ರಾಜೀನಾಮೆ ನೀಡಿ ಜೈಲು ಸೇರುವಂತಾಯಿತು.

ಇದರ ಬೆನ್ನಲ್ಲೇ 2026ರ ಮೇ ತಿಂಗಳಲ್ಲಿ ಬೆಳಕಿಗೆ ಬಂದ ಬಿಬಿಎಂಪಿಯ ನಕಲಿ ಸಿಸಿ ಮತ್ತು ಒಸಿ ವಿತರಣೆಯ ಬರೋಬ್ಬರಿ 40 ಸಾವಿರ ಕೋಟಿ ರೂಪಾಯಿಗಳ ಬೃಹತ್ ಕಟ್ಟಡ ಹಗರಣ, ಅಬಕಾರಿ ಇಲಾಖೆಯ 'ಮಂಥ್ಲಿ ಮನಿ' ದಂಧೆ, ಹೊರಗುತ್ತಿಗೆ ಹುದ್ದೆಗಳ ಮಾರಾಟ ಹಾಗೂ ಗುತ್ತಿಗೆದಾರರ ಬಿಲ್ ಪಾವತಿಗೆ ಕಮಿಷನ್ ಬೇಡಿಕೆಯಂತಹ ಗಂಭೀರ ಆರೋಪಗಳು ವಿಪಕ್ಷಗಳಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿವೆ. ಒಟ್ಟಾರೆಯಾಗಿ, ಹೈಕಮಾಂಡ್ ಪಾಲಿಗೆ ಅಗ್ನಿಪರೀಕ್ಷೆಯಾಗಿರುವ ತುಮಕೂರಿನ ಈ ಸಮಾವೇಶ ಕೇವಲ ಸಾಧನೆಯ ಸಂಭ್ರಮವೋ ಅಥವಾ ಮುಂಬರುವ ಎರಡು ವರ್ಷಗಳ ಅಳಿವು-ಉಳಿವಿನ ಹೋರಾಟವನ್ನು ಮುಚ್ಚಿಡುವ ತಂತ್ರವೋ ಎಂಬುದು ಸದ್ಯದ ಪ್ರಶ್ನೆಯಾಗಿದೆ.

Read More
Next Story