ವಾಹನ ನೋಂದಣಿಗೂ ಆಧಾರ್‌ ಇ-ಕೆವೈಸಿ ಕಡ್ಡಾಯ; ಅಕ್ರಮಗಳಿಗೆ ಬೀಳಲಿದೆ ಬ್ರೇಕ್‌
x

ವಾಹನ ನೋಂದಣಿಗೂ ಆಧಾರ್‌ ಇ-ಕೆವೈಸಿ ಕಡ್ಡಾಯ; ಅಕ್ರಮಗಳಿಗೆ ಬೀಳಲಿದೆ ಬ್ರೇಕ್‌

ವಾಹನ ನೋಂದಣಿಗೆ ಆಧಾರ್ ಆಧಾರಿತ ಇ-ಕೆವೈಸಿ ವ್ಯವಸ್ಥೆಯನ್ನು ದೇಶದಲ್ಲೇ ಪ್ರಥಮ ಬಾರಿಗೆ ಜಾರಿಗೆ ತಂದ ಹೆಗ್ಗಳಿಕೆ ಕರ್ನಾಟಕ ರಾಜ್ಯಕ್ಕೆ ಸಲ್ಲಲಿದೆ.


Click the Play button to hear this message in audio format

ಆಸ್ತಿ ನೋಂದಣಿಗೆ ಆಧಾರ್, ಪಾನ್ ಕಾರ್ಡ್ ಅಥವಾ ಪಾಸ್‌ಪೋರ್ಟ್‌ ಕಡ್ಡಾಯ ಮಾಡಿರುವಂತೆ ಹೊಸ ವಾಹನಗಳ ನೋಂದಣಿಗೂ 'ಆಧಾರ್ ಇ-ಕೆವೈಸಿ' ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ಚಾಲನಾ ಪರವಾನಗಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಅದೇ ಮಾದರಿಯಲ್ಲಿ ವಾಹನ ಮಾಲೀಕರ ವಿಳಾಸ ಮತ್ತು ಗುರುತನ್ನು ನಿಖರವಾಗಿ ಪತ್ತೆಹಚ್ಚುವ ಸಲುವಾಗಿ ಆಧಾರ್ ಲಿಂಕ್ ಗೆ ತೀರ್ಮಾನಿಸಲಾಗಿದೆ. ಇದರಿಂದ ನಕಲಿ ವಿಳಾಸ ನೀಡಿ ವಾಹನ ನೋಂದಣಿ ಮಾಡುವ ಪ್ರಕರಣಗಳಿಗೆ ಬ್ರೇಕ್‌ ಬೀಳಲಿದೆ.

ವಾಹನ ನೋಂದಣಿಗೆ ಆಧಾರ್ ಆಧಾರಿತ ಇ-ಕೆವೈಸಿ ವ್ಯವಸ್ಥೆಯನ್ನು ದೇಶದಲ್ಲೇ ಪ್ರಥಮ ಬಾರಿಗೆ ಜಾರಿಗೆ ತಂದ ಹೆಗ್ಗಳಿಕೆ ಕರ್ನಾಟಕ ರಾಜ್ಯಕ್ಕೆ ಸಲ್ಲಲಿದೆ. ಈ ಸೇವೆಯು ಕರ್ನಾಟಕದಾದ್ಯಂತ ಇರುವ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳು ಮತ್ತು ನೋಂದಾಯಿತ ವಾಹನ ಡೀಲರ್ ಕೇಂದ್ರಗಳಲ್ಲಿ ಲಭ್ಯವಾಗಲಿದೆ.

ಮಧ್ಯವರ್ತಿಗಳ ಹಾವಳಿಗೂ ಕಡಿವಾಣ

ಆರ್‌ಟಿಒ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪ ನಿಯಂತ್ರಿಸುವ ಜತೆಗೆ ಭ್ರಷ್ಟಾಚಾರ ಮುಕ್ತ ಸೇವೆ ಒದಗಿಸಲು ಇದು ಸಹಕಾರಿಯಾಗಲಿದೆ. ಯಾವುದೇ ವಾಹನವು ಅಪಘಾತ ಅಥವಾ ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದಾಗ ಅದರ ಮಾಲೀಕರನ್ನು ತಕ್ಷಣವೇ ಪತ್ತೆಹಚ್ಚಲು ಆಧಾರ್ ಇ-ಕೆವೈಸಿ ನೆರವಾಗಲಿದೆ. ಇನ್ನು ಕೆಲವರು ಬಾಡಿಗೆ ಮನೆ ಅಥವಾ ಅಸ್ತಿತ್ವದಲ್ಲಿಲ್ಲದ ವಿಳಾಸ ನೀಡಿ ವಾಹನ ನೋಂದಣಿ ಮಾಡಿಸುತ್ತಾರೆ. ಅಂತಹ ಪ್ರಕರಣಗಳನ್ನು ಬೇಧಿಸುವುದು ಕಷ್ಟವಾಗಲಿದೆ. ಆಧಾರ್ ಇ-ಕೆವೈಸಿ ಕಡ್ಡಾಯ ಮಾಡಿದರೆ ಬಯೋಮೆಟ್ರಿಕ್ ಅಥವಾ ಒಟಿಪಿ ಮೂಲಕ ವ್ಯಕ್ತಿಯ ನೈಜ ಗುರುತು ದೃಢೀಕರಿಸಲಾಗುತ್ತದೆ. ಇದರಿಂದ ನಕಲಿ ದಾಖಲೆ ಸೃಷ್ಟಿಸಿ ವಾಹನ ನೋಂದಣಿ ಮಾಡುವುದು ತಪ್ಪಲಿದೆ.

'ಬೇನಾಮಿ' ವ್ಯವಹಾರಗಳ ಪತ್ತೆ

ಒಬ್ಬ ವ್ಯಕ್ತಿ ಬೇರೆಯವರ ಹೆಸರಿನಲ್ಲಿ ವಾಹನ ಖರೀದಿಸಿದರೆ ಆಧಾರ್ ಮತ್ತು ಪಾನ್ ಕಾರ್ಡ್ ಸಂಯೋಜನೆಯಿಂದ ಅದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಎಲ್ಲ ವ್ಯವಹಾರಗಳು 'ಕುಟುಂಬ' ಆ್ಯಪ್ ಅಥವಾ ಸರ್ಕಾರದ ದತ್ತಾಂಶಕ್ಕೆ ಲಿಂಕ್ ಆಗುವುದರಿಂದ ಅವರ ಹೆಸರಿನಲ್ಲಿರುವ ಒಟ್ಟು ಆಸ್ತಿಪಾಸ್ತಿಯ ನಿಖರ ಮಾಹಿತಿ ಸರ್ಕಾರಕ್ಕೆ ಸಿಗಲಿದೆ. ಆರ್‌ಟಿಒ ಮತ್ತು ನೋಂದಣಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಡೆಗೂ ಆಧಾರ್ ಆಧಾರಿತ ಇ –ಕೆವೈಸಿ ನೆರವಾಗಲಿದೆ. ಸಕಾಲ ಯೋಜನೆಯಡಿ ಸೇವೆಗೆ ಕಾಲಮಿತಿ ಇರುವುದರಿಂದ ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡಲು ಸಾಧ್ಯ ಇರುವುದಿಲ್ಲ. ಫೇಸ್ಲೆಸ್ ಸೇವೆಗಳ ಮೂಲಕ ಭ್ರಷ್ಟಾಚಾರ ಸಹ ಕಡಿಮೆಯಾಗಲಿದೆ.

ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಅಪಘಾತ ಮಾಡಿ ಪರಾರಿಯಾದ ವಾಹನಗಳ ಮಾಲೀಕರನ್ನು ಆಧಾರ್ ಲಿಂಕ್ ಆಗಿರುವ ಮೂಲಕ ಸುಲಭವಾಗಿ ಪತ್ತೆ ಹಚ್ಚಬಹುದು. ಕದ್ದ ವಾಹನಗಳನ್ನು ಮರು ನೋಂದಣಿ ಮಾಡುವುದು ಅಥವಾ ಇಂಜಿನ್ ಸಂಖ್ಯೆ ಬದಲಿಸಿ ಮಾರಾಟ ಮಾಡುವುದಕ್ಕೂ ಬ್ರೇಕ್‌ ಬೀಳಲಿದೆ. ಸಂಚಾರಿ ನಿಯಮ ಉಲ್ಲಂಘನೆಯ ದಂಡ ಬಾಕಿ ಇದ್ದರೆ, ಅದು ನೇರವಾಗಿ ಮಾಲೀಕರ ಡಿಜಿಟಲ್ ಪ್ರೊಫೈಲ್ಗೆ ಲಿಂಕ್ ಆಗಿರುತ್ತದೆ, ಇದರಿಂದ ದಂಡ ಪಾವತಿಸದೆ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

Read More
Next Story