
ಒಟ್ಟು 800 ಕಿ.ಮೀಗೂ ಹೆಚ್ಚಿನ ಉದ್ದದ ಈ ರಸ್ತೆಗಳ ನಿರ್ವಹಣೆ ಏಕರೂಪಗೊಂಡು, ಅಭಿವೃದ್ಧಿ ಯೋಜನೆಗಳು ವೇಗ ಪಡೆಯಲಿವೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಕರ್ನಾಟಕದ 9 ರಸ್ತೆಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುಪರ್ದಿಗೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯವಸ್ಥೆಯಡಿ ಬರುವ ರಸ್ತೆಗಳು ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಸಂಪರ್ಕ ಹೊಂದಿರುವ ತಾಣಗಳಿಗೆ ಹಾದು ಹೋಗುವುದರಿಂದ, ರಾಜ್ಯಗಳ ನಡುವಿನ ಸಂಪರ್ಕ ಸಾಮರ್ಥ್ಯ ಹೆಚ್ಚಲಿದೆ.
ಉತ್ತರ ಕರ್ನಾಟಕದ ರಸ್ತೆ ಸಂಪರ್ಕ ವ್ಯವಸ್ಥೆಗೆ ಮಹತ್ವದ ಚಾಲನೆ ಸಿಗಲಿದ್ದು, ಕರ್ನಾಟಕ ಲೋಕೋಪಯೋಗಿ ಇಲಾಖೆ (PWD) ಉಸ್ತುವಾರಿಯಲ್ಲಿದ್ದ ರಾಜ್ಯದ ಒಂಬತ್ತು ಪ್ರಮುಖ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಹಸ್ತಾಂತರ ಮಾಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಫೆಬ್ರವರಿ 17ರಂದು ಅನುಮೋದನೆ ನೀಡಿದೆ.
ಒಟ್ಟು 800 ಕಿ.ಮೀಗೂ ಹೆಚ್ಚಿನ ಉದ್ದದ ಈ ರಸ್ತೆಗಳ ನಿರ್ವಹಣೆ ಏಕರೂಪಗೊಂಡು, ಅಭಿವೃದ್ಧಿ ಯೋಜನೆಗಳು ವೇಗ ಪಡೆಯಲಿವೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಕೇಂದ್ರ ಅನುಮೋದನೆ ಪಡೆದ ಕರ್ನಾಟಕದ ರಸ್ತೆಗಳ ಪಟ್ಟಿ ಇಂತಿದೆ: ಬಳ್ಳಾರಿ–ಜೇವರ್ಗಿ (265 ಕಿ.ಮೀ), ಹುಬ್ಬಳ್ಳಿ–ವಿಜಯಪುರ (199 ಕಿ.ಮೀ), ಶಿವಮೊಗ್ಗ–ಹೊನ್ನಾವರ (160 ಕಿ.ಮೀ), ಹುಮ್ನಬಾದ್ನಿಂದ ಕರ್ನಾಟಕ-ಮಹಾರಾಷ್ಟ್ರ ಗಡಿ (83 ಕಿ.ಮೀ), ಬೆರಂಬಾಡಿಯಿಂದ ಕೇರಳ ಗಡಿ (20 ಕಿ.ಮೀ), ಹೊಸಕೋಟೆಯಿಂದ ತಮಿಳುನಾಡು ಗಡಿ ಮತ್ತು ಹೊಸಕೋಟೆ–ಹೊಸೂರು ಒಟ್ಟು (60 ಕಿ.ಮೀ) ಮತ್ತು ಗುಂಡ್ಯದಿಂದ ಹೆಗ್ಗದ್ದೆ (25 ಕಿ.ಮೀ). ಜೊತೆಗೆ NH-275 ಸಂಪೂರ್ಣ 342 ಕಿ.ಮೀ ಮೇಲ್ದರ್ಜೆಗೆ ಏರಿಸಲು ಅನುಮೋದನೆ ನೀಡಲಾಗಿದ್ದು, ಮೈಸೂರು-ಬೆಂಗಳೂರು-ಮಂಗಳೂರು ಮಾರ್ಗದ ಪ್ರಮುಖ ಕಾರಿಡಾರ್ಗಳನ್ನು ಇದು ಒಳಗೊಳ್ಳಲಿದೆ.
ಉತ್ತರ ಕರ್ನಾಟಕಕ್ಕೆ ಲಾಭ ಏನು?
ಬಳ್ಳಾರಿ-ಜೇವರ್ಗಿ ಮತ್ತು ಹುಬ್ಬಳ್ಳಿ-ವಿಜಯಪುರ ಮಾರ್ಗಗಳು ಉತ್ತರ ಕರ್ನಾಟಕದ ಕೃಷಿ ಮತ್ತು ಕೈಗಾರಿಕಾ ಸರಕು ಸಾಗಣೆಯ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವಶಕ್ಕೆ ಬಂದ ನಂತರ ಟೋಲ್ ನಿಧಿ ಬಳಸಿ ರಸ್ತೆ ನಿರ್ವಹಣೆ, ಸಂಚಾರ ಸುರಕ್ಷತೆ ಕ್ರಮಗಳು ಮತ್ತು ಭವಿಷ್ಯದಲ್ಲಿ ನಾಲ್ಕು ಪಥ ವಿಸ್ತರಣೆ ಸಾಧ್ಯವಾಗಲಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಕರ್ನಾಟಕದ ಕೈಗಾರಿಕಾ ಬೆಳವಣಿಗೆ ಮತ್ತು ದಕ್ಷಿಣ ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗೆ ಈ ಹಸ್ತಾಂತರ ನಿರ್ಣಾಯಕ ಹೆಜ್ಜೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಗುಂಡಿಗಳು, ಏಕ ಪಥದ ಅಡೆತಡೆ
ಈ ಘೋಷಣೆ ಸ್ಥಳೀಯ ನಿವಾಸಿಗಳು ಮತ್ತು ರಸ್ತೆ ಬಳಕೆದಾರರ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಸಿರುಗುಪ್ಪ-ಬಳ್ಳಾರಿ ಭಾಗ ಸೇರಿದಂತೆ ಹಲವೆಡೆ ರಸ್ತೆ ಗುಂಡಿ ತುಂಬಿ ಅಪಘಾತಗಳು ಸಾಮಾನ್ಯವಾಗಿರುವ ಸಮಸ್ಯೆಯನ್ನು ಸ್ಥಳೀಯರು ಹೇಳುತ್ತಿದ್ದಾರೆ. ಏಕ ಪಥದ ಕಿರಿದಾದ ರಸ್ತೆ ಭಾರೀ ವಾಹನ ದಟ್ಟಣೆಗೆ ಕಾರಣವಾಗುತ್ತಿದ್ದು, NHAI ಆಡಳಿತಕ್ಕೆ ಬಂದ ತಕ್ಷಣ ನಾಲ್ಕು ಪಥ ರಸ್ತೆ ಅಥವಾ ಎಕ್ಸ್ಪ್ರೆಸ್ವೇ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಹೆಚ್ಚಾಗಿದೆ.
ರಾಜ್ಯ-ರಾಷ್ಟ್ರ ಸಂಪರ್ಕ ಉತ್ತಮಗೊಳ್ಳುವ ನಿರೀಕ್ಷೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯವಸ್ಥೆಯಡಿ ಬರುವ ರಸ್ತೆಗಳು ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಸಂಪರ್ಕ ಹೊಂದಿರುವ ತಾಣಗಳಿಗೆ ಹಾದು ಹೋಗುವುದರಿಂದ, ರಾಜ್ಯಗಳ ನಡುವಿನ ಸಂಪರ್ಕ ಸಾಮರ್ಥ್ಯ ಹೆಚ್ಚಲಿದೆ. ಏಕರೂಪ ನಿರ್ವಹಣೆ ಹಾಗೂ ಕೇಂದ್ರ ಧನಸಹಾಯದ ಮೂಲಕ ಈ ಕಾರಿಡಾರ್ಗಳು ಶೀಘ್ರದಲ್ಲೇ ನಾಲ್ಕು ಪಥ ರಾಷ್ಟ್ರೀಯ ಹೆದ್ದಾರಿಗಳಾಗಿ ರೂಪಾಂತರಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಸೌಕರ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

