ಭೂ ದಾಖಲೆ ಸ್ಕ್ಯಾನಿಂಗ್‌ನಲ್ಲಿ ಅಸಡ್ಡೆ: ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಿಡಿ
x

ಭೂ ದಾಖಲೆ ಸ್ಕ್ಯಾನಿಂಗ್‌ನಲ್ಲಿ ಅಸಡ್ಡೆ: ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಿಡಿ

ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ವರ್ಷಾನುಗಟ್ಟಲೆ ಬಾಕಿ ಉಳಿಯುವ ಭೂ ವಿವಾದದ ಪ್ರಕರಣಗಳು ರೈತರ ಪಾಲಿಗೆ ದೊಡ್ಡ ತಲೆನೋವಾಗಿದ್ದವು. ಅವುಗಳನ್ನು ಆದ್ಯತೆ ಮೇರೆಗೆ ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.


Click the Play button to hear this message in audio format

ಭೂದಾಖಲೆಗಳ ಭದ್ರತೆ ಮತ್ತು ಸುಲಭ ಲಭ್ಯತೆಗಾಗಿ ಹಮ್ಮಿಕೊಳ್ಳಲಾಗಿರುವ ‘ಭೂ ಸುರಕ್ಷಾ’ ಯೋಜನೆಯು ಡಿಜಿಟಲ್ ಕರ್ನಾಟಕದ ಕನಸಿನ ಒಂದು ಭಾಗವಾಗಿದೆ. ಈ ಯೋಜನೆಯಡಿ ಹಳೆಯ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡುವುದು ಮುಖ್ಯ ಉದ್ದೇಶವಾಗಿದೆ.

ಪ್ರತಿ ತಾಲೂಕಿನಲ್ಲಿ ದಿನಕ್ಕೆ ಸರಾಸರಿ 12 ಸಾವಿರ ಪುಟಗಳನ್ನು ಸ್ಕ್ಯಾನ್ ಮಾಡಬೇಕೆಂಬ ಗುರಿ ನಿಗದಿಪಡಿಸಲಾಗಿದೆ. ಇದಕ್ಕಾಗಿ ಸರ್ಕಾರವು ಪ್ರತಿ ತಾಲೂಕಿಗೆ ಎಂಟು ಜನ ನುರಿತ ಡೇಟಾ ಆಪರೇಟರ್‌ಗಳನ್ನು ಒದಗಿಸಿದೆ. ಆದರೆ, ಕೆಲವು ತಾಲೂಕುಗಳಲ್ಲಿ ಪ್ರಗತಿಯು ಕೇವಲ 8 ಸಾವಿರ ಪುಟಗಳಿಗೂ ದಾಟಿಲ್ಲ. ಇದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಸಮಾಧಾನಕ್ಕೆ ಕಾರಣವಾಗಿದೆ.

ವಿಕಾಸಸೌಧದಲ್ಲಿ ರಾಜ್ಯದ ಎಲ್ಲಾ ತಹಶೀಲ್ದಾರ್‌ಗಳ ಜತೆ ವಿಡಿಯೋ ಸಂವಾದ ನಡೆಸಿದ ಸಚಿವರು, ಸಮರ್ಪಕವಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಭೌಗೋಳಿಕ ಸವಾಲುಗಳಿರುವ ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರು, ಕೊಡಗು ಹಾಗೂ ಹಿಂದುಳಿದ ಜಿಲ್ಲೆಗಳೆಂದು ಕರೆಸಿಕೊಳ್ಳುವ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಈ ಕೆಲಸ ಸಂಪೂರ್ಣವಾಗಿ ಮುಗಿದಿರುವುದು ಒಂದು ಮಹತ್ವದ ಸಾಧನೆಯಾಗಿದೆ. ವಿಶೇಷವಾಗಿ ಉತ್ತರ ಕನ್ನಡದ ಹೊನ್ನಾವರದಲ್ಲಿ ದಿನಕ್ಕೆ 40 ಸಾವಿರ ಪುಟಗಳ ಸ್ಕ್ಯಾನಿಂಗ್ ನಡೆಯುತ್ತಿರುವುದು ಇತರ ತಾಲೂಕುಗಳಿಗೆ ಮಾದರಿಯಾಗಿದೆ. ಬೆಳ್ತಂಗಡಿ, ಪುತ್ತೂರು, ಚಳ್ಳಕೆರೆ ಸೇರಿದಂತೆ ಸುಮಾರು 60 ತಾಲೂಕುಗಳು ದಿನಕ್ಕೆ 20 ಸಾವಿರ ಪುಟಗಳ ಗುರಿ ಮೀರಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.

ಬೆಂಗಳೂರು ನಗರ, ಮೈಸೂರು, ಶ್ರೀರಂಗಪಟ್ಟಣ ಮತ್ತು ಮದ್ದೂರಿನಂತಹ ಸುಸಜ್ಜಿತ ತಾಲೂಕುಗಳಲ್ಲಿ ಕೆಲಸ ವಿಳಂಬವಾಗುತ್ತಿರುವುದನ್ನು ಸಚಿವರು ಗಂಭೀರವಾಗಿ ಪರಿಗಣಿಸಿದ್ದಾರೆ. ಅಸಮರ್ಪಕ ಉತ್ತರ ನೀಡಿದ ಗದಗ ಜಿಲ್ಲೆಯ ಶಿರಹಟ್ಟಿ ತಹಶೀಲ್ದಾರ್‌ಗೆ ಸಭೆಯಲ್ಲಿ ಕಟುವಾದ ಶಬ್ದಗಳಿಂದ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ 19 ಲಕ್ಷ ಪುಟಗಳ ದಾಖಲೆಗಳನ್ನು ಜನರು ಆನ್‌ಲೈನ್ ಮೂಲಕ ಪಡೆದುಕೊಂಡಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವುದು ಮತ್ತು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು.

ಭೂ ವಿವಾದ ಪ್ರಕರಣಗಳ ಇತ್ಯರ್ಥಕ್ಕೆ ಒತ್ತು

ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ವರ್ಷಾನುಗಟ್ಟಲೆ ಬಾಕಿ ಉಳಿಯುವ ಭೂ ವಿವಾದದ ಪ್ರಕರಣಗಳು ರೈತರ ಪಾಲಿಗೆ ದೊಡ್ಡ ತಲೆನೋವಾಗಿದ್ದವು. ಅವುಗಳನ್ನು ಆದ್ಯತೆ ಮೇರೆಗೆ ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಹಿಂದೆ 10,700 ರಷ್ಟಿದ್ದ ಬಾಕಿ ಪ್ರಕರಣಗಳ ಸಂಖ್ಯೆಯನ್ನು ಕೇವಲ 140ಕ್ಕೆ ಇಳಿಸಿರುವುದು ಕಂದಾಯ ಇಲಾಖೆಯ ಇತಿಹಾಸದಲ್ಲೇ ದೊಡ್ಡ ಮೈಲಿಗಲ್ಲು. ಇದು ಆಡಳಿತದ ಇಚ್ಛಾಶಕ್ತಿಯನ್ನು ಎತ್ತಿ ತೋರಿಸುತ್ತದೆ. ಶಿಗ್ಗಾಂವ್, ಶಿರಾ ಮತ್ತು ಮುಳಬಾಗಿಲು ತಾಲೂಕುಗಳಲ್ಲಿ ಮಾತ್ರ 90 ದಿನಗಳಿಗಿಂತ ಹೆಚ್ಚಿನ ಕಾಲಾವಧಿಯ ಪ್ರಕರಣಗಳು ಬಾಕಿ ಇವೆ. ಇವುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಸೂಚನೆ ನೀಡಲಾಗಿದ್ದು, ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.

ಫೌತಿಖಾತೆ ಆಂದೋಲನ

ಕುಟುಂಬದ ಹಿರಿಯರು ಮರಣ ಹೊಂದಿದ ನಂತರ ಅವರ ಹೆಸರಿನಲ್ಲಿದ್ದ ಜಮೀನನ್ನು ವಾರಸುದಾರರ ಹೆಸರಿಗೆ ಬದಲಾಯಿಸುವ (ಫೌತಿಖಾತೆ) ಪ್ರಕ್ರಿಯೆಯು ಅತ್ಯಂತ ಮಾನವೀಯ ಮತ್ತು ಅಗತ್ಯವಿರುವ ಕೆಲಸವಾಗಿದೆ. ಫೌತಿಖಾತೆ ಆಂದೋಲನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಉಳ್ಳಾಲದಲ್ಲಿ 18 ಮತ್ತು ಮಂಗಳೂರಿನಲ್ಲಿ 357 ಪ್ರಕರಣಗಳನ್ನು ಹೊರತುಪಡಿಸಿ ಇಡೀ ಜಿಲ್ಲೆ ಫೌತಿಮುಕ್ತವಾಗಿದೆ. ಚಾಮರಾಜನಗರ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಈ ವಿಷಯದಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಲಾಗಿದೆ. ಚಾಮರಾಜನಗರದಲ್ಲಿ 11 ಸಾವಿರ ಪ್ರಕರಣಗಳ ಪೈಕಿ ಕೇವಲ 88 ಪ್ರಕರಣಗಳು ವಿಲೇವಾರಿಯಾಗಿರುವುದು ಆಘಾತಕಾರಿ ಸಂಗತಿ. ಶಿಕಾರಿಪುರದಲ್ಲಿ ಸಾವಿರಾರು ಪ್ರಕರಣಗಳಿದ್ದರೂ ಶೂನ್ಯ ಪ್ರಗತಿ ಕಂಡುಬಂದಿರುವುದು ಅಧಿಕಾರಿಗಳ ಕರ್ತವ್ಯಲೋಪವನ್ನು ಎತ್ತಿ ತೋರಿಸುತ್ತದೆ. ಗುಂಡ್ಲುಪೇಟೆ ತಹಶೀಲ್ದಾರ್ ಈ ತಿಂಗಳಲ್ಲಿ 4 ಸಾವಿರ ಪ್ರಕರಣಗಳನ್ನು ಮುಗಿಸುವ ಭರವಸೆ ನೀಡಿದ್ದಾರೆ. ಎಚ್.ಡಿ. ಕೋಟೆ ಮತ್ತು ಆಲೂರಿನಲ್ಲಿ ಹೆಚ್ಚಿನ ಸಂಖ್ಯೆಯ ಬಾಕಿ ಪ್ರಕರಣಗಳನ್ನು ಆದ್ಯತೆಯ ಮೇಲೆ ಮುಗಿಸಲು ಆದೇಶಿಸಲಾಗಿದೆ ಎಂದು ತಿಳಿಸಿದರು.

ಪೋಡಿ ದುರಸ್ತಿ ಹಾಗೂ ಸರ್ವೇ ಕಾರ್ಯ

ಜಮೀನುಗಳ ವಿಭಜನೆ ಅಥವಾ ಪೋಡಿ ದುರಸ್ತಿ ಕಾರ್ಯವು ರೈತರ ಆಸ್ತಿ ಹಕ್ಕನ್ನು ಸುಭದ್ರಗೊಳಿಸುತ್ತದೆ. ಈ ಪ್ರಕ್ರಿಯೆಯಲ್ಲಿನ ವಿಳಂಬವು ರೈತರಿಗೆ ಸಾಲ ಪಡೆಯಲು ಅಥವಾ ಆಸ್ತಿ ಮಾರಾಟ ಮಾಡಲು ಅಡ್ಡಿಯಾಗುತ್ತದೆ. 1 ರಿಂದ 10 ಮಂಜೂರಿದಾರರಿರುವ ಸರ್ವೇ ನಂಬರ್‌ಗಳ '1 to 5' ಕೆಲಸಗಳನ್ನು ಮುಂದಿನ ಒಂದು ವಾರದೊಳಗೆ ಪೂರ್ಣಗೊಳಿಸಬೇಕು ಎಂಬುದಾಗಿ ಸೂಚಿಸಲಾಗಿದೆ. ಬೆಂಗಳೂರು ದಕ್ಷಿಣದಂತಹ ಪ್ರಮುಖ ಜಿಲ್ಲೆಯಲ್ಲಿ ಪ್ರಗತಿ ಶೂನ್ಯವಾಗಿರುವುದು ಅತ್ಯಂತ ಕಳವಳಕಾರಿ. ಜಿಲ್ಲಾ ಭೂದಾಖಲೆಗಳ ಉಪ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು ಎಚ್ಚೆತ್ತುಕೊಳ್ಳದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಂದಾಯ ಗ್ರಾಮಗಳ ರಚನೆ

ಅನೇಕ ಲಂಬಾಣಿ ತಾಂಡಾ, ಗೊಲ್ಲರ ಹಟ್ಟಿ ಮತ್ತು ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವುದು ಬಡ ಜನರಿಗೆ ಮೂಲಭೂತ ಸೌಕರ್ಯ ಮತ್ತು ಹಕ್ಕುಗಳನ್ನು ನೀಡುವ ಐತಿಹಾಸಿಕ ಕಾರ್ಯವಾಗಿದೆ. ಆಲೂರು, ನಂಜನಗೂಡು, ಯಲಹಂಕ, ಕೊಳ್ಳೆಗಾಲ ಮತ್ತು ಜೇವರ್ಗಿ ಸೇರಿದಂತೆ ಹಲವು ತಾಲೂಕುಗಳಲ್ಲಿ ಕಂದಾಯ ಗ್ರಾಮಗಳ ನೊಂದಣಿ ಪ್ರಕ್ರಿಯೆ ಕುಂಠಿತವಾಗಿದೆ. ಅರ್ಧಂಬರ್ಧ ಕೆಲಸ ಮಾಡಿದರೆ ಬಡವರಿಗೆ ಅನ್ಯಾಯವಾಗುತ್ತದೆ. ಕಷ್ಟವಿದ್ದರೂ ಸವಾಲಾಗಿ ಸ್ವೀಕರಿಸಿ ಈ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದರು.

Read More
Next Story