x

ಕಾವೇರಿ ನೀರು ಬಿಡಲು ಕರ್ನಾಟಕ ನಕಾರ; ಸಂಪುಟ ವಿಸ್ತರಣೆಗೆ ರಾಹುಲ್‌ ʼಅಡ್ಡಿʼ! ಮಂಗಳೂರಲ್ಲಿ 82 ಕೋಟಿ ಮೌಲ್ಯದ ಡ್ರಗ್ಸ್‌ ನಾಶ

ಸಿಡಬ್ಲ್ಯೂಎಂಎಗೆ ಮೇಲ್ಮನವಿ ಸಲ್ಲಿಸಲು ಸಜ್ಜಾರ ಸರ್ಕಾರ, ಸಂಪುಟ ವಿಸ್ತರಣೆಯಲ್ಲಿ ಹೊಸ ಮುಖಗಳಿಗೆ ಮಣೆ ಸಾಧ್ಯತೆ, ಪೆಡ್ಲರ್‌ಗಳ ಬೆವರಿಳಿಸಿದ ಮಂಗಳೂರು ಪೊಲೀಸ್ ಇಲಾಖೆ


Click the Play button to hear this message in audio format

ಕಾವೇರಿ ನೀರು ಹಂಚಿಕೆಯ ವಿಷಯ ರಾಜ್ಯದಲ್ಲಿ ತೀವ್ರ ರಾಜಕೀಯ ಮತ್ತು ಸಾಮಾಜಿಕ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಮುಂದಿನ 15 ದಿನಗಳ ಕಾಲ ನಿತ್ಯ 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕರ್ನಾಟಕಕ್ಕೆ ಆದೇಶ ನೀಡಿದೆ. ಈ ಆದೇಶ ಹೊರಬಿದ್ದ ಬೆನ್ನಲ್ಲೇ, ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಆಕ್ರೋಶದ ಕಟ್ಟೆ ಒಡೆದಿದೆ.

ಆದೇಶ ಪ್ರಕಟವಾಗುತ್ತಿದ್ದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ಮುಖ್ಯವಾಗಿ ಮಂಡ್ಯ ಜಿಲ್ಲೆಯಲ್ಲಿ ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ರಸ್ತೆಗಿಳಿದಿವೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವೈಫಲ್ಯವನ್ನು ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಯ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿದರು. ಕರ್ನಾಟಕದ ರೈತರ ಪಾಲಿಗೆ ಕಾವೇರಿ ಜೀವನಾಡಿ. ಮಳೆ ಕೊರತೆಯಿಂದಾಗಿ ಈಗಾಗಲೇ ಮಂಡ್ಯ, ಮೈಸೂರು ಭಾಗದಲ್ಲಿ ಭತ್ತ ಮತ್ತು ಕಬ್ಬಿನ ಬೆಳೆಗಳಿಗೆ ನೀರು ಸಿಗದೆ ರೈತರು ಸಂಕಷ್ಟದಲ್ಲಿದ್ದಾರೆ. ಅಣೆಕಟ್ಟುಗಳಲ್ಲಿ ನೀರು ಸಂಗ್ರಹಣಾ ಸಾಮರ್ಥ್ಯಕ್ಕಿಂತ ಕಡಿಮೆ ನೀರಿರುವಾಗ, ತಮಿಳುನಾಡಿಗೆ ನೀರು ಬಿಡುವುದು ಕನ್ನಡಿಗರ ಅನ್ನದ ತಟ್ಟೆಗೆ ಕನ್ನ ಹಾಕಿದಂತೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಈ ನಡುವೆ, ದೆಹಲಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಸಂಬಂಧಪಟ್ಟ ಅಧಿಕಾರಿಗಳ ಜತೆ ಸಭೆ ನಡೆಸಿ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು. ಬೆಂಗಳೂರಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ಸಿಡಬ್ಲ್ಯೂಆರ್‌ಸಿ ಆದೇಶವನ್ನು ಪ್ರಶ್ನಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ವಿಚಾರ ಈಗ ರಾಜ್ಯ ರಾಜಕೀಯದಲ್ಲಿಯೂ ಬಿಸಿ ಚರ್ಚೆಗೆ ಕಾರಣವಾಗಿದೆ. ಪ್ರತಿಪಕ್ಷ ಬಿಜೆಪಿ ಸಹ ಕಟುವಾಗಿ ಟೀಕಿಸಿದೆ. ಸರ್ಕಾರ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಸಂಪುಟ ವಿಸ್ತರಣೆಯ ಹಗ್ಗಜಗ್ಗಾಟ

ರಾಜ್ಯ ರಾಜಕೀಯ ವಲಯದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಸಚಿವ ಸಂಪುಟ ವಿಸ್ತರಣೆಯ ಹಗ್ಗಜಗ್ಗಾಟಕ್ಕೆ ಬಹುತೇಕ ತೆರೆ ಬೀಳುವ ಸಮಯ ಸನ್ನಿಹಿತವಾಗಿದೆ. ರಾಜ್ಯ ಸರ್ಕಾರದ ಮುಂದಿನ ಕಾರ್ಯತಂತ್ರಗಳು ಮತ್ತು ಆಡಳಿತ ಯಂತ್ರದ ಚುರುಕುತನವನ್ನು ನಿರ್ಧರಿಸುವ ಈ ಸಂಪುಟ ವಿಸ್ತರಣೆ ವಿಷಯದಲ್ಲಿ, ಹೈಕಮಾಂಡ್ ಇದೀಗ ಅಂತಿಮ ನಿರ್ಧಾರ ಕೈಗೊಳ್ಳಲು ಸಜ್ಜಾಗಿದೆ. ದೆಹಲಿಯಲ್ಲಿ ಬೀಡುಬಿಟ್ಟಿರುವ ರಾಜ್ಯದ ಉನ್ನತ ನಾಯಕರು ಬುಧವಾರ ರಾಹುಲ್ ಗಾಂಧಿ ಅವರೊಂದಿಗೆ ನಡೆಸಲಿರುವ ಸಭೆಯಲ್ಲಿ ನೂತನ ಸಚಿವರ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

ಕಳೆದ ಮೂರು ದಿನಗಳಿಂದ ದೆಹಲಿಯ ರಾಜಕೀಯ ಅಂಗಳದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಓಡಾಟ ತೀವ್ರಗೊಂಡಿದೆ. ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ದೆಹಲಿಗೆ ದೌಡಾಯಿಸಿರುವ ಈ ನಾಯಕರು, ಸಚಿವ ಸಂಪುಟದ ಚಿತ್ರಣವನ್ನು ಬದಲಿಸಲು ದೆಹಲಿಯ ಹೈಕಮಾಂಡ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ನೀಟ್ ಪರೀಕ್ಷೆಯ ವಿವಾದ, ಸಂಸತ್ ಅಧಿವೇಶನದ ಗದ್ದಲ ಮುಂತಾದ ಕಾರಣಗಳಿಂದಾಗಿ ಈ ಸಭೆಗಳು ಪದೇ ಪದೇ ಮುಂದೂಡಲ್ಪಡುತ್ತಾ ಬಂದಿದ್ದವು. ಆದರೆ, ಇದೀಗ ಎಲ್ಲ ಅಡೆತಡೆಗಳನ್ನು ಮೀರಿ ಸಂಪುಟ ರಚನೆಗೆ ವೇದಿಕೆ ಸಿದ್ಧವಾಗಿದೆ.

ಈ ಬಾರಿ ಸಂಪುಟ ವಿಸ್ತರಣೆಯಲ್ಲಿ ಕೇವಲ ಹಿರಿಯರಿಗೆ ಮಾತ್ರವಲ್ಲದೆ, ಹೊಸ ಮುಖಗಳಿಗೆ ಆದ್ಯತೆ ನೀಡುವ ಕುರಿತು ಹೈಕಮಾಂಡ್ ಬಲವಾದ ಒಲವು ತೋರಿದೆ. ಭವಿಷ್ಯದ ದೃಷ್ಟಿಯಿಂದ ಪಕ್ಷದಲ್ಲಿ ಹೊಸ ನಾಯಕತ್ವವನ್ನು ರೂಪಿಸಬೇಕೆಂಬುದು ರಾಹುಲ್ ಗಾಂಧಿ ಅವರ ದೂರದೃಷ್ಟಿಯಾಗಿದೆ. ಅನುಭವಿ ರಾಜಕಾರಣಿಗಳ ಜೊತೆಗೆ ಯುವ ಮತ್ತು ಹೊಸ ಪ್ರತಿಭೆಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಪಕ್ಷದಲ್ಲಿ ಚೈತನ್ಯ ತುಂಬಲು ತಂತ್ರಗಾರಿಕೆ ನಡೆದಿದೆ.

82 ಕೋಟಿ ರೂ. ಮೌಲ್ಯದ ಮಾದಕ ವಸ್ತು ನಾಶ

ಮಾದಕ ವಸ್ತುಗಳ ಜಾಲವು ಇಂದಿನ ಯುವಪೀಳಿಗೆಯನ್ನು ಮೃತ್ಯುಕೂಪಕ್ಕೆ ತಳ್ಳುತ್ತಿದೆ. ಈ ಮಹಾಮಾರಿ ದೇಶದ ಭವಿಷ್ಯವನ್ನೇ ಹಾಳುಗೆಡುವುತ್ತಿದೆ. ಈ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆಯು ಅತ್ಯಂತ ಕಠಿಣ ಮತ್ತು ದಿಟ್ಟ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಾದಕ ಲೋಕದ ಪೆಡ್ಲರ್‌ಗಳ ಬೆವರಿಳಿಸಿದೆ. ಮಂಗಳೂರು ಪೊಲೀಸರು ಕಳೆದ ಕೆಲ ವರ್ಷಗಳಲ್ಲಿ ಭೇದಿಸಿದ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಬರೋಬ್ಬರಿ 82 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವೈಜ್ಞಾನಿಕವಾಗಿ ನಾಶಪಡಿಸುವ ಮೂಲಕ, ಡ್ರಗ್ಸ್ ಮುಕ್ತ ಸಮಾಜದ ನಿರ್ಮಾಣಕ್ಕೆ ದೃಢ ಹೆಜ್ಜೆ ಇಟ್ಟಿದ್ದಾರೆ.

ಮುಲ್ಕಿಯ ಕೊಲ್ತಾಡು ಇಂಡಸ್ಟ್ರಿಯಲ್ ಪ್ರದೇಶದಲ್ಲಿರುವ 'ರಾಮ್ಕಿ ಎನರ್ಜಿ ಅಂಡ್ ಎನ್ವಿರಾನ್ಮೆಂಟ್ ಲಿಮಿಟೆಡ್' ಸಂಸ್ಥೆಯ ಆವರಣದಲ್ಲಿ ಈ ಮಹತ್ವದ ಕಾರ್ಯಾಚರಣೆ ನಡೆಯಿತು. ಮಾದಕ ವಸ್ತುಗಳ ನಾಶ ಸಮಿತಿ ನೇತೃತ್ವದಲ್ಲಿ, ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ಪರಿಸರ ಸ್ನೇಹಿ ವಿಧಾನದಲ್ಲಿ ಸುಟ್ಟುಹಾಕಲಾಯಿತು. ಒಟ್ಟಾರೆಯಾಗಿ ನಾಶಪಡಿಸಲಾದ ವಸ್ತುಗಳಲ್ಲಿ ಪ್ರಮುಖವಾದವುಗಳೆಂದರೆ, 450 ಕೆ.ಜಿ. ಗಾಂಜಾ, 43 ಕೆ.ಜಿ. 260 ಗ್ರಾಂ ಎಂ.ಡಿ.ಎಂ.ಎ., 80 ಗ್ರಾಂ ಚರಸ್, 880 ಗ್ರಾಂ ಹೈಡೋ ವೀಡ್ ಗಾಂಜಾ, 1 ಕೆ.ಜಿ. 200 ಗ್ರಾಂ ಭಾಂಗ್ ಸೇರಿ ಒಟ್ಟು ಮೌಲ್ಯ ಅಂದಾಜು 82 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 2024ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವು ಅತ್ಯಂತ ದೊಡ್ಡದಾಗಿದ್ದು, ಅದರಲ್ಲಿ ಸುಮಾರು 75 ಕೋಟಿ ರೂ. ಮೌಲ್ಯದ 37 ಕೆ.ಜಿ. ಎಂ.ಡಿ.ಎಂ.ಎ. ವಶಪಡಿಸಿಕೊಳ್ಳಲಾಗಿತ್ತು. 2025ರಲ್ಲಿ ಮುಲ್ಕಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪತ್ತೆಯಾದ 4.47 ಕೋಟಿ ರೂ. ಮೌಲ್ಯದ 4 ಕೆ.ಜಿ. ಎಂ.ಡಿ.ಎಂ.ಎ., ಕೊಣಾಜೆ ಮತ್ತು ಮೂಡಬಿದ್ರೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಪ್ರಕರಣಗಳು ಮಂಗಳೂರು ಪೊಲೀಸರ ಸತತ ಕಾರ್ಯಾಚರಣೆಯ ಪ್ರತಿಬಿಂಬವಾಗಿದೆ.

Read More
Next Story